ʻರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಿರಿʼ: ಯಶಸ್ವಿ ಜೈಸ್ವಾಲ್‌ಗೆ ಅಂಬಾಟಿ ರಾಯುಡು ಸಲಹೆ!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅವರು, ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಬೇರೆ ಫ್ರಾಂಚೈಸಿಗೆ ಸೇರ್ಪಡೆಯಾಗುವಂತೆ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಸಲಹೆ ನೀಡಿದ್ದಾರೆ. ಆ ಮೂಲಕ ವೈಭವ್ ಸೂರ್ಯವಂಶಿ ಅವರ ನೆರಳಿನಿಂದ ದೂರ ಇರುವಂತೆ ಸೂಚನೆ ನೀಡಿದ್ದಾರೆ.
ಯಶಸ್ವಿ ಜೈಸ್ವಾಲ್‌ಗೆ ಅಂಬಾಟಿ ರಾಯುಡು ಸಲಹೆ. -
ನವದೆಹಲಿ: ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಅವರು ಯಶಸ್ವಿ ಜೈಸ್ವಾಲ್ (Yashasvi Jaiswal) ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯುವಂತೆ ಸಲಹೆ ನೀಡಿದ್ದಾರೆ. ಜೈಸ್ವಾಲ್ ಅವರ ಆರಂಭಿಕ ಜೊತೆಯಾಟಗಾರ ವೈಭವ್ ಸೂರ್ಯವಂಶಿ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ನ್ಯೂ ಚಂಡೀಗಢ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಬಳಿಕ ರಾಯುಡು ಈ ಸಲಹೆಯನ್ನು ನೀಡಿದ್ದಾರೆ.
15ರ ವಯಸ್ಸಿನ ವೈಭವ್ ಸೂರ್ಯವಂಶಿಯ ಪ್ರಭಾವದಿಂದ ಹೊರಬಂದು ಜೈಸ್ವಾಲ್ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳಲು ಬೇರೆ ಫ್ರಾಂಚೈಸಿಗೆ ಸೇರುವುದು ಉತ್ತಮ ಎಂಬುದು ಸಿಎಸ್‌ಕೆ ಮಾಜಿ ಆಟಗಾರನ ಅಭಿಪ್ರಾಯ. ಜೈಸ್ವಾಲ್ ಸ್ವತಃ ಪಂದ್ಯಗಳನ್ನು ಗೆಲ್ಲಿಸಬಲ್ಲ ಸ್ಟಾರ್ ಆಟಗಾರರಾಗಿದ್ದು, ಕೇವಲ ಸೂರ್ಯವಂಶಿಗೆ ಬೆಂಬಲ ನೀಡುವ ಪಾತ್ರದಲ್ಲಿ ಉಳಿಯಬಾರದು ಎಂದು ಅವರು ಹೇಳಿದ್ದಾರೆ. ಜೈಸ್ವಾಲ್ ಯಾವ ತಂಡಕ್ಕೆ ಸೇರುವುದು ಸೂಕ್ತ ಎಂಬ ಪ್ರಶ್ನೆಗೆ ಉತ್ತರಿಸಿದ ರಾಯುಡು, ಮುಂಬೈ ಇಂಡಿಯನ್ಸ್ ತಂಡವನ್ನು ಆಯ್ಕೆಯಾಗಿ ಸೂಚಿಸಿದ್ದಾರೆ.
IPL 2026: ʻಅದು ಮೂರ್ಖ ಪ್ರಶ್ನೆʼ-ರಿಪೋರ್ಟರ್ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಗುಡುಗಿದ ಗ್ಲೆನ್ ಫಿಲಿಪ್ಸ್!
“ಅವರು ತಂಡವನ್ನು ಬದಲಾಯಿಸಬೇಕಾಗಿದೆ. ಏಕೆಂದರೆ ಪ್ರತೀ ಬಾರಿ ಆ ಆಟಗಾರನ (ವೈಭವ್ ಸೂರ್ಯವಂಶಿ) ಜೊತೆ ಬ್ಯಾಟ್ ಮಾಡಿ ಅವರ ನೆರಳಿನಲ್ಲಿ ಉಳಿಯಲು ಸಾಧ್ಯವಿಲ್ಲ. ಯಶಸ್ವಿ ಜೈಸ್ವಾಲ್ ಸ್ವತಃ ಒಬ್ಬ ಸ್ಟಾರ್ ಆಟಗಾರ. ಅವರು ಬೇರೆ ತಂಡಕ್ಕೆ ಹೋದರೆ ತನ್ನದೇ ಶಕ್ತಿಯಿಂದ ಪಂದ್ಯಗಳನ್ನು ಗೆಲ್ಲಿಸಬಲ್ಲರು. ಅದಕ್ಕಾಗಿ ಅವರಿಗೆ ಸ್ವಂತ ವೇದಿಕೆ ಮತ್ತು ಅವಕಾಶ ಬೇಕು. ಏಕೆಂದರೆ ಅವರು ಇತರ ಆಟಗಾರರಂತೆ ನಿರಂತರವಾಗಿ ಮಿಂಚುತ್ತಲೇ ಇರುತ್ತಾರೆ. ಅವರ ಜೊತೆ ಆಡಲು ಅನುಭವ ಹೊಂದಿದ ಹಿರಿಯ ಆಟಗಾರ ಬೇಕು, ಅವರ ಸಾಧನೆಯನ್ನು ಮನಸಾರೆ ಸ್ವೀಕರಿಸುವ ವ್ಯಕ್ತಿ ಬೇಕು. ನಾನ್-ಸ್ಟ್ರೈಕರ್‌ನೊಂದಿಗೆ ಸ್ಪರ್ಧೆ ಮಾಡುವ ಮನೋಭಾವ ಇರಬಾರದು. ಮುಂಬೈ ಇಂಡಿಯನ್ಸ್ ಜೈಸ್ವಾಲ್‌ಗೆ ಉತ್ತಮ ತಂಡ,” ಎಂದು ಅಂಬಾಟಿ ರಾಯುಡು ಅವರು ಇಎಸ್‌ಪಿಎನ್ ಕ್ರಿಕ್‌ಇನ್ಪೋಗೆ ತಿಳಿಸಿದ್ದಾರೆ.
IPL 2026: ʻನ್ಯೂ ಸಿಕ್ಸ್ ಮಷಿನ್ʼ-ವೈಭವ್ ಸೂರ್ಯವಂಶಿಗೆ ಹೊಸ ಹೆಸರು ನಾಮಕರಣ ಮಾಡಿದ ಕ್ರಿಸ್ ಗೇಲ್!
ಯಶಸ್ವಿ ಜೈಸ್ವಾಲ್ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 32.76ರ ಸರಾಸರಿಯಲ್ಲಿ 426 ರನ್‌ಗಳನ್ನು ಗಳಿಸಿದ್ದಾರೆ. ಜೊತೆಗೆ ಅವರು 153.23ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ ಅವರ ಆರಂಭಿಕ ಜೊತೆಯಾಟಗಾರ ವೈಭವ್ ಸೂರ್ಯವಂಶಿ ಅದ್ಭುತ ಫಾರ್ಮ್‌ನಲ್ಲಿ ಇದ್ದು, 242.85ರ ಭರ್ಜರಿ ಸ್ಟ್ರೈಕ್ ರೇಟ್‌ನೊಂದಿಗೆ 680 ರನ್‌ಗಳನ್ನು ಸಿಡಿಸಿ ಪ್ರಸ್ತುತ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಜೈಸ್ವಾಲ್‌ಗೆ ಮುಂಬೈ ಇಂಡಿಯನ್ಸ್‌ಗೆ ಸೇರುವಂತೆ ಸಲಹೆ
ಯಶಸ್ವಿ ಜೈಸ್ವಾಲ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಸೇರಬೇಕೆಂದು ನೀಡಿದ ಸಲಹೆ ಕಾಗದದ ಮೇಲೆ ನೋಡಿದರೆ ಅರ್ಥಪೂರ್ಣವಾಗಿಯೇ ಕಾಣಿಸುತ್ತದೆ. ಮುಂದಿನ ವರ್ಷ ರೋಹಿತ್ ಶರ್ಮಾ ಅವರಿಗೆ 40 ವರ್ಷ ತುಂಬಲಿರುವುದರಿಂದ, ಮುಂಬೈ ಫ್ರಾಂಚೈಸಿ ದೀರ್ಘಾವಧಿಗೆ ಅವರ ಸ್ಥಾನವನ್ನು ಭರಿಸಬಲ್ಲ ಹೊಸ ಆರಂಭಿಕ ಬ್ಯಾಟರ್ ಹುಡುಕುವ ಸಾಧ್ಯತೆ ಇದೆ. ಇದರ ಜೊತೆಗೆ, ಐದು ಬಾರಿ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2026ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಅವರು ಕೇವಲ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.