ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫ್ರಾನ್ಸ್‌ಗಿಂತ ಭಾರತ ಯಾಕೆ ಉತ್ತಮ? ಫ್ರೆಂಚ್ ಯುವತಿಯ ಮನಗೆದ್ದ 5 ವಿಚಾರಗಳು

Viral Video: ಭಾರತದಲ್ಲಿ ನೆಲೆಸಿರುವ ಫ್ರೆಲ್ಡಾವೇ ಎಂಬ ಫ್ರೆಂಚ್ ಮೂಲದ ಯುವತಿ ಭಾರತದ ಬಗ್ಗೆ ಹಲವು ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ತನ್ನ ದೇಶ ಫ್ರಾನ್ಸ್‌ಗಿಂತಲೂ ಭಾರತ ಯಾವ ವಿಷಯಗಳಲ್ಲಿ ಹೆಚ್ಚು ಮೆಚ್ಚುಗೆ ಗಳಿಸಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಭಾರತವನ್ನು ಈ ವಿಚಾರಗಳಿಗಾಗಿ ಹೊಗಳಿದ ವಿದೇಶಿ ಮಹಿಳೆ

ಫ್ರೆಂಚ್ ಯುವತಿ ಫ್ರೆಲ್ಡಾವೇ -

Profile
Pushpa Kumari Jan 14, 2026 8:35 PM

ನವದೆಹಲಿ, ಜ. 14: ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾರತದ ಸೌಂದರ್ಯ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಮನಸೋತ ವಿದೇಶಿಯರಲ್ಲಿ ಕೆಲವರು ಪ್ರವಾಸ ಮುಗಿಸಿ ವಾಪಸ್ ಹೋದರೆ, ಇನ್ನೂ ಕೆಲವರು ಇಲ್ಲೇ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಇದೀಗ ಭಾರತದಲ್ಲಿ ನೆಲೆಸಿರುವ ಫ್ರೆಲ್ಡಾವೇ (Freldaway) ಎಂಬ ಫ್ರೆಂಚ್ ಮೂಲದ ಯುವತಿ ಭಾರತದ ಬಗ್ಗೆ ಹಲವು ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ತಮ್ಮ ದೇಶ ಫ್ರಾನ್ಸ್‌ಗಿಂತಲೂ ಭಾರತ ಯಾವ ವಿಷಯಗಳಲ್ಲಿ ಹೆಚ್ಚು ಮೆಚ್ಚುಗೆ ಗಳಿಸಿದೆ ಎಂದು ‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರನ್ನು ಆಕರ್ಷಿಸಿವೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.

"ಥಿಂಗ್ಸ್ ಇಂಡಿಯಾ ಡಸ್ ಬೆಟರ್ ದೆನ್ ಫ್ರಾನ್ಸ್" ಎಂಬ ಶೀರ್ಷಿಕೆ ನೀಡಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ಶೇರ್ ಮಾಡಿಕೊಳ್ಳಲಾಗಿದೆ. ಕೆಲಸಕ್ಕಾಗಿ ಭಾರತಕ್ಕೆ ಬಂದ ಫ್ರೆಂಚ್ ಮಹಿಳೆ ಭಾರತವನ್ನು ಪ್ರೀತಿಸುವಂತೆ ಮಾಡಿದ ದೈನಂದಿನ ಅನುಭವಗಳನ್ನು ಪ್ರತಿಬಿಂಬಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಶೇರ್ ಮಾಡಿಕೊಂಡಿರುವ ಈ ವಿಡಿಯೊದಲ್ಲಿ, ಭಾರತದ ದಿನನಿತ್ಯದ ಜೀವನದ ಸೌಂದರ್ಯವನ್ನು ಅವರು ಮುಕ್ತವಾಗಿ ಹೊಗಳಿದ್ದಾರೆ. ಅವರ ಗಮನ ಸೆಳೆದ ಪ್ರಮುಖ ಅಂಶಗಳು ಇಲ್ಲಿವೆ...

ವಿಡಿಯೊ ನೋಡಿ:

ಭಾರತೀಯ 'ಸ್ಟ್ರೀಟ್ ಫುಡ್'

ಫ್ರೆಲ್‌ಡೇ ಅವರಿಗೆ ಇಷ್ಟವಾದ ಮೊದಲ ವಿಚಾರ ಎಂದರೆ ಅದು ಭಾರತದ ರೋಮಾಂಚಕ ಬೀದಿ ಆಹಾರ.ಬ ಹುತೇಕ ಎಲ್ಲೆಡೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಆಹಾರದ ವೈವಿಧ್ಯತೆಯ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಿಗುವ ರುಚಿಯಾದ ಆಹಾರ, ವ್ಯಾಪಾರಿಗಳು ಮಾತನಾಡುವ ಆತ್ಮೀಯತೆ ಫ್ರಾನ್ಸ್‌ನಲ್ಲಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ಆಭರಣಗಳ ಆಕರ್ಷಣೆ

ಭಾರತೀಯ ಆಭರಣಗಳು ಅವರನ್ನು ಆಕರ್ಷಿಸಿದ ಮತ್ತೊಂದು ಅಂಶ. ಬಳೆಗಳು, ಜುಮ್ಕಾಗಳು, ಉಂಗುರಗಳು ಮತ್ತು ಹಾರಗಳು ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇಲ್ಲಿನ ಆಭರಣಗಳ ಶೈಲಿ ತನಗೆ ಅತ್ಯಂತ ಆಪ್ತವಾಗಿದೆ ಎಂದು ಬಣ್ಣಿಸಿದ್ದಾರೆ.

ಗರ್ಭಿಣಿಗೆ ಈ ಪೊಲೀಸ್‌ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿದ್ರೆ ಶಾಕ್‌ ಆಗುತ್ತೆ!

ಆರಾಮದಾಯಕ ಬಸ್, ರೈಲು ಪ್ರಯಾಣ

ದೂರದ ಪ್ರಯಾಣಕ್ಕೆ ಭಾರತದ ಸ್ಲೀಪರ್ ಏಸಿ ಬಸ್‌ಗಳು ಮತ್ತು ರೈಲುಗಳು ಅತ್ಯಂತ ಸೂಕ್ತ. ಭಾರತದಲ್ಲಿ ರಸ್ತೆ ಅಥವಾ ರೈಲಿನ ಮೂಲಕ ರಾತ್ರಿ ಪ್ರಯಾಣಗಳು ಆರಾಮದಾಯಕ ಮಾತ್ರವಲ್ಲದೆ ರಮಣೀಯವೂ ಹೌದು ಎಂದು ತಿಳಿಸಿದ್ದಾರೆ. ಫ್ರಾನ್ಸ್‌ಗೆ ಹೋಲಿಸಿದರೆ ಭಾರತದ ರಾತ್ರಿ ಪ್ರಯಾಣದ ವ್ಯವಸ್ಥೆ ಹೆಚ್ಚು ಆರಾಮದಾಯಕ ಎಂದಿದ್ದಾರೆ.

ಕೂದಲ ಆರೈಕೆ ಮತ್ತು ಪಾರಂಪರಿಕ ಪದ್ಧತಿ

ಭಾರತೀಯರ ಕಪ್ಪಾದ ಕೂದಲಿನ ರಹಸ್ಯವನ್ನು ಅವರು ಹೊಗಳಿದ್ದಾರೆ. ಸಾಂಪ್ರದಾಯಿಕ ಎಣ್ಣೆ ಹಚ್ಚುವ ದಿನಚರಿಗಳಿಂದ ಹಿಡಿದು ರಕ್ಷಣಾತ್ಮಕ ಕೇಶ ವಿನ್ಯಾಸ ಮತ್ತು ನೈಸರ್ಗಿಕವಾದ ಕೂದಲಿನ ಹೊಳಪನ್ನು ಹೊಗಳಿದ್ದಾರೆ. ಇಲ್ಲಿನ ಮಹಿಳೆಯರು ಶಾಂಪೂ ಜಾಹೀರಾತಿನಲ್ಲಿ ನಟಿಸುವಷ್ಟು ಸುಂದರ ಕೂದಲನ್ನು ಹೊಂದಿದ್ದಾರೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಭಾರತೀಯ ಅತಿಥಿ ಸತ್ಕಾರ

ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ. ಮನೆಗಳಿಗೆ ಸ್ವಾಗತಿಸಲ್ಪಟ್ಟ ಅನುಭವಗಳನ್ನು ಶೇರ್ ಮಾಡಿದ್ದಾರೆ. ಮನೆಗೆ ಕರೆದು ಊಟ ಹಾಕುವ ಭಾರತೀಯರ ಗುಣಗಳು ದೊಡ್ಡದು. ಫ್ರಾನ್ಸ್‌ನಲ್ಲಿ ಇಷ್ಟೊಂದು ಆಳವಾದ ಪ್ರೀತಿ ಸಿಗುವುದು ಕಷ್ಟ ಎಂದು ಭಾವುಕರಾಗಿದ್ದಾರೆ. ಈ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು "ನಮ್ಮ ದೇಶ ನಿಜಕ್ಕೂ ಹೆಮ್ಮೆಯ ದೇಶ" ಎಂದು ಬರೆದುಕೊಂಡಿದ್ದಾರೆ.