ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮ್ಯಾಗಿ ಖರೀದಿಸಲು ಸಹೋದರಿಯ ನಿಶ್ಚಿತಾರ್ಥದ ಉಂಗುರವನ್ನೇ ಮಾರಲು ಹೊರಟ 13ರ ಪೋರ; ತಾಯಿ ಕಣ್ಣೀರು

Boy Tries to Sell Gold Ring: ಮ್ಯಾಗಿ ನೂಡಲ್ಸ್ ಖರೀದಿಸಲು ಬಾಲಕನೊಬ್ಬ ತನ್ನ ಅಕ್ಕನ ನಿಶ್ಚಿತಾರ್ಥದ ಉಂಗುರವನ್ನು ಮಾರಲು ಹೊರಟ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆದರೆ ಆಭರಣ ವ್ಯಾಪಾರಿಯು ಉಂಗುರವನ್ನು ಖರೀದಿಸದೆ ಆತನ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಸಹೋದರಿಯ ನಿಶ್ಚಿತಾರ್ಥದ ಉಂಗುರವನ್ನೇ ಮಾರಲು ಹೊರಟ ಬಾಲಕ!

-

Priyanka P Priyanka P Oct 6, 2025 3:55 PM

ಲಖನೌ: 13 ವರ್ಷದ ಬಾಲಕನೊಬ್ಬ ತನ್ನ ಸಹೋದರಿಯ ನಿಶ್ಚಿತಾರ್ಥದ ಉಂಗುರವನ್ನು ಮಾರಲು ಜ್ಯುವೆಲ್ಲರಿಗೆ ಹೋಗಿದ್ದಾನೆ. ಆದರೆ ದುರಾಸೆಗಾಗಿ ಆತ ಈ ರೀತಿ ಮಾಡಿಲ್ಲ. ಬದಲಾಗಿ ಮ್ಯಾಗಿ ನೂಡಲ್ಸ್ (Maggi Noodles) ಖರೀದಿಸಲು ಚಿನ್ನದ ಉಂಗುರವನ್ನು ಮಾರಾಟ ಮಾಡಲು ಹೋಗಿದ್ದಾನೆ. ಉತ್ತರ ಪ್ರದೇಶದ (Uttar Pradesh) ಕಾನ್ಪುರದ ಶಾಸ್ತ್ರಿ ನಗರದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯು ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಈ ಘಟನೆಯು ಮಕ್ಕಳಿಗೆ ನೂಡಲ್ಸ್ ಮತ್ತು ಇತರ ಫಾಸ್ಟ್ ಫುಡ್‍ಗಳ ಮೇಲಿನ ಗೀಳನ್ನು ಎತ್ತಿ ತೋರಿಸಿದೆ (Viral News). ಜ್ಯುವೆಲ್ಲರಿ ಮಾಲೀಕ ಆತನ ತಾಯಿಗೆ ಕರೆ ಮಾಡಿದ ನಂತರ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ವರದಿಗಳ ಪ್ರಕಾರ, ಬಾಲಕ ಒಂದು ಜ್ಯುವೆಲ್ಲರಿಗೆ ಹೋಗಿ ಚಿನ್ನದ ಉಂಗುರವನ್ನು ಮಾರಾಟ ಮಾಡುವುದಾಗಿ ಹೇಳಿದ್ದಾನೆ. ಅಂಗಡಿಯ ಮಾಲೀಕ ಪುಷ್ಪೇಂದ್ರ ಜೈಸ್ವಾಲ್ ಹುಡುಗನ ಮುಗ್ಧತೆಯನ್ನು ಗಮನಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಈ ವೇಳೆ ಬಾಲಕನು ಪ್ರಾಮಾಣಿಕವಾಗಿ ಮ್ಯಾಗಿ ಖರೀದಿಸಲು ಹಣ ಬೇಕಾಗಿದ್ದರಿಂದ ಉಂಗುರವನ್ನು ತಂದಿದ್ದೇನೆ ಎಂದು ಉತ್ತರಿಸಿದ್ದಾನೆ.

ಇದನ್ನೂ ಓದಿ: Viral Video: ಕಿರಿದಾದ ರಸ್ತೆಯಲ್ಲಿ ಸಮೋಸಾ ಟ್ರೇ ಬ್ಯಾಲೆನ್ಸ್ ಮಾಡುತ್ತಾ ವ್ಯಕ್ತಿಯ ಬೈಕ್ ಸವಾರಿ; ನೋಡುಗರು ನಿಬ್ಬೆರಗು, ಇಲ್ಲಿದೆ ವೈರಲ್ ವಿಡಿಯೊ

ಏನೋ ತಪ್ಪಾಗಿದೆ ಎಂದು ಅರಿತುಕೊಂಡ ಆಭರಣ ವ್ಯಾಪಾರಿ ತಕ್ಷಣ ಹುಡುಗನ ತಾಯಿಯನ್ನು ಅಂಗಡಿಗೆ ಕರೆದು ಉಂಗುರವನ್ನು ತೋರಿಸಿದ್ದಾರೆ. ಇದರಿಂದ ತಾಯಿ ಆಘಾತಕ್ಕೊಳಗಾದರು. ಅಲ್ಲದೆ ಅದು ತನ್ನ ಮಗಳ ನಿಶ್ಚಿತಾರ್ಥದ ಉಂಗುರ ಎಂದು ಹೇಳಿದರು. ಕೆಲವೇ ದಿನಗಳಲ್ಲಿ ಮಗಳ ಮದುವೆ ನಡೆಯಲಿದೆ ಎಂದು ಅವರು ಹೇಳಿದರು. ಅದೃಷ್ಟವಶಾತ್ ಉಂಗುರ ಮಾರಾಟವಾಗಲಿಲ್ಲ ಎಂದು ಅವರು ಸಮಾಧಾನಪಟ್ಟರು. ಏಕೆಂದರೆ ಅದು ಕಳೆದುಹೋದರೆ ಕುಟುಂಬಕ್ಕೆ ದೊಡ್ಡ ತೊಂದರೆಯಾಗಬಹುದಿತ್ತು.

ಚಿನ್ನದ ಉಂಗುರವಾಗಿದ್ದಲ್ಲದೆ ಮುಖ್ಯವಾಗಿ ಅದು ನಿಶ್ಚಿತಾರ್ಥದ ಉಂಗುರವಾಗಿತ್ತು. ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ ಮತ್ತೊಂದು ಉಂಗುರವನ್ನು ಕೊಳ್ಳಲು ಅಷ್ಟು ಸುಲಭವಿರಲಿಲ್ಲ. ಅಲ್ಲದೆ, ಮಗಳ ಮದುವೆಗೆ ಕೆಲವು ದಿನಗಳ ಮೊದಲು, ಆ ಕುಟುಂಬವು ಅಷ್ಟು ದುಬಾರಿ ಉಂಗುರವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಇದನ್ನೂ ಓದಿ: Viral News: ಕುರ್ಕುರೆ ಕೊಡದ ತಾಯಿ-ಸಹೋದರಿ; ಪೊಲೀಸರಿಗೆ ದೂರು ನೀಡಿದ ಬಾಲಕ

ಪುಷ್ಪೇಂದ್ರ ಜೈಸ್ವಾಲ್, ಯಾವುದೇ ಅಂಗಡಿಯವರು ಸರಿಯಾದ ಪರಿಶೀಲನೆ ಇಲ್ಲದೆ ಅಪ್ರಾಪ್ತ ವಯಸ್ಕರು ತಂದ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಹೇಳಿದರು. ಬಾಲಕನ ಮುಗ್ಧತೆಗೆ ಕರಗಿದ ಅವರು ಆತನಿಗೇನೂ ಹೇಳಲಿಲ್ಲ. ಉಂಗುರವನ್ನು ಅವನ ತಾಯಿಗೆ ಹಿಂದಿರುಗಿಸಿದರು. ಅವರು ತಮ್ಮ ಮಗನೊಂದಿಗೆ ಅಂಗಡಿಯಿಂದ ಹೊರಡುವಾಗ ಭಾವನಾತ್ಮಕವಾಗಿ ಕಣ್ಣೀರು ಹಾಕಿದರು ಎನ್ನಲಾಗಿದೆ.

ಈ ಆಭರಣ ವ್ಯಾಪಾರಿಯ ಪ್ರಾಮಾಣಿಕತೆ ಮತ್ತು ಸೂಕ್ಷ್ಮತೆಗಾಗಿ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಇದನ್ನು ಅರಿವು ಮತ್ತು ಮಕ್ಕಳ ಮುಗ್ಧ ಆಸೆಗಳನ್ನು ಅರ್ಥಮಾಡಿಕೊಳ್ಳುವ ಸುಂದರ ಉದಾಹರಣೆ ಎಂದು ಹೇಳಿದ್ದಾರೆ.