ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ಕೊಹ್ಲಿ-ಪಡಿಕ್ಕಲ್‌ ಮಿಂಚು, ಪಂಜಾಬ್‌ ಕಿಂಗ್ಸ್‌ ಎದುರು ಸೇಡು ತೀರಿಸಿಕೊಂಡ ಆರ್‌ಸಿಬಿ!

RCB vs PBKS Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನ ತೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 37ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ದ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಪಂಜಾಬ್‌ ಎದುರು ಬೆಂಗಳೂರಿನ ಸೋಲಿನ ಸೇಡನ್ನು ಆರ್‌ಸಿಬಿ ತೀರಿಸಿಕೊಂಡಿತು.

IPL 2025: ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ!

ಪಂಜಾಬ್‌ ಕಿಂಗ್ಸ್‌ ವಿರುದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಜಯ.

Profile Ramesh Kote Apr 20, 2025 6:58 PM

ಚಂಡೀಗಢ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 37ನೇ ಪಂದ್ಯದಲ್ಲಿ (RCB vs PBKS) ಪಂಜಾಬ್‌ ಕಿಂಗ್ಸ್‌ ವಿರುದ್ದ 7 ವಿಕೆಟ್‌ಗಳ ಅಧಿಕಾರಯುತ ಗೆಲುವು ಪಡೆಯಿತು. ಆ ಮೂಲಕ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಎದುರು ಬೆಂಗಳೂರಿನಲ್ಲಿನ ಸೋಲಿನ ಸೇಡನ್ನು ಆರ್‌ಸಿಬಿ (Royal challengers Bengaluru) ತೀರಿಸಿಕೊಂಡಿತು. ಐದನೇ ಗೆಲುವಿನ ಮೂಲಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ, ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ ತವರು ಅಂಗಣದಲ್ಲಿ ಸೋಲು ಅನುಭವಿಸಿದ ಪಂಜಾಬ್‌ ಕಿಂಗ್ಸ್‌ (Punjab Kings) ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.

‌ಭಾನುವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ನೀಡಿದ್ದ 158 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಅರ್ಧಶತಕಗಳ ಬಲದಿಂದ 18.5 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಗೆದ್ದು ಸಂಭ್ರಮಿಸಿತು.

IPL 2025: ಪಂಜಾಬ್‌ ಪಂದ್ಯಕ್ಕೆ ಆರ್‌ಸಿಬಿ ಲಿಯಾಮ್‌ ಲಿವಿಂಗ್‌ಸ್ಟೋನ್‌ರನ್ನು ಕೈ ಬಿಡಲು ಕಾರಣವೇನು?

ಚೇಸಿಂಗ್‌ ಆರಂಭಿಸಿದ್ದ ಆರ್‌ಸಿಬಿ ಪರ ಸ್ಪೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌ ಬಹುಬೇಗ ವಿಕೆಟ್‌ ಒಪ್ಪಿಸಿದ್ದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ಇಂಪ್ಯಾಕ್ಟ್‌ ಆಟಗಾರ ದೇವದತ್‌ ಪಡಿಕ್ಕಲ್‌, ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಅನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 103 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ತಂಡವನ್ನು ಗೆಲುವಿನ ಸನಿಹ ತಂದಿತ್ತು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕನ್ನಡಿಗ ದೇವದತ್‌ ಪಡಿಕ್ಕಲ್‌ 35 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 61 ರನ್‌ ಸಿಡಿಸಿದರು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದ ಬಳಿಕ ಹರಪ್ರೀತ್‌ ಬ್ರಾರ್‌ಗೆ ವಿಕೆಟ್‌ ಒಪ್ಪಿಸಿದರು.



ವಿರಾಟ್‌ ಕೊಹ್ಲಿಯ ಬುದ್ದಿವಂತಿಕೆಯ ಅರ್ಧಶತಕ

ದೇವದತ್‌ ಪಡಿಕ್ಕಲ್‌ ಬಳಿಕ ಆರ್‌ಸಿಬಿ ಇನಿಂಗ್ಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ವಿರಾಟ್‌ ಕೊಹ್ಲಿ ಬ್ಯಾಟಿಂಗ್‌. ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ವಿರಾಟ್‌ ಕೊಹ್ಲಿ ಬ್ಯಾಟ್‌ ಮಾಡಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ, ಪಂಜಾಬ್‌ ಕಿಂಗ್ಸ್‌ ಬೌಲರ್‌ಗಳ ರಣತಂತ್ರವನ್ನು ಭೇದಿಸಿದರು. ಅವರು ಆಡಿದ 54 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 73 ರನ್‌ ಗಳಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಕೊನೆಯಲ್ಲಿ ರಜತ್‌ ಪಾಟಿದಾರ್‌ (12) ಹಾಗೂ ಜಿತೇಶ್‌ ಶರ್ಮಾ (11*) ಅವರು ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.



157 ರನ್‌ ಕಲೆ ಹಾಕಿದ್ದ ಪಂಜಾಬ್‌ ಕಿಂಗ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಪಂಜಾಬ್‌ ಕಿಂಗ್ಸ್‌ ತಂಡ, ಪವರ್‌ಪ್ಲೇನಲ್ಲಿ ಉತ್ತಮ ಆರಂಭ ಪಡೆದಿದ್ದರೂ ಮಧ್ಯಮ ಹಾಗೂ ಡೆತ್‌ ಓವರ್‌ಗಳಲ್ಲಿ ಬ್ಯಾಟಿಂಗ್‌ ವೈಫಲ್ಯತೆ ಅನುಭವಿಸಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 157 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 158 ರನ್‌ಗಳ ಗುರಿಯನ್ನು ನೀಡಿತ್ತು.

ಉತ್ತಮ ಆರಂಭ ಪಡೆದಿದ್ದ ಪಂಜಾಬ್‌

ಪಂಜಾಬ್‌ ಕಿಂಗ್ಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಪ್ರಿಯಾಂಶ್‌ ಆರ್ಯ ಹಾಗೂ ಪ್ರಭ್‌ಸಿಮ್ರಾನ್‌ ಸಿಂಗ್‌ ಪವರ್‌ಪ್ಲೇನಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಇವರಿಬ್ಬರು ಮುರಿಯದ ಮೊದಲನೇ ವಿಕೆಟ್‌ಗೆ 42 ರನ್‌ ಕಲೆ ಹಾಕಿದ್ದರು. ಈ ವೇಳೆ 15 ಎಸೆತಗಳಲ್ಲಿ 22 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ಪ್ರಿಯಾಂಶ್‌ ಆರ್ಯ ಅವರನ್ನು ಕೃಣಾಲ್‌ ಪಾಂಡ್ಯ ಔಟ್‌ ಮಾಡಿದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಪ್ರಭ್‌ ಸಿಮ್ರಾನ್‌ ಸಿಂಗ್‌ 17 ಎಸೆತಗಳಲ್ಲಿ 33 ರನ್‌ ಸಿಡಿಸಿ ಭರ್ಜರಿ ಆರಂಭವನ್ನು ಪಡೆದಿದ್ದರು. ಆದರೆ, ಏಳನೇ ಓವರ್‌ನಲ್ಲಿ ಇವರನ್ನು ಕೃಣಾಲ್‌ ಪಾಂಡ್ಯ ಔಟ್‌ ಮಾಡಿದ್ದರು. ಈ ವೇಳೆ ಪಂಜಾಬ್‌ 6 ಓವರ್‌ಗಳಿಗೆ 62 ರನ್‌ ಗಳಿಸಿ ಭರ್ಜರಿ ಆರಂಭ ಪಡದಿತ್ತು.

IPL 2025: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಐಪಿಎಲ್​ಗೆ ಎಂಟ್ರಿ ಕೊಟ್ಟ ಅಭಿಷೇಕ್​ ನಾಯರ್

ಮಧ್ಯಮ ಓವರ್‌ಗಳಲ್ಲಿ ಪಂಜಾಬ್‌ಗೆ ಹಿನ್ನಡೆ

ಆರಂಭಿಕ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ ಬಳಿಕ ಮಧ್ಯಮ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಮೇಲುಗೈ ಸಾಧಿಸಿದರು. ಲಿಯಾಮ್‌ ಲಿವಿಂಗ್‌ಸ್ಟೋನ್‌ ಸ್ಥಾನದಲ್ಲಿ ಆಡಿದ್ದ ರೊಮ್ಯಾರಿಯೊ ಶೆಫರ್ಡ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಬಲಿ ಪಡೆದರು. ನಂತರ 9ನೇ ಓವರ್‌ನಲ್ಲಿ ನೆಹಾಲ್‌ ವಧೇರಾ ರನ್‌ಔಟ್‌ ಆಗಿದ್ದರು. ಆ ಮೂಲಕ ಪಂಜಾಬ್‌ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್‌ ಮೋಡಿ ಮಾಡಿದ ಸುಯಶ್‌ ಶರ್ಮಾ, ಪಂಜಾಬ್‌ನ ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಜಾಶ್‌ ಇಂಗ್ಲಿಸ್‌ (29) ಅವರನ್ನು ಔಟ್‌ ಮಾಡಿದ್ದರು.

ನಂತರ ಡೆತ್‌ ಓವರ್‌ಗಳಲ್ಲಿಯೂ ಆರ್‌ಸಿಬಿ ವೇಗದ ಬೌಲರ್‌ಗಳು ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಇದರ ಫಲವಾಗಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 160ಕ್ಕೂ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಸಾಧ್ಯವಾಯಿತು. ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತಿದ್ದ ಶಶಾಂಕ್‌ ಸಿಂಗ್‌ (31 ರನ್‌) ಹಾಗೂ ಮಾರ್ಕೊ ಯೆನ್ಸನ್‌(25 ರನ್‌) ಅವರು ಆರ್‌ಸಿಬಿಯ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಎದುರು ಡೆತ್‌ ಓವರ್‌ಗಳಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಕೃಣಾಲ್‌ ಪಾಂಡ್ಯ ಹಾಗೂ ಸುಯಶ್‌ ಶರ್ಮಾ ತಲಾ ಎರಡೆರಡು ವಿಕೆಟ್‌ ಕಿತ್ತಿದ್ದರೆ, ರೊಮ್ಯಾರಿ ಶೆಫರ್ಡ್‌ ಒಂದು ವಿಕೆಟ್‌ ಕಿತ್ತರು.

ಸ್ಕೋರ್‌ ವಿವರ

ಪಂಜಾಬ್‌ ಕಿಂಗ್ಸ್‌: 20 ಓವರ್‌ಗಳಿಗೆ 157-6 (ಶಶಾಂಕ್‌ ಸಿಂಗ್‌ 31* ರನ್‌, ಪ್ರಭ್‌ಸಿಮ್ರಾನ್‌ ಸಿಂಗ್‌ 33, ಮಾರ್ಕೊ ಯೆನ್ಸನ್‌ 25*, ಜಾಶ್‌ ಇಂಗ್ಲಿಸ್‌ 29; ಕೃಣಾಲ್‌ ಪಾಂಡ್ಯ 25ಕ್ಕೆ 2, ಸುಯಶ್‌ ಶರ್ಮಾ 26ಕ್ಕೆ 2, ರೊಮ್ಯಾರಿಯೊ ಶೆಫರ್ಡ್‌ 18ಕ್ಕೆ1)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 18.5 ಓವರ್‌ಗಳಿಗೆ 159-3 (ವಿರಾಟ್‌ ಕೊಹ್ಲಿ 73*, ದೇವದತ್‌ ಪಡಿಕ್ಕಲ್‌ 61,ಅರ್ಷದೀಪ್‌ ಸಿಂಗ್‌ 26ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್‌ ಕೊಹ್ಲಿ