ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

B Y Vijayendra Interview: ಸವಾಲು, ಗೊಂದಲ ಮೀರಿ 2028ರಲ್ಲಿ ಬಿಜೆಪಿಗೇ ಅಧಿಕಾರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ(B Y Vijayendra) ನೇತೃತ್ವ ದಲ್ಲಿ ಬಳ್ಳಾರಿ ಚಲೊ ಪಾದ ಯಾತ್ರೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸರಕಾರದ ವೈಫಲ್ಯ, ಭ್ರಷ್ಟಾಚಾರ ಆರೋಪಗಳು, ರೈತರ ಸಮಸ್ಯೆ, ಬರ ಪರಿಸ್ಥಿತಿ, ಅಭಿವೃದ್ಧಿ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ನಡಿಗೆಗೆ ಭಾರೀ ಜನಸ್ಪಂದನೆ ವ್ಯಕ್ತ ಆಗಿದೆ.

ಸವಾಲು, ಗೊಂದಲ ಮೀರಿ 2028ರಲ್ಲಿ ಬಿಜೆಪಿಗೇ ಅಧಿಕಾರ

-

ವಿಶ್ವವಾಣಿ ವಿಶೇಷ ಸಂದರ್ಶನ: ರಾಘವ ಶರ್ಮ ನಿಡ್ಲೆ

ಬಳ್ಳಾರಿ ಚಲೊಗೆ ಅಭೂತಪೂರ್ವ ಸ್ಪಂದನೆ

ಪಾದಯಾತ್ರೆ ಪಕ್ಷಕ್ಕೆ ಮತ್ತಷ್ಟು ಹುರುಪು ತಂದಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ತೋರಣಗಲ್(ಬಳ್ಳಾರಿ): ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ(B Y Vijayendra) ನೇತೃತ್ವ ದಲ್ಲಿ ಬಳ್ಳಾರಿ ಚಲೊ ಪಾದಯಾತ್ರೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸರಕಾರದ ವೈಫಲ್ಯ, ಭ್ರಷ್ಟಾಚಾರ ಆರೋಪಗಳು, ರೈತರ ಸಮಸ್ಯೆ, ಬರ ಪರಿಸ್ಥಿತಿ, ಅಭಿವೃದ್ಧಿ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ನಡಿಗೆಗೆ ಭಾರೀ ಜನಸ್ಪಂದನೆ ವ್ಯಕ್ತ ಆಗಿದೆ. ಈ ಕುರಿತು ವಿಜಯೇಂದ್ರ ಅವರು ವಿಶ್ವವಾಣಿ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದು, ಮಾಜಿ ಸಚಿವ ಬಿ.ನಾಗೇಂದ್ರ ರಾಜೀನಾಮೆ, ಬಿಜೆಪಿಯೊಳಗಿನ ಭಿನ್ನಾಭಿ ಪ್ರಾಯಗಳು, ಜೆಡಿಎಸ್ ದೋಸ್ತಿ, ಡಿ.ಕೆ.ಶಿವಕುಮಾರ್ ಅವರ ಅಭಿವೃದ್ಧಿ ಮಾದರಿ ಸೇರಿದಂತೆ ಹಲವು ವಿಚಾರಗಳ ಕುರಿತು ಹಂಚಿಕೊಂಡರು.

ಸವಾಲು, ಗೊಂದಲಗಳ ಮೀರಿ 2028ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಇದನ್ನೂ ಓದಿ: Padayatra Completes Seven Days: ಏಳು ದಿನ ಪೂರೈಸಿದ ಬಳ್ಳಾರಿ ಪಾದಯಾತ್ರೆ: ಕೇಸರಿ ಪಡೆಯಲ್ಲಿ ರಣೋತ್ಸಾಹ

ರಣಬಿಸಿಲಿನ ನಡುವೆಯೂ ಭಾರೀ ಸ್ಪಂದನೆ, ಈ ಬಗ್ಗೆ ನಿಮ್ಮ ಅಭಿಪ್ರಾಯ?

ಬಿ.ವೈ.ವಿಜಯೇಂದ್ರ: ಪಾದಯಾತ್ರೆ ಆರಂಭಿಸಿ ಎಂಟು ದಿನ ಕಳೆದಿದೆ. ತೀವ್ರ ಬಿಸಿಲಿನ ನಡುವೆ ಯೂ ಜನರಿಂದ ಮತ್ತು ಕಾರ್ಯಕರ್ತರಿಂದ ಅಪಾರ ಬೆಂಬಲ ಉತ್ಸಾಹ ನೋಡಿದಾಗ ಆಯಾಸ ಕಾಣಿಸುವುದಿಲ್ಲ. ನಮಗೆ ಮತ್ತಷ್ಟು ಉತ್ಸಾಹ ಹೆಚ್ಚಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ. ರಸ್ತೆಯುದ್ದಕ್ಕೂ ಗ್ರಾಮಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ತಾಯಂದಿರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿ ಕೊಂಡು ಪಾದಯಾತ್ರೆ ವೀಕ್ಷಿಸಲು ಬರುತ್ತಿದ್ದಾರೆ.

ತಮ್ಮ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿ ಕೊಳ್ಳುತ್ತಿದ್ದಾರೆ. ಕಾರ್ಯಕರ್ತರ ಈ ಸ್ಪಂದನೆಗೆ ಪ್ರಮುಖ ಕಾರಣವೇನು?

ಬಿವೈವಿ: ರಾಜ್ಯ ಸರಕಾರದ ಕಾರ್ಯವೈಖರಿ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನ ಇದೆ. ಕಾಂಗ್ರೆಸ್ ಸರಕಾರ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ಜನರಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಮೂಡಿದೆ. ಪಾದಯಾತ್ರೆ ಕೇವಲ ಪ್ರಚಾರಕ್ಕಾಗಿ ನಡೆಯುತ್ತಿದ್ದರೆ ಇಷ್ಟು ದೊಡ್ಡ ಪ್ರಮಾಣ ದಲ್ಲಿ ಜನಸ್ಪಂದನೆ ಸಿಗುತ್ತಿರಲಿಲ್ಲ. ಇದೀಗ ಇದು ಜನಾಂದೋಲನವಾಗಿ ಪರಿವರ್ತನೆ ಯಾಗುತ್ತಿದೆ. ಸಮಾಜದ ವಿವಿಧ ವರ್ಗಗಳ ಜನರು ಸರಕಾರದ ಕಾರ್ಯವೈಖರಿ ಬಗ್ಗೆ ಬೇಸರ ಗೊಂಡಿರುವುದು ನಮಗೆ ಕಾಣಿಸುತ್ತಿದೆ.

ನಾಗೇಂದ್ರ ರಾಜೀನಾಮೆಗೂ, ಪಾದಯಾತ್ರೆಗೂ ಸಂಬಂಧವಿದೆಯೇ?

ಬಿವೈವಿ: ಅಧಿವೇಶನ ಮುಗಿದ ನಂತರ ಬಿಜೆಪಿ ಮನೆ ಸೇರಿಕೊಂಡು ಬಿಡುತ್ತದೆ, ನಾಗೇಂದ್ರ ವಿಚಾರವೂ ಮುಗಿದು ಹೋಗುತ್ತದೆ ಎಂದು ಸಿಎಂ ಶಿವಕುಮಾರ್ ಹಾಗೂ ಸರಕಾರ ಭಾವಿಸಿತ್ತು. ಆದರೆ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸಿದವು. ವಿರೋಧ ಪಕ್ಷದ ನಾಯಕರು ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದ ನಂತರ ಸರಕಾರ ಅಧಿವೇಶನವನ್ನು ಮೊಟಕುಗೊಳಿಸುವ ಪರಿಸ್ಥಿತಿ ಎದುರಾಯಿತು. ಅದರ ನಂತರ ಬಿಜೆಪಿ ಪಾದಯಾತ್ರೆ ಘೋಷಣೆ ಮಾಡಿತು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಒತ್ತಡ ಹೆಚ್ಚಾದ ಹಿನ್ನೆಲೆ ನಾಗೇಂದ್ರ ಅವರ ರಾಜೀನಾಮೆ ಸ್ವೀಕರಿಸುವ ತೀರ್ಮಾನಕ್ಕೆ ಸರಕಾರ ಬಂದಿದೆ ಎಂಬುದು ನನ್ನ ಅಭಿಪ್ರಾಯ.

ಪಾದಯಾತ್ರೆಗೆ ಬಿಜೆಪಿ ಹೈಕಮಾಂಡ್‌ನ ಅನುಮತಿ ಪಡೆದಿದ್ದೀರಾ?

ಬಿವೈವಿ: ಪಾದಯಾತ್ರೆ ಕೈಗೊಳ್ಳುವ ಮುನ್ನ ಪಕ್ಷದ ಹಿರಿಯ ನಾಯಕರು, ರಾಷ್ಟ್ರೀಯ ನಾಯಕ ರೊಂದಿಗೂ ಚರ್ಚೆ ನಡೆಸಿದ್ದೇನೆ. ರೈತರ ಸಮಸ್ಯೆ, ನಿರುದ್ಯೋಗ, ರಾಜ್ಯದ ಜ್ವಲಂತ ಸಮಸ್ಯೆಗಳು ಮತ್ತು ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವ ಬಗ್ಗೆ ನಾಯಕರಿಗೆ ತಿಳಿಸಿದ್ದೆ. ಈ ಹೋರಾಟ ಅಗತ್ಯವಿದೆ ಎಂದು ರಾಷ್ಟ್ರೀಯ ನಾಯಕರು ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಹೋರಾಟ ಮುಂದುವರಿಸಲು ಬೆಂಬಲ ನೀಡಿದ್ದಾರೆ.

ಪಾದಯಾತ್ರೆ ಮೂಲಕ ಒಗ್ಗಟ್ಟಿನ ಸಂದೇಶ ರವಾನೆ ಆಗಲಿದೆಯೇ?

ಬಿವೈವಿ: ಪಕ್ಷದಲ್ಲಿ ಸವಾಲುಗಳು ಮತ್ತು ಗೊಂದಲಗಳು ಇರುವುದು ಹೊಸದೇನಲ್ಲ. ಯುವಕರಿಗೆ ಅವಕಾಶ ಸಿಕ್ಕಾಗ ಇಂತಹ ಸವಾಲುಗಳು ಸಹಜ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ರಾಗಿದ್ದಾಗಲೂ, ಉಪಮುಖ್ಯ ಮಂತ್ರಿಯಾಗಿದ್ದಾಗಲೂ, ಮುಖ್ಯ ಮಂತ್ರಿಯಾಗಿದ್ದಾಗಲೂ ಪಕ್ಷ ಹಲವು ಬಿಕ್ಕಟ್ಟು ಗಳನ್ನು ಎದುರಿಸಿತ್ತು. ನಾನು ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಹೊಂದಿದ್ದೇನೆ. ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿ ದ್ದೇನೆ. ಕೆಲವು ವಿಚಾರಗಳು ಸರಿಯಾಗಲು ಸಮಯ ಬೇಕಾಗಬಹುದು. ಆದರೆ ಎಲ್ಲವೂ ಖಂಡಿತ ವಾಗಿ ಸರಿಯಾಗಲಿದೆ. ಖಂಡಿತ ಪಾದಯಾತ್ರೆ ಮೂಲಕ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಗಳು ಇಲ್ಲ ಎಂಬ ಸಂದೇಶ ರವಾನೆ ಆಗಲಿದೆ.

ಜೆ.ಪಿ.ನಡ್ಡಾ ಜತೆ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆದಿತ್ತೇ?

ಬಿವೈವಿ: ಬಿಜೆಪಿಯ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಂದರ್ಭ ದಲ್ಲಿ ಅವರು ನನ್ನನ್ನು ಪಕ್ಷದೊಳಗಿನ ಭಿನ್ನಮತದ ಬಗ್ಗೆ ಪ್ರಶ್ನಿಸಿ ರಾಜ್ಯ ನಾಯಕರ ಸಹಕಾರ ಹೇಗಿದೆ ಎಂದು ಕೇಳಿದ್ದರು. ನಾನು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಹೊಂದಿದ್ದೇನೆ. ಪಕ್ಷದ ಸಂಘ ಟನೆ ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಸವಾಲು ಗಳಿದ್ದರೂ ಅವುಗಳನ್ನು ಅವಕಾಶ ಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ನಂಬಿಕೆ ನನ್ನದು. ಪ್ರತಿಯೊಂದು ವಿಚಾರವನ್ನೂ ದೆಹಲಿಗೆ ತೆಗೆದುಕೊಂಡು ಹೋಗಿ ನಾಯಕರ ಬಗ್ಗೆ ದೂರು ನೀಡುವುದಕ್ಕಾಗಿ ಅಧ್ಯಕ್ಷನಾಗಿಲ್ಲ.

ರಾಜ್ಯದಲ್ಲಿ ಬರ ಇದೆ, ಸರಕಾರಕ್ಕೆ ನಿಮ್ಮ ಬೇಡಿಕೆ ಏನು?

ಬಿವೈವಿ: ಸರಕಾರ ಸುಮಾರು 104 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಯಾದಗಿರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೈತರು ಬೆಳೆ ಬಿತ್ತಿದ್ದರೂ ಬೆಳೆ ಕೈಗೆ ಬಂದಿಲ್ಲ. ಕೆಲವು ಕ್ಷೇತ್ರಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಬರದ ವಿಚಾರದಲ್ಲೂ ರಾಜಕೀಯ ಮಾಡಬಾ ರದು. ಎಷ್ಟು ತಾಲೂಕುಗಳು ನಿಜವಾಗಿಯೂ ಬರಪೀಡಿತವಾಗಿವೆ ಎಂಬು ದನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸೂಕ್ತ ಪರಿಹಾರ ಘೋಷಿಸಬೇಕು.

ಡಿಕೆಶಿ ಅವರ ಅಭಿವೃದ್ಧಿ ಮಾದರಿಯನ್ನು ನೀವು ಹೇಗೆ ನೋಡುತ್ತೀರಿ?

ಬಿವೈವಿ: ನಾನು ಡಿ.ಕೆ.ಶಿವಕುಮಾರ್ ಅವರ ಅಭಿವೃದ್ಧಿ ಮಾದರಿಯನ್ನು ವಿರೋಧಿಸುತ್ತೇನೆ. ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಕ್ಕೆ ನನ್ನ ವಿರೋಧವಿಲ್ಲ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ದೊಡ್ಡ ಅವಕಾಶವಿದೆ. ಅದನ್ನು ಅಭಿವೃದ್ಧಿಪಡಿಸಬೇಕು. ಆದರೆ ಅಭಿವೃದ್ಧಿ ಯೋಜನೆಗಳ ಹಿಂದೆ ವೈಯಕ್ತಿಕ ಹಿತಾಸಕ್ತಿ ಇರಬಾರದು ಎಂಬುದು ನನ್ನ ಅಭಿ ಪ್ರಾಯ. ಅದೇ ರೀತಿ ಕನಕಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರದಲ್ಲೂ ಸೂಕ್ತ ಸ್ಥಳದ ಆಯ್ಕೆ ಮುಖ್ಯ. ತುಮಕೂರುಶಿರಾ ಭಾಗದಂತಹ ಪ್ರದೇಶಗಳನ್ನೂ ಪರಿಗಣಿಸಬಹುದು. ಅಭಿವೃದ್ಧಿ ಯೋಜನೆಗಳು ಸಾರ್ವಜನಿಕ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡಿರಬೇಕು.

ನಿಮ್ಮ ಆರೋಪದ ಪ್ರಕಾರ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಅಭಿವೃದ್ಧಿ ಮಾದರಿ ಅನುಸರಿಸುತ್ತಿದ್ದಾರೆಯೇ?

ಬಿವೈವಿ: ಡಿಕೆಶಿ ‘ರಿಯಲ್ ಎಸ್ಟೇಟ್ ಮುಖ್ಯಮಂತ್ರಿ’ ಎಂಬ ಮಾತು ಜನಸಾಮಾನ್ಯರಲ್ಲಿಯೂ ಕೇಳಿಬರುತ್ತಿದೆ ಎಂದು ನಾನು ಹೇಳಿದ್ದೇನೆ. ಮುಖ್ಯಮಂತ್ರಿಗಳು ತಮ್ಮ ಅಥವಾ ಕುಟುಂಬದವರು ಯಾವುದೇ ಭೂಮಿ ಖರೀದಿಸಿಲ್ಲ, ಸಾರ್ವಜನಿಕ ಹಿತಾಸಕ್ತಿಯಿಂದಲೇ ಯೋಜನೆಗಳನ್ನು ಕೈಗೊಳ್ಳ ಲಾಗುತ್ತಿದೆ ಎಂದು ಬಹಿರಂಗ ವಾಗಿ ಸ್ಪಷ್ಟಪಡಿಸಬೇಕು. ಅಭಿವೃದ್ಧಿ ಯೋಜನೆಗಳು ಯಾವ ಪ್ರದೇಶದಲ್ಲಿ ಜಾರಿಯಾಗುತ್ತವೆ ಎಂಬುದರಿಂದ ಆ ಪ್ರದೇಶದ ಭೂಮಿಯ ಮೌಲ್ಯವೂ ಹೆಚ್ಚಾಗ ಬಹುದು. ಹೀಗಾಗಿ ಇಂತಹ ಯೋಜನೆಗಳಲ್ಲಿ ಪಾರದರ್ಶಕತೆ ಅತ್ಯಂತ ಮುಖ್ಯ.

ಬಿಡದಿ ವಿಚಾರದಲ್ಲಿ ಜೆಡಿಎಸ್‌ನಷ್ಟು ಬಿಜೆಪಿ ಆಕ್ರಮಣ ಕಾರಿಯಾಗಿಲ್ಲವೇ?

ಬಿವೈವಿ: ಹೋರಾಟದ ವಿಚಾರದಲ್ಲಿ ಬಿಜೆಪಿಗೆ ಮತ್ತು ಜೆಡಿಎಸ್ ನಡುವೆ ಯಾವುದೇ ಸಂಘರ್ಷ ವಿಲ್ಲ. ಕೆಲವು ವಿಚಾರಗಳನ್ನು ಜೆಡಿಎಸ್ ಮೊದಲೇ ಕೈಗೆತ್ತಿ ಕೊಂಡಿರಬಹುದು. ಉದಾಹರಣೆಗೆ ಬಿಡದಿ ವಿಚಾರದಲ್ಲಿ ಅವರು ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದಾರೆ. ಬಿಜೆಪಿ ನಾಯಕರು ಕೂಡ ಅಲ್ಲಿಗೆ ತೆರಳಿ ಸತ್ಯಾಗ್ರಹ ಮತ್ತು ಧರಣಿಯಲ್ಲಿ ಭಾಗವಹಿಸಿದ್ದಾರೆ. ಸದನದೊಳಗೆ ಬಿಜೆಪಿ ಮತ್ತು ಜೆಡಿಎಸ್ ಹಲವು ವಿಚಾರಗಳಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿವೆ. ಆದರೆ ಕೆಲವು ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.

ಮಂಗಳೂರು ರೈಲ್ವೆ ವಿಭಾಗಕ್ಕೆ ಸಂಬಂಧಿಸಿದ ಕೇಂದ್ರದ ನಿರ್ಧಾರವನ್ನು ಬಿಜೆಪಿ ಇನ್ನಷ್ಟು ಆಕ್ರಮಣ ಕಾರಿಯಾಗಿ ಜನರ ಮುಂದಿಡಬೇಕಿತ್ತು ಎನ್ನುವ ಅಭಿಪ್ರಾಯವಿದೆಯಲ್ಲ?

ಬಿವೈವಿ: ಮಂಗಳೂರಿಗೆ ಸಂಬಂಧಿಸಿದ ರೈಲ್ವೆ ವಿಚಾರದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಬೇಕು. ಇದು ಕೇವಲ ಮಂಗಳೂರಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ರೈಲ್ವೆ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಗೂ ಇದರಿಂದ ಪ್ರಯೋಜನವಾಗಬಹುದು. ಮಂಗಳೂರಿನ ಜನಪ್ರತಿನಿಧಿಗಳು ಮತ್ತು ಸಂಸದರು ನಡೆಸಿದ ಪ್ರಯತ್ನದಿಂದ ಉತ್ತಮ ನಿರ್ಧಾರ ಬಂದಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.

ಜಲ ವಿವಾದಗಳಲ್ಲಿ ಕೇಂದ್ರದ ಮೇಲೆ ರಾಜ್ಯ ಬಿಜೆಪಿ ಒತ್ತಡ ಹೇರುವ ಅಗತ್ಯವಿಲ್ಲವೇ?

ಬಿವೈವಿ: ಕಾವೇರಿ, ಮಹದಾಯಿ, ಕೃಷ್ಣಾ ಜಲ ವಿವಾದಗಳು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಬಂದ ನಂತರ ಆರಂಭವಾದವುಗಳಲ್ಲ. ಹಲವು ದಶಕಗಳಿಂದ ಇರುವ ಸಮಸ್ಯೆಗಳಿವು. ಹಲವು ವರ್ಷಗಳಿಂದ ಇರುವ ಎಲ್ಲ ಸಮಸ್ಯೆಗಳನ್ನು ಕೇವಲ ಹತ್ತು ವರ್ಷಗಳಲ್ಲಿ ಪರಿಹರಿಸುವುದು ಸುಲಭವಲ್ಲ. ಆದರೂ ಕೇಂದ್ರ ಸರಕಾರದ ಅವಽಯಲ್ಲಿ ಹಲವು ವಿಚಾರಗಳಲ್ಲಿ ಕರ್ನಾಟಕ ಒಂದು ಹೆಜ್ಜೆ ಮುಂದೆ ಹೋಗಿದೆ. ಉಳಿದ ಸಮಸ್ಯೆಗಳಿಗೂ ಶೀಘ್ರ ಪರಿಹಾರ ದೊರೆಯಬೇಕು ಎಂಬುದು ನಮ್ಮ ಆಶಯ.

ಪಾದಯಾತ್ರೆ ವೇಳೆ ಕುರಿಗಾಹಿಗಳು, ಹಿಂದುಳಿದ ವರ್ಗದ ವರನ್ನು ಭೇಟಿ ಮಾಡಿದ್ದೀರಿ ಅವರ ಸಮಸ್ಯೆಗಳೇನು?

ಬಿವೈವಿ: ಅವರ ಪರಿಸ್ಥಿತಿ ನೋಡಿದಾಗ ಬೇಸರವಾಗುತ್ತದೆ. ಕಾಂಗ್ರೆಸ್ ಸರಕಾರ ಅವರ ಸಮಸ್ಯೆ ಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಭಾವನೆ ಇದೆ. ಅನುಗ್ರಹ ಯೋಜನೆಯಡಿ ಹಿಂದಿನ ಸರಕಾರದ ಅವಽಯಲ್ಲಿ ಬಾಕಿ ಉಳಿದಿದ್ದ ಪರಿಹಾರವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಮತ್ತೆ ಹಣ ಬಾಕಿ ಉಳಿದಿದೆ. ಕುರಿಗಳು ಮೃತಪಟ್ಟಾಗ ಅಥವಾ ಇತರ ಕಾರಣಗಳಿಂದ ನಷ್ಟವಾದಾಗ ಪರಿಹಾರ ನೀಡುವುದರಲ್ಲಿಯೂ ಸರಕಾರ ವಿಫಲವಾಗಿದೆ ಎಂಬ ಆರೋಪವಿದೆ. ಅವರ ಮಕ್ಕಳ ಶಿಕ್ಷಣ, ಕುಟುಂಬದ ಭದ್ರತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಸಮುದಾಯದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ.

ಪಾದಯಾತ್ರೆ ಬಿಜೆಪಿಗೆ ಹೊಸ ದಿಶೆ ನೀಡಬಹುದೇ?

ಬಿವೈವಿ: ಪಾದಯಾತ್ರೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಮಾತ್ರವಲ್ಲ, ಸಾಮಾನ್ಯ ಜನರಲ್ಲೂ ಉತ್ಸಾಹ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪಾದಯಾತ್ರೆಯ ಬಗ್ಗೆ ಚರ್ಚೆಯಾಗು ತ್ತಿದೆ. ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಕೆಲವು ಸಂದರ್ಭಗಳಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸು ತ್ತಿದ್ದಾರೆ. ಇದು ನಮಗೆ ತೃಪ್ತಿ ನೀಡಿದೆ. ಆದರೆ ಪಕ್ಷದ ಮುಂದೆ ಇನ್ನೂ ಸಾಕಷ್ಟು ಕೆಲಸವಿದೆ.

ಪಾದಯಾತ್ರೆಯಿಂದ ಬಿಜೆಪಿಗೆ ಏನು ಸಂದೇಶ?

ಬಿವೈವಿ: ನನ್ನ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ಕೇವಲ ಸರಕಾರದ ವಿರುದ್ಧದ ಪ್ರತಿಭಟನೆಯಾಗಿ ಉಳಿಯುತ್ತದೆಯೇ ಅಥವಾ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ರಾಜಕೀಯ ಹೆಜ್ಜೆಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಪಾದಯಾತ್ರೆಯ ಮೂಲಕ ರೈತರು, ಯುವಕರು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೇ ವೇಳೆ ಪಕ್ಷ ದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಸಂಘಟನೆ ಕಟ್ಟುವ ಸವಾಲೂ ರಾಜ್ಯ ಬಿಜೆಪಿ ಮುಂದಿದೆ. ಪಾದಯಾತ್ರೆ ಮುಕ್ತಾಯಗೊಂಡ ಬಳಿಕ ಅದು ಬಿಜೆಪಿಗೆ ಎಷ್ಟು ರಾಜಕೀಯ ಲಾಭ ತಂದುಕೊಡಲಿದೆ ಮತ್ತು ಜನರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದಕ್ಕೆ ಮುಂದಿನ ದಿನಗಳೇ ಉತ್ತರ ನೀಡಲಿವೆ.

ಭ್ರಷ್ಟಾಚಾರದ ವಿರುದ್ಧ ಜನಾರ್ದನ ರೆಡ್ಡಿ ಮಾತನಾಡುವುದು ವ್ಯಂಗ್ಯವಲ್ಲವೇ?

ಬಿವೈವಿ: ಇದು ಕೇವಲ ಜನಾರ್ದನ ರೆಡ್ಡಿ ಅವರ ವಿಚಾರವಲ್ಲ. ನಮ್ಮ ಹೋರಾಟದಲ್ಲಿ ಪಕ್ಷದ ಹಲವು ಹಿರಿಯ ನಾಯಕರು ಭಾಗವಹಿಸಿದ್ದಾರೆ. ಯಾರೊಬ್ಬರ ವಿರುದ್ಧ ಆರೋಪಗಳಿವೆ ಎಂಬ ಕಾರಣಕ್ಕೆ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬಾರದು ಎನ್ನಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಅವರ ಮೇಲೂ ಹಲವು ಪ್ರಕರಣಗಳು ದಾಖಲಾಗಿದ್ದವು. ರಾಜಕೀಯ ಕಾರಣ ಗಳಿಂದ ಅವರ ವಿರುದ್ಧ ಆರೋಪ ಗಳನ್ನು ಮಾಡಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆ ಯ ಬಳಿಕ ಹಲವು ಆರೋಪಗಳಿಂದ ಅವರು ನಿರಪರಾಧಿ ಎಂದು ತೀರ್ಪು ಬಂದಿದೆ. ರಾಜಕೀಯ ದಲ್ಲಿ ಆರೋಪಗಳು ಬರುವುದು ಸಹಜ. ಆದರೆ ಆರೋಪಗಳ ನಡುವೆ ಎಚ್ಚರಿಕೆಯಿಂದ ಮುಂದುವರಿಯುವುದು ಅಗತ್ಯ.