IPL 2025: ಚೆನ್ನೈ ಸೂಪರ್ ಕಿಂಗ್ಸ್ ವೈಫಲ್ಯಕ್ಕೆ ನೈಜ ಕಾರಣ ಬಹಿರಂಗಪಡಿಸಿದ ಸುರೇಶ್ ರೈನಾ!
Suresh Raina on CSK's Failure: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ವೈಫಲ್ಯತೆ ಅನುಭವಿಸಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ 6 ರಲ್ಲಿ ಸೋಲು ಅನುಭವಿಸಿದ್ದು, ಕೇವಲ ಎರಡೇ ಎರಡು ಪಂದ್ಯಗಳನ್ನು ಗೆದ್ದಿದೆ. ಸಿಎಸ್‌ಕೆ ತಂಡದ ವೈಫಲ್ಯಕ್ಕೆ ಕಾರಣವೇನೆಂದು ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಟೀಕಿಸಿದ ಸುರೇಶ್ ರೈನಾ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2025) ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ (Suresh Raina) ಟೀಕಿಸಿದ್ದಾರೆ. ಈಗಿನ ಸಿಎಸ್‌ಕೆ ತಂಡಕ್ಕೆ ಪಂದ್ಯವನ್ನು ಗೆಲ್ಲುವ ಹಸಿವಿನ ಕೊರತೆ ಇದೆ ಎಂದು ಆರೋಪ ಮಾಡಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲಿಯವರೆಗೂ ಆಡಿದ ಒಟ್ಟು 8 ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಆರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪ್ಲೇಆಫ್ಸ್ ರೇಸ್‌ನಿಂದ ಹೊರ ಬೀಳುವ ಆತಂಕಕ್ಕೆ ಒಳಗಾಗಿದೆ.
ಋತುರಾತ್ ಗಾಯಕ್ವಾಡ್ ಅವರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದ ಬಳಿಕ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಸಿಎಸ್‌ಕೆ ಇನ್ನುಳಿದ ಆರೂ ಪಂದ್ಯಗಳನ್ನು ಗೆಲ್ಲಬೇಕಾದ ಪರಿಸ್ಥಿತಿಗೆ ಸಿಲುಕಿದೆ. ಇದರಲ್ಲಿ ಒಂದು ಪಂದ್ಯವನ್ನು ಸೋತರೂ ಸಿಎಸ್‌ಕೆ ತಂಡದ ಅಂತಿಮ ನಾಲ್ಕರ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಆದರೆ, ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ ಅಧಿಕೃತವಾಗಿ ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಹೊರ ಬೀಳಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಎಂಎಸ್ ಧೋನಿ, ನಾವು ಮುಂದಿನ ಆವೃತ್ತಿಗೆ ಇಂದಿನಿಂದಲೇ ತಯಾರಿ ನಡೆಸುತ್ತೇವೆಂದು ಹೇಳಿದ್ದರು.
MI vs CSK: ರೋಹಿತ್-ಸೂರ್ಯ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ ಹ್ಯಾಟ್ರಿಕ್ ಜಯ!
ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಸ್ಪಿನ್ ಹರ್ಭಜನ್ ಸಿಂಗ್ ಜೊತೆ ಮಾತನಾಡಿದ ಸುರೇಶ್ ರೈನಾ, "ಪಂದ್ಯವನ್ನು ಗೆಲ್ಲುವ ಹಸಿವಿನ ಕೊರತೆ ಎದ್ದು ಕಾಣುತ್ತಿದೆ. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೀಕ್ನೆಸ್. ಪಂದ್ಯವನ್ನು ಗಲ್ಲಬೇಕೆಂಬ ಯಾವುದೇ ಉದ್ದೇಶ ಅವರಿಗೆ ಕಾಣುತ್ತಿಲ್ಲ. ಅಲ್ಲದೆ ಪಂದ್ಯವನ್ನು ಗೆಲ್ಲುವ ಹಸಿವು ಅವರಲ್ಲಿ ಕಾಣುತ್ತಿಲ್ಲ. ಈ ಹಿಂದೆ ಇದ್ದ ಸಿಎಸ್‌ಕೆ ಬ್ರ್ಯಾಂಡ್ ಇದೀಗ ಉಳಿದಿಲ್ಲ. ಅಂದರೆ ಯಾರನ್ನೂ ಅಗೌರವಗೊಳಿಸುವ ಉದ್ದೇಶ ನನ್ನದು ಅಲ್ಲ," ಎಂದು ಹೇಳಿದ್ದಾರೆ.
ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ವಿಫಲವಾಗಿತ್ತು. ಆದರೆ, ರಾಹುಲ್ ತ್ರಿಪಾಠಿ, ದೀಪಕ್‌ಗ ಹೂಡಾ, ವಿಜಯ್ ಶಂಕರ್ ಹಾಗೂ ಆರ್ ಅಶ್ವಿನ್ ಅವರನ್ನು ಚೆನ್ನೈ ಫ್ರಾಂಚೈಸಿ ಖರೀದಿಸಿತ್ತು. ಆದರೆ, ಈ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಮಾತ್ರ ಚೆನ್ನೈ ತಂಡ, ಬೆಂಚ್ ಆಟಹಾರರಿಗೆ ಅವಕಾಶ ಮಾಡಿಕೊಟ್ಟಿದೆ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಕಣಕ್ಕೆ ಇಳಿದಿದ್ದರು ಹಾಗೂ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ.
IPL 2025: ಶತಕದ ಜತೆಯಾಟದಲ್ಲಿ ದಾಖಲೆ ಬರೆದ ಗಿಲ್-ಸುದರ್ಶನ್ ಜೋಡಿ
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡದ ಬಗ್ಗೆ ರೈನಾ ಪ್ರಶ್ನೆ
"ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾರು ಉತ್ತಮ ಪ್ರದರ್ಶನವನ್ನು ತೋರಿದ್ದಾರೆಂದು ನೋಡಬೇಕು. ಸಾಯಿ ಸುದರ್ಶನ್ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ ಹಾಗೂ ಅವರು ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಅದ್ಭಿತ ಪ್ರದರ್ಶನವನ್ನು ತೋರುತ್ತಿದ್ದಾರೆ. ಸಾಯಿ ಕಿಶೋರ್ ಹಾಗೂ ಶಾರೂಖ್ ಖಾನ್ ಅವರು ಕೂಡ ಜಿಟಿ ಪರ ಆಡುತ್ತಿದ್ದಾರೆ. ನೀವು ತಂಡಕ್ಕೆ ಸ್ಥಳೀಯ ಆಟಗಾರರನ್ನು ಕರೆ ತರಬೇಕು,"ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
"ನಾವು ಗೆಲ್ಲುತ್ತಿದ್ದ ಸಮಯದಲ್ಲಿ ನಮ್ಮ ತಂಡದಲ್ಲಿ ಮುರಳಿ ವಿಜಯ್, ಎಲ್ ಬಾಲಾಜಿ, ಬಿದ್ರಿನಾಥ್, ಎಂಎಸ್ ಧೋನಿ, ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇದ್ದರು. ನೀವು ಸ್ಥಳೀಯ ಆಟಗಾರರನ್ನು ಕರೆ ತಂದಿಲ್ಲವಾದರೆ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ,"ಎಂದು ಮಾಜಿ ಆಲ್‌ರೌಂಡರ್ ಎಚ್ಚರಿಕೆ ನೀಡಿದ್ದಾರೆ.