ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs KKR: ʻನಮಗೆ ರನ್‌ ಸಾಕಾಗಲಿಲ್ಲʼ-ಕೆಕೆಆರ್‌ ಎದುರಿನ ಸೋಲಿನ ಬಗ್ಗೆ ಎಂಎಸ್‌ ಧೋನಿ ಹೇಳಿದ್ದಿದು!

MS Dhoni on CSK's lost against KKR: ಎಂಎಸ್‌ ಧೋನಿ ನಾಯಕತ್ವದಲ್ಲಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಸಿಎಸ್‌ಕೆ 8 ವಿಕೆಟ್‌ಗಳಿಂದ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ ಸೋಲು ಅನುಭವಿಸಿತು. ಪಂದ್ಯದ ಬಳಿಕ ಎಂಎಸ್‌ ಧೋನಿ ಸಿಎಸ್‌ಕೆ ಸೋಲಿಗೆ ಕಾರಣವನ್ನು ವಿವರಿಸಿದ್ದಾರೆ.

ಕೆಕೆಆರ್‌ ವಿರುದ್ಧ ಹೀನಾಯ ಸೋಲಿನ ಬಗ್ಗೆ ಎಂಎಸ್‌ಡಿ ಹೇಳಿದ್ದೇನು?

ಎಂಎಸ್‌ ಧೋನಿ ಹೇಳಿಕೆ.

Profile Ramesh Kote Apr 12, 2025 1:29 AM

ಚೆನ್ನೈ: ಎಂಎಸ್‌ ಧೋನಿ (MS Dhoni) ನಾಯಕತ್ವಕ್ಕೆ ಮರಳಿದರೂ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡ, ಗೆಲುವಿನ ಲಯಕ್ಕೆ ಮರಳುವಲ್ಲಿ ವಿಫಲವಾಯಿತು. ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯತೆ ಅನುಭವಿಸಿದ ಸಿಎಸ್‌ಕೆ, ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 8 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ಚೆನೈ ನಾಯಕ ಎಂಎಸ್‌ ಧೋನಿ, ಕೆಕೆಆರ್‌ ಎದುರು ಸೋಲು ಅನುಭವಿಸಲು ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಸುಮಾರು ಎರಡು ವರ್ಷಗಳ ದೀರ್ಘಾವಧಿ ಬಳಿಕ ಎಂಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವವನ್ನು ವಹಿಸಿಕೊಂಡರು. ತಂಡವನ್ನು ಗೆಲುವಿನ ಲಯಕ್ಕೆ ತರುವಲ್ಲಿ ವಿಫಲರಾದರು. ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಸಿಎಸ್‌ಕೆ ಸ್ಥಿತಿ ಹೇಗಿತ್ತು ಹಾಗೇ ಇದೆ. ಮೊದಲ ಪಂದ್ಯ ಗೆದ್ದ ನಂತರ ಚೆನ್ನೈ, ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಸತತ ಐದು ಪಂದ್ಯಗಳನ್ನು ಸೋತಿರುವ ಸಿಎಸ್‌ಕೆ, ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

IPL 2025: 'ಸ್ವೀಕಾರಾರ್ಹವಲ್ಲ'-ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸಿದ ರಜತ್‌ ಪಾಟಿದಾರ್‌!

ಅಂದ ಹಾಗೆ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸಿಎಸ್‌ಕೆ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆದರೆ, ಶಿವಂ ದುಬೆ (31) ಹಾಗೂ ವಿಜಯ್‌ ಶಂಕರ್‌ (29) ಅವರ ಬ್ಯಾಟಿಂಗ್‌ ಹೊರತಾಗಿಯೂ ಸಿಎಸ್‌ಕೆ 103 ರನ್ ಗಳಿಸಲು ಸಾಧ್ಯವಾಯಿತು. ಇದು ಚೆನ್ನೈನಲ್ಲಿ ತಂಡದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಕೆಕೆಆರ್ ಕೇವಲ 10.1 ಓವರ್‌ಗಳಲ್ಲಿ 107 ರನ್ ಗಳಿಸುವ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಈಗಷ್ಟೇ ಸಿಎಸ್‌ಕೆ ನಾಯಕತ್ವಕ್ಕೆ ಎಂಎಸ್‌ ಧೋನಿ ಮರಳಿದ್ದು, ಮುಂದಿನ ಪಂದ್ಯದಲ್ಲಿ ತಂಡ ಹೇಗೆ ಕಮ್‌ಬ್ಯಾಕ್‌ ಮಾಡಲಿದೆ ಎಂದು ಕಾದು ನೋಡಬೇಕಾಗಿದೆ.

ನಮಗೆ ಪಾಲುದಾರಿಕೆಗಳು ಮೂಡಿಬರಲಿಲ್ಲ

ಪಂದ್ಯದ ಬಳಿಕ ಮಾತನಾಡಿದ ಎಂಎಸ್‌ ಧೋನಿ,"ಸವಾಲು ಯಾವಾಗಲೂ ಇದ್ದೇ ಇರುತ್ತದೆ ಹಾಗೂ ಆ ಸವಾಲನ್ನು ನಾವು ಸ್ವೀಕರಿಸಬೇಕಾದ ಅಗತ್ಯವಿದೆ. ನಾವು ಗಳಿಸಿದ ರನ್‌ಗಳು ಸಾಕಾಗಲಿಲ್ಲ ಎಂದು ನನಗೆ ಅನಿಸಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ನಾವು ಬೌಲ್‌ ಮಾಡುತ್ತಿದ್ದ ವೇಳೆ ಚೆಂಡು ಸ್ವಲ್ಪ ನಿಂತು ಬರುತ್ತಿತ್ತು. ಇವತ್ತು(ಶುಕ್ರವಾರ) ಕೂಡ ಪ್ರಥಮ ಇನಿಂಗ್ಸ್‌ನಲ್ಲಿ ಚೆಂಡು ಅದೇ ರೀತಿ ಬರುತ್ತಿತ್ತು. ನೀವು ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಂಡಾಗ, ಒತ್ತಡ ಉಂಟಾಗುತ್ತದೆ ಹಾಗೂ ಗುಣಮಟ್ಟದ ಸ್ಪಿನ್ನರ್‌ಗಳ ಎದುರು ನೀವು ಆಡುವುದು ತುಂಬಾ ಕಷ್ಟವಾಗುತ್ತದೆ. ನಮಗೆ ಜೊತೆಯಾಟಗಳು ಕೂಡ ಮೂಡಿ ಬರಲಿಲ್ಲ. ಇನ್ನೂ ಸ್ವಲೊ ಚೆನ್ನಾಗಿ ಆಡಿದ್ದರೆ, ನಮ್ಮ ಪಾಲಿಗೆ ಸಂಗತಿಗಳು ಇನ್ನಷ್ಟು ಉತ್ತಮವಾಗಿರುತ್ತಿದ್ದವು," ಎಂದು ಹೇಳಿದ್ದಾರೆ.

CSK vs KKR: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಸುಲಭವಾಗಿ ಶರಣಾದ ಚೆನ್ನೈ ಸೂಪರ್‌ ಕಿಂಗ್ಸ್‌!

"ಕಂಡೀಷನ್ಸ್‌ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಕಳೆದ ಎರಡು ಎರಡು ಪಂದ್ಯಗಳಲ್ಲಿ ನಾವು ಯೋಗ್ಯ ಪ್ರದರ್ಶನವನ್ನು ತೋರಿದ್ದೆವು. ನಿಮ್ಮ ಸಾಮರ್ಥ್ಯವನ್ನು ನೀವು ಬೆಂಬಲಿ ಅದಕ್ಕೆ ತಕ್ಕಂತೆ ನೀವು ಶಾಟ್ಸ್‌ ಆಡಬಹುದು. ಬೇರೆಯವರು ಆಡುವ ಶೈಲಿಯಲ್ಲಿ ನೀವು ಆಡಲು ಪ್ರಯತ್ನಿಸಬಾರದು. ನಮ್ಮ ಓಪನರ್‌ಗಳು ಒಳ್ಳೆಯ ಆರಂಭಿಕರು. ಅವರು ನೈಜ ಕ್ರಿಕೆಟ್‌ ಶಾಟ್ಸ್‌ ಆಡುತ್ತಾರೆ. ಅವರು ಸ್ಲಾಗ್‌ ಮಾಡಲು ಅಥವಾ ಅಡ್ಡ ಹೊಡೆಯಲು ಪ್ರಯತ್ನಿಸುವುದಿಲ್ಲ," ಎಂದು ಎಂಎಸ್‌ ಧೋನಿ ತಿಳಿಸಿದ್ದಾರೆ.

"ಸ್ಕೋರ್‌ಕಾರ್ಡ್ ನೋಡಿ ಹತಾಶರಾಗದಿರುವುದು ಮುಖ್ಯ. ನಮ್ಮ ತಂಡದೊಂದಿಗೆ ಪವರ್‌ಪ್ಲೇನಲ್ಲಿ 60 ರನ್‌ಗಳ ಗುರಿಯನ್ನು ಹೊಂದಲು ಪ್ರಾರಂಭಿಸಿದರೆ, ಅದು ನಮಗೆ ತುಂಬಾ ಕಷ್ಟಕರವಾಗಿರುತ್ತದೆ. ನಾವು ಜೊತೆಯಾಟಗಳನ್ನು ಪ್ರಾರಂಭಿಸಬೇಕಾಗಿದೆ, ಬಹುಶಃ ಮಧ್ಯಮ ಮತ್ತು ನಂತರದ ಓವರ್‌ಗಳಲ್ಲಿ ಲಾಭ ಪಡೆಯಬಹುದು ಮತ್ತು ನಾವು ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೊಂದಿಕೊಳ್ಳಬೇಕು ಮತ್ತು ವಿಭಿನ್ನ ಪಾತ್ರವನ್ನು ವಹಿಸಬೇಕಾಗುತ್ತದೆ," ಎಂದು ಹೇಳಿದ್ದಾರೆ.