RCB Sale: ಆರ್‌ಸಿಬಿ ಖರೀದಿ ಅಖಾಡಕ್ಕೆ ಅದಾನಿ ಎಂಟ್ರಿ
ಅತ್ಯಂತ ಶ್ರೀಮಂತ ಫ್ರಾಂಚೈಸಿಗಳಲ್ಲಿ ಒಂದಾಗಿದ್ದ ಆರ್‌ಸಿಬಿ ಮಾರಾಟಕ್ಕೆ ಕಾರಣ ನೋಡುವುದಾದದರೆ, ಕಳೆದ ಆವೃತ್ತಿಯಲ್ಲಿ ತಂಡ ಚೊಚ್ಚಲ ಟ್ರೋಫಿ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವೇ ತಂಡದ ಮಾರಾಟಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಡಗೌಡ್‌ನಲ್ಲಿ ಕುಳಿತ ವಿರಾಟ್ ಕೊಹ್ಲಿ -
ಬೆಂಗಳೂರು: ಐಪಿಎಲ್ ಫ್ರ್ಯಾಂಚೈಸಿ ಆರ್‌ಸಿಬಿಯನ್ನು(RCB Sale) ಮಾರಾಟಮಾಡಲು ಫ್ರ್ಯಾಂಚೈಸಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿ. (ಯುಎಸ್‌ಎಲ್), ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ.ಲಿ.ನಲ್ಲಿ ಮಾಡಿರುವ ಹೂಡಿಕೆಗಳಿಗೆ ಸಂಬಂಧಿಸಿ ವಿವರವಾದ ಮೌಲ್ಯಮಾಪನಕ್ಕೆ ಮುಂದಾಗಿದ್ದು 2026ರ ಮಾ.31ರೊಳಗೆ ಮಾರಾಟ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದು ಡಿಯಾಜಿಯೋ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ. ಇದರ ಬೆನ್ನಲ್ಲೇ ಫ್ರಾಂಚೈಸಿ ಖರೀದಿಸಲು ಅದಾನಿ ಗ್ರೂಪ್(Adani Group), ರವಿ ಜೈಪುರಿಯಾ(Ravi Jaipuria) ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ವರದಿಯಾಗಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಸೀರಮ್ ಇನ್‌ಸ್ಟಿಟ್ಯೂಟ್‌ನ ಆದರ್ ಪೂನಾವಲ್ಲ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್‌ನ ಪಾರ್ಥ್ ಜಿಂದಾಲ್‌ನಂತಹ ಉನ್ನತ ಹೆಸರುಗಳು ಸೇರಿದಂತೆ ಹಲವಾರು ಭಾರತೀಯ ಮತ್ತು ಅಮೇರಿಕನ್ ಗುಂಪುಗಳು ಡಿಯಾಜಿಯೊದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿವೆ ಎನ್ನಲಾಗಿದೆ.
ಅದಾನಿ ಗ್ರೂಪ್ ಮತ್ತು ಹಲವಾರು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ದೆಹಲಿ ಮೂಲದ ಪ್ರಮುಖ ವ್ಯಾಪಾರ ಉದ್ಯಮಿ ಕೂಡ ಈ ತಂಡದ ಮೇಲೆ ಕಣ್ಣಿಟ್ಟಿದ್ದಾರೆ. ವರುಣ್ ಬೆವರೇಜಸ್‌ನ ಅಧ್ಯಕ್ಷ ರವಿ ಜೈಪುರಿಯಾ ಕೂಡ ಫ್ರಾಂಚೈಸಿಯನ್ನು ಖರೀದಿಸಲು ಎದುರು ನೋಡುತ್ತಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್‌ನ ಹೊರಗಿನ ಪೆಪ್ಸಿಕೋದ ತಂಪು ಪಾನೀಯ ಬ್ರಾಂಡ್‌ಗಳಿಗೆ ಮತ್ತು ಭಾರತದ ಯಮ್! ನ ಅತಿದೊಡ್ಡ ಫ್ರಾಂಚೈಸಿಯಾದ ದೇವಯಾನಿ ಇಂಟರ್‌ನ್ಯಾಷನಲ್‌ಗೆ ಅತಿದೊಡ್ಡ ಬಾಟಲ್ ಪಾಲುದಾರರಲ್ಲಿ ಒಂದಾಗಿದೆ.
ಇದನ್ನೂ ಓದಿ RCB Sale: ಆರ್‌ಸಿಬಿ ಖರೀದಿಗೆ 6 ಸಂಸ್ಥೆಗಳ ಆಸಕ್ತಿ; ತಂಡ ಮಾರಾಟಕ್ಕೆ 2 ಬಿಲಿಯನ್ ಬೇಡಿಕೆ!
ಇತ್ತೀಚೆಗಷ್ಟೇ ಸೀರಮ್ ಇನ್‌ಸ್ಟಿಟ್ಯೂಟ್ ಅದಾರ್ ಪೂನಾವಾಲಾ ಒಳ್ಳೆಯ ಮೊತ್ತಕ್ಕೆ ಸಿಕ್ಕರೆ ಆರ್‌ಸಿಬಿ ಖರೀದಿಗೆ ಸಿದ್ದ ಎನ್ನುವ ಅರ್ಥದಲ್ಲಿ ಮಾಡಿದ ಟ್ವೀಟ್ ಭಾರೀ ವೈರಲ್ ಆಗಿತ್ತು. 2010ರಲ್ಲಿ ಐಪಿಎಲ್ ತಂಡಗಳನ್ನು 12ಕ್ಕೆ ಹೆಚ್ಚಳ ಮಾಡುವ ಸಂದರ್ಭದಲ್ಲಿ ಅದಾರ್ ಪೂನಾವಾಲಾರ ತಂದೆ ಸೈರಸ್ ಟೆಂಡರ್ ಪ್ರತಿ ಪಡೆದಿದ್ದರು. ಆದರೆ ಆಗ ಸಹರಾ ಹಾಗೂ ರೆಂಡೆಜ್ವೊಸ್ ಸ್ಪೋರ್ಟ್ಸ್ ಮೇಲುಗೈ ಸಾಧಿಸಿತ್ತು. 2022ರಲ್ಲಿ ಅಹಮದಾಬಾದ್ ಫ್ರಾಂಚೈಸಿಯು ಸಣ್ಣ ಅಂತರದಲ್ಲಿ ಅದಾನಿ ಕೈತಪ್ಪಿತ್ತು. ಇದೀಗ ಆರ್‌ಸಿಬಿ ತಂಡ ಖದೀರಿಗೆ ಸಿಕ್ಕರೆ ಈ ಇಬ್ಬರು ಪೈಪೋಟಿಗೆ ಬೀಳುವ ಸಾಧ್ಯತೆ ಇದೆ.
ಮಾರಾಟಕ್ಕೆ ಕಾರಣವೇನು?
ಅತ್ಯಂತ ಶ್ರೀಮಂತ ಫ್ರಾಂಚೈಸಿಗಳಲ್ಲಿ ಒಂದಾಗಿದ್ದ ಆರ್‌ಸಿಬಿ ಮಾರಾಟಕ್ಕೆ ಕಾರಣ ನೋಡುವುದಾದದರೆ, ಕಳೆದ ಆವೃತ್ತಿಯಲ್ಲಿ ತಂಡ ಚೊಚ್ಚಲ ಟ್ರೋಫಿ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವೇ ತಂಡದ ಮಾರಾಟಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ತಂಡದ ಅತಿದೊಡ್ಡ ಬ್ರ್ಯಾಂಡ್ ವಿರಾಟ್ ಕೊಹ್ಲಿ ಇನ್ನೇನು ನಿವೃತ್ತಿ ಅಂಚಿನಲ್ಲಿದ್ದು, ಅವರಿಲ್ಲದ ಆರ್‌ಸಿಬಿ ತಂಡವನ್ನು ಊಹಿಸಿಕೊಳ್ಳಲು ಅಸಾಧ್ಯ ಎನ್ನುವುದು ಫ್ರಾಂಚೈಸಿಗೆ ತಿಳಿದಿದೆ. ಕೊಹ್ಲಿ ನಿವೃತ್ತಿಯ ಬಳಿಕ ತಂಡದ ಬ್ರ್ಯಾಂಡ್ ಮೌಲ್ಯ ಕುಸಿಯಬಹುದು ಎಂದು ಅಂದಾಜಿಸಿರುವ ಫ್ರಾಂಚೈಸಿಯು, ಅದಕ್ಕೆ ಮೊದಲೇ ತಂಡವನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಸಂಸ್ಥೆಯು 2 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 17600 ಕೋಟಿ ರು.) ಕೇಳುತ್ತಿದೆ ಎಂದು ವರದಿಯಾಗಿದೆ. ಆದರೆ ಇಷ್ಟು ವರ್ಷ ಆರ್‌ಸಿಬಿ ಕಪ್ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಗಳಲ್ಲಿ ದೊಡ್ಡ ಮಟ್ಟದ ಕ್ರೇಜ್ ಇತ್ತು. ಈಗ ಕಪ್ ಗೆದ್ದಾಯಿತು. ವಿರಾಟ್ ಕೊಹ್ಲಿ ಸಹ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಕ್ರೇಜ್ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ. ಹೀಗಾಗಿ ಇಷ್ಟು ಮೊತ್ತದ ಹಣ ಸಿಗುವುದು ಅನುಮಾನ.