ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿ20 ಕ್ರಿಕೆಟ್‌ ಅನ್ನು ಸ್ಪರ್ಧಾತ್ಮಕವಾಗಿರಿಸಲು ಮೂರು ನಿಯಮಗಳ ಸಲಹೆ ನೀಡಿದ ಗ್ರೇಗ್‌ ಚಾಪೆಲ್‌!

ಪ್ರಸ್ತುತ ಟಿ20 ಕ್ರಿಕೆಟ್ ನಿರ್ಣಾಯಕ ಹಂತದತ್ತ ಸಾಗುತ್ತಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಗ್‌ ಚಾಪೆಲ್‌ ಎಚ್ಚರಿಕೆ ನೀಡಿದ್ದಾರೆ. ಟಿ20 ಸ್ವರೂಪದ ಆಟ ಇದೀಗ ಅತಿಯಾಗಿ ಬ್ಯಾಟರ್‌ಗಳ ಪರ ವಾಲಿರುವುದರಿಂದ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಟಿ20 ಕ್ರಿಕೆಟ್‌ನಲ್ಲಿ ಮೂರು ಬದಲಾವಣೆಯನ್ನು ಅವರು ಸೂಚಿಸಿದ್ದಾರೆ.

ಟಿ20 ಕ್ರಿಕೆಟ್‌ಗೆ 3 ನಿಯಮಗಳ ಸಲಹೆ ನೀಡಿದ ಗ್ರೇಗ್‌ ಚಾಪೆಲ್‌!

ಟಿ20 ಕ್ರಿಕೆಟ್‌ಗೆ ಮೂರು ಸಲಹೆಗಳನ್ನು ನೀಡಿದ ಗ್ರೇಗ್‌ ಚಾಪೆಲ್‌. -

Profile
Ramesh Kote Jun 9, 2026 11:02 PM

ನವದೆಹಲಿ: ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರ ಟಿ20 ಕ್ರಿಕೆಟ್‌ನಲ್ಲಿ ಅದ್ಭತ ಸಾಧನೆಯ ಬಗ್ಗೆ ಆಸ್ಟ್ರೇಲಿಯಾ ಮಾಜಿ ನಾಯಕ ಗ್ರೇಗ್‌ ಚಾಪೆಲ್‌ (Greg Chappell) ಮೆಚ್ಚುಗೆ ವ್ಯಕ್ತಪಡಿಸಿದರೂ ಯುವ ಆಟಗಾರನ ಟಿ20 ದಾಖಲೆಯು ಒಂದು ಗಂಭೀರ ಸಮಸ್ಯೆಯನ್ನು ಹುಟ್ಟು ಹಾಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಎಸ್‌ಪಿಎನ್‌ ಕ್ರಿಕ್‌ಇನ್ಫೋನಲ್ಲಿ ಪ್ರಕಟವಾದ ತಮ್ಮ ಅಂಕಣದಲ್ಲಿ ಚಾಪೆಲ್, ಆಧುನಿಕ ಟಿ20 ಕ್ರಿಕೆಟ್ ಅತಿಯಾಗಿ ಬ್ಯಾಟರ್‌ಗಳ ಪರ ವಾಲಿದ್ದು, ಅಸಾಧಾರಣ ಪ್ರದರ್ಶನಗಳೂ ಸಹ ಈಗ ಸಾಮಾನ್ಯ ಸಂಗತಿಯಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುವ ನಿಯಮಗಳು ಮತ್ತು ಕಂಡೀಷನ್ಸ್‌ ಪರಿಣಾಮವಾಗಿ ಬ್ಯಾಟ್ ಹಾಗೂ ಬಾಲ್ ನಡುವಿನ ಸಮತೋಲನ ಕುಸಿದಿದೆ. ಇದರ ಪರಿಣಾಮವಾಗಿ, ಈ ಹಿಂದೆ ಅಪರೂಪವೆನಿಸಿದ್ದ ದಾಖಲೆಗಳು ಮತ್ತು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಗಳು ಈಗ ಹೆಚ್ಚಾಗಿ ಕಂಡುಬರುತ್ತಿದ್ದು, ಅವುಗಳ ವಿಶೇಷತೆ ಮತ್ತು ಮೌಲ್ಯವೂ ಕಡಿಮೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ಹೆಡ್‌ ಕೋಚ್‌ ಗ್ರೇಗ್‌ ಚಾಪೆಲ್‌, 2026ರ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ 776 ರನ್‌ಗಳನ್ನು 237.3ರ ಅದ್ಭುತ ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿದ್ದ ವೈಭವ್‌ ಸೂರ್ಯವಂಶಿ ಅವರನ್ನು ಗುಣಗಾನ ಮಾಡಿದ್ದಾರೆ.

ಋತುರಾಜ್‌ ಗಾಯಕ್ವಾಡ್‌ ಶತಕದ ಬಲದಿಂದ ಶ್ರೀಲಂಕಾ ಎ ತಂಡವನ್ನು ಮಣಿಸಿದ ಭಾರತ -ಎ!

"ಕೇವಲ 15 ವರ್ಷದ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಟೂರ್ನಿಯಲ್ಲಿ ಕೇವಲ ತಮ್ಮ ಛಾಪು ಮೂಡಿಸಲಿಲ್ಲ, ಟಿ20 ಕ್ರಿಕೆಟ್‌ನಲ್ಲಿ ಸ್ಪೋಟಿಸಿದ್ದಾರೆ. 237.3ರ ಸ್ಟ್ರೈಕ್‌ರೇಟ್‌ನಲ್ಲಿ 776 ರನ್‌ಗಳನ್ನು ಕಲೆಹಾಕಿದ ಅವರು, ವಿಶ್ವದ ಅತ್ಯುತ್ತಮ ಮತ್ತು ಅತ್ಯಂತ ಸಂಘಟಿತ ಬೌಲಿಂಗ್ ದಾಳಿಗಳನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸಿದ್ದಾರೆ. ಅವರ ದಾಖಲೆಯ 72 ಸಿಕ್ಸರ್‌ಗಳು, ಒಂದೇ ಐಪಿಎಲ್ ಋತುವಿನಲ್ಲಿ ಕ್ರಿಸ್‌ ಗೇಲ್‌ ನಿರ್ಮಿಸಿದ್ದ ಐತಿಹಾಸಿಕ ದಾಖಲೆಯನ್ನು ಹಿಂದಿಕ್ಕಿವೆ. ಇದರಿಂದ ಅವರು ಸಾಂಪ್ರದಾಯಿಕ ಕ್ರಿಕೆಟ್ ತರ್ಕವನ್ನೇ ಸವಾಲು ಮಾಡುವಂತಹ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ," ಎಂದು ಚಾಪೆಲ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಗ್ರೇಗ್‌ ಚಾಪೆಲ್‌ ಟಿ20 ಕ್ರಿಕೆಟ್ ಒಂದು ನಿರ್ಣಾಯಕ ಘಟ್ಟವನ್ನು ತಲುಪುತ್ತಿರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ಮರು ಸ್ಥಾಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಈ ಮಾದರಿಯ ಕ್ರಿಕೆಟ್ ಕೇವಲ ಬ್ಯಾಟರ್‌ಗಳ ಪ್ರದರ್ಶನ ವೇದಿಕೆಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌ ಅಲ್ಲವೇ ಅಲ್ಲ! ಭಾರತದ ಬೆಸ್ಟ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಹೆಸರಿಸಿದ ಆರ್‌ ಅಶ್ವಿನ್‌

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚುತ್ತಿರುವ ಅಸಮತೋಲನವನ್ನು ಸರಿಪಡಿಸುವ ಉದ್ದೇಶದಿಂದ, ಮಾಜಿ ಆಸ್ಟ್ರೇಲಿಯಾ ನಾಯಕ ಮೂರು ಮಹತ್ವದ ನಿಯಮ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ.

ಟಿ20 ಕ್ರಿಕೆಟ್ ಉಳಿಸಲು ಗ್ರೆಗ್ ಚಾಪೆಲ್ ಅವರ 3 ಪ್ರಮುಖ ಸಲಹೆಗಳು

1.ಬ್ಯಾಟಿಂಗ್ ತಂಡಕ್ಕೆ ಕೇವಲ ಆರು ವಿಕೆಟ್‌ಗಳ ಮಿತಿ

ಗ್ರೇಗ್‌ ಚಾಪೆಲ್‌ ಅವರ ಮೊದಲ ಪ್ರಸ್ತಾವನೆಯಂತೆ ಬ್ಯಾಟಿಂಗ್ ತಂಡಕ್ಕೆ ಲಭ್ಯವಿರುವ ವಿಕೆಟ್‌ಗಳ ಸಂಖ್ಯೆಯನ್ನು 10 ರಿಂದ 6ಕ್ಕೆ ಇಳಿಸಬೇಕು. ಆಧುನಿಕ ಟಿ20 ಕ್ರಿಕೆಟ್‌ನಲ್ಲಿ ತಂಡಗಳು ತಮ್ಮ ಡೆಪ್ತ್‌ ಬ್ಯಾಟಿಂಗ್ ಕ್ರಮಾಂಕದ ಕಾರಣದಿಂದ ವಿಕೆಟ್‌ಗಳನ್ನು ಹೆಚ್ಚು ಮೌಲ್ಯಯುತವಾಗಿ ಪರಿಗಣಿಸುತ್ತಿಲ್ಲ. ಆರು ವಿಕೆಟ್‌ಗಳ ಮಿತಿ ಜಾರಿಯಾದರೆ, ತಂಡಕ್ಕೆ ವಿಕೆಟ್‌ಗಳ ಕುಸಿತ ಹೆಚ್ಚು ದುಬಾರಿಯಾಗಲಿದ್ದು, ಬ್ಯಾಟರ್‌ಗಳು ಹೆಚ್ಚು ಜವಾಬ್ದಾರಿಯುತವಾಗಿ ಹಾಗೂ ಲೆಕ್ಕಾಚಾರ ಮಾಡಿ ಅಪಾಯವನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2.ಪಿಚ್‌ಗಳಲ್ಲಿ ಹೆಚ್ಚು ಹುಲ್ಲು ಉಳಿಸಬೇಕು

ಆಸ್ಟ್ರೇಲಿಯಾ ಮಾಜಿ ನಾಯಕನ ಎರಡನೇ ಸಲಹೆಯೆಂದರೆ, ಟಿ20 ಪಂದ್ಯಗಳ ಪಿಚ್‌ಗಳಲ್ಲಿ ಕನಿಷ್ಠ 3 ಮಿ.ಮೀ ಹುಲ್ಲು ಉಳಿಸಬೇಕು. ಇದರಿಂದ ವೇಗದ ಬೌಲರ್‌ಗಳಿಗೆ ಸೀಮ್ ಮೂವ್‌ಮೆಂಟ್ ಹಾಗೂ ಹೆಚ್ಚುವರಿ ಬೌನ್ಸ್ ದೊರೆಯಲಿದೆ. ಜೊತೆಗೆ, ಪಿಚ್‌ನ ಒಂದು ತುದಿಯಲ್ಲಿ ಹೆಚ್ಚು ಹುಲ್ಲು ಹಾಗೂ ಮತ್ತೊಂದು ತುದಿಯಲ್ಲಿ ಒಣ ಮೇಲ್ಮೈ ಇರುವಂತೆ ಸಿದ್ಧಪಡಿಸಿದರೆ, ತಂಡಗಳಿಗೆ ಹೆಚ್ಚಿನ ತಂತ್ರಾತ್ಮಕ ಆಯ್ಕೆಗಳು ಲಭ್ಯವಾಗುತ್ತವೆ ಎಂದು ಚಾಪೆಲ್ ಹೇಳಿದ್ದಾರೆ.

ಅಫ್ಘಾನಿಸ್ತಾನ ಏಕದಿನ ಸರಣಿಯನ್ನು ಆಡಲು ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯಗೆ ಗ್ರೀನ್‌ ಸಿಗ್ನಲ್‌!

3.ಎಲ್‌ಬಿಡಬ್ಲ್ಯು ನಿಯಮದಲ್ಲಿ ಬದಲಾವಣೆ

ಚಾಪೆಲ್ ಅವರ ಮೂರನೇ ಪ್ರಸ್ತಾವನೆ ಎಲ್‌ಬಿಡಬ್ಲ್ಯು (LBW) ನಿಯಮಕ್ಕೆ ಸಂಬಂಧಿಸಿದೆ. ಅವರ ಪ್ರಕಾರ, ಚೆಂಡು ಎಲ್ಲೇ ಪಿಚ್ ಆದರೂ ಅದು ಸ್ಟಂಪ್‌ಗೆ ತಗುಲುವ ಸಾಧ್ಯತೆ ಇದೆ ಎಂದು ಅಂದಾಜಿಸಿದರೆ, ಅದನ್ನು ಔಟ್ ಎಂದು ಪರಿಗಣಿಸಬೇಕು. ಪ್ರಸ್ತುತ ನಿಯಮಗಳಲ್ಲಿ ಬ್ಯಾಟರ್‌ಗಳಿಗೆ ದೊರೆಯುತ್ತಿರುವ ಒಂದು ಪ್ರಮುಖ ಅನುಕೂಲವನ್ನು ಈ ಬದಲಾವಣೆ ತೆಗೆದುಹಾಕಲಿದ್ದು, ಬೌಲರ್‌ಗಳಿಗೆ ಹೆಚ್ಚಿನ ಯಶಸ್ಸಿನ ಅವಕಾಶ ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚಾಪೆಲ್ ಅವರ ಪ್ರಕಾರ, ಈ ಮೂರು ಬದಲಾವಣೆಗಳು ಟಿ20 ಕ್ರಿಕೆಟ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ಮರುಸ್ಥಾಪಿಸಿ, ಆಟವನ್ನು ಹೆಚ್ಚು ರೋಚಕ ಹಾಗೂ ಸ್ಪರ್ಧಾತ್ಮಕವಾಗಿಸಬಹುದು.