IPL 2026: ʻನಮ್ಮ ದೊಡ್ಡ ಸಿಂಹಗಳುʼ-ಪ್ಲೇಆಫ್ಸ್‌ಗೇರಿದ ಆರ್‌ಸಿಬಿಗೆ ವಿಜಯ್ ಮಲ್ಯ ಭಾವನಾತ್ಮಕ ಸಂದೇಶ!
ಪಂಜಾಬ್ ಕಿಂಗ್ಸ್ ಎದುರು 23 ರನ್‌ಗಳ ಗೆಲುವು ಪಡೆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಆ ಮೂಲಕ 19ನೇ ಸೀಸನ್‌ನಲ್ಲಿ ನಾಕ್‌ಔಟ್‌ಗೆ ಪ್ರವೇಶಿಸಿದ ಮೊದಲ ತಂಡ ಎಂಬ ಕೀರ್ತಿಗೆ ಆರ್‌ಸಿಬಿ ಭಾಜನವಾಯಿತು. ಈ ಪಂದ್ಯದ ಬಳಿಕ ಆರ್‌ಸಿಬಿಗೆ ವಿಜಯ್ ಮಲ್ಯ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.
ಆರ್‌ಸಿಬಿಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿಜಯ್ ಮಲ್ಯ. -
ಧರ್ಮಶಾಲಾ: ಪಂಜಾಬ್ ಕಿಂಗ್ಸ್ (PBKS) ಎದುರು ಅಧಿಕಾರಯುತ ಗೆಲುವು ಪಡೆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಿತು. ಆ ಮೂಲಕ ಈ ಸೀಸನ್‌ನಲ್ಲಿ ನಾಕ್‌ಔಟ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ಬೆಂಗಳೂರು ಭಾಜನವಾಯಿತು. ಇದರ ಬೆನ್ನಲ್ಲೆ ಆರ್‌ಸಿಬಿ ಮಾಜಿ ಓನರ್ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ (Vijay Malya) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನೀವು ನಮ್ಮ ದೊಡ್ಡ ಸಿಂಡಗಳು ಹಾಗೂ ನೀವು ನಮ್ಮೆಲ್ಲರಿಗೂ ಹೆಮ್ಮೆ ತರುವಂತೆ ಮಾಡಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ಮೇ 17 ರಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ 222 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ, 199 ರನ್‌ಗಳಿಗೆ ಸೀಮಿತವಾಗುವ ಮೂಲಕ 23 ರನ್‌ಗಳಿಂದ ಸೋಲು ಅನುಭವಿಸಿತು. ಆರ್‌ಸಿಬಿ ಒಟ್ಟು 18 ಅಂಕಗಳನ್ನು ಕಲೆ ಹಾಕಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು.
RCB vs PBKS: ಪಂಜಾಬ್ ಕಿಂಗ್ಸ್ ಸೋಲುಣಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ತಮ್ಮ ಎಕ್ಸ್ ಖಾತೆಯಲ್ಲಿ ವಿಜಯ್ ಮಲ್ಯ ಹಾಲಿ ಚಾಂಪಿಯನ್ಸ್ ಅನ್ನು ʻನಮ್ಮ ದೊಡ್ಡ ಸಿಂಹಗಳುʼ ಎಂದು ಬಣ್ಣಿಸಿದ್ದಾರೆ. "ಆರ್‌ಸಿಬಿ, ಆರ್‌ಸಿಬಿ, ಆರ್‌ಸಿಬಿ ನಮ್ಮ ದೊಡ್ಡ ಸಿಂಹಗಳು... ಪ್ಲೇಆಫ್ಸ್‌ಗೆಅರ್ಹತೆ ಪಡೆದ ಮೊದಲ ತಂಡ ಎನಿಸಿಕೊಳ್ಳುವ ಮೂಲಕ ಇಂದು ನೀವು ನಮಗೆ ಹೆಮ್ಮೆ ತರುವಂತೆ ಮಾಡಿದ್ದೀರಿ. ನೀವು ಧೈರ್ಯವಾಗಿ ಆಟವಾಡಿ, ಬೆಂಗಳೂರಿನ ಸಿಂಹಗಳಂತೆ ಇನ್ನಷ್ಟು ಗರ್ಜಿಸಿದ್ದೀರಿ. ಅದ್ಭುತ ಪ್ರದರ್ಶನಕ್ಕೆ ಅಭಿನಂದನೆಗಳು. ಐಪಿಎಲ್‌ನ ಅತ್ಯುತ್ತಮ ತಂಡವಾಗಿ ಮತ್ತಷ್ಟು ಎತ್ತರಕ್ಕೆ ಏರಲಿ ನಿಮ್ಮ ಪಯಣ," ಎಂದು ವಿಜಯ್ ಮಲ್ಯ ತಮ್ಮ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಪೋಸ್ಟ್ ಹಾಕಿದ್ದಾರೆ.
RCB, RCB, RCB namma dodda Simhagulu… you made us all soooo proud today - first team to qualify. You played BOLD and roared even louder as the Lions from Bengaluru. Well done and congratulations. Onward and Upward to the best team in the IPL.
— Vijay Mallya (@TheVijayMallya) May 17, 2026
ಅಂಕಪಟ್ಟಿಯಲ್ಲಿ ಆರ್‌ಸಿಬಿಗೆ ಅಗ್ರ ಸ್ಥಾನ
ಧರ್ಮಶಾಲಾದಲ್ಲಿ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 13 ಪಂದ್ಯಗಳಿಂದ 18 ಅಂಕಗಳನ್ನು ಕಲೆಹಾಕಿರುವ ಬೆಂಗಳೂರು ತಂಡ, ಲೀಗ್ ಹಂತವನ್ನು ಅಗ್ರ ಎರಡರಲ್ಲಿ ಮುಕ್ತಾಯಗೊಳಿಸುವ ಅವಕಾಶವನ್ನು ತನ್ನ ಕೈಯಲ್ಲೇ ಇಟ್ಟುಕೊಂಡಿದೆ. ಮೇ 22ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಕಣಕ್ಕಿಳಿಯಲಿದೆ. ಆ ಪಂದ್ಯದಲ್ಲಿ ಜಯ ಸಾಧಿಸಿದರೆ ಆರ್‌ಸಿಬಿ ತಂಡಕ್ಕೆ ಅಗ್ರ ಸ್ಥಾನ ಬಹುತೇಕ ಖಚಿತವಾಗಲಿದೆ.
IPL 2026: ಆರ್‌ಸಿಬಿ ಎದುರು ಸೋತ ಪಂಜಾಬ್ ಕಿಂಗ್ಸ್‌ಗೆ ಪ್ಲೇಆಫ್ಸ್‌ಗೆ ಚಾನ್ಸ್ ಇದೆಯಾ? ಇಲ್ಲಿದೆ ಲೆಕ್ಕಾಚಾರ!
ಆರ್‌ಸಿಬಿಗೆ ಸತತ ಎರಡನೇ ಬಾರಿ ಐಪಿಎಲ್ ಗೆಲ್ಲುವ ಅವಕಾಶ
ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿಗೆ ಇದೀಗ ಕಳೆದ ವರ್ಷದ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಸುವರ್ಣಾವಕಾಶ ಸಿಕ್ಕಿದೆ. ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿಯನ್ನು ಸತತವಾಗಿ ಉಳಿಸಿಕೊಂಡ ಮೂರನೇ ತಂಡವಾಗುವ ಗುರಿಯೂ ಬೆಂಗಳೂರು ತಂಡದ ಮುಂದಿದೆ. ಈ ಸಾಧನೆ ಮಾಡಿರುವ ಇತರೆ ಎರಡು ತಂಡಗಳು ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್. ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಸತತ ಪ್ರಶಸ್ತಿ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 2019 ಮತ್ತು 2020ರಲ್ಲಿ ಬ್ಯಾಕ್-ಟು-ಬ್ಯಾಕ್ ಟ್ರೋಫಿ ತನ್ನದಾಗಿಸಿಕೊಂಡಿತ್ತು.
ಪಂಜಾಬ್ ಕಿಂಗ್ಸ್ ಪ್ಲೇಆಫ್ಸ್ ಹಾದಿ ಕಠಿಣ
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡದ ಪರಿಸ್ಥಿತಿ ಸಂಕಷ್ಟಕರವಾಗಿದೆ. ಪಂಜಾಬ್ ಕಿಂಗ್ಸ್ ಇದೀಗ ಸತತ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಪ್ಲೇಆಫ್ಸ್ ಪ್ರವೇಶದ ಹಾದಿ ಅತ್ಯಂತ ಕಠಿಣವಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ 13 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿದ್ದು, ಅಂಕಪಟ್ಟಿಯಲ್ಲಿ ಇನ್ನೂ ನಾಲ್ಕನೇ ಸ್ಥಾನದಲ್ಲೇ ಉಳಿದಿದೆ.