SRH vs DC: ರಾಹುಲ್ ಮಾಡಿದ ರನೌಟ್ ಎಡವಟ್ಟು ಸೋಲಿಗೆ ಕಾರಣ ಎಂದ ಅಕ್ಷರ್ ಪಟೇಲ್
IPL 2026: ಅಭಿಷೇಕ್ ಅವರು 49 ರನ್ ಗಳಿಸಿದ್ದ ವೇಳೆ ಸುಲಭವಾಗಿ ರನೌಟ್ ಮಾಡುವ ಅವಕಾಶವೊಂದು ಲಭಿಸಿತ್ತು. ಆದರೆ ಕೀಪರ್ ರಾಹುಲ್ ಆತುರದಿಂದ ಈ ಅವಕಾಶವನ್ನು ಕಳೆದುಕೊಂಡರು. ಇದಾದ ಬಳಿಕ ನಿತೀಶ್ ರಾಣ ಮತ್ತು ನಿಸ್ಸಂಕಾ ಕ್ಯಾಚ್ ಕೈಚೆಲ್ಲಿ ಅಭಿಷೇಕ್‌ಗೆ ಜೀವದಾನ ನೀಡಿದರು. ಇದರ ಸಂಪೂರ್ಣ ಲಾಭವೆತ್ತಿದ ಅವರು ಶತಕ ಬಾರಿಸಿ ಡೆಲ್ಲಿಯ ಎಲ್ಲ ಯೋಜನೆಗಳನ್ನು ವಿಫಲಗೊಳಿಸಿದರು.
Axar Patel -
ಹೈದರಾಬಾದ್, ಎ.22: ಅಭಿಷೇಕ್ ಶರ್ಮ ಅವರ ರನೌಟ್ ಮಿಸ್ ಮತ್ತು ಕಳಪೆ ಫೀಲ್ಡಿಂಗ್ ತಂಡದ ಸೋಲಿಗೆ ಕಾರಣ ಎಂದು ಡೆಲ್ಲಿ ಕ್ಯಾಪಿಟಲ್ಸ್(SRH vs DC) ತಂಡದ ನಾಯಕ ಅಕ್ಷರ್ ಪಟೇಲ್(Axar Patel) ಹೇಳಿದ್ದಾರೆ. ಮಂಗಳವಾರ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 47 ರನ್ ಅಂತರದ ಸೋಲು ಕಂಡಿತ್ತು.
ಸೋಲಿನ ಬಳಿಕ ಮಾತನಾಡಿದ ಅಕ್ಷರ್ ಪಟೇಲ್, "ರನೌಟ್ ಅವಕಾಶ ತಪ್ಪಿಹೋಯಿತು ಮತ್ತು ಕ್ಯಾಚ್ ತಪ್ಪಿಹೋಯಿತು. ಇದು ನಮಗೆ ತುಂಬಾ ನಷ್ಟವಾಯಿತು. ನಾವು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಿದ್ದರೆ, ನಾವು ಪಂದ್ಯ ಗೆಲ್ಲಬಹುದಿತ್ತು. ಉತ್ತಮ ಫೀಲ್ಡಿಂಗ್ ನಮ್ಮ ಕೈಯಲ್ಲಿದೆ ಮತ್ತು ನಾವು ಅದನ್ನು ಮಾಡಬೇಕಾಗಿತ್ತು" ಎಂದು ಅಕ್ಷರ್ ಹೇಳಿದರು.
ಡೆಲ್ಲಿ ಆಟಗಾರರ ಆಯ್ಕೆಯ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದರೂ, ಕೋರ್ ಸೆಟಪ್‌ನಲ್ಲಿ ಯಾವುದೇ ಬದಲಾವಣೆಯ ಸಾಧ್ಯತೆಯನ್ನು ಅಕ್ಷರ್ ತಳ್ಳಿಹಾಕಿದರು. "ಯಾವುದೇ ಬದಲಾವಣೆಗಳನ್ನು ಮಾಡುವ ಬಗ್ಗೆ ಯೋಚಿಸುತ್ತಿಲ್ಲ. ವಿಕೆಟ್ ತುಂಬಾ ಶಾಂತವಾಗಿದ್ದಾಗ, ನಾವು ಇದನ್ನು ರಜೆಯ ದಿನವಾಗಿ ತೆಗೆದುಕೊಂಡು ಅದನ್ನು ಮರೆತುಬಿಡಬೇಕು" ಎಂದು ಹೇಳಿದರು.
ಅಭಿಷೇಕ್ ಅವರು 49 ರನ್ ಗಳಿಸಿದ್ದ ವೇಳೆ ಸುಲಭವಾಗಿ ರನೌಟ್ ಮಾಡುವ ಅವಕಾಶವೊಂದು ಲಭಿಸಿತ್ತು. ಆದರೆ ಕೀಪರ್ ರಾಹುಲ್ ಆತುರದಿಂದ ಈ ಅವಕಾಶವನ್ನು ಕಳೆದುಕೊಂಡರು. ಇದಾದ ಬಳಿಕ ನಿತೀಶ್ ರಾಣ ಮತ್ತು ನಿಸ್ಸಂಕಾ ಕ್ಯಾಚ್ ಕೈಚೆಲ್ಲಿ ಅಭಿಷೇಕ್‌ಗೆ ಜೀವದಾನ ನೀಡಿದರು. ಇದರ ಸಂಪೂರ್ಣ ಲಾಭವೆತ್ತಿದ ಅವರು ಶತಕ ಬಾರಿಸಿ ಡೆಲ್ಲಿಯ ಎಲ್ಲ ಯೋಜನೆಗಳನ್ನು ವಿಫಲಗೊಳಿಸಿದರು.
SRH vs DC: ಧೋನಿಯ ಸಿಕ್ಸರ್ ದಾಖಲೆ ಹಿಂದಿಕ್ಕಿ, ಕೊಹ್ಲಿಯ ಶತಕದ ದಾಖಲೆ ಸರಿಗಟ್ಟಿದ ಅಭಿಷೇಕ್ ಶರ್ಮಾ
ಸನ್‌ರೈಸರ್ಸ್ ನೀಡಿದ್ದ 243 ರನ್‌ಗಳ ದೊಡ್ಡ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಶ್ರೀಲಂಕಾದ ವೇಗಿ ಇಶಾನ್ ಮಾಲಿಂಗ (32ಕ್ಕೆ4) ಪರಿಣಾಮಕಾರಿ ಬೌಲಿಂಗ್ ಮೂಲಕ ಕಡಿವಾಣ ಹಾಕಿದರು. ಆಲ್‌ರೌಂಡರ್ ನಿತೀಶ್ ರಾಣಾ (57) ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ದೀರ್ಘ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಆರ್‌ಸಿಬಿ ವಿರುದ್ಧ ಅರ್ಧಶತಕ ಗಳಿಸಿದ್ದ ಕೆ.ಎಲ್.ರಾಹುಲ್ 23 ಎಸೆತಗಳಲ್ಲಿ 37 ರನ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್ (27) ಹಾಗೂ ಡೇವಿಡ್ ಮಿಲ್ಲರ್ (0) ಇಲ್ಲಿ ನಿರಾಶೆ ಅನುಭವಿಸಿದರು. ಸಮೀರ್ ರಿಜ್ವಿ (41) ಕೊಂಚ ಹೊತ್ತು ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 242 (ಅಭಿಷೇಕ್ ಶರ್ಮಾ ಔಟಾಗದೇ 135, ಟ್ರಾವಿಸ್ ಹೆಡ್ 37, ಇಶಾನ್ ಕಿಶನ್ 25, ಹೆನ್ರಿಚ್ ಕ್ಲಾಸನ್ ಔಟಾಗದೇ 37; ಅಕ್ಷರ್ ಪಟೇಲ್ 23ಕ್ಕೆ1).
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 195 (ಕೆ.ಎಲ್.ರಾಹುಲ್ 37, ನಿತೀಶ್ ರಾಣಾ 57, ಸಮೀರ್ ರಿಜ್ವಿ 41, ಟ್ರಿಸ್ಟನ್ ಸ್ಟಬ್ಸ್ 27, ಇಶಾನ್ ಮಾಲಿಂಗ 32ಕ್ಕೆ4, ಹರ್ಷ್ ದುಬೆ 12ಕ್ಕೆ3).