Hari Paraak Column: ಎಲ್ಲಾ ಕಡೆ ಬರೀ ಮ್ಯಾಕ್ಸ್, ಟ್ಯಾನ್ಸ್‌ನದ್ದೇ ಟಾಕ್ಸ್
ಹೆಸರಿಗೆ ಮ್ಯಾಕ್ಸ್ ಬುಕ್ ಆದ್ರೂ ಮನರಂಜನೆಗೆ ಹಲವು ವಿಂಡೋಸ್ ಇವೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಆದ್ರೂ
Ashok Nayak
December 29, 2024
ತುಂಟರಗಾಳಿ
ಸಿನಿಗನ್ನಡಮ್ಯಾಕ್ಸ್’ ಚಿತ್ರದ ಮೂಲಕ ವಿಜಯ್ ಕಾರ್ತಿಕೇಯ ಅವರು ತಮ್ಮ ನಿರ್ದೇಶನದಲ್ಲಿ ಸುದೀಪ್ ಅವರಿಗೋಸ್ಕರ ಒನ್ ನೈಟ್ ತೆಗೆದುಕೊಂಡಿದ್ದಾರೆ ಮತ್ತು ಅದು ಔಟ್ ಸ್ಟ್ಯಾಂಡಿಂಗ್ ಅನ್ನೋ ಮಟ್ಟದಲ್ಲಿ ಇದೆ. ಇದು ಒಂದು ರಾತ್ರಿಯಲ್ಲಿ ನಡೆಯೋ ಕಥೆ. ಪೊಲೀಸ್ ಅಧಿಕಾರಿಯಾದ ಸುದೀಪ್ ಚಾರ್ಜ್ ತೆಗೆದುಕೊಳ್ಳುವ ಮುನ್ನವೇ ವಿಲನ್‌ಗಳ ಮೇಲೆ ಮಾಡುವ ಚಾರ್ಜ್ ಈ ಚಿತ್ರದ ಕಥೆಯ ಹೂರಣ. ಚಾರ್ಜ್ ತೆಗೆದುಕೊಳ್ಳದೇನೇ ಇಷ್ಟೊಂದು ಕೆಲಸ ಮಾಡೋ ನಾನು ಚಾರ್ಜ್ ತಗೊಂಡ್ರೆ ಇನ್ನೇನ್ ಮಾಡಬಹುದು ನೋಡಿ ಅನ್ನೋ ಲೆವೆಲ್ಲಿಗೆ ಚಿತ್ರವನ್ನು ಆವರಿಸಿಕೊಂಡಿದ್ದಾರೆ ಕಿಚ್ಚ ಸುದೀಪ್. ಹಾಗಾಗಿ ಇಡೀ ಸಿನಿಮಾ ‘ಕಿಚ್ಚಾರ್ಪಣಮಸ್ತು’ ಆಗಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯಲ್ಲಿ ತಮ್ಮ ಸಂಪೂರ್ಣ ಪ್ರತಿಭೆ ತೋರಿಸಿರೋ ಸುದೀಪ್, ತಾವು ರಾತ್ರೋರಾತ್ರಿ ಆದ ಸ್ಟಾರ್ ಅಲ್ಲ ಅಂತ ನಿರೂಪಿಸಿದ್ದಾರೆ.
ಅವರನ್ನ ತೆರೆಯ ಮೇಲೆ ನೋಡೋದೇ ಒಂದು ಹಬ್ಬ. ಭಾರತೀಯ ಚಿತ್ರರಂಗದಲ್ಲಿ ‘ಒನ್ ಆಫ್ ದಿ ಸ್ಟೈಲಿಷ್ ಸ್ಟಾರ‍್ಸ್’ ಅನ್ನಿಸಿಕೊಂಡಿರೋ ಸುದೀಪ್ ಕತ್ತಲೆಯ ನಡೆಯುವ ಈ ಚಿತ್ರದಲ್ಲಿ ಕತ್ತಲಲ್ಲಿ ಹೊಳೆಯುವ ಸ್ಟಾರ್ ಆಗಿ ಅಕ್ಷರಶಃ ಮಿಂಚುತ್ತಾರೆ. ಈ ‘ಮ್ಯಾಕ್ಸ್ ಬುಕ್’ನಲ್ಲಿ ಹಲವು ಚಾಪ್ಟರ್‌ಗಳಿವೆ. ಹೆಸರಿಗೆ ಮ್ಯಾಕ್ಸ್ ಬುಕ್ ಆದ್ರೂ ಮನರಂಜನೆಗೆ ಹಲವು ವಿಂಡೋಸ್ ಇವೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಆದ್ರೂ ಸುದೀಪ್ ಅವರ ಮುಖದಲ್ಲಿ ಮತ್ತು ಅಭಿನಯದಲ್ಲಿ ನೈಟ್ ಶಿಫ್ಟ್ ಮಾಡಿದ ಸುಸ್ತು ಕಾಣಿಸೋದಿಲ್ಲ.
‘ಅಭಿನಯ ಚಕ್ರವರ್ತಿ’ ಅನ್ನೋ ಅವರ ಬಿರುದಿಗೆ ಲೋಪ ಬಂದಿಲ್ಲ. ಆದರೆ ಟೈಟಲ್ ಕಾರ್ಡ್‌ನಲ್ಲಿ ಮಾತ್ರ ‘ಅಭಿನಯ ಚತ್ರವರ್ತಿ’ ಆಗಿರೋದು ಅಕ್ಷಮ್ಯ. ಒಟ್ಟಾರೆ ಹೇಳೋದಾದ್ರೆ, ‘ವಿಕ್ರಾಂತ್ ರೋಣ’ ರಿಲೀಸ್ ಆದಮೇಲೆ, ಸುದೀಪ್ ಅವರ ಸಿನಿಮಾಗಳು ಇಲ್ಲದೇ, ಅಂಗ ಡಿಗಳಲ್ಲಿ ‘ರಿಸೀ ರುಪೀಸ್ 27 ಆನ್ ಪೋನ್ ಪೇ’ ಅನ್ನೋ ವಾಯ್ಸ ಅನ್ನೇ ಕೇಳಿ ಸಮಾಧಾನ ಮಾಡಿಕೊಳ್ಳುತ್ತಿದ್ದ ಸುದೀಪ್ ಅಭಿಮಾನಿಗಳಿಗೆ ಮ್ಯಾಕ್ಸ್ ಮೂಲಕ ಸಮಾಧಾನಕರ ಬಹುಮಾನ ಅಲ್ಲ, ದೊಡ್ಡ ಕ್ಯಾಷ್ ಬ್ಯಾಕೇ ಸಿಕ್ಕಿದಂತಾಗಿದೆ.
ಲೂಸ್ ಟಾಕ್ -ಕರೋನಾ ವೈರಸ್
ಏನ್ರೀ ಸ್ವಾಮಿ, ಮತ್ತೆ ಬರ್ತಾ ಇದ್ದೀರ ಅಂತ ಸುದ್ದಿ ಆಗ್ತಾ ಇದೆ. ನಿಜಾನಾ?
ಏನ್ ಮಾಡೋದು, ನಾನ್ ಬರಲ್ಲ ಅಂದ್ರೂ ನಿಮ್ಮ ಸರಕಾರದೋರು, ಟಿವಿ ಚಾನೆಲ್‌ಗಳವರು ನನ್ನಬಿಡಲ್ವಲ್ಲ, ಮತ್ತೆ ಮತ್ತೆ ‘ಕರೋನಾ ಪ್ಯಾರ್ ಹೈ’ ಅಂತಿರ್ತಾರೆ.
ಏನೋ, ಅಂತೂ ನಮ್ಮ ಜನ ಮತ್ತೆ ನೀನ್ ಬರ್ತೀಯಾ ಅಂತ ಹೆದರಿಕೊಂಡಿದ್ದಾರೆ
ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸಮಸ್ಯೆ ಇಲ್ಲ, ‘ಲಸಿಕೆ’ ಹಾಕಿಸಿಕೊಳ್ಳೋಕೆ ‘ಆಲಸಿಕೆ’ ತೋರಿಸಿದವರುಅನುಭವಿಸ್ತಾರೆ
ಅಲ್ಲ, ನೀನ್ ಯಾಕೆ ಹಿಂಗೆ ಹೇಳದೇ ಕೇಳದೇ ಬರೋದು?
‘ಹೇಳಿ ಹೋಗು ಕಾರಣ’ ಥರ, ಇನ್ನೂ ಯಾರೂ ನಂಗೆ ‘ಹೇಳಿ ಬಾ ಕರೋನಾ’ ಅಂತ ಹೇಳಿಲ್ಲ ಅದಕ್ಕೇ
ಅದ್ಸರಿ, ಇಯರ್ ಎಂಡ ನಿನ್ ಹವಾ ಜಾಸ್ತಿ ಅಲ್ವಾ, ಯಾಕೆ?
ಪ್ರತಿ ಎಂಡಿನಲ್ಲು ಸ್ಟಾರ್ಟು ಇರ್ತದೆ ಅಂತ ಯೋಗರಾಜ್ ಭಟ್ರೇ ಹೇಳಿಲ್ವಾ?
ಆದ್ರೂ, ಮತ್ತೆ ಲಾಕ್ ಡೌನು, ಸೀಲ್ ಡೌನು ಅಂತಾದ್ರೆ ನಮ್ಮ ಜನಗಳಿಗೆ ಕಷ್ಟ ಆಗಲ್ವಾ?
ನೋಡಪ್ಪಾ, ಕರೋನಾ ಮನುಷ್ಯನಿಗೆ ಬರದೆ, ಮರಕ್ಕಾ ಬರುತ್ತೆ? ಹೃದಯ ಮತ್ತು ಶ್ವಾಸಕೋಶ ಎರಡನ್ನೂಗಟ್ಟಿ ಮಾಡ್ಕೊಂಡು ಎನೂ ಎದುರಿಸಬೇಕಪ್ಪಾ
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗೇ ಇತ್ತು. ಎಲ್ಲ ಕಡೆ ಪ್ರಚಾರದ ಹವಾ. ಖೇಮು ಕೂಡ ಎಲೆಕ್ಷನ್ನಲ್ಲಿ ಬ್ಯುಸಿ ಯಾಗಿದ್ದ. ಒಂದು ದಿನ ಬೆಳಗ್ಗೆ ಹೀಗೇ ತಮ್ಮ ಪಕ್ಷದ ಕಾರ್ಯಕರ್ತರೊಡನೆ ಊರಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿಗೆ ಸೋಮು ಬಂದ. ಅದಾಗಲೇ ಪುಲ್ ಟೈಟಾಗಿದ್ದ ಪಾರ್ಟಿ, ಖೇಮು ಹತ್ರ ಬಂದು ‘ಸರ್, ನೀವು ನಮ್ ಪಾರ್ಟಿಗೇ ವೋಟ್ ಹಾಕ್ಬೇಕು, ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’ ಅಂದ. ಅದನ್ನು ಕೇಳಿದ ಖೇಮುಗೆ ಕೆಂಡಾಮಂಡಲ ಸಿಟ್ಟು ಬಂತು. ಒಂದೇ ಸಮನೆ ಸೋಮುವನ್ನು ಹಿಡಿದು ಹಿಗ್ಗಾಮುಗ್ಗ ಬಾರಿಸತೊಡಗಿದ. ಸರಿ ಸೋಮು ಅಲ್ಲಿಂದ ಎಸ್ಕೇಪ್. ನಂತರ ಮಧ್ಯಾಹ್ನದ ಹೊತ್ತಿಗೆ ಸೋಮು ಮತ್ತೆ ಖೇಮು ಮುಂದೆ ಹಾಜರಾದ. ಈಗಲೂ ಪುಲ್ ಟೈಟು. ಈಗಲೂ ಅದೇ ಡೈಲಾಗು. ‘ಸರ್, ನೀವು ನಮ್ ಪಾರ್ಟಿಗೇ ವೋಟ್ ಹಾಕ್ಟೇಕು, ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’. ಮತ್ತೆ ಖೇಮು ಕಡೆಯಿಂದ ಅವನಿಗೆ ಧರ್ಮದೇಟುಗಳು ಬಿದ್ದವು.
ಮತ್ತೆ ಸೋಮು ಎಸ್ಕೇಪ್. ಸಂಜೆ ಇನ್ನೇನು ಕತ್ತಲಾಗಿ ಸ್ವಲ್ಪ ಹೊತ್ತು ಕಳೆದು ಪ್ರಚಾರ ಮುಗಿಯುವ ಹಂತಕ್ಕೆಬಂದಿತ್ತು. ಖೇಮು ಬಳಿಗೆ ಮತ್ತೆ ಬಂದ ಸೋಮು ಅದಾಗಲೇ ಸಾಕಷ್ಟು ಬಾರಿ ‘ರಿಪೀಟ್’ ಆರ್ಡರ್ ಮಾಡಿ ಇನ್ನಷ್ಟು ಟೈಟ್ ಆಗಿ, ಸೇಮ್ ಡೈಲಾಗ್ ‘ರಿಪೀಟ್’ ಮಾಡಿದ- ‘ಸರ್, ನೀವು ನಮ್ ಪಾರ್ಟಿಗೇ ವೋಟ್ ಹಾಕ್ಟೇಕು. ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’. ಖೇಮುಗೆ ಮತ್ತೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಇನ್ನೇನು ಹೊಡೆಯಲು ಕೈ ಎತ್ತಬೇಕು, ಅಷ್ಟರಲ್ಲಿ ಖೇಮು ಪಕ್ಕದಲ್ಲಿದ್ದವರು ಕೇಳಿದರು, ‘ಅಲ್ರೀ ಖೇಮು, ಪಾಪ ಅವನಿಗೆ ಯಾಕ್ರೀ ಹೊಡೀತೀರ? ಏನೋ ವೋಟ್ ಕೇಳ್ತಾವೆ. ಹಾಕಂಗಿದ್ರೆ ಹಾಕಿ, ಇಂದ್ರೆ ಬಿಟ್ಟಾಕಿ.
ಪಾಪ ಅದಕ್ಯಾಕೆ ಅವನಿಗೆ ಧರ್ಮದೇಟು ಹಾಕ್ತೀರಿ. ಪಾಪ, ನಾನು ನಿಮ್ ತಮ್ಮ ಇದ್ದಂಗೆ ಅಂತ ತಿಳ್ಳಳಿ ಅಂತ ಬೇರೆ ಅಂತಿದಾನೆ. ಅದಕ್ಕಾದರೂ ಕರುಣೆ ಬೇಡ್ವಾ?’. ಅದಕ್ಕೆ ಖೇಮು ಹೇಳಿದ ‘ಹೊಡೀತಾ ಇರೋದು ಅದಕ್ಕೇನೇ, ವೋಟ್ ಕೇಳಿದ್ದಕ್ಕೆ ಬೇಜಾರಿಲ್ಲ, ಅದ್ ಬಿಟ್ಟು ತಮ್ಮ ಇದ್ದಂಗೆ ಅಂತಾನೇ. ತಮ್ಮ ಇದ್ದಂಗೆ ಏನ್ ಬಂತು ರೀ, ಈ ಬಡ್ಡಿಮಗ ನನ್ ಸ್ವಂತ ತಮ್ಮನೇ’.
ಲೈನ್ ಮ್ಯಾನ್
ಸದ್ಯದ ಪ್ರಶ್ನೆ. ಇವೆರಡರಲ್ಲಿ ಯಾವುದು ಜಾಸ್ತಿ ಫೇಮಸ್?
ಸುದೀಪ್ ಅವರ ಮ್ಯಾಕ್ಸ್ ನಿರ್ಮಲಾ ಅವರ ಟ್ಯಾಕ್ಸ್
ದುಬಾರಿ ಪೆನ್ ತಗೊಳ್ಳೋದರ ಉಪಯೋಗ
ಅನ್ನಿಸಿದ್ದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದು ಸುಪ್ರೀಂ ‘ಕೋರ್ಟ್’ ಜಡ್ಜ್ ಗಳೇ ರೆಬೆಲ್ ಆದ್ರೆ
so..now..the ball is in whose court'..?
ಸೌಂಡ್ ಪಾರ್ಟಿ ಸ್ವಗತ
ಸೈರನ್ ಹಾಕಿಲ್ಲ ಅಂದ್ರೆ ambulanceಗೆ ಬೆಲೆ ಸಿಗಲ್ಲ..
ಹಂಗೇನೆ… ಸೌಂಡ್ ಮಾಡದೇ ಇದ್ರೆ ಮನುಷ್ಯರಿಗೆ ಬೆಲೆ ಸಿಗಲ್ಲ..
ಗಾಂಧಿನಗರದ ಕೆಲವು ಹೀರೋಗಳ ವ್ಯಥೆ
ನಾನೇ ಇಲ್ಲಿ ನಂಬರು ಒನ್ ಅಂತ ಹೇಳ್ತಾ ಇದ್ರೂ ನಂಬೋರು ಮಾತ್ರ ಯಾರೂ ಇಲ್ಲ
ಇದೀಗ ತಾನೆ ಹೊಳೆದ ಸುದ್ದಿ:
ಬಂಗಾರದ ವಿಷಯದಲ್ಲಷ್ಟೇ ಅಲ್ಲ, ಐಡಿಯಾಗಳ ವಿಷಯದಲ್ಲೂ ಅಷ್ಟೇ.. ‘ಹೊಳೆಯುವುದೆ’ ಬಂಗಾರಅಲ್ಲ.
ಒಂದು ಅಮಿತಾಬ್ ಬಚ್ಚನ್ ಮತ್ತು ಇನ್ನೊಂದು ಲೋಕಲ್ ಬಚ್ಚನ್ ಸುದೀಪ್ ಚಿತ್ರವನ್ನು ಮಲಯಾಳಿಗಳು- ಒಂದೇ ರೀತಿ ಉಚ್ಚರಿಸುತ್ತಾರೆ. ಯಾವುದದು?
ಕೂಲಿ-ಗೂಳಿ
ಯಾವುದೋ ಹಗರಣದಲ್ಲಿ ಇವರದ್ದೇನೂ ತಪ್ಪಿಲ್ಲ ಅಂತಾ ಮಂತ್ರಿಯೊಬ್ಬರ ಬಗ್ಗೆ ಕೋರ್ಟ್ ತೀರ್ಪು ಬಂದರೆ ಆಗ ಅವರು
‘ಮಂತ್ರಿಮುಗ್ಧ’
ಹುಲಿಗಳನ್ನು ಟ್ರೈನ್ ಮಾಡುವ ಜಾಗಕ್ಕೆ ಏನಂತಾರೆ?
‘ಹುಲಿ’ಗೆ ತರಬೇತಿ ಕೇಂದ್ರ
ಇದನ್ನೂ ಓದಿ: hari paraak column: ಕಂಗನಾ ಎಮರ್ಜೆನ್ಸಿ ಬ್ರೇಕ್