ನದಿಯಂತಾದ ರಸ್ತೆಯಲ್ಲಿ ಸಿಲುಕಿದ್ದ ದಿವ್ಯಾಂಗ ಯುವಕನನ್ನು ರಕ್ಷಿಸಿದ ಬೆಂಗಳೂರು ಪೊಲೀಸ್ : ವಿಡಿಯೋ ವೈರಲ್
ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ, ಜಲಾವೃತ ರಸ್ತೆಯಲ್ಲಿ ಸಿಲುಕಿದ್ದ ಅಂಗವಿಕಲ ವ್ಯಕ್ತಿರೊಬ್ಬರನ್ನ ಪೊಲೀಸ್ ಕಾನ್ಸ್‌ಟೆಬಲ್ ಒಬ್ಬರು ಹೆಗಲ ಮೇಲೆ ಹೊತ್ತು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರಿನ ಜನ ಹೈರಾಣಾಗಿದ್ದಾರೆ. (Bengaluru Police) ಮಳೆಯಿಂದಾಗಿ ಹಲವೆಡೆ ರಸ್ತೆಯಂತಾಗಿದ್ದು, ವಾಹನ ಸವಾರರು ಪರದಾಡುದ್ದಾರೆ. ಭೀಕರ ಮಳೆಗೆ ಇಡೀ ರಸ್ತೆಯೇ (Viral Video) ನದಿಯಂತಾಗಿದ್ದಾಗ, ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ತೋರಿದ ಅಪ್ರತಿಮ ಸಾಹಸ ಮತ್ತು ಮಾನವೀಯ ಕಾರ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ತಡರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ರಸ್ತೆಯಲ್ಲಿ ಮಂಡಿ ಆಳಕ್ಕೆ ನೀರು ಪ್ರವಾಹದಂತೆ ನುಗ್ಗುತ್ತಿದ್ದುದರಿಂದ ವಾಹನ ಸವಾರರೇ ಸಂಚರಿಸಲು ಹರಸಾಹಸ ಪಡುತ್ತಿದ್ದರು. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ದಿವ್ಯಾಂಗ ಯುವಕನೊಬ್ಬ ರಸ್ತೆ ದಾಟಲಾಗದೆ, ನೀರಿನ ರಭಸಕ್ಕೆ ಕೊಚ್ಚಿಹೋಗುವ ಭೀತಿಯಲ್ಲಿ ತೀವ್ರವಾಗಿ ಪರದಾಡುತ್ತಿದ್ದನು. ಯಾರು ಕೂಡ ಆತನ ನೆರವಿಗೆ ಬಾರದ ಆ ಕಷ್ಟದ ಸಮಯದಲ್ಲಿ, ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಅನಿಲ್ ಅವರು ಮಾನವೀಯತೆ ಮೆರೆದಿದ್ದಾರೆ.
ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನ ತೀವ್ರತೆಯನ್ನು ಲೆಕ್ಕಿಸದೆ, ಆ ಯುವಕನನ್ನು ತಮ್ಮ ಎರಡೂ ಕೈಗಳಿಂದ ಸುರಕ್ಷಿತವಾಗಿ ಎತ್ತಿಕೊಂಡು, ಅತ್ಯಂತ ಜಾಗರೂಕತೆಯಿಂದ ರಸ್ತೆಯ ಮತ್ತೊಂದು ಬದಿಗೆ ತಲುಪಿಸುವ ಮೂಲಕ ಸಹಾಯ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಬೆಂಗಳೂರು ಟ್ರಾಫಿಕ್ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ಮಾನವೀಯತೆಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಅನಿಲ್ ಅವರ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಗರವು ಪ್ರವಾಹ ಮತ್ತು ಮಳೆಯಂತಹ ಸವಾಲುಗಳನ್ನು ಎದುರಿಸುತ್ತಿರುವಾಗ, ಇಂತಹ ಸಣ್ಣ ಸಣ್ಣ ಮಾನವೀಯ ಕಾರ್ಯಗಳು ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ. ಪೊಲೀಸ್ ಇಲಾಖೆಯ ಮೇಲಿರುವ ಗೌರವವನ್ನು ಇಂತಹ ಘಟನೆಗಳು ಮತ್ತಷ್ಟು ಹೆಚ್ಚಿಸುತ್ತವೆ.