Virat Kohli: ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಲಂಡನ್‌ನಿಂದ ತವರಿಗೆ ಬಂದ ಕೊಹ್ಲಿ
ಸರಣಿಗೆ ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್, ಆಲ್ರೌಂಡರ್ ಅಕ್ಷರ್ ಪಟೇಲ್‌ಗೆ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ಭಾರತ ‘ಎ’ ಪರ ಉತ್ತಮ ಪ್ರದರ್ಶನ ತೋರಿದ ಋತುರಾಜ್ ಗಾಯಕ್ವಾಡ್‌ಗೂ ಅವಕಾಶ ಸಿಕ್ಕಿದೆ. ಆದರೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ರೋಹಿತ್ ಜತೆ ಯಶಸ್ವ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
-
ಮುಂಬಯಿ, ನ.26: ಪ್ರವಾಸಿ ದಕ್ಷಿಣ ಆಫ್ರಿಕಾ(South Africa ODI Series) ವಿರುದ್ಧ ನವೆಂಬರ್ 30 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಮಂಗಳವಾರ ತಡರಾತ್ರಿ ಮುಂಬೈಗೆ ಆಗಮಿಸಿದ್ದಾರೆ. ಕೊಹ್ಲಿ ವಿಮಾನ ನಿಲ್ದಾಣದಿಂದ ಹೊರಟು ಬರುತ್ತಿರುವ ಫೋಟೊಗಳು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ತವರಿನಲ್ಲಿ ಭಾರತ ಪರ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಜೂನ್ 3 ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಕೊಹ್ಲಿ ಕೊನೆಯ ಬಾರಿಗೆ ಭಾರತದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು.
ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಹಿರಿಯ ಬ್ಯಾಟರ್, ಕರ್ನಾಟಕದ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ 8 ತಿಂಗಳ ಬಳಿಕ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಮಾರ್ಚ್‌ನಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಅವರು ಕೊನೆ ಬಾರಿಗೆ ಭಾರತ ಪರ ಏಕದಿನ ಪಂದ್ಯವನ್ನಾಡಿದ್ದರು.
ಕಳೆದ ಆಸ್ಟ್ರೇಲಿಯಾ ಪ್ರವಾಸದ ಸರಣಿಯಲ್ಲಿ ಕೊಹ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಶೂನ್ಯ್ಕೆ ಔಟಾಗಿದ್ದರು. ಮೂರನೇ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿ ಮತ್ತೆ ತಮ್ಮ ಹಳೆಯ ಫಾರ್ಮ್‌ಗೆ ಮರಳಿಸಿದ್ದರು. ಈಗ ತವರಿನ ಸರಣಿಯಲ್ಲಿ ಶತಕ ಬಾರಿಸುವ ವಿಶ್ವಾಸದಲ್ಲಿದ್ದಾರೆ.
ಈ ಸರಣಿಗೆ ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್, ಆಲ್ರೌಂಡರ್ ಅಕ್ಷರ್ ಪಟೇಲ್‌ಗೆ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ಭಾರತ ‘ಎ’ ಪರ ಉತ್ತಮ ಪ್ರದರ್ಶನ ತೋರಿದ ಋತುರಾಜ್ ಗಾಯಕ್ವಾಡ್‌ಗೂ ಅವಕಾಶ ಸಿಕ್ಕಿದೆ. ಆದರೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ರೋಹಿತ್ ಜತೆ ಯಶಸ್ವ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಇದನ್ನೂ ಓದಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್ ಆಗಲು ಬಲವಾದ ಕಾರಣ ಇಲ್ಲಿದೆ!
ಭಾರತ ತಂಡ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆ.ಎಲ್.ರಾಹುಲ್ (ನಾಯಕ), ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ರೆಡ್ಡಿ, ಹರ್ಷಿತ್ ರಾಣಾ, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್, ಧೃವ್ ಜುರೆಲ್.
ವೇಳಾಪಟ್ಟಿ
ಮೊದಲನೇ ಏಕದಿನ: ಭಾನುವಾರ, ನವೆಂಬರ್ 30, 2025 (ರಾಂಚಿ)
ಎರಡನೇ ಏಕದಿನ: ಬುಧವಾರ, ಡಿಸೆಂಬರ್ 3, 2025 (ರಾಯಪುರ)
ಮೂರನೇ ಏಕದಿನ: ಶನಿವಾರ, ಡಿಸೆಂಬರ್ 6, 2025 (ವಿಶಾಖಪಟ್ಟಣ)