ಮೊದಲ ತಂಡವಾಗಿ ಫಿಫಾ ವಿಶ್ವಕಪ್ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಮೆಕ್ಸಿಕೊ
FIFA World Cup 2026: ಅಕ್ರಾನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ತವರಿನ ಭಾರೀ ಬೆಂಬಲದೊಂದಿಗೆ ಆಡಲಿಳಿದ ಮೆಕ್ಸಿಕೋ ತಂಡವು ಅಮೋಘ ಆಟವಾಡಿತು. ಮೊದಲಾರ್ಧದಲ್ಲಿ ಇತ್ತಂಡಗಳ ರಕ್ಷಣ ಪಡೆ ಅತ್ಯಂತ ಬಲಿಷ್ಠವಾಗಿ ಕಂಡು ಬಂದ ಕಾರಣ ಗೋಲು ರಹಿತವಾಗಿ ಮುಕ್ತಾಯಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಮೆಕ್ಸಿಕೊ ಪರ ಲೂಯಿಸ್ ರೋಮೊ ಗೋಲು ಬಾರಿಸುವಲ್ಲಿ ಯಶಸ್ಸು ಸಾಧಿಸಿದರು.
Mexico -
ಮೆಕ್ಸಿಕೊ ಸಿಟಿ, ಜೂ.19: ಶುಕ್ರವಾರ ಗ್ವಾಡಲಜರಾದಲ್ಲಿ ನಡೆದ ಗ್ರೂಪ್ ಎ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 1-0 ಅಂತರದಿಂದ ಸೋಲಿಸುವ ಮೂಲಕ ಮೆಕ್ಸಿಕೊ(Mexico) ತಂಡ ಫಿಫಾ ವಿಶ್ವಕಪ್(FIFA World Cup 2026)ನಲ್ಲಿ 32ನೇ ಸುತ್ತಿಗೇರಿದೆ. ಹಾಲಿ ಆವೃತ್ತಿಯಲ್ಲಿ ಈ ಸಾಧನೆಗೈದ ಮೊದಲ ತಂಡ ಎನಿಸಿತು. ಸಹ-ಆತಿಥೇಯರು ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಒಂದು ಪಂದ್ಯ ಬಾಕಿ ಇರುವಾಗಲೇ ನಾಕೌಟ್ ಹಂತಕ್ಕೆ ಅರ್ಹತೆ ಪಡೆದರು.
ಅಕ್ರಾನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ತವರಿನ ಭಾರೀ ಬೆಂಬಲದೊಂದಿಗೆ ಆಡಲಿಳಿದ ಮೆಕ್ಸಿಕೋ ತಂಡವು ಅಮೋಘ ಆಟವಾಡಿತು. ಮೊದಲಾರ್ಧದಲ್ಲಿ ಇತ್ತಂಡಗಳ ರಕ್ಷಣ ಪಡೆ ಅತ್ಯಂತ ಬಲಿಷ್ಠವಾಗಿ ಕಂಡು ಬಂದ ಕಾರಣ ಗೋಲು ರಹಿತವಾಗಿ ಮುಕ್ತಾಯಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಮೆಕ್ಸಿಕೊ ಪರ ಲೂಯಿಸ್ ರೋಮೊ ಗೋಲು ಬಾರಿಸುವಲ್ಲಿ ಯಶಸ್ಸು ಸಾಧಿಸಿದರು. ಅವರ ಈ ಏಕೈಕ ಗೋಲು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
60 ವರ್ಷದ ಫಿಫಾ ವಿಶ್ವಕಪ್ ದಾಖಲೆ ಮುರಿದ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್
ಈ ಫಲಿತಾಂಶವು ಮೆಕ್ಸಿಕೊ ತಂಡಕ್ಕೆ ಎರಡು ಪಂದ್ಯಗಳಿಂದ ಆರು ಅಂಕಗಳನ್ನು ತಂದುಕೊಟ್ಟಿತು, ಉಳಿದ ಪಂದ್ಯಗಳ ಫಲಿತಾಂಶ ಏನೇ ಆದರೂ, ಗ್ರೂಪ್ ಎ ನಿಂದ ಮೆಕ್ಸಿಕೊ ಮುನ್ನಡೆ ಸಾಧಿಸಿತು. ಜೇವಿಯರ್ ಅಗೈರ್ ನೇತೃತ್ವದ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿತ್ತು. ಸತತ ಎರಡು ಗೆಲವಿನೊಂದಿದೆ ವಿಶ್ವಕಪ್‌ನ ವಿಸ್ತೃತ ನಾಕೌಟ್ ಹಂತದಲ್ಲಿ ಸ್ಥಾನ ಪಡೆದ ಮೊದಲ ರಾಷ್ಟ್ರವಾಯಿತು.
¡El FIFA Fan Festival™ Guadalajara celebra el gol de @miseleccionmx! 🇲🇽#SomosGuadalajara #Somos26 #FIFAWorldCup pic.twitter.com/5uvfcz1rT4
— FIFA World Cup 26 Guadalajara™ (@Gdl2026) June 19, 2026
ಕೆನಾಡಗೆ ಭರ್ಜರಿ ಗೆಲುವು
ದಿನದ ಮತ್ತೊಂದು ಪಂದ್ಯದಲ್ಲಿ ಸಹ-ಆತಿಥೇಯ ಕೆನಡಾವು ಕತಾರ್ ತಂಡವನ್ನು 6-0 ಗೋಲುಗಳ ಅಂತರದಿಂದ ಮಣಿಸಿತು. ಜೊನಾಥನ್ ಡೇವಿಡ್ ಅವರು ಆಕರ್ಷಕ ಹ್ಯಾಟ್ರಿಕ್ ಗೋಲು ಹೊಡೆದು ತಂಡದ ಗೆಲುವಿನ ರೂವಾರಿಯಾದರು. ಉಳಿದಂತೆ ಸೈಲ್ ಲಾರಿನ್ ಮತ್ತು ನಾಥನ್ ಸಲಿಬಾ ತಲಾ ಒಂದು ಗೋಲು ಬಾರಿಸಿದರು. ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ, ತಂಡದ ಜೆರ್ಸಿ ಧರಿಸಿ ಕ್ರೀಡಾಂಗಣದಲ್ಲಿ ಹಾಜರಿದ್ದು ತಮ್ಮ ದೇಶದ ಆಟಗಾರರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.
ಕತಾರ್‌ನ ಆಸೀಂಗೆ ಕೆಂಪು ಕಾರ್ಡ್ ನೀಡಲಾಯಿತು. ಪಂದ್ಯದ 51ನೇ ನಿಮಿಷದಲ್ಲಿ ಅವರು ಕೆನಡಾದ ಮಿಡ್‌ಫೀಲ್ಡರ್ ಇಸ್ಮಾಯಿಲ್ ಕೋನೆ ಅವರನ್ನು ಬಲವಾಗಿ ತಳ್ಳಿದ ಪರಿಣಾಮ ಎಡಗಾಲಿಗೆ ತೀವ್ರ ಗಾಯವಾಯಿತು. ಇದರಿಂದ ರೆಫರಿ ಆಸೀಂಗೆ ರೆಡ್ ಕಾರ್ಡ್ ನೀಡಿ ಮೈದಾನದಿಂ ಹೊರಗೆ ಕಳುಹಿಸಿದರು. ಇದಕ್ಕೂ ಮುನ್ನ ಪಂದ್ಯದ ಮೊದಲಾರ್ಧದಲ್ಲಿ ಗೋಲು ಗಳಿಸುವ ಅವಕಾಶವನ್ನು ನಿಯಮಬಾಹಿರವಾಗಿ ತಡೆದಿದ್ದಕ್ಕಾಗಿ ಕತಾರ್‌ನ ಎಲ್-ಅಮಿನ್ ಅವರೂ ಕೆಂಪು ಕಾರ್ಡ್ ಪಡೆದು ಹೊರನಡೆದಿದ್ದರು. ಎರಡು ಆಟಗಾರರ ಸೇವೆ ಕಳೆದುಕೊಂಡ ಕತಾರ್ ಕೇವಲ 9 ಆಟಗಾರರ ನೆರವಿನೊಂದಿಗೆ ಪಂದ್ಯವಾಡಿತು.