ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ENG vs PAK: ಹ್ಯಾರಿ ಬ್ರೂಕ್‌ ಶತಕ, ಪಾಕ್‌ಗೆ ಆಘಾತ ನೀಡಿ ಸೆಮೀಸ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್‌!

ENG vs PAK Match Highlights: ಹ್ಯಾರಿ ಬ್ರೂಕ್‌ ಅವರ ಸ್ಪೋಟಕ ಶತಕದ ಬಲದಿಂದ ಇಂಗ್ಲೆಂಡ್‌ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಎರಡನೇ ಸೂಪರ್‌-8ರ ಪಂದ್ಯದಲ್ಲಿ ಪಾಕಿಸ್ತಾನವನ್ನು 2 ವಿಕೆಟ್‌ಗಳಿಂದ ಮಣಿಸಿತು. ಆ ಮೂಲಕ ಹ್ಯಾರಿ ಬ್ರೂಕ್‌ ನಾಯಕತ್ವದ ಆಂಗ್ಲರು ಸೆಮಿಫೈನಲ್ಸ್‌ಗೆ ಲಗ್ಗೆ ಇಟ್ಟಿದ್ದಾರೆ.

T20 World Cup: ಪಾಕ್‌ ವಿರುದ್ಧ ಗೆದ್ದು ಸೆಮೀಸ್‌ಗೇರಿದ ಇಂಗ್ಲೆಂಡ್!

ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ 2 ವಿಕೆಟ್‌ ಜಯ. -

Profile
Ramesh Kote Feb 24, 2026 10:47 PM

ಪಲ್ಲೆಕೆಲೆ: ಹ್ಯಾರಿ ಬ್ರೂಕ್‌ (Harry Brook) ಸ್ಪೋಟಕ ಶತಕದ ಬಲದಿಂದ ಇಂಗ್ಲೆಂಡ್‌ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ (ENG vs PAK) ಪಾಕಿಸ್ತಾನದ ವಿರುದ್ಧ 2 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಸೆಮಿಫೈನಲ್ಸ್‌ಗೆ ಅಧಿಕೃತವಾಗಿ ಪ್ರವೇಶ ಮಾಡಿತು. ಇನ್ನು ಶಾಹೀನ್‌ ಶಾ ಅಫ್ರಿದಿ ಮಾರಕ ಬೌಲಿಂಗ್‌ ನೆರವಿನ ಹೊರತಾಗಿಯೂ ಬ್ಯಾಟಿಂಗ್‌ ವೈಫಲ್ಯದಿಂದ ಪಾಕಿಸ್ತಾನ ತಂಡ ಸೋಲು ಒಪ್ಪಿಕೊಳ್ಳಬೇಕಾಯಿತು. ಈ ಸೋಲಿನ ಮೂಲಕ ಪಾಕ್‌ನ ಅಂತಿಮ ನಾಲ್ಕರ ಘಟ್ಟದ ಹಾದಿ ಇನ್ನಷ್ಟು ಕಠಿಣವಾಗಿದೆ.

ಮಂಗಳವಾರ ಇಲ್ಲಿನ ಪಲ್ಲೆಕೆಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಪಾಕ್‌ ನೀಡಿದ್ದ 165 ರನ್‌ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ, ಹ್ಯಾರಿ ಬ್ರೂಕ್‌ ಅವರ ಚೊಚ್ಚಲ ಶತಕದ ಬಲದಿಂದ 19.1 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿ ಗೆಲುವು ಪಡೆಯಿತು. ಸ್ಪೋಟಕ ಶತಕ ಬಾರಿಸಿ ಇಂಗ್ಲೆಂಡ್‌ ತಂಡವನ್ನು ಗೆಲುವಿಗೆ ನೆರವು ನೀಡಿದ ಹ್ಯಾರಿ ಬ್ರೂಕ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಗೌತಮ್‌ ಗಂಭೀರ್‌ ರಾಜಕೀಯದಿಂದ ಭಾರತ ತಂಡದ ವರ್ಚಸ್ಸಿಗೆ ಧಕ್ಕೆ: ಅಹ್ಮದ್‌ ಶೆಹಜಾದ್‌!

ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದ್ದ ಶಾಹೀನ್‌

ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡಕ್ಕೆ ಶಾಹೀನ್‌ ಶಾ ಅಫ್ರಿದಿ ಆರಂಭಿಕ ಆಘಾತ ನೀಡಿದರು. ಆರಂಭಿಕರಾದ ಫಿಲ್‌ ಸಾಲ್ಟ್‌ ಮತ್ತು ಜೋಸ್‌ ಬಟ್ಲರ್‌ ಅವರನ್ನು ಔಟ್‌ ಮಾಡಿದರು. ಇದರ ಬೆನ್ನಲ್ಲೆ ಅವರು ಜಾಕೋಬ್‌ ಬೆಥೆಲ್‌ ವಿಕೆಟ್‌ ಅನ್ನೂ ಕಿತ್ತರು. ನಂತರ ಉಸ್ಮಾನ್‌ ತಾರಿಖ್‌, ಟಾಮ್‌ ಬ್ಯಾಂಟನ್‌ ಮತ್ತು ಸ್ಯಾಮ್‌ ಕರನ್‌ (16 ರನ್‌) ಅವರನ್ನು ಔಟ್‌ ಮಾಡಿದ್ದರು. ಆ ಮೂಲಕ ಇಂಗ್ಲೆಂಡ್‌ ತಂಡ ಒಂದು ತುದಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು. ಒಂದು ಹಂತದಲ್ಲಿ ಪಾಕಿಸ್ತಾನ, ಗೆಲ್ಲುವ ನೆಚ್ಚಿನ ತಂಡವಾಗಿತ್ತು.



ಹ್ಯಾರಿ ಬ್ರೂಕ್‌ ಸ್ಪೋಟಕ ಶತಕ

ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿದ ನಾಯಕ ಹ್ಯಾರಿ ಬ್ರೂಕ್‌, ತಮ್ಮ ಚೊಚ್ಚಲ ಶತಕದ ಮೂಲಕ ಇಂಗ್ಲೆಂಡ್‌ ತಂಡದ ಎರಡು ವಿಕೆಟ್‌ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಅವರು ಆಡಿದ 51 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 100 ರನ್‌ ಚಚ್ಚಿದರು. ಇನ್ನೇನು ತಂಡವನ್ನು ಗೆಲ್ಲಿಸುವ ಸನಿಹದಲ್ಲಿ ಅವರು ಶಾಹೀನ್‌ ಶಾ ಅಫ್ರಿದಿಗೆ (30ಕ್ಕೆ 4) ಕ್ಲೀನ್‌ ಬೌಲ್ಡ್‌ ಆದರು. 19ನೇ ಓವರ್‌ನಲ್ಲಿ ಎರಡು ವಿಕೆಟ್‌ಗಳು ತ್ವರಿತವಾಗಿ ಉರುಳಿದರೂ ಜೋಫ್ರಾ ಆರ್ಚರ್‌ ಕೊನೆಯ ಓವರ್‌ನಲ್ಲಿ ಬೌಂಡರಿ ಬಾರಿಸಿ ಇಂಗ್ಲೆಂಡ್‌ಗೆ ಗೆಲುವು ಖಚಿತಪಡಿಸಿದರು. ಇದಕ್ಕೂ ಮುನ್ನ ವಿಲ್‌ ಝ್ಯಾಕ್ಸ್‌ 23 ಎಸೆತಗಳಲ್ಲಿ 28 ರನ್‌ಗಳ ಕೊಡುಗೆಯನ್ನು ನೀಡಿದ್ದರು.



164 ರನ್‌ ಕಲೆ ಹಾಕಿದ ಪಾಕಿಸ್ತಾನ

ಇದಕ್ಕೂ ಮುನ್ನ ಇಲ್ಲಿನ ಪಲ್ಲೆಕೆಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡದ ಯೋಜನೆಯನ್ನು ಬ್ಯಾಟ್ಸ್‌ಮನ್‌ಗಳು ಕೆಡವಿದರು. ಆದರೂ ಸಾಹಿಬ್‌ಝಾದ ಫರ್ಹಾನ್‌ ಅವರ ನಿರ್ಣಾಯಕ ಅರ್ಧಶತಕದ ಬಲದಿಂದ ಪಾಕಿಸ್ತಾನ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಶಕ್ತವಾಯಿತು.



ಪಾಕ್‌ನ ಬ್ಯಾಟಿಂಗ್‌ ವೈಫಲ್ಯ

ಪಾಕಿಸ್ತಾನ ಪರ ಫರ್ಹಾನ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಸೈಯಮ್‌ ಆಯುಬ್‌ (7) ಮತ್ತೊಮ್ಮೆ ವಿಫಲರಾದರು. ಅವರು ಅಪಾಯಕಾರಿ ವೇಗಿ ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ಬೆನ್ನಲ್ಲೆ ನಾಯಕ ಸಲ್ಮಾನ್‌ ಅಲಿ (5) ಆಘಾ ಔಟ್‌ ಆದರು. ಮಧ್ಯಮ ಕ್ರಮಾಂಕದಲ್ಲಿ ಬಾಬರ್‌ ಆಝಮ್‌ ಹಾಗೂ ಫಖಾರ್‌ ಝಮಾನ್‌ ತಲಾ 25 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವನ್ನು ಕಲೆ ಹಾಕಲಿಲ್ಲ. ಶದಾಬ್‌ ಖಾನ್‌ ಕೊನೆಯಲ್ಲಿ 11 ಎಸೆತಗಳಲ್ಲಿ 23 ರನ್‌ ಸಿಡಿಸಿದ್ದರು.

ENG vs PAK: ನಿಧಾನಗತಿಯ ಬ್ಯಾಟಿಂಗ್‌ನೊಂದಿಗೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಬಾಬರ್‌ ಆಝಮ್!

ಸಾಹಿಬ್‌ಝಾದ ಫರ್ಹಾನ್‌ ಅರ್ಧಶತಕ

ಪ್ರಸ್ತುತ ಟೂರ್ನಿಯಲ್ಲಿ ಭರ್ಜರಿ‌ ಫಾರ್ಮ್‌ನಲ್ಲಿರುವ ಆರಂಭಿಕ ಸಾಹಿಬ್‌ಝಾದ ಫರ್ಹಾನ್‌, ಈ ಪಂದ್ಯದಲ್ಲಿ ಉಪಯುಕ್ತ ಇನಿಂಗ್ಸ್‌ ಆಡಿದರು. ಅವರು ಒಂದು ತುದಿಯಲ್ಲಿ ದೀರ್ಘಾವಧಿ ನಿಂತು ಬ್ಯಾಟ್‌ ಬೀಸಿದರು. ಅವರು ಆಡಿದ 45 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 63 ರನ್‌ ಗಳಿಸಿದರು. ಆ ಮೂಲಕ ಪಾಕಿಸ್ತಾನ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು.

ಇಂಗ್ಲೆಂಡ್‌ ಪರ ಲಿಯಾಮ್‌ ಡಾಸನ್‌ 3 ವಿಕೆಟ್‌ ಕಿತ್ತರೆ, ಜೋಫ್ರಾ ಆರ್ಚರ್‌ ಹಾಗೂ ಜೇಮಿ ಓವರ್ಟನ್‌ ತಲಾ ಎರಡೆರಡು ವಿಎಕಟ್‌ ಕಬಳಿಸಿದರು.