ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: 24 ಸಿಕ್ಸರ್‌ಗಳ ಮೂಲಕ ನೂತನ ಮೈಲುಗಲ್ಲು ತಲುಪಿದ ಸಂಜು ಸ್ಯಾಮ್ಸನ್!

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಇದರ ನಡುವೆ ಭಾರತ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್ ಇದೀಗ ಮತ್ತೊಂದು ವಿಶೇಷ ದಾಖಲೆ ಬರೆದಿದ್ದು, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ನೂತನ ಮೈಲಿಗಲ್ಲು ತಲುಪಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಸಂಜು ಸ್ಯಾಮ್ಸನ್‌!

ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಬರೆದ ಸಂಜು ಸ್ಯಾಮ್ಸನ್‌. -

Profile
Ramesh Kote Mar 9, 2026 7:40 PM

ನವದೆಹಲಿ: ನ್ಯೂಜಿಲೆಂಡ್‌ ಎದುರು 2026ರ ಟಿ20 ವಿಶ್ವಕಪ್ (T20 World Cup 2026)​ ಫೈನಲ್ ಪಂದ್ಯದಲ್ಲಿ ಭಾರತ ತಂಡ ತನ್ನ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ನೀಡಿ ಮೂರನೇ ಬಾರಿ ಚಾಂಪಿಯನ್‌ ಆಯಿತು. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ (IND vs NZ) ಟೀಮ್ ಇಂಡಿಯಾ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು. ಇದರ ನಡುವೆ ಈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್ (Sanju Samson) ಇದೀಗ ಟಿ20 ವಿಶ್ವಕಪ್ ಟೂರ್ನಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 8 ಸಿಕ್ಸರ್‌ ಮತ್ತು 5 ಫೋರ್‌ ಗಳೊಂದಿಗೆ ಬರೋಬ್ಬರಿ 89 ರನ್ ಬಾರಿಸಿದರು. ಈ ಸ್ಫೋಟಕ ಇನಿಂಗ್ಸ್ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 255 ರನ್ ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು.

IND vs NZ: ಸಂಜು ಸ್ಯಾಮ್ಸನ್‌ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ!

ಇನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್ ಏಕೈಕ ಆವೃತ್ತಿಯೊಂದರಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 7 ಸಿಕ್ಸರ್ ಸಿಡಿಸಿ ಚುಟುಕು ಕ್ರಿಕೆಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆ ಮುರಿದಿದ್ದರು. ಬಳಿಕ ಕಿವೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 8 ಸಿಕ್ಸರ್ ಬಾರಿಸುವ ಮೂಲಕ ಒಟ್ಟು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಐದು ಪಂದ್ಯಗಳಿಂದ 24 ಸಿಕ್ಸರ್ ಸಿಡಿಸಿದ್ದಾರೆ.

ಇದರ ಫಲವಾಗಿ ಅವರು ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯೊಂದರಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಬಳಿಕ ಇದೇ ಆವೃತ್ತಿಯಲ್ಲಿ 20 ಸಿಕ್ಸರ್ ಬಾರಿಸಿರುವ ನ್ಯೂಜಿಲೆಂಡ್ ತಂಡದ ಆಟಗಾರ ಫಿನ್ ಆಲೆನ್ ಅವರನ್ನು ಹಿಂದಿಕ್ಕಿದ್ದಾರೆ. ಆಲೆನ್‌ ಇದೋಗ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.



ಹ್ಯಾಟ್ರಿಕ್‌ ಅರ್ಧಶತಕ ಬಾರಿಸಿದ ಸಂಜು

ಕಳಪೆ ಫಾರ್ಮ್‌ನಿಂದ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಅವಕಾಶ ವಂಚಿತರಾಗಿದ್ದ ಸಂಜು ಸ್ಯಾಮ್ಸನ್ ಇದೀಗ ತಮಗೆ ಸಿಕ್ಕ ಅವಕಾಶಗಳನ್ನು ಬಾಚಿ ತಬ್ಬಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣದಿಂದಾಗಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸ್ಯಾಮ್ಸನ್, ಅಷ್ಟೊಂದು ಉತ್ತಮ ಪ್ರದರ್ಶನ ನೀಡಲಾಗದಿದ್ದರೂ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಬಾರಿಸುವ ಮೂಲಕ ಮರಳಿ ಲಯಕ್ಕೆ ಮರಳಿದರು.

ʻನಿಮ್ಮಿಂದ ನಿಜವಾಗಿಯೂ ಖುಷಿಯಾಗಿದೆ ಚೆಟಾʼ": ಸಂಜು ಸ್ಯಾಮ್ಸನ್‌ಗೆ ಕಿಂಗ್‌ ಕೊಹ್ಲಿ ವಿಶೇಷ ಸಂದೇಶ!

ಬಳಿಕ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 87 ರನ್ ಬಾರಿಸಿ ಅಬ್ಬರಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲೂ ಕೂಡ 89 ರನ್ ಬಾರಿಸಿ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಆ ಮೂಲಕ ಅವರು ಟೂರ್ನಿಯಲ್ಲಿ 80.2ರ ಸರಾಸರಿಯಲ್ಲಿ 24 ಸಿಕ್ಸರ್ ಮತ್ತು 27 ಬೌಂಡರಿಗಳೊಂದಿಗೆ ಒಟ್ಟು 321 ರನ್ ಬಾರಿಸಿದ್ದು, ಟಿ20 ವಿಶ್ವಕಪ್‌ ಟೂರ್ನಿಯೊಂದಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಆಟಗಾರ ಎಂದೆನಿಸಿಕೊಂಡರು. ಇದರ ಫಲವಾಗಿ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.