IPL 2026: ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮಾದಾಬಾದ್‌ಗೆ ಶಿಫ್ಟ್ ಮಾಡಲು ಕಾರಣ ತಿಳಿಸಿದ ಬಿಸಿಸಿಐ!
IPL 2026: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಬಿಸಿಸಿಐ ಸ್ಥಳಾಂತರ ಮಾಡಿದೆ. ಬಿಸಿಸಿಐ ಮೂಲಗಳು ಇದಕ್ಕೆ ಬಲವಾದ ಕಾರಣ ಏನೆಂದು ರಿವೀಲ್ ಮಾಡಿದೆ.
ಐಪಿಎಲ್ ಫೈನಲ್ ಶಿಫ್ಟ್ ಮಾಡಲು ಕಾರಣ ತಿಳಿಸಿದ ಬಿಸಿಸಿಐ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನ ಫೈನಲ್ ಪಂದ್ಯವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ (M Chinnaswamy Stadium) ಕ್ರೀಡಾಂಗಣದಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣಕ್ಕೆ (Narendra Modi Stadium) ಸ್ಥಳಾಂತರ ಮಾಡಲಾಗಿದೆ. ಆ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಬಿಸಿಸಿಐ ಭಾರಿ ನಿರಾಶೆಯನ್ನು ಉಂಟು ಮಾಡಿತ್ತು. ಶಾಸಕರು ಸೇರಿದಂತೆ ಜನ ಪ್ರತಿನಿಧಿಗಳಿಗೆ ಉಚಿತ ಟಿಕೆಟ್ ನೀಡಬೇಕೆಂಬ ಕಾರಣದಿಂದ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಕೂಡ ಅಂದಾಜಿಸಲಾಗಿತ್ತು. ಅಲ್ಲದೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸನಗಳ ಸಂಖ್ಯೆ ಕಡಿಮೆಯಿದೆ ಎಂಬುದು ಕೂಡ ಒಂದು ಕಾರಣ ಎನ್ನಲಾಗಿದೆ. ಇದೀಗ ಬಿಸಿಸಿಐ ಮೂಲಗಳು ಇದಕ್ಕೆ ಕಾರಣವನ್ನು ರಿವೀಲ್ ಮಾಡಿದೆ.
"ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ತವರು ಅಂಗಣದಲ್ಲಿ ಈ ಬಾರಿ ಐಪಿಎಲ್ ಫೈನಲ್ ಪಂದ್ಯವನ್ನು ಆಡಿಸಲು ಆರಂಭದಲ್ಲಿ ಬಿಸಿಸಿಐ ಬಯಸಿತ್ತು. ಆದರೆ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮತ್ತು ಅಧಿಕಾರಿಗಳಿಂದ ಬಿಸಿಸಿಐಯ ರೂಪಿತ ಮಾರ್ಗಸೂಚಿಗಳು ಹಾಗೂ ಪ್ರೋಟೋಕಾಲ್‌ಗಳ ವ್ಯಾಪ್ತಿಗೆ ಮೀರಿದ ಕೆಲವು ಬೇಡಿಕೆಗಳು ಇಟ್ಟಿತ್ತು. ಈ ಕಾರಣದಿಂದ ಫೈನಲ್ ಪಂದ್ಯದ ಸ್ಥಳವನ್ನು ಬದಲಾಯಿಸಲು ತೀರ್ಮಾನಿಸಲಾಯಿತು," ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆಂದು ಬಿಸಿಸಿಐ ಮೂಲವೊಂದು ಮಾಧ್ಯಮಗಳಿಗೆ ತಿಳಿಸಿದೆ.
ಐಪಿಎಲ್ 2026 ಫೈನಲ್ ಸ್ಥಳಾಂತರ: ಶಾಸಕರ ಟಿಕೆಟ್ ಲಾಬಿ, ಬೆಂಗಳೂರು ಕೈ ತಪ್ಪಿದ ಆತಿಥ್ಯ!
ಈ ನಿರ್ಧಾರವು 2025ರ ಜೂನ್ 4ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತವಾದ ಸುಮಾರು 10 ತಿಂಗಳ ನಂತರ ಬಂದಿದೆ. ಕಳೆದ ವರ್ಷ ಸಂಭದಿಸಿದ್ದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದು, 56 ಮಂದಿ ಗಾಯಗೊಂಡಿದ್ದರು. ಘಟನೆಯ ನಂತರ ಸ್ಟೇಡಿಯಂ ಪ್ರೇಕ್ಷಕರಿಗೆ ಮುಚ್ಚಲ್ಪಟ್ಟಿದ್ದು 2026ರ ಮಾರ್ಚ್ 28ರವರೆಗೂ ಸಾರ್ವಜನಿಕ ಪ್ರವೇಶವಿರಲಿಲ್ಲ. ಆ ಅವಧಿಯಲ್ಲಿ ಈ ಸ್ಟೇಡಿಯಂನಲ್ಲಿ ಕೆ ತಿಮ್ಮಪ್ಪಯ್ಯ ಸ್ಮರಣಾರ್ಥ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಮುಚ್ಚಿದ ಬಾಗಿಲುಗಳಿಂದ ನಡೆಸಲಾಗಿತ್ತು. ಅದೇ ಸಮಯದಲ್ಲಿ ಆರ್‌ಸಿಬಿ ಮಹಿಳಾ ತಂಡ, ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ತನ್ನ ತವರು ಪಂದ್ಯಗಳನ್ನು ಮುಂಬೈ ಮತ್ತು ವಡೋದರಾ ಸೇರಿದಂತೆ ಪರ್ಯಾಯ ಮೈದಾನಗಳಲ್ಲಿ ಆಡಿತ್ತು.
ಐಪಿಎಲ್ ಪ್ಲೇ-ಆಫ್ಸ್ ಆತಿಥ್ಯದಿಂದ ಬೆಂಗಳೂರು ಔಟ್! ಕೆಎಸ್‌ಸಿಎ ನಿರಾಶೆ
ಕೆಎಸ್‌ಸಿಎ ವಕ್ತಾರ ಹೇಳಿದ್ದೇನು?
“ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸುವುದು ಯಾವಾಗಲೂ ಬಿಸಿಸಿಐನ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಯಾವುದೇ ಪ್ಲೇಆಫ್ ಪಂದ್ಯಗಳನ್ನು ಆತಿಥ್ಯ ವಹಿಸುವ ಹಕ್ಕಿಲ್ಲ,” ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.
“ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲೇಆಫ್ಸ್ ಪಂದ್ಯಗಳನ್ನು ಏಕೆ ಆಯೋಜಿಸಲಾಗುತ್ತಿಲ್ಲ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ. ಆದ್ದರಿಂದ ಪ್ರಸ್ತುತ ನಮಗೆ ಯಾವುದೇ ಅಧಿಕೃತ ವಿವರಗಳಿಲ್ಲ,” ಎಂದು ಅವರು ತಿಳಿಸಿದ್ದಾರೆ.
“ಅಹಮದಾಬಾದ್‌ನಲ್ಲಿ ದೊಡ್ಡ ಸ್ಟೇಡಿಯಂ ಇರುವುದರಿಂದ ಹೆಚ್ಚಿನ ಜನರು ಪಂದ್ಯವನ್ನು ವೀಕ್ಷಿಸಬಹುದು ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಅನ್ನು ಸ್ಥಳಾಂತರಿಸಿರಬಹುದು. ಇದಕ್ಕೆ ಶಾಸಕರಿಗೆ ಟಿಕೆಟ್ ಹಂಚಿಕೆ ಅಥವಾ ಫೈನಲ್ ಪಂದ್ಯ ಸ್ಥಳಾಂತರದ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ಫೈನಲ್ ಅನ್ನು ನರೇಂದ್ರ ಮೋದಿ ಸ್ಟೇಡಿಯಂಗೆ ಶಿಫ್ಟ್ ಮಾಡಿದ್ದೇಕೆ?
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇದೆ. ಭಾರಿ ಜನಸಂದಣಿಯನ್ನು ನಿರ್ವಹಿಸಲು ಸುಲಭವಾಗುವುದು ಹಾಗೂ ಭದ್ರತಾ ವ್ಯವಸ್ಥೆಯನ್ನು ಸುಗಮಗೊಳಿಸಲು ಸಾಧ್ಯವಾಗುವುದು ಈ ನಿರ್ಧಾರದ ಪ್ರಮುಖ ಕಾರಣ ಎಂದು ಅಂದಾಜಿಸಬಹುದು. ಆದರೆ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ 30 ಸಾವಿರ, ಹಾಗಾಗಿ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಅಸಾಧ್ಯವಾಗಿದೆ.