ಶುಭಮನ್ ಗಿಲ್ ಔಟ್! IND vs ENG ಸಂಯೋಜನೆಯ ಪ್ಲೇಯಿಂಗ್ XI ಆರಿಸಿದ ಸ್ಟುವರ್ಟ್ ಬ್ರಾಡ್
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂತರದಲ್ಲಿ ಡ್ರಾ ಆಗಿದೆ. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಆಟಗಾರರನ್ನು ಒಳಗೊಂಡ ಇಂಡೋ-ಆಂಗ್ಲ ಸಂಯೋಜನೆಯ ಪ್ಲೇಯಿಂಗ್ XI ಅನ್ನು ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಆರಿಸಿದ್ದಾರೆ.

ಶುಭಮನ್ ಗಿಲ್-ಸ್ಟುವರ್ಟ್ ಬ್ರಾಡ್

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿ(IND vs ENG) ಅಂತ್ಯವಾಗಿದೆ. ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ನಡೆದಿದ್ದ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಭಾರತ ತಂಡ ಕೇವಲ 6 ರನ್‌ಗಳಿಂದ ಗೆದ್ದು ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿತ್ತು. ಈ ಇಡೀ ಸರಣಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನವನ್ನು ತೋರಿತ್ತು. ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ರಿಷಭ್ ಪಂತ್ ಸೇರಿದಂತೆ ಭಾರತ ತಂಡದ ಬಹುತೇಕ ಆಟಗಾರರು ಅದ್ಭುತ ಪ್ರದರ್ಶನವನ್ನು ತೋರಿದ್ದರು. ಇನ್ನು ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್, ಜೋ ರೂಟ್, ಜೋಫ್ರಾ ಆರ್ಚರ್ ಕೂಡ ಇಂಗ್ಲೆಂಡ್ ಪರ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಈ ಸರಣಿ ಮುಗಿದ ಬೆನ್ನಲ್ಲೆ ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ (Stuart Broad) ಇದೀಗ ಭಾರತ ಹಾಗೂ ಇಂಗ್ಲೆಂಡ್ ಸಂಯೋಜನೆಯ ಪ್ಲೇಯಿಂಗ್ XI (IND vs ENG Playing XI) ಆರಿಸಿದ್ದಾರೆ.
604 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿರುವ ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್, 'ಫಾರ್ ದಿ ಲವ್ ಆಫ್ ಕ್ರಿಕೆಟ್' ಪಾಡ್‌ಕ್ಯಾಸ್ಟ್‌ನಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿನ ಆಡುವ ಬಳಗವನ್ನು ಆಯ್ಕೆ ಮಾಡಿದ್ದಾರೆ. ತಮ್ಮ ಪ್ಲೇಯಿಂಗ್ XIನಲ್ಲಿ 6 ಮಂದಿ ಭಾರತೀಯರನ್ನು ಆರಿಸಿದ್ದು, ಇಂಗ್ಲೆಂಡ್ ತಂಡದಿಂದ ಐದು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ ಸ್ಟುವರ್ಟ್ ಬ್ರಾಡ್, ಓಲ್ಲಿ ಪೋಪ್ ಅವರನ್ನು ಮೂರನೇ ಸ್ಥಾನಕ್ಕೆ ಹಾಗೂ ಜೋ ರೂಟ್ ಅವರನ್ನು ನಾಲ್ಕನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಆ ಮೂಲಕ ಈ ಸರಣಿಯಲ್ಲಿಅತಿ ಹೆಚ್ಚು ರನ್ ಗಳಿಸಿದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಕೈ ಬಿಟ್ಟಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಪ್ರದರ್ಶನದ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
ನಂತರ ಹ್ಯಾರಿ ಬ್ರೂಕ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡಲಾಯಿತು. ಅವರು ರಿಷಭ್ ಪಂತ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ. ಅಲ್ಲದೆ ಬೆನ್ ಸ್ಟೋಕ್ಸ್ ಅವರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಿದ್ದಾರೆ. ಇದರ ನಂತರ ವಾಷಿಂಗ್ಟನ್ ಸುಂದರ್ ಅವರನ್ನು ಏಕೈಕ ಸ್ಪಿನ್ನರ್ ಆಗಿ ಉಳಿಸಿಕೊಂಡಿದ್ದಾರೆ. ಇನ್ನು ವೇಗದ ಬೌಲಿಂಗ್ ಸ್ಥಾನಕ್ಕೆ ಜೋಫ್ರಾ ಆರ್ಚರ್, ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರನ್ನು ಸ್ಟುವರ್ಟ್ ಬ್ರಾಡ್ ಆಯ್ಕೆ ಮಾಡಿದ್ದಾರೆ.
ಶುಭ್‌ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಔಟ್
ಸ್ಟುವರ್ಟ್ ಬ್ರಾಡ್, ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಮತ್ತು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ತಮ್ಮ ಪ್ಲೇಯಿಂಗ್ XIನಿಂದ ಹೊರ ಬಿಟ್ಟಿದ್ದಾರೆ. ಶುಭ್‌ಮನ್ ಗಿಲ್ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು 4 ಶತಕಗಳೊಂದಿಗೆ 754 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳೊಂದಿಗೆ 519 ರನ್ ಗಳಿಸಿದ್ದಾರೆ ಮತ್ತು ಬೌಲಿಂಗ್‌ನಲ್ಲಿ 7 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಇದರ ಹೊರತಾಗಿಯೂ ಸ್ಟುವರ್ಟ್ ಬ್ರಾಡ್ ಈ ಇಬ್ಬರೂ ಆಟಗಾರರನ್ನು ತಮ್ಮ ಪ್ಲೇಯಿಂಗ್ XIನಿಂದ ಹೊರಗಿಟ್ಟಿದ್ದಾರೆ.
IND vs ENG: ಮೊಹಮ್ಮದ್ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್ ಮಾಡಿದ ಆರ್ ಅಶ್ವಿನ್!
ಸ್ಟುವರ್ಟ್ ಬ್ರಾಡ್ ಆರಿಸಿದ ಭಾರತ-ಇಂಗ್ಲೆಂಡ್ ಸಂಯೋಜನೆಯ ಪ್ಲೇಯಿಂಗ್ XI: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೋಫ್ರಾ ಆರ್ಚರ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ