Roopa Gururaj Column: ಸಹಸ್ರ ಕವಚ ಇದ್ದರೂ ಅಮರನಾಗದ ಡಂಭೋತ್ಸವ
ರಾಕ್ಷಸನ ಹಿಂಸೆ ತಾಳಲಾರದೆ ಋಷಿಮುನಿಗಳೆಲ್ಲ ಹೋಗಿ ದೇವೇಂದ್ರನ ಸಹಾಯ ಕೇಳಿದರು. ಇಂದ್ರನು ಅವರೆಲ್ಲರನ್ನು ಕರೆದು ಕೊಂಡು ಮಹಾವಿಷ್ಣುವಿನ ಬಳಿ ಬಂದನು. ಆಗ ವಿಷ್ಣು, “ನನ್ನ ಅಂಶವನ್ನು ಪಡೆದ ನರ-ನಾರಾಯಣ ಎಂಬ ಅವಳಿ ಸಹೋದರರು ಭೂಮಿಯ ಮೇಲೆ ಜನಿಸುತ್ತಾರೆ. ಅವರಿಂದ ಸಹಸ್ರ ಕವಚ ರಾಕ್ಷಸನ ಸಂಹಾರವಾಗುತ್ತದೆ" ಎಂದನು.

-

ಒಂದೊಳ್ಳೆ ಮಾತು
‘ಸಹಸ್ರಕವಚ’ ಎಂಬ ರಾಕ್ಷಸನಿದ್ದ. ಅವನನ್ನು ಯಾರಿಂದಲೂ ಸಂಹಾರ ಮಾಡಲು ಸಾಧ್ಯ ವಿರಲಿಲ್ಲ. ಸಹಸ್ರಕವಚ ರಾಕ್ಷಸನು ಪೂರ್ವದಲ್ಲಿ ಡಂಬೋದ್ಭವನೆಂಬ ಅಸುರ ರಾಜನಾಗಿದ್ದ ತುಂಬಾ ಬಲಶಾಲಿ, ಪರಾಕ್ರಮಿ. ಹೀಗಾಗಿ ಎಲ್ಲಾ ರಾಜ್ಯಗಳನ್ನು ತನ್ನ ವಶಪಡಿಸಿಕೊಂಡು ಪ್ರಜೆ ಗಳಿಗೆ ಅನೇಕ ತರಹದ ಕಷ್ಟಕೊಟ್ಟು ಹಿಂಸೆ ನೀಡುತ್ತಿದ್ದ.
ಇವನಿಗೆ ಒಮ್ಮೆ ಒಂದು ಅನುಮಾನ ಬಂದಿತು. ತಾನು ಎದರೂ ಸತ್ತು ಹೋದರೆ ಇಷ್ಟೆ ರಾಜ್ಯವನ್ನು ಸಂಪಾದಿಸಿ ಸುಖಪಡುತ್ತಿರುವ ತನಗೆ ಈ ಸುಖವೆಲ್ಲ ತಪ್ಪಿ ಹೋಗುತ್ತದೆ. ಆದ್ದರಿಂದ ಸಾವೇ ಇಲ್ಲದಂಥ ವರ ಪಡೆಯಬೇಕೆಂದು ಸೂರ್ಯನನ್ನು ಕುರಿತು ಘೋರ ತಪಸ್ಸನ್ನು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿದ ಸೂರ್ಯ ದೇವನು ಪ್ರತ್ಯಕ್ಷನಾಗಿ, “ಅಮರನಾಗಬೇಕೆಂಬ ವರವನ್ನು ಬಿಟ್ಟು ಬೇರೆ ಏನಾದರೂ ಕೇಳು" ಎಂದನು.
ಅಸುರ ರಾಜ ಬಹಳ ಯೋಚಿಸಿ, “ನನಗೆ ರಕ್ಷಣೆಯಾಗುವಂಥ ಸಾವಿರ ಕವಚಗಳನ್ನು ಅನುಗ್ರಹಿಸು, ನನ್ನ ಈ ಸಾವಿರ ಕವಚಗಳನ್ನು ಸೀಳುವವನು ಕನಿಷ್ಠಪಕ್ಷ ಸಾವಿರ ವರ್ಷಗಳಾದರೂ ತಪಸ್ಸು ಮಾಡಿರಬೇಕು. ಆ ವ್ಯಕ್ತಿ ಸಾವಿರ ವರ್ಷಗಳ ಕಾಲ ನನ್ನೊಡನೆ ಯುದ್ಧ ಮಾಡಿ ಆ ಕವಚವನ್ನು ಮುರಿಯಬೇಕು. ನನ್ನ ಒಂದು ಕವಚವನ್ನು ಮುರಿದರೆ ಆತ ತಕ್ಷಣ ಅಲ್ಲಿಯೇ ಮರಣ ಹೊಂದ ಬೇಕು" ಎಂಬ ವರವನ್ನು ಕೇಳಿ ಪಡೆದುಕೊಂಡನು.
ಇದನ್ನೂ ಓದಿ: Roopa Gururaj Column: ಮಹಾನವಮಿಯಂದು ಪೂಜೆಗೊಳ್ಳುವ ಬನ್ನಿ ಮರದ ಮಹತ್ವ
ವರ ಪಡೆದ ಮೇಲೆ ಆತನ ದರ್ಪ, ಕೆಟ್ಟತನ ನೂರು ಪಟ್ಟಾಯಿತು. ರಾಕ್ಷಸನ ಹಿಂಸೆ ತಾಳಲಾರದೆ ಋಷಿಮುನಿಗಳೆಲ್ಲ ಹೋಗಿ ದೇವೇಂದ್ರನ ಸಹಾಯ ಕೇಳಿದರು. ಇಂದ್ರನು ಅವರೆಲ್ಲರನ್ನು ಕರೆದು ಕೊಂಡು ಮಹಾವಿಷ್ಣುವಿನ ಬಳಿ ಬಂದನು. ಆಗ ವಿಷ್ಣು, “ನನ್ನ ಅಂಶವನ್ನು ಪಡೆದ ನರ-ನಾರಾಯಣ ಎಂಬ ಅವಳಿ ಸಹೋದರರು ಭೂಮಿಯ ಮೇಲೆ ಜನಿಸುತ್ತಾರೆ. ಅವರಿಂದ ಸಹಸ್ರ ಕವಚ ರಾಕ್ಷಸನ ಸಂಹಾರವಾಗುತ್ತದೆ" ಎಂದನು.
ನರ-ನಾರಾಯಣರು ದೈವಾಂಶ ಸಂಭೂತರಾದ ಮುನಿದ್ವಯರು. ಅವಳಿ ಜವಳಿಗಳಾದ ಅವರು ಭೂಮಿಯಲ್ಲಿ ಜನಿಸಿ ಸಾವಿರಾರು ವರ್ಷ ತಪಸ್ಸು ಮಾಡಿ ಸಹಸ್ರಕವಚನನ್ನು ಎದುರಿಸಲು ಸಜ್ಜಾದರು. ಇವರಿಬ್ಬರಲ್ಲಿ ಒಬ್ಬನು ಸಾವಿರ ವರ್ಷ ತಪಸ್ಸು ಮಾಡಿ, ಸಾವಿರ ವರ್ಷಗಳ ಕಾಲ ಆ ರಾಕ್ಷಸನೊಡನೆ ಯುದ್ಧ ಮಾಡಿದನು.
ರಾಕ್ಷಸನ ಒಂದು ಕವಚ ಮುರಿಯುತ್ತಿದ್ದಂತೆ ಅವನು ಮರಣಿಸಿದನು. ಆಗ ಇನ್ನೊಬ್ಬನು ಸಾವಿರ ವರ್ಷ ತಪಸ್ಸು ಮಾಡಿ ಬಂದು ಮರಣ ಹೊಂದಿದ ಸಹೋದರನನ್ನು ಬದುಕಿಸಿದನು. ಮತ್ತು ಸಹಸ್ರಕವಚನೊಡನೆ ಯುದ್ಧಕ್ಕೆ ಹೊರಟನು. ಬದುಕಿದ ಆ ಸಹೋದರ ತಪಸ್ಸು ಮಾಡಲು ಹೋದನು. ಅವನು ತಪಸ್ಸು ಮುಗಿಸಿ, ಮರಣಿಸಿದ ಸಹೋದರ ನನ್ನು ಬದುಕಿಸಿ ಸಾವಿರ ವರ್ಷ ಯುದ್ಧಕ್ಕೆ ಹೋಗುತ್ತಿದ್ದ.
ಬದುಕಿದ ಸಹೋದರ ತಪಸ್ಸಿಗೆ ಬರುತ್ತಿದ್ದ. ಈ ರೀತಿಯಾಗಿ ಒಬ್ಬರಾಗುತ್ತಲೇ ಒಬ್ಬರು ಯುದ್ಧ ಮಾಡುವುದು, ಒಬ್ಬರಾಗುತ್ತಲೇ ಒಬ್ಬರು ತಪಸ್ಸು ಮಾಡುವುದು ಮಾಡಿ ಸಹಸ್ರಕವಚನ 999 ಕವಚಗಳನ್ನು ಛೇದಿಸಿದರು. ಈಗ ರಾಕ್ಷಸನು, ತನಗೆ ಇರುವುದು ಇನ್ನೊಂದೇ ಕವಚ.
ಯುದ್ಧ ಮಾಡಿದರೆ ಆ ಒಂದು ಕವಚವೂ ಹೋಗುತ್ತದೆ. ಆಮೇಲೆ ತಾನು ಮರಣಿಸುವುದು ಖಚಿತ ಎಂದುಕೊಂಡು ಸೂರ್ಯದೇವನಲ್ಲಿ ತನಗೆ ರಕ್ಷಣೆ ನೀಡಬೇಕೆಂದು ಕೇಳಿಕೊಂಡ. ಸೂರ್ಯನು ರಾಕ್ಷಸನ ಸ್ಥಿತಿಯನ್ನು ನೋಡಿ ಕರುಣೆಯಿಂದ ರಕ್ಷಣೆ ನೀಡಿದನು. ಇದರಿಂದಾಗಿ ಸಹಸ್ರಕವಚನನ್ನು ನರ-ನಾರಾಯಣರು ಕೊಲ್ಲಲಾಗಲಿಲ್ಲ.
ಆಗ ವಿಷ್ಣುವು, “ಸಹಸ್ರಕವಚನ ಅಂಶವು ಸೂರ್ಯ ದೇವನ ಐಕ್ಯವಾಗಲಿ, ಮುಂದಿನ ಜನ್ಮದಲ್ಲಿ ಸೂರ್ಯಪುತ್ರನಾಗೇ ಜನಿಸಲಿ, ಒಂದು ಮಹಾಯುದ್ಧದಲ್ಲಿ ಮಾನವನ ಕೈಯಿಂದ ಮರಣಿಸುತ್ತಾನೆ" ಎಂದು ಹೇಳಿದನು. ಮಹಾವಿಷ್ಣುವಿನ ವರದಂತೆ, ಆತ ಮಹಾಭಾರತದಲ್ಲಿ ಕುಂತಿಯ ಮಗ ಕರ್ಣ ನಾಗಿ ಜನಿಸಿದನು. ಹಿಂದಿನ ಜನ್ಮದಲ್ಲಿ ಉಳಿದಿದ್ದ ಒಂದು ಕವಚವು ಹುಟ್ಟುವಾಗಲೇ ಅವನ ಜತೆ ಬಂದಿತ್ತು.
ಸೂರ್ಯಪುತ್ರನಾಗಿ ಜನಿಸಿದ ಕಾರಣದಿಂದ ಅವನಲ್ಲಿ ಬಹಳಷ್ಟು ಒಳ್ಳೆಯ ಗುಣಗಳು ಇದ್ದರೂ, ಪೂರ್ವಜನ್ಮದಲ್ಲಿ ರಾಕ್ಷಸನಾಗಿ ಮಾಡಿದ ಕರ್ಮಫಲದಿಂದಾಗಿ ಅವನು ತನ್ನ ತಾಯಿಯಿಂದಲೂ ದೂರಾಗಿ, ಮುಂದೆ ಹಲವಾರು ಕಷ್ಟಗಳನ್ನು ಎದುರಿಸಿದ, ಜತೆಗೆ ಹಲವಾರು ಶಾಪಗಳಿಗೂ ಗುರಿ ಯಾದ.
ಮಹಾಭಾರತದ ಯುದ್ಧದಲ್ಲಿ ಕೃಷ್ಣನ ಸಾರಥ್ಯವನ್ನು ಪಡೆದಿದ್ದ ಮನುಷ್ಯ ಅರ್ಜುನನಿಂದ ಆತ ಹತನಾದನು. ನಾವು ಅದೆಷ್ಟೇ ಪ್ರಭಾವಶಾಲಿಗಳಾಗಿರಲಿ ನಮ್ಮ ಪಾಪಗಳ ಕರ್ಮವು ನಮ್ಮನ್ನು ಬಾಧಿಸದೆ ಬಿಡುವುದಿಲ್ಲ. ಕರ್ಮಫಲಕ್ಕೆ ಜನ್ಮಜನ್ಮಾಂತರದ ಲೆಕ್ಕವೂ ಇರುತ್ತದೆ. ಒಳಿತಿನ ದಾರಿಯಲ್ಲಿ ಮಾತ್ರ ಸುಖವಿದೆ ಎಂಬುದನ್ನು ಮರೆಯದಿರೋಣ.