Ranji Trophy: ಮುಂಬೈ ತೊರೆದು ಮಹಾರಾಷ್ಟ್ರ ತಂಡಕ್ಕೆ ಸೇರಲು ಕಾರಣ ತಿಳಿಸಿದ ಪೃಥ್ವಿ ಶಾ!
ಭಾರತ ತಂಡದ ಮಾಜಿ ಓಪನರ್ ಪೃಥ್ವಿ ಶಾ 2025–26ರ ದೇಶಿ ಕ್ರಿಕೆಟ್ ಸೀಸನ್ ನಿಮಿತ್ತ ಮಹಾರಾಷ್ಟ್ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಅಧಿಕೃತ ಪ್ರಕಟಣೆಯಲ್ಲಿ ಈ ವಿಷಯವನ್ನು ಖಚಿತಪಡಿಸಿದೆ. ಮುಂಬೈ ತಂಡವನ್ನು ತೊರೆದು ಮಹಾರಾಷ್ಟ್ರ ತಂಡಕ್ಕೆ ಸೇರ್ಪಡೆಯಾಗಲು ಕಾರಣವೇನೆಂದು ಪೃಥ್ವಿ ಶಾ ಬಹಿರಂಗಪಡಿಸಿದ್ದಾರೆ.

ಮಹಾರಾಷ್ಟ್ರ ತಂಡಕ್ಕೆ ಸೇರ್ಪಡೆಯಾದ ಬಳಿಕ ಪೃಥ್ವಿ ಶಾ ಅಧಿಕೃತ ಹೇಳಿಕೆ ನೀಡಿದ್ದಾರೆ.

ಮುಂಬೈ: ಭಾರತದ ಮಾಜಿ ಓಪನರ್ ಪೃಥ್ವಿ ಶಾ (Prithvi Shaw) 2021ರಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದು, ಇದೀಗ 2025–26 ದೇಶಿ ಕ್ರಿಕೆಟ್ ಸೀಸನ್‌ಗೆ ಮಹಾರಾಷ್ಟ್ರ (Maharashtra) ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ತನ್ನ ಅಧಿಕೃತ ಪ್ರಕಟಣೆ ಹೊರಡಿಸಿ ಈ ವಿಷಯವನ್ನು ಖಚಿತಪಡಿಸಿದೆ. ಪೃಥ್ವಿ ಶಾ, ಇದೀಗ ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ ಮೊದಲಾದ ಆಟಗಾರರ ಜೊತೆ ಮಹಾರಾಷ್ಟ್ರ ತಂಡ ಪರ ಮುಂದಿನ ದೇಶಿ ಕ್ರಿಕೆಟ್‌ನಲ್ಲಿ ಬ್ಯಾಟ್ ಬೀಸಲಿದ್ದಾರೆ. ತನ್ನ ತವರು ತಂಡವಾದ ಮುಂಬೈ (Mumbai) ತೊರೆದು ಮಹಾರಾಷ್ಟ್ರ ತಂಡದ ಪರ ಆಡಲು ಕಾರಣವೇನೆಂದು ಯುವ ಆರಂಭಿಕ ಪೃಥ್ವಿ ಶಾ ಬಹಿರಂಗಪಡಿಸಿದ್ದಾರೆ.
2016ರಿಂದ ಮುಂಬೈ ತಂಡದಲ್ಲಿ ಆಡುತ್ತಿದ್ದ ಪೃಥ್ವಿ ಶಾ, ತನ್ನ ಎಂಟು ವರ್ಷಗಳ ನಂತರ ಅಂದರೆ ಇತ್ತೀಚೆಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನಿಂದ ನಿರಪೇಕ್ಷಣಾ ಪತ್ರವನ್ನು ಕೋರಿ ಅರ್ಜಿ (Non Objection certificate) ಸಲ್ಲಿಸಿದ್ದರು ಹಾಗೂ ಅದರಂತೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಇದಕ್ಕೆ ಒಪ್ಪಿಗೆ ನೀಡಿತ್ತು. ಇದೀಗ ಮಹಾರಾಷ್ಟ್ರ ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಬಗ್ಗೆ ಪೃಥ್ವಿ ಶಾ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
IND vs ENG: ಬುಮ್ರಾ ಇನ್, ಪ್ರಸಿಧ್ ಔಟ್? ಲಾರ್ಡ್ಸ್ ಟೆಸ್ಟ್‌ಗೆ ಭಾರತ ತಂಡದಲ್ಲಿ 2 ಬದಲಾವಣೆ!
ಪೃಥ್ವಿ ಶಾ ಹೇಳಿದ್ದೇನು?
"ನನ್ನ ವೃತ್ತಿ ಜೀವನದ ಈ ಹಂತದಲ್ಲಿ ಕ್ರಿಕೆಟಿಗನಾಗಿ ಬೆಳೆಯಲು ಇದೀಗ ಸೇರ್ಪಡೆಯಾಗುತ್ತಿರುವ ಮಹಾರಾಷ್ಟ್ರ ತಂಡ ನನಗೆ ನೆರವು ನೀಡಲಿದೆ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ಹಲವು ವರ್ಷಗಳಲ್ಲಿ ನನಗೆ ದೊರೆತ ಅವಕಾಶಗಳು ಮತ್ತು ಬೆಂಬಲಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ," ಎಂದು ಪೃಥ್ವಿ ಶಾ ತಿಳಿಸಿದ್ದಾರೆ.
"ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ರಾಜ್ಯದಾದ್ಯಂತ ಕ್ರಿಕೆಟ್ ಮೂಲಸೌಕರ್ಯವನ್ನು ಹೆಚ್ಚಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. ಮಹಾರಾಷ್ಟ್ರ ಪ್ರೀಮಿಯರ್ ಲೀಗ್, ಮಹಿಳಾ ಎಂಪಿಎಲ್, ಕಾರ್ಪೊರೇಟ್ ಶೀಲ್ಡ್ ಮತ್ತು ಡಿ.ಬಿ ದೇವಧರ್ ಟೂರ್ನಿಯಂತಹ ಉಪಕ್ರಮಗಳು ಅವರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ," ಎಂದರು.
PRITHVI SHAW JOINS MAHARASHTRA...!!!!
— Johns. (@CricCrazyJohns) July 7, 2025
- Waiting for Ruturaj × Shaw opening. 💛 pic.twitter.com/UPT4qF9mYv
"ಇಂತಹ ಪ್ರಗತಿಪರ ತಂಡದ ಭಾಗವಾಗುವುದು ಕ್ರಿಕೆಟಿಗನಾಗಿ ನನ್ನ ಪ್ರಯಾಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನನಗೆ ವಿಶ್ವಾಸವಿದೆ. ಮಹಾರಾಷ್ಟ್ರ ತಂಡದಲ್ಲಿ ಋತುರಾಜ್ ಗಾಯಕ್ವಾಡ್, ಅಂಕಿತ್ ಬಾವ್ನೆ, ರಾಹುಲ್ ತ್ರಿಪಾಠಿ, ರಜನೀಶ್ ಗುರ್ಬಾನಿ ಮತ್ತು ಮುಖೇಶ್ ಚೌಧರಿ ಅವರಂತಹ ಪ್ರತಿಭಾನ್ವಿತ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ," ಎಂದು ಪೃಥ್ವಿ ಶಾ ತಿಳಿಸಿದ್ದಾರೆ.
ಪೃಥ್ವಿ ಶಾ ಸೇರ್ಪಡೆ ಬಗ್ಗೆ ರೋಹಿತ್ ಪವಾರ್ ಹೇಳಿಕೆ
ಪೃಥ್ವಿ ಶಾ ಅವರ ಸೇರ್ಪಡೆಯನ್ನು ಸ್ವಾಗತಿಸಿ ಮಾತನಾಡಿದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‍ನ ಅಧ್ಯಕ್ಷ ರೋಹಿತ್ ಪವಾರ್ “ಪೃಥ್ವಿ ಶಾ ಅವರ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಅನುಭವದಿಂದ ಇತರ ಆಟಗಾರರು, ವಿಶೇಷವಾಗಿ ಯುವಕರು ಪ್ರೇರಣೆ ಪಡೆಯಲಿದ್ದಾರೆ. ಈಗಾಗಲೇ ನಮ್ಮ ತಂಡದಲ್ಲಿ ಹಲವು ಅನುಭವಿ ಆಟಗಾರರು ಇದ್ದಾರೆ ಜೊತೆಗೆ ಪೃಥ್ವಿ ಶಾ ತಂಡ ಸೇರಿಕೊಂಡಿರುವುದು ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ," ಎಂದು ಹೇಳಿದ್ದಾರೆ.
ENG vs IND: ಮೂರನೇ ಪಂದ್ಯಕ್ಕೆ ಬುಮ್ರಾ ಲಭ್ಯ; ಖಚಿತಪಡಿಸಿದ ನಾಯಕ ಗಿಲ್
ಪೃಥ್ವಿ ಶಾರ ದೇಶಿ ಕ್ರಿಕೆಟ್ ಅಂಕಿಅಂಶ
ಪ್ರಥ್ವಿ ಶಾ ಮುಂಬೈ ಪರ ಆಡಿರುವ 58 ಪಂದ್ಯಗಳಲ್ಲಿ 4,556 ರನ್ ಗಳಿಸಿದ್ದು, 46.02ರ ಸರಾಸರಿಯನ್ನು ಹೊಂದಿದ್ದಾರೆ. ಆದರೆ ಕಳೆದ ರಣಜಿ ಟ್ರೋಫಿ ಎರಡನೇ ಹಂತಕ್ಕೆ ಅವರು ತಂಡದಿಂದ ಹೊರಗೊಳ್ಳಬೇಕಾಯಿತು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ್ದರೂ, ವಿಜಯ್ ಹಝಾರೆ ಏಕದಿನ ಟೂರ್ನಿಗೆ ಅವರು ಆಯ್ಕೆಯಾಗಲಿಲ್ಲ. ಇದರ ನಡುವೆ ಮುಂಬೈ ತಂಡದಿಂದ ಯಶಸ್ವಿ ಜೈಸ್ವಾಲ್ ಕೂಡ ಗೋವಾ ತಂಡಕ್ಕೆ ಹೋಗುವ ಕುರಿತು ಎನ್‌ಒಸಿ ಕೇಳಿದ್ದರೂ, ಬಳಿಕ ತೀರ್ಮಾನ ಬದಲಾಯಿಸಿ ಮುಂಬೈ ಜೊತೆಗೆ ಮುಂದುವರಿದಿದ್ದಾರೆ. 2025ರ ಐಪಿಎಲ್ ಹರಾಜಿನಲ್ಲಿ ಸಹ ಪ್ರಥ್ವಿ ಶಾ ಅವರನ್ನು ಖರೀದಿಸಲು ಯಾವುದೇ ತಂಡ ಮುಂದಾಗಲಿಲ್ಲ. ಇದೀಗ ಮಹಾರಾಷ್ಟ್ರದಲ್ಲಿ ಹೊಸ ಅವಕಾಶ ಪಡೆದಿರುವ ಶಾ, ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಿದ್ದಾರೆ.