IND vs SA: ʻಭಾರತ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದಾರೆ, ಚಿಂತಿಸುವ ಅಗತ್ಯವಿಲ್ಲʼ-ಎಬಿ ಡಿವಿಲಿಯರ್ಸ್!
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ವೈಟ್‌ವಾಷ್ ಆಘಾತ ಅನುಭವಿಸಿದೆ. ಇದರ ಬೆನ್ನಲ್ಲೇ ಭಾರತ ತಂಡದ ಬ್ಯಾಟ್ಸ್‌ಮನ್‌ಗಳ ಪರ ಬ್ಯಾಟ್ ಬೀಸಿರುವ ಕ್ರಿಕೆಟ್ ದಿಗ್ಗಜ ಎಬಿ ಡಿವಿಲಿಯರ್ಸ್, ಭಾರತ ತಂಡದಲ್ಲಿ ಉತ್ತಮ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತ ತಂಡದ ಬಗ್ಗೆ ಎಡಿ ವಿಲಿಯರ್ಸ್ ಹೇಳಿಕೆ. -
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ (IND vs SA) ವೈಟ್‌ವಾಷ್ ಆಘಾತ ಅನುಭವಿಸಿರುವ ಭಾರತ ತಂಡ ತೀವ್ರ ಟೀಕೆಗೆ ಗುರಿಯಾಗಿದೆ. ಕಳೆದ 12 ತಿಂಗಳಲ್ಲಿ ಭಾರತ ತಂಡ ತವರಿನಲ್ಲಿ ಸತತ ಎರಡು ಕ್ಲೀನ್‌ಸ್ವೀಪ್ ಮುಜುಗರ ಅನುಭವಿಸಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ದಿಗ್ಗಜ ಎಬಿ ಡಿವಿಲಿಯರ್ಸ್ (AB De Villiers) ಭಾರತೀಯ ಬ್ಯಾಟರ್‌ಗಳನ್ನು ಬೆಂಬಲಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಉತ್ತಮ ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಕಳಪೆ ಪ್ರದರ್ಶನ ನೀಡಿರುವ ಭಾರತದ (India) ಬ್ಯಾಟಿಂಗ್ ಲೈನ್‌ಅಪ್ ಟೀವ್ರ ಟೀಕೆಗೆ ಗುರಿಯಾಗಿದೆ. ಆದಾಗ್ಯೂ, ಭಾರತ ತಂಡದಲ್ಲಿ ಉತ್ತಮ ಪ್ರತಿಭಾನ್ವಿತ ಬ್ಯಾಟರ್‌ಗಳಿದ್ದಾರೆ. ಹೀಗಾಗಿ ಆತಿಥೇಯ ತಂಡ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ.
ಈ ಕುರಿತು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್, "ಇದು ನೋವಿನ ಸಂಗತಿ ಎಂದು ನನಗೆ ತಿಳಿದಿದೆ, ಆದರೆ ಎಲ್ಲಾ ಸ್ವರೂಪಗಳಲ್ಲಿ ಭಾರತೀಯ ಕ್ರಿಕೆಟ್ ನೋಡಿದಾಗ, ಚಿಂತಿಸಲು ಹೆಚ್ಚಿನದೇನೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಇತ್ತೀಚೆಗೆ ಬಹಳಷ್ಟು ಬದಲಾವಣೆಗಳಾಗಿವೆ. ಆದ್ದರಿಂದ ಅವರು ಸ್ವಲ್ಪ ಲಯ ಕಂಡುಕೊಳ್ಳಬೇಕಾಗಬಹುದು. ಮೈದಾನದಲ್ಲಿ ಆ ರೀತಿಯ ಹೋರಾಟವನ್ನು ನಾನು ನಿರೀಕ್ಷಿಸುತ್ತೇನೆ. ಭಯಪಡುವ ಅಗತ್ಯವಿಲ್ಲ. ಅವರ ಬಳಿ ಸಾಕಷ್ಟು ಪ್ರತಿಭೆಗಳಿವೆ, ಸಾಕಷ್ಟು ಆಯ್ಕೆಗಳಿವೆ ಮತ್ತು ಅವರು ಮುಂದುವರಿಯಲು ಬಳಸಬಹುದಾದ ವಿಭಿನ್ನ ಸಂಯೋಜನೆಗಳಿವೆ," ಎಂದು ಎ ಬಿ ಡಿವಿಲಿಯರ್ಸ್ ಹೇಳಿದ್ದಾರೆ.
IND vs SA: ಭಾರತ ತಂಡದ ಹೆಡ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್‌ರನ್ನು ಕಿತ್ತಾಕಿ ಎಂದ ಮನೋಜ್ ತಿವಾರಿ!
"ಭಾರತ ತಂಡ ಒಡಿಐ ಹಾಗೂ ಟಿ20ಐ ಸರಣಿಗಳಲ್ಲಿ ಸ್ವಲ್ಪ ತಾಜಾತನವನ್ನು ಪಡೆಯಬಹುದು. ವೈಟ್ ಬಾಲ್ ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸಂಗತಿಗಳು ಸ್ವಲ್ಪ ಕಠಿಣವಾಗಬಹುದು. ಆದರೆ ಇದರ ಬಗ್ಗೆ ಗಾಬರಿ ಪಡುವ ಅಗತ್ಯವಿಲ್ಲ. ಇನ್ನು ಭಾರತದ ಪಾಲಿಗೆ ಇದು(ಟೆಸ್ಟ್ ಸರಣಿ ಸೋಲು) ಸ್ವಲ್ಪ ಸಮಯದವರೆಗೆ ನೋವುಂಟು ಮಾಡುತ್ತದೆ ಮತ್ತು ಅದು ಹಾಗೆ ಆಗಬೇಕು - ಆದರೆ ಇದು ರಸ್ತೆಯ ಅಂತ್ಯ ಎಂದು ಅರ್ಥವಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಪ್ರತಿಭೆಗಳಿವೆ," ಎಂದು ತಿಳಿಸಿದ್ದಾರೆ.
ಭಾರತ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದಾರೆ: ಎಬಿಡಿ
ಇದು ತಾಂತ್ರಿಕ ಸಮಸ್ಯೆಯಲ್ಲ ಎಂದು ನಾನು ಭಾವಿಸುತ್ತೇನೆ. ಭಾರತೀಯ ಆಟಗಾರರು ಯಾವಾಗಲೂ ಸ್ಪಿನ್ ವಿರುದ್ಧ ಅತ್ಯುತ್ತಮ ಆಟವಾಡುತ್ತಾರೆ. ಅವರು ಇನ್ನೂ ಉತ್ತಮರು ಎಂದು ಸಾಬೀತುಪಡಿಸಲು ಇದ್ದಕ್ಕಿದ್ದಂತೆ ರಿವರ್ಸ್ ಸ್ವೀಪ್ ಅಥವಾ ಸ್ವೀಪ್ ಮಾಡಬೇಕಾಗಿಲ್ಲ ಎಂದು ನಾನು ಭಾವಿಸುವುದಿಲ್ಲ. ನೀವು ಹೆಚ್ಚು ಬದಲಾಗಬೇಕಾಗಿಲ್ಲ. ಇದು ನಂಬಿಕೆ ಮತ್ತು ಸ್ವಲ್ಪ ಆತ್ಮವಿಶ್ವಾಸದ ವಿಷಯವಾಗಿದೆ. ಇದು ಅವರ ಮಾನಸಿಕ ಸಮಸ್ಯೆಯಾಗಿರಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
IND vs SA: ಭಾರತದ ಬ್ಯಾಟ್ಸ್‌ಮನ್‌ಗಳ ಸ್ಪಿನ್ ವೈಫಲ್ಯಕ್ಕೆ ಕಾರಣ ತಿಳಿಸಿದ ಆರ್ ಅಶ್ವಿನ್!
ಭಾರತದ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿದ್ದು, ಸ್ಪಿನ್ ಬೌಲಿಂಗ್ ಎದುರಿಸಲು ಅಗತ್ಯ ತಂತ್ರಗಾರಿಕೆ ಹೊಂದಿದ್ದರೂ, ಭಾರತೀಯ ಬ್ಯಾಟರ್‌ಗಳು ವೈಫಲ್ಯ ಅನುಭವಿಸುತ್ತಿದ್ದಾರೆ. ಇಡೀ ಸರಣಿಯಲ್ಲಿ ಭಾರತೀಯ ಬ್ಯಾಟರ್‌ಗಳು ಒಂದೇ ಒಂದು ಶತಕವನ್ನೂ ಬಾರಿಸಲಿಲ್ಲ. ಟೀಮ್ ಇಂಡಿಯಾ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ನಾಲ್ಕು ಇನಿಂಗ್ಸ್‌ಗಳಲ್ಲಿ ಒಟ್ಟು 124 ರನ್ ಬಾರಿಸಿ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ್ದಾರೆ. ಇನ್ನು ಪ್ರವಾಸಿ ತಂಡದ ವಿರುದ್ಧ ರವೀಂದ್ರ ಜಡೇಜಾ ಮತ್ತು ಯಶಸ್ವಿ ಜೈಸ್ವಾಲ್ ಮಾತ್ರ ಅರ್ಧಶತಕ ಸಿಡಿಸಿದರು. ಆದರೆ, ಅವರು ಕೂಡ ಮಾರ್ಕೊ ಯೆನ್ಸೆನ್ ಮತ್ತು ಸೈಮನ್ ಹಾರ್ಮರ್ ಅವರ ಸ್ಪಿನ್ ಬೌಲಿಂಗ್‌ನಲ್ಲಿ ರನ್ ಕಲೆಹಾಕಲು ಹೆಣಗಾಡಿದರು.
ಭಾರತ 2026ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ದವಾಗಬೇಕಿದೆ. ಟೀಮ್ ಇಂಡಿಯಾಗೆ ಏಳರಿಂದ ಎಂಟು ತಿಂಗಳು ಬಿಡುವಿರುವುದರಿಂದ ಬಲಿಷ್ಠ ಭಾರತ ತಂಡ ಕಟ್ಟಲು ಆಯ್ಕೆ ಸಮಿತಿ ಎದುರು ನೋಡುತ್ತಿದೆ.