ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

5 ವಿಕೆಟ್‌ ಕಿತ್ತು ನ್ಯೂಜಿಲೆಂಡ್‌ ನೆಲದಲ್ಲಿ ವಿಶೇಷ ದಾಖಲೆ ಬರೆದ ಆಕಾಶ್ ದೀಪ್

Akash Deep: ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ, ಭಾರತೀಯ ವೇಗದ ಬೌಲರ್ ಒಬ್ಬರು ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆಯು ಇಶಾಂತ್ ಅವರ ಹೆಸರಿನಲ್ಲಿದೆ. 2014ರ ಪ್ರವಾಸದಲ್ಲಿ ವೆಲ್ಲಿಂಗ್ಟನ್‌ನ 'ಬೇಸಿನ್ ರಿಸರ್ವ್' ಮೈದಾನದಲ್ಲಿ 17 ಓವರ್‌ಗಳನ್ನು ಎಸೆದು, 51 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದಿದ್ದರು.

5 ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ಆಕಾಶ್ ದೀಪ್

Akash Deep -

Abhilash BC
Abhilash BC Nov 28, 2026 10:02 AM

ಕ್ರೈಸ್ಟ್‌ಚರ್ಚ್‌, ನ.28: ಹ್ಯಾಗ್ಲಿ ಓವಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ, ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಆಕಾಶ್ ದೀಪ್ 31.3 ಓವರ್‌ಗಳನ್ನು ಎಸೆದು 99 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ದಾಖಲೆಯೊಂದನ್ನು ನಿರ್ಮಿಸಿದರು.

ಪಂದ್ಯದ ಮೊದಲ ದಿನದಂದು ಇಬ್ಬರು ಕಿವೀಸ್ ಬ್ಯಾಟರ್‌ಗಳನ್ನು ಔಟ್ ಮಾಡಿದ್ದ ಅವರು ಶನಿವಾರ ತಮ್ಮ ಖಾತೆಗೆ ಇನ್ನೂ ಮೂರು ವಿಕೆಟ್‌ಗಳನ್ನು ಸೇರಿಸಿಕೊಂಡರು. ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಐದನೇ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಆಕಾಶ್ ದೀಪ್ ಪಾತ್ರರಾದರು.

ಈ ಸಾಧನೆಯೊಂದಿಗೆ ಅವರು ಅವರು ಮದನ್ ಲಾಲ್, ಜವಾಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಅವರಂತಹ ಆಟಗಾರರ ಸಾಲಿಗೆ ಸೇರಿಕೊಂಡರು. ಜಹೀರ್ ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಶಾಂತ್ ಮೂರು ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು, ಮದನ್ ಲಾಲ್, ಶ್ರೀನಾಥ್ ಮತ್ತು ಆಕಾಶ್ ದೀಪ್ ತಲಾ ಒಂದು ಬಾರಿ ಐದು ವಿಕೆಟ್‌ಗಳನ್ನು ಕಬಳಿಸುವ ಸಾಧನೆ ಮಾಡಿದ್ದಾರೆ.

ಆಕಾಶ್ ದೀಪ್ ಐದು ವಿಕೆಟ್ ಸಾಧನೆ; 356ಕ್ಕೆ ನ್ಯೂಜಿಲೆಂಡ್‌ ಆಲೌಟ್‌

ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ, ಭಾರತೀಯ ವೇಗದ ಬೌಲರ್ ಒಬ್ಬರು ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆಯು ಇಶಾಂತ್ ಅವರ ಹೆಸರಿನಲ್ಲಿದೆ. 2014ರ ಪ್ರವಾಸದಲ್ಲಿ ವೆಲ್ಲಿಂಗ್ಟನ್‌ನ 'ಬೇಸಿನ್ ರಿಸರ್ವ್' ಮೈದಾನದಲ್ಲಿ 17 ಓವರ್‌ಗಳನ್ನು ಎಸೆದು, 51 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದಿದ್ದರು.



ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಭಾರತೀಯ ಬೌಲರ್ ಒಬ್ಬರು ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆಯು ಎರಾಪಳ್ಳಿ ಪ್ರಸನ್ನ ಅವರ ಹೆಸರಿನಲ್ಲಿದೆ. 1976ರ ಜನವರಿಯಲ್ಲಿ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ಪ್ರಸನ್ನ ಅವರು ಭಾರತದ ಪರವಾಗಿ 23 ಓವರ್‌ಗಳನ್ನು ಬೌಲ್ ಮಾಡಿ, 76 ರನ್‌ಗಳಿಗೆ 8 ವಿಕೆಟ್‌ಗಳನ್ನು ಪಡೆದರು.

ಶನಿವಾರ ಆಕಾಶ್ ದೀಪ್ ಪಡೆದ ಐದು ವಿಕೆಟ್‌ಗಳ ಸಾಧನೆಯು, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಎರಡನೇ ಅತ್ಯುತ್ತಮ ಸಾಧನೆಯಾಗಿದೆ. ಇದಕ್ಕೂ ಮೊದಲು, 2025ರ ಜುಲೈ 2ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ, ಅವರು 21.1 ಓವರ್‌ಗಳಲ್ಲಿ 99 ರನ್‌ಗಳನ್ನು ನೀಡಿ ಇಂಗ್ಲೆಂಡ್‌ನ ಆರು ಬ್ಯಾಟರ್‌ಗಳನ್ನು ಔಟ್ ಮಾಡಿದ್ದರು.