Vishwavani Editorial: ಮತ್ತೆ ಬಾಲ ಬಿಚ್ಚಿದರೇ ಉಗ್ರರು?
ಜಮ್ಮು-ಕಾಶ್ಮೀರದ ಅಖ್ನೂರ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಪಾಕಿಸ್ತಾನ ಮೂಲದ ಉಗ್ರರ ತಂಡವು ದೇಶದೊಳಗೆ ನುಸುಳುತ್ತಿರುವುದನ್ನು ಕಂಡ ಭದ್ರತಾ ಪಡೆಯ ಯೋಧರು ತಕ್ಷಣವೇ ಕಾರ್ಯಾಚರಣೆ ಆರಂಭಿ ಸಿದ್ದಕ್ಕೆ ಉಗ್ರರೂ ಪ್ರತಿಯಾಗಿ ಗುಂಡು ಹಾರಿಸಿದರು ಎಂದು ತಿಳಿದು ಬಂದಿದೆ


ಕಣಿವೆ ರಾಜ್ಯದಲ್ಲಿ ಮತ್ತೆ ಕದಲಿಕೆ ಉಂಟಾಗಿದೆ. ಜಮ್ಮು-ಕಾಶ್ಮೀರದ ಅಖ್ನೂರ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಪಾಕಿಸ್ತಾನ ಮೂಲದ ಉಗ್ರರ ತಂಡವು ದೇಶದೊಳಗೆ ನುಸುಳುತ್ತಿರುವುದನ್ನು ಕಂಡ ಭದ್ರತಾ ಪಡೆಯ ಯೋಧರು ತಕ್ಷಣವೇ ಕಾರ್ಯಾಚರಣೆ ಆರಂಭಿ ಸಿದ್ದಕ್ಕೆ ಉಗ್ರರೂ ಪ್ರತಿಯಾಗಿ ಗುಂಡು ಹಾರಿಸಿದರು ಎಂದು ತಿಳಿದು ಬಂದಿದೆ. ಆದರೆ ಉಭಯ ಪಾಳಯಗಳ ನಡುವೆ ನಡೆದ ಈ ಗುಂಡಿನ ಚಕಮಕಿಯ ವೇಳೆ ಭಾರತೀಯ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದು ನೋವಿನ ಸಂಗತಿ. ಈ ಬೆಳವಣಿಗೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ, ಜಮ್ಮು-ಕಾಶ್ಮೀರ ಭಾಗದಲ್ಲಿ ಕೆಲ ವರ್ಷದಿಂದ ಉಗ್ರರ ಉಪಟಳ ಕಡಿಮೆಯಾಗಿತ್ತು ಮತ್ತು ಇದಕ್ಕೆ ಕೇಂದ್ರ ಸರಕಾರವು ಕಾಲಾನುಕಾಲಕ್ಕೆ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳು ಕಾರಣವಾಗಿದ್ದವು.
ಈಗ ಉಗ್ರರು ಮತ್ತೆ ಬಾಲ ಬಿಚ್ಚಿರುವುದನ್ನು ನೋಡಿದರೆ, ಪಾಕಿಸ್ತಾನ ಮತ್ತು ಚೀನಾದಂಥ ಗಡಿಯಾಚೆಗಿನ ಕುತ್ಸಿತ ಶಕ್ತಿಗಳ ಚಿತಾವಣೆ ಈ ಬೆಳವಣಿಗೆಯ ಹಿಂದಿರಬಹುದೇ ಎಂಬ ಶಂಕೆ ಮೂಡುತ್ತದೆ.
ಇದನ್ನೂ ಓದಿ: Vishwavani Editorial: ಈ ವಿಷಯದಲ್ಲೂ ರಾಜಕೀಯವೇ?!
ಏಕೆಂದರೆ, ನೆರೆಯ ಬಾಂಗ್ಲಾದೇಶದಲ್ಲಿ ಪ್ರತಿಭಟನೆಯ ನೆಪದಲ್ಲಿ ಹಿಂದೂ ಸಮುದಾಯದವರ ಮೇಲೆ ಏಕಾಏಕಿ ನಡೆದ ಹಿಂಸಾಚಾರಗಳು ಹಾಗೂ ಮನೆಗಳ ಲೂಟಿಗಳು, ಈಶಾನ್ಯ ರಾಜ್ಯ ಮಣಿಪುರದಲ್ಲಿನ ಜನಾಂಗೀಯ ಸಂಘರ್ಷ ತಾರಕಕ್ಕೇರಿದ್ದು ಇವೆಲ್ಲದರ ಹಿಂದೆ ಇಂಥ ಮಗ್ಗುಲು ಮುಳ್ಳುಗಳ ಕುಮ್ಮಕ್ಕು ಇದೆ ಎನ್ನಲಾಗುತ್ತಿದೆ. ಭಾರತದ ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತೆಗಳ ಮೇಲೆ ವಕ್ರದೃಷ್ಟಿ ಬೀರಿ ಅವಕ್ಕೆ ಸಂಚಕಾರ ತಂದೊಡ್ಡಲು ಹವಣಿಸುತ್ತಿರುವ ಈ ಎರಡು ದೇಶಗಳ ಎಲ್ಲ ಕಸರತ್ತುಗಳನ್ನು ಭಾರತವು ವಿಫಲಗೊಳಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ ಎಂಬುದಕ್ಕೆ ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ಈ ಚಕಮಕಿಯೇ ಸಾಕ್ಷಿ.
ಕಿಶ್‌ತ್ವಾರ ಅರಣ್ಯದಲ್ಲಿ ಇಬ್ಬರು ಉಗ್ರರನ್ನು ಭಾರತ ಸೇನೆಯು ಹೊಡೆದು ಉರುಳಿಸಿದೆ ಎಂಬುದು ಸಮಾಧಾನಕರ ಸಂಗತಿಯಾದರೂ, ಈ ಕಾರ್ಯಾಚರಣೆಗೆ ಮತ್ತಷ್ಟು ವೇಗವನ್ನು ತುಂಬಬೇಕಿದೆ ಎಂಬುದನ್ನು ಮರೆಯಲಾಗದು. ಅದು ಈ ಕ್ಷಣದ ಅನಿವಾರ್ಯತೆಯೂ ಹೌದು.