ಜಲ ಮಾಲಿನ್ಯ ಜಾಗೃತಿಗಾಗಿ ಉಸಿರು ಬಿಗಿ ಹಿಡಿದು ನೀರಿನೊಳಗೆ ಹೆಜ್ಜೆ ಹಾಕಿದ ಡ್ಯಾನ್ಸರ್: ವಿಡಿಯೊ ವೈರಲ್
ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲ್‌ಗಳು ಸಮುದ್ರ ಗರ್ಭ ಸೇರುತ್ತಿದ್ದು ಅಲ್ಲಿನ ಜಲಚರಗಳಿಗೆ ಸಂಕಷ್ಟ ತಂದೊಡ್ಡಿವೆ. ಹೀಗಾಗಿ ಯುವತಿಯೊಬ್ಬರು ಸಾಗರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೀರಿನ ಆಳದಲ್ಲಿ ಭರತನಾಟ್ಯ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪುದುಚೇರಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ನೀರಿನ ಆಳದಲ್ಲಿನ ಆಕೆಯ ನೃತ್ಯ ಗಮನ ಸೆಳೆಯುತ್ತಿದೆ.
ನೀರಿನ ಆಳದಲ್ಲಿ ಹೆಜ್ಜೆ ಹಾಕಿದ ಡ್ಯಾನ್ಸರ್ -
ಚೆನ್ನೈ, ಡಿ. 23: ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಸರ ಮಾಲಿನ್ಯ ನಿರ್ಮೂಲನೆಯ ಸಲುವಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿ ಮಾಡಿವೆ. ಗಾಳಿ, ಭೂಮಿ, ನೀರು ಮತ್ತು ಮಣ್ಣಿನ ಮೇಲೆ ಪ್ಲಾಸ್ಟಿಕ್ ಉತ್ಪನ್ನಗಳು ಪ್ರಭಾವ ಬೀರುತ್ತಿದ್ದು, ಈ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲು ಅಭಿಯಾನ ನಡೆಸಲಾಗುತ್ತದೆ. ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲ್‌ಗಳು ಸಮುದ್ರ ಗರ್ಭ ಸೇರುತ್ತಿದ್ದು ಅಲ್ಲಿನ ಜಲಚರಗಳಿಗೆ ಸಂಕಷ್ಟ ತಂದೊಡ್ಡಿವೆ. ಇದೀಗ ಯುವತಿಯೊಬ್ಬರು ಪುದುಚೇರಿಯಲ್ಲಿ ಸಾಗರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೀರಿನ ಆಳದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶಿಸಿದ್ದಾರೆ. ನೀರಿನ ಆಳದಲ್ಲಿ ಭಯವಿಲ್ಲದೆ ಮಾಲಿನ್ಯ ಜಾಗೃತಿ ಮೂಡಿಸುವ ಈಕೆಯ ನೃತ್ಯದ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral video) ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ನೀರಿನಲ್ಲಿ ಮುಳುಗಿ ನೃತ್ಯ ಮಾಡುವುದು ಇದೆ ಮೊದಲೇನಲ್ಲ. ಈ ಹಿಂದೆಯೇ ಕೆಲವು ರಿಯಾಲಿಟಿ ಶೋಗಳಲ್ಲಿ ಇಂತಹ ಪ್ರಯತ್ನಗಳು ನಡೆದಿವೆ. ಆದರೆ ಯಾವುದೇ ವೈಯಕ್ತಿಕ ಉದ್ದೇಶ ಇಲ್ಲದೆ ಪರಿಸರ ಕಾಳಜಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ಯುವತಿ ನೃತ್ಯ ಮಾಡಿದ್ದಾರೆ. ಸಾಯಿ ಪಲ್ಲವಿ ಅವರ ಅಭಿನಯದ ʼಶ್ಯಾಮ್ ಸಿಂಗ್ ರಾಯ್ʼ ಚಿತ್ರದ ʼಪ್ರಣವಲಯʼ ಹಾಡಿಗೆ ಈ ಯುವತಿ ನೃತ್ಯ ಪ್ರದರ್ಶಿಸಿದ್ದಾರೆ.
ವಿಡಿಯೊ ನೋಡಿ:
ವೈರಲ್ ಆದ ವಿಡಿಯೊದಲ್ಲಿ ತರಗೈ ಅರಾಧನಾ ಎಂಬ ಯುವತಿಯು ಸುಮಾರು 20 ಅಡಿ ನೀರಿನ ಆಳದಲ್ಲಿ ನೃತ್ಯ ಪ್ರದರ್ಶನ ನೀಡಿದ್ದನ್ನು ಕಾಣಬಹುದು. ಆಕೆಯು ಆಭರಣಗಳು ಮತ್ತು ಮೇಕಪ್‌ನೊಂದಿಗೆ ಸಾಂಪ್ರದಾಯಿಕ ಭರತನಾಟ್ಯ ಉಡುಪನ್ನು ಧರಿಸಿಕೊಂಡೆ ಈ ನೃತ್ಯ ಮಾಡಿದ್ದಾರೆ. ನೀರಿನ ಆಳದಲ್ಲಿ ಆ ಸಿನಿಮಾದ ಸಂಗೀತ ಕೇಳಲು ಸಾಧ್ಯವಾಗದಿದ್ದರೂ, ಆ ಸಂಗೀತದ ಲಯಕ್ಕೆ ಸರಿಯಾಗಿ ಹೆಜ್ಜೆಹಾಕಿದ್ದನ್ನು ಕಾಣಬಹುದು. ಸಮುದ್ರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಮುದ್ರದ ಆಳವನ್ನೆ ವೇದಿಕೆಯಾಗಿ ಬಳಸಿಕೊಂಡ ಈಕೆಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏರ್‌ಪೋರ್ಟ್ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ
ತರಗೈ ಅರಾಧನಾ ಅಂತಾರಾಷ್ಟ್ರೀಯ ನೃತ್ಯ ದಿನದ ಸಂದರ್ಭದಲ್ಲಿ ಬಂಗಾಳಕೊಲ್ಲಿಯ ರಾಮೇಶ್ವರಂ ಬಳಿ ನೀರಿನ ಒಳಗೆ ಭರತನಾಟ್ಯವನ್ನು ಪ್ರದರ್ಶಿಸಿದ್ದರು. ತಮ್ಮ ಆಕರ್ಷಕ ನೃತ್ಯದ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವು ಸಮುದ್ರ ಜೀವಿಗಳು ಮತ್ತು ಸಾಗರ ಪರಿಸರ ವ್ಯವಸ್ಥೆಗಳಿಗೆ ಉಂಟುಮಾಡುವ ಹಾನಿಯ ಬಗ್ಗೆ ವಿವರಿಸಿದ್ದರು. ಈ ಹಳೆ ವಿಡಿಯೊವನ್ನು ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಜಲ ಮಾಲಿನ್ಯ ಜಾಗೃತಿಯ ಪ್ರಚಾರಕ್ಕಾಗಿ ರೀ ಪೋಸ್ಟ್ ಮಾಡಲಾಗಿದೆ.
ತರಗೈ ನೃತ್ಯದ ಜತೆಗೆ ಸ್ಕೂಬಾ ಡೈವಿಂಗ್ ತರಬೇತಿ ಕೂಡ ಪಡೆದಿದ್ದಾರೆ. ಅವರ ಜತೆ ಸ್ನೇಹಿತ ಅಶ್ವಿನ್ ಕೂಡ ಈ ನೃತ್ಯ ಪ್ರದರ್ಶನದ ತಯಾರಿಯಲ್ಲಿ ಸಹಕರಿಸುತ್ತಿದ್ದ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು. ಈ ಜೋಡಿಯು ಯುವಜನರು ನೃತ್ಯವನ್ನು ಕಲಿಯಲು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ಸಾಗರಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯದ ಗಂಭೀರ ಸಮಸ್ಯೆಯ ಬಗ್ಗೆ ಗಮನ ಸೆಳೆಯುವುದು ತಮ್ಮ ಗುರಿ ಎಂದು ವಿಡಿಯೊದಲ್ಲಿ ಹೇಳಿದೆ. ಈ ವಿಡಿಯೊ ಬಗ್ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ನೀರಿನ ಒಳಗೆ ನಮಗೆ ಉಸಿರಾಡಲು ಕೂಡ ಕಷ್ಟವಾಗುತ್ತದೆ. ಅಂತದರಲ್ಲಿ ಈ ರೀತಿ ನೃತ್ಯ ಮಾಡುವುದು ಅಸಾಧ್ಯದ ಮಾತು. ಈ ನೃತ್ಯವು ನಿಜವಾಗಿಯೂ ನಮ್ಮ ಕಲ್ಪನೆಗೂ ಮೀರಿದ್ದು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.