Viral Post: ದೆಹಲಿಯ ರಸ್ತೆಗಳಲ್ಲಿ ಆಟೋ ಓಡಿಸುತ್ತಿರುವ ಈ ಮಹಿಳೆಯ ಕಥೆ ಎಲ್ಲರಿಗೂ ಸ್ಪೂರ್ತಿ; ಈಕೆ ಅನುಭವಿಸಿದ್ದು ಒಂದಷ್ಟಲ್ಲ!
ಬದುಕಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸವಾಲು ಎದುರಾಗುತ್ತಿರುತ್ತದೆ. ಆದರೆ ಆ ಸವಾಲುಗಳಿಗೆ ಹೆದರಿ ಓಡಿ ಹೋದರೆ ಸೋಲು, ಎದುರಿಸಿ ನಿಂತರೆ ಗೆಲುವು ನಮ್ಮ ಪಾಲಿಗೆ. ಜೀವನದ ಕಷ್ಟಗಳನ್ನು ಕಡೆಗಣಿಸಿ, ತನ್ನ ಮಗಳ ಭವಿಷ್ಯವನ್ನು ಪರಿಗಣಿಸಿ ದೆಹಲಿಯ ರಸ್ತೆಗಳಲ್ಲಿ ಆಟೋ ಓಡಿಸುತ್ತಿರುವ ಗಟ್ಟಿಗಿತ್ತಿ ಮಹಿಳೆಯೊಬ್ಬಳ ಸ್ಪೂರ್ತಿಯ ಕಥೆ ಇಲ್ಲಿದೆ.

ದೆಹಲಿಯ ರಸ್ತೆಗಳಲ್ಲಿ ಆಟೋ ಓಡಿಸುತ್ತಿರುವ ನೀಲಂ.

ನವದೆಹಲಿ: ನಮ್ಮ ದೇಶದಲ್ಲಿ ಕೆಲವೊಂದು ವೃತ್ತಿಗಳಲ್ಲಿ ಇಂದಿಗೂ ಪುರುಷ ಪ್ರಾಬಲ್ಯವನ್ನು ಕಾಣಬಹುದಾಗಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಮಹಿಳೆಯರು ಪುರುಷರ ವೃತ್ತಿಯನ್ನು ನಿಭಾಯಿಸುತ್ತಿದ್ದರೂ, ಸಾರಿಗೆ ಕ್ಷೇತ್ರ ಮತ್ತು ವಿತರಣಾ ಕ್ಷೇತ್ರದಲ್ಲಿ ನಮ್ಮ ದೇಶದಲ್ಲಿ ಪುರುಷ ಪ್ರಾಬಲ್ಯವೇ ಕಂಡುಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಹನ ಚಾಲನಾ ವೃತ್ತಿಯಲ್ಲಿ ನಾವು ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವಂತಾಗಿದೆ. ಇದಕ್ಕೆ ಪೂರಕವಾಗಿ ದೆಹಲಿ (Delhi) ಮೂಲದ ರೆಡಿಟ್ (Reddit) ಬಳಕೆದಾರರೊಬ್ಬರು ಮಹಿಳಾ ಆಟೋ ಚಾಲಕಿಯೊಬ್ಬರನ್ನು ಕಂಡು ಅವರ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Post) ಆಗಿದೆ. ರೆಡಿಟ್ ಬಳಕೆದಾರರು ಮೊದಲಿಗೆ ಆಟೋದಲ್ಲಿ ಮಹಿಳಾ ಚಾಲಕಿಯನ್ನು ಕಂಡು ಅಚ್ಚರಿಗೊಂಡರೂ, ಬಳಿಕ ಆಕೆಯ ಆಟೋದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ತನ್ನ ಆಟೋ ಪ್ರಯಾಣದ ಸಂದರ್ಭದಲ್ಲಿ ಈ ವ್ಯಕ್ತಿ ಆ ಮಹಿಳಾ ಚಾಲಕಿಯ ಜೊತೆ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಅವರಿಗೆ ಈ ಮಹಿಳೆಯ ಸಾಹಸಗಾಥೆಯ ಪರಿಚಯವಾಗಿದೆ. ನೀಲಂ ಎಂಬುದಾಗಿ ಈ ಗಟ್ಟಿಗಿತ್ತಿಯ ಹೆಸರಾಗಿದ್ದು, ಈಕೆ ತನ್ನ ಗಂಡ ಮತ್ತು ಆತನ ಸಹೋದರರ ಕಿರುಕುಳವನ್ನು ತಾಳಲಾರದೆ, ತನ್ನ ಸ್ವಂತ ದುಡಿಮೆಯಲ್ಲಿ ಬದುಕಲು ನಿರ್ಧರಿಸಿ ಇದೀಗ ದೆಹಲಿಯ ರಸ್ತೆಗಳಲ್ಲಿ ಆಟೋ ಓಡಿಸಿ ಸಂಪಾದಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ ಮಾತ್ರವಲ್ಲದೇ ಆ ಮೂಲಕ ತನ್ನ ಮಗಳಿಗೊಂದು ಉತ್ತಮ ಭವಿಷ್ಯವನ್ನು ರೂಪಿಸುವ ಗುರಿಯನ್ನು ಈ ನೀಲಂ ಹೊಂದಿದ್ದಾಳೆ.
ರೆಡಿಟ್ ನಲ್ಲಿ ಈ ವ್ಯಕ್ತಿ ಬರೆದಿರುವ ವಿವರವಾದ ಪೋಸ್ಟ್ ನಲ್ಲಿ, ತಾನು ಹೇಗೆ ಮೊದಲಿಗೆ ಆ ಮಹಿಳೆಯ ಆಟೋದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕಿದೆ ಎಂಬುದನ್ನು ವಿವರಿಸಿ ಬಳಿಕ ಆ ಸಾಹಸಿ ಮಹಿಳೆಯ ಕಥೆಯನ್ನು ಕೇಳಿದವರೆಗಿನ ಮಾಹಿತಿಯನ್ನು ವಿವರವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: 'ಸೈಯಾನ್' ಹಾಡಿಗೆ ಕುಣಿದು ಕುಪ್ಪಳಿಸಿದ 'ಡ್ಯಾನ್ಸಿಂಗ್ ದಾದಿ'- ಈ ಅಜ್ಜಿಯ ಜೋಶ್‌ಗೆ ಎಲ್ರೂ ಫಿದಾ!
ದೆಹಲಿಯ ಸಾಹಸಿ ಆಟೋ ಚಾಲಕಿ ನಿಲಂ ಅವರ ಕಥೆ ರೆಡಿಟ್ ನಲ್ಲಿ ಪೋಸ್ಟ್ ಆಗಿ ಬಳಿಕ ವೈರಲ್ ಆಗುತ್ತಿದ್ದಂತೆ, ಈಕೆಯ ಛಲದ ಬದುಕಿಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಕೇವಲ ರೈಡ್ ಗಿಂತ ಹೆಚ್ಚಿನದ್ದನ್ನು ನಾನಿಲ್ಲಿ ಕಂಡೆ, ಸಾಮರ್ಥ್ಯದ ಕಥೆಯನ್ನು ಕಂಡೆ.. ನೀಲಂ ಕೇವಲ ಆಟೋ ಓಡಿಸುತ್ತಿಲ್ಲ, ಬದಲಾಗಿ ಆಕೆಯೊಂದು ಬದಲಾವಣೆಯತ್ತ ತನ್ನ ಜೀವನವನ್ನು ಕೊಂಡೊಯ್ಯುತ್ತಿದ್ದಾಳೆ..’ ಎಂದು ಒಬ್ಬ ಬಳಕೆದಾರರು ಅರ್ಥಪೂರ್ಣ ಕಮೆಂಟ್ ಮಾಡಿದ್ದಾರೆ.
ತನ್ನ ವೈವಾಹಿಕ ಜಿವನದಲ್ಲಿ ಆಕೆ ಎದುರಿಸಿದ ಕಷ್ಟಗಳೇ ಆಕೆಯನ್ನು ಇಂದು ಸ್ವಾವಲಂಬಿ ಬದುಕಿನ ಸಾಧ್ಯತೆಯತ್ತ ಮುಖ ಮಾಡುವಂತೆ ಮಾಡಿದೆ ಮತ್ತು ತನ್ನೆದುರಿಗಿದ್ದ ಸವಾಲುಗಳತ್ತ ದಿಟ್ಟವಾಗಿ ಹೋರಾಡುವಂತೆ ಮಾಡಿದೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
‘ನಮ್ಮ ಪಯಣ ಸಾಗುತ್ತಿದ್ದಂತೆ, ನಾನು ಆಕೆಯಲ್ಲಿ ಕೇಳಿದೆ, ‘ಇದನ್ನೇ ನೀವು ಯಾಕೆ ಆಯ್ಕೆ ಮಾಡಿಕೊಂಡಿರಿ..’ ಎಂದು, ಅದಕ್ಕವಳು ಒಂದು ಕಿರು ನಗೆಯನ್ನಷ್ಟೇ ಬೀರಿದಳು, ಆದರೆ ಆ ನಗುವಿನಲ್ಲಿ ನನಗೆ ಆ ಕ್ಷಣ ಸಾವಿರ ನೋವು ಕಂಡಿತು. ‘ನನಗೆ ಬೇರೆ ಆಯ್ಕೆಗಳೇ ಇರಲಿಲ್ಲ, ನನ್ನ ಪತಿಯ ಸಹೋದರರು ನನ್ನನ್ನು ದೂರ ಮಾಡಲು ನೋಡಿದರು, ನನ್ನ ಪತಿ ನನ್ನನ್ನು ಸುಮ್ಮನಾಗಿಸಲು ನೋಡಿದ. ಆದರೆ ನಾನು ಹೋರಾಡುವ ನಿರ್ಧಾರವನ್ನು ಮಾಡಿದೆ’ ಎಂದು ಆಕೆ ಹೇಳಿಕೊಂಡಿದ್ದಾಳೆ.
ಇದೀಗ ಆಕೆಯ ಪ್ರತೀ ಪ್ರಯಾಣವೂ ಕೇವಲ ಗುರಿ ಮುಟ್ಟುವುದಷ್ಟೇ ಅಲ್ಲ, ಬದಲಾಗಿ ತನ್ನನ್ನು ತಾನು ಸಾಧಿಸಿಕೊಳ್ಳುವುದು, ತನ್ನ ಜೀವನವನ್ನು ಪುನರ್ ರೂಪಿಸಿಕೊಳ್ಳುವುದು ಹಾಗೂ ತನ್ನ ಮಗಳಿಗೊಂದು ಉತ್ತಮ ಭವಿಷ್ಯವನ್ನು ರೂಪಿಸುವುದು ಸೇರಿದೆ.’ ಎಂದು ಆ ವ್ಯಕ್ತಿ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.