ಸಿಎಸ್‌ಕೆಯನ್ನು ಬಿಟ್ಟು ತೊಲಗಿ ಎಂದ ಅಭಿಮಾನಿಗೆ ಅಶ್ವಿನ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೆ?
ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಪ್ರದರ್ಶನವನ್ನು ತೋರಿತು. ಹಾಗಾಗಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಇದರ ನಡುವೆ ಆರ್ ಅಶ್ವಿನ್ ಅವರನ್ನು ಅಭಿಮಾನಿಯೊಬ್ಬರು ಸಿಎಸ್‌ಕೆ ತಂಡವನ್ನು ಬಿಟ್ಟು ಹೋಗುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಅಶ್ವಿನ್‌ಗೆ ಸಿಎಸ್‌ಕೆಯನ್ನು ತೊರೆಯಿರಿ ಎಂದ ಅಭಿಮಾನಿ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ನೀರಸ ಪ್ರದರ್ಶನವನ್ನು ತೋರಿತು. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ನಿಂದ ಹೊರ ಬಿದ್ದಿದೆ. ಹಲವು ವರ್ಷಗಳ ಬಳಿಕ ತಮ್ಮ ತವರು ತಂಡ ಸಿಎಸ್‌ಕೆಗೆ ಬಂದಿದ್ದ ರವಿಚಂದ್ರನ್ ಅಶ್ವಿನ್ (R Ashwin) ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ವಿಫಲರಾಗಿದ್ದರು. ಇದರಿಂದ ಆಕ್ರೋಶಗೊಂಡಿರುವ ಸಿಎಸ್‌ಕೆ ಅಭಿಮಾನಿಯೊಬ್ಬರು, ಚೆನ್ನೈ ತಂಡದಿಂದ ನಿರ್ಗಮಿಸುವಂತೆ ಆರ್ ಅಶ್ವಿನ್‌ಗೆ ಆಗ್ರಹಿಸಿದ್ದಾರೆ. ಇದಕ್ಕೆ ಅಶ್ವಿನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಿಂದ ರಿಲೀಸ್ ಆದ ಬಳಿಕ ಆರ್ ಅಶ್ವಿನ್ ಅವರನ್ನು 2025ರ ಐಪಿಎಲ್ ಟೂರ್ನಿಯ ಮೆಗಾ ಆಕ್ಷನ್‌ನಲ್ಲಿ ಚೆನ್ನೈ ಫ್ರಾಂಚೈಸಿ 9.75 ಕೋಟಿ ರೂ ಗಳಿಗೆ ಖರೀದಿಸಿತ್ತು. ಆದರೆ, ಸ್ಪಿನ್ ಆಲ್‌ರೌಂಡರ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದಾರೆ. ಆಡಿದ 9 ಇನಿಂಗ್ಸ್‌ಗಳಿಂದ ಪಡೆದಿದ್ದು, ಕೇವಲ 7 ವಿಕೆಟ್‌ಗಳು ಮಾತ್ರ.
IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
ಸಿಎಸ್‌ಕೆ ತಂಡವನ್ನು ತೊರೆಯಿರಿ ಅಶ್ವಿನ್
ಇತ್ತೀಚೆಗೆ ಆರ್ ಅಶ್ವಿನ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸೆಷನ್ ಏರ್ಪಡಿಸಿದ್ದರು. ಇದರಲ್ಲಿ ಅಭಿಮಾನಿಯೊಬ್ಬರು, "ಹಾಯ್ ಆತ್ಮೀಯ ಅಶ್ವಿನ್, ಸಿಎಸ್‌ಕೆ ಕುಟುಂಬವನ್ನು ತೊರೆಯಿರಿ ಎಂದು ನಾನು ಪ್ರೀತಿಯಿಂದ ಕೇಳುಕೊಳ್ಳುತ್ತಿದ್ದೇನೆ,"ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದರು. ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್, ತಮ್ಮ ಕಳಪೆ ಪ್ರದರ್ಶನವನ್ನು ಉಲ್ಲೇಖಿಸುತ್ತಾ, ಅಭಿಮಾನಿಗಳ ಭಾವನೆಗಳಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗೆ ಮನವಿಗೆ ಅಶ್ವಿನ್ ಪ್ರತಿಕ್ರಿಯೆ
"ನಾನು ಅರ್ಥಮಾಡಿಕೊಳ್ಳಬಹುದಾದ ಒಂದು ವಿಷಯವೆಂದರೆ ಅವರ (ಅಭಿಮಾನಿಗಳು) ಫ್ರಾಂಚೈಸಿ ಮೇಲಿನ ಪ್ರೀತಿ. ಒಂದು ತಪ್ಪು ಕೂಡ ಮಾಡಬೇಡಿ. ನೀವು ಏನನ್ನಾದರೂ ಹೇಳುವಾಗ, ದಯವಿಟ್ಟು ಅದನ್ನು ನಿಮ್ಮ ಹಿತದೃಷ್ಟಿಯಿಂದ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೀವು ಏನು ಹೇಳಲು ಪ್ರಯತ್ನಿಸುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನನಗೂ ಕೂಡ ಅದೇ ರೀತಿಯ ಪ್ರೀತಿ ಮತ್ತು ಆಸಕ್ತಿ ಇದೆ. ತಂಡದ ಈ ಅಭಿಯಾನವನ್ನು ವ್ಯರ್ಥವಾಗಲು ನಾನು ಬಯಸುತ್ತಿದ್ದೇನೆಂದು ನೀವು ಭಾವಿಸಬೇಡಿ. ನನ್ನ ನಿಯಂತ್ರಣದಲ್ಲಿ ಏನಿದೆ. ನನಗೆ ಚೆಂಡನ್ನು ಕೊಟ್ಟರೆ ಬೌಲ್ ಮಾಡುತ್ತೇನೆ, ನೀವು ಬ್ಯಾಟ್ ಕೊಟ್ಟರೆ ಬ್ಯಾಟಿಂಗ್ ತೋರುತ್ತೇನೆ," ಎಂದು ಅಶ್ವಿನ್ ಅಭಿಯಾನಿಯ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
IPL 2025: ಫೈನಲ್ ತಲುಪಬಲ್ಲ ಎರಡು ತಂಡಗಳನ್ನು ಆರಿಸಿದ ಆಕಾಶ್ ಚೋಪ್ರಾ!
ತಮ್ಮ ವೈಫಲ್ಯವನ್ನು ಒಪ್ಪಿಕೊಂಡ ಅಶ್ವಿನ್
ಈ ಸೀಸನ್‌ನಲ್ಲಿ ಪವರ್‌ಪ್ಲೇನಲ್ಲಿ ನಾನು ಹೆಚ್ಚಿನ ರನ್‌ಗಳನ್ನು ನೀಡಿದ್ದೇನೆಂದು ಆರ್ ಅಶ್ವಿನ್ ಒಪ್ಪಿಕೊಂಡಿದ್ದಾರೆ. ಮುಂದಿನ ಆವೃತ್ತಿಗೆ ನಾನು ಈ ತಪ್ಪುಗಳನ್ನು ತಿದ್ದಿಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.
"ನಾನು ತುಂಬಾ ಕಠಿಣ ಪರಿಶ್ರಮವನ್ನು ಪಡಬೇಕಾಗಿದೆ ಹಾಗೂ ಕೆಲವೊಂದು ಸಂಗತಿಗಳ ಮೇಲೆ ನಾನು ಕೆಲಸ ಮಾಡಬೇಕಾಗಿದೆ. ಇದರ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿದಿದೆ. ಪವರ್‌ಪ್ಲೇನಲ್ಲಿ ನಾನು ಸಿಕ್ಕಾಪಟ್ಟೆ ರನ್‌ಗಳನ್ನು ಬಿಟ್ಟುಕೊಟ್ಟಿದ್ದೇನೆ. ಪವರ್‌ಪ್ಲೇನಲ್ಲಿ ಬೌಲ್ ಮಾಡುವ ವಿಷಯದಲ್ಲಿ ನಾನು ಮುಂದಿನ ಆವೃತ್ತಿಗೆ ಹೆಚ್ಚಿನ ಆಯ್ಕೆಗಳನ್ನು ರೂಪಿಸುತ್ತೇನೆ. ಇದು ನನ್ನ ಪಾಲಿಗೆ ಅತ್ಯುತ್ತಮ ಸಂಗತಿ ಎಂದು ನಾನು ಹೇಳುತ್ತೇನೆ," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.