ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ʼಪದಾರ್ಥ ಚಿಂತಾಮಣಿʼ ಕುರಿತು ಪಾವೆಂ

ಕಸ್ತೂರಿ’ಯಲ್ಲಿ ಪಾ.ವೆಂ.ಆಚಾರ್ಯರು ಬರೆಯುತ್ತಿದ್ದ ‘ಪದಾರ್ಥ ಚಿಂತಾಮಣಿ’ ಇಂದಿಗೂ ನನ್ನ ಇಷ್ಟದ ಅಂಕಣ. ಒಂದು ಪದದ ಅರ್ಥ, ವ್ಯುತ್ಪತ್ತಿ, ಮೂಲಗಳನ್ನು ಅವರು ಸಮಂಜಸ ವಾಗಿ ಕಟ್ಟಿಕೊಡುತ್ತಿದ್ದ ಅಂಕಣವದು. ಈಗಲೂ ಆ ಪತ್ರಿಕೆಯ ಹಳೆಯ ಸಂಚಿಕೆ ಸಿಕ್ಕಾಗ, ನಾನು ತಕ್ಷಣ ನೋಡುವುದು ಆ ಅಂಕಣವನ್ನೇ. ಇವೆಲ್ಲವನ್ನೂ ಸೇರಿಸಿ ನವಕರ್ನಾಟಕ ಪ್ರಕಾಶನ ಅದೇ ಹೆಸರಿನಲ್ಲಿ ಪುಸ್ತಕವನ್ನು 34 ವರ್ಷಗಳ ಹಿಂದೆಯೇ ಪ್ರಕಟಿಸಿದೆ.

Vishweshwar Bhat Column: ʼಪದಾರ್ಥ ಚಿಂತಾಮಣಿʼ ಕುರಿತು ಪಾವೆಂ

-

Ashok Nayak
Ashok Nayak Nov 20, 2025 6:05 AM

ಸಂಪಾದಕರ ಸದ್ಯಶೋಧನೆ

ಕಸ್ತೂರಿ’ಯಲ್ಲಿ ಪಾ.ವೆಂ.ಆಚಾರ್ಯರು ಬರೆಯುತ್ತಿದ್ದ ‘ಪದಾರ್ಥ ಚಿಂತಾಮಣಿ’ ಇಂದಿಗೂ ನನ್ನ ಇಷ್ಟದ ಅಂಕಣ. ಒಂದು ಪದದ ಅರ್ಥ, ವ್ಯುತ್ಪತ್ತಿ, ಮೂಲಗಳನ್ನು ಅವರು ಸಮಂಜಸವಾಗಿ ಕಟ್ಟಿಕೊಡುತ್ತಿದ್ದ ಅಂಕಣವದು. ಈಗಲೂ ಆ ಪತ್ರಿಕೆಯ ಹಳೆಯ ಸಂಚಿಕೆ ಸಿಕ್ಕಾಗ, ನಾನು ತಕ್ಷಣ ನೋಡುವುದು ಆ ಅಂಕಣವನ್ನೇ. ಇವೆಲ್ಲವನ್ನೂ ಸೇರಿಸಿ ನವಕರ್ನಾ ಟಕ ಪ್ರಕಾಶನ ಅದೇ ಹೆಸರಿನಲ್ಲಿ ಪುಸ್ತಕವನ್ನು 34 ವರ್ಷಗಳ ಹಿಂದೆಯೇ ಪ್ರಕಟಿಸಿದೆ.

ಇತ್ತೀಚೆಗೆ ಆ ಪುಸ್ತಕವನ್ನು ಓದುವಾಗ, ಆಚಾರ್ಯರು ‘ಪದಾರ್ಥ ಚಿಂತಾಮಣಿ’ ಹುಟ್ಟಿದ ಬಗೆ ಏನಿರಬಹುದು ಎಂಬ ಬಗ್ಗೆ ನಿಶ್ಚಿತವಾಗಿಯೂ ಬರೆದಿರುತ್ತಾರೆ ಎನಿಸಿತು. ನನ್ನ ಊಹೆ ಸುಳ್ಳಾಗಿರಲಿಲ್ಲ. ‘ಲೇಖಕರ ಮಾತು’ ಅಧ್ಯಾಯದಲ್ಲಿ ಅವರು ಹೀಗೆ ಬರೆದಿದ್ದರು- ಈ ಪುಸ್ತಕವನ್ನು ಓದುಗರ ಕೈಯಲ್ಲಿಡುವಾಗ ಹೇಳಬೇಕಾದ್ದು ಹೆಚ್ಚಿಗೆ ಇಲ್ಲ.

ಇದು ಪಾಂಡಿತ್ಯಪೂರ್ಣ ಕೃತಿಯಲ್ಲ (ನಾನು ಯಾವ ಪದವಿಯುಳ್ಳವನಲ್ಲ- ಪಂಡಿತನಲ್ಲ). ಇದು ವ್ಯವಸ್ಥಿತ ಥೀಸಿಸ್ ಅಲ್ಲ. ಕವಿಯಾಗಿ, ಲೇಖಕನಾಗಿ, ಪತ್ರಿಕೋದ್ಯೋಗಿಯಾಗಿ, ಶಬ್ದ ಗಳ ಬಗ್ಗೆ ಮೊದಲಿನಿಂದಲೂ ಕುತೂಹಲ ಇಟ್ಟುಕೊಂಡಿದ್ದ ನನಗೆ, ನಿವೃತ್ತ ಜೀವನದಲ್ಲಿ ಪದಗಳಿಗೂ ಅರ್ಥಗಳಿಗೂ ಇರುವ ಸಂಬಂಧಗಳನ್ನು ಹಿಂಜಿ ನೋಡುವ ಹವ್ಯಾಸ ಸುಮಾರು 15 ವರ್ಷಗಳ ಹಿಂದೆ ಒಂದು ಗೀಳಾಗಿ ಅಮರಿಕೊಂಡಿತು.

ಇದನ್ನೂ ಓದಿ: Vishweshwara Bhat Column: ರಿವರ್ಸ್‌ ಗೇಯರ್‌ ವ್ಯವಸ್ಥೆ ಏಕಿಲ್ಲ ?

ಅದರಲ್ಲಿ ನನ್ನನ್ನು ತೊಡಗಿಸಿಕೊಂಡಾಗ ಈ ಪದಾರ್ಥಲೋಕ ನಾನೆಣಿಸಿಕೊಂಡದ್ದ ಕ್ಕಿಂತಲೂ ರಂಗುರಂಗಿನದಾಗಿ ಕಂಡಿತು. ಮೊದಲು ನನ್ನ ಲಹರಿಯನ್ನು ಉತ್ತೇಜಿಸಿದ ಕೆಲ ಪದಗಳನ್ನು ಬೆಂಬತ್ತಿ ನನಗೆ ಲಭ್ಯವಿದ್ದ ನಿಘಂಟು, ಕೋಶ, ಇತಿಹಾಸ, ಲಕ್ಷಣ ಇತ್ಯಾದಿ ಗ್ರಂಥಗಳ ಸಹಾಯದಿಂದ ಅವುಗಳ ಜಾತಕ ಸಾಮಗ್ರಿ ಕಲೆ ಹಾಕಿದೆ.

ತೊಡಗಿದ್ದು ಕುತೂಹಲದಿಂದ; ಅವುಗಳ ಬಗ್ಗೆ ಬರೆದರೆ ಹೇಗೆ ಎಂಬ ವಿಚಾರ ಬಂದದ್ದು ಆಮೇಲೆ. ಸರಿ, ಒಂದೆರಡು ಚಿಕ್ಕ ಲೇಖನಗಳನ್ನು ಬರೆದು ನನ್ನ ಕಿರಿಯ ಮಿತ್ರರೂ, ಆಗ ಕಸ್ತೂರಿ ಪತ್ರಿಕೆಯ ಸಹಸಂಪಾದಕರೂ ಆಗಿದ್ದ (ಈಗ ದಿವಂಗತ) ಮಾಧವ ಮಹಿಷಿಯವರ ಹತ್ತಿರ ಕೊಟ್ಟು, ಇವು ‘ಟಿಕ್’ ಕರಿಸಬಲ್ಲವೇ ಎಂದು ಕೇಳಿದೆ.

ಅವರು ಓದಿ ನೋಡಿ ‘ನೋಡುವಾ’ ಎಂದರು. ಮುಂದಿನ ಕಸ್ತೂರಿ ಸಂಚಿಕೆಯಲ್ಲಿ ಒಂದನ್ನು ಪ್ರಕಟಿಸಿಯೂ ಬಿಟ್ಟರು. ಪರಿಣಾಮ ಆಶ್ಚರ್ಯಕರವಾಗಿತ್ತು. ಆ ಲೇಖನ ಪ್ರಕಟ ವಾದೊಡನೆ ಅಕಸ್ಮಾತ್ತಾಗಿ ಭೇಟಿಯಾದ ಪರಿಚಿತರು, ಗೆಳೆಯರು ಲೇಖನದ ಬಗ್ಗೆಯೇ ಪ್ರಸ್ತಾವಿಸಿದರು.

ವಿಶೇಷವೆಂದರೆ ಕವಿಶ್ರೇಷ್ಠ ಬೇಂದ್ರೆಯವರನ್ನು ಯಾವುದಕ್ಕಾಗಿಯೋ ಕಾಣಲು ಹೋಗಿದ್ದೆ. ಅವರೂ ಪದಾರ್ಥ-ಚಿಂತಾಮಣಿಯನ್ನೇ ಪ್ರಸ್ತಾವಿಸಿದರು. 14 ವಯಸ್ಸಿನ ಶಾಲಾ ಹುಡುಗ ನೊಬ್ಬ ಯಾವುದೋ ಮದುವೆ ದಿಬ್ಬಣದೊಡನೆ ಹುಬ್ಬಳ್ಳಿಗೆ ಬಂದವ ಮುದ್ದಾಮಾಗಿ ನನ್ನನ್ನು ಹುಡುಕಿಕೊಂಡು ಬಂದ. ‘ಪದಾರ್ಥ ಚಿಂತಾಮಣಿಯ’ಯ ಮೂರನೆಯದೋ, ನಾಲ್ಕನೆಯದೋ ಲೇಖನವನ್ನು ಓದಿದ್ದ ಅವನು ಅದನ್ನು ಬಹಳ ಮೆಚ್ಚಿಕೊಂಡಿದ್ದ.

ಅನೇಕ ವಿದ್ವಾನ್ ಸಾಹಿತಿಗಳೂ ‘ಪದಾರ್ಥ ಚಿಂತಾಮಣಿ’ ಯಿಂದ ನನ್ನನ್ನು ಗುರುತಿಸ ತೊಡಗಿದರು. ‘ಲಾಂಗೂಲಾಚಾರ್ಯ’ನಾಗಿ ಕಾಲು ಶತಮಾನದಿಂದ ಗುರುತಿಸಲ್ಪಡು ತ್ತಿದ್ದವನನ್ನು ಈ ‘ಚಿಂತಾಮಣಿ’ ವಿಮೋಚನೆಗೊಳಿಸಿಬಿಟ್ಟಿತು.

‘ಧನ್ಯೋಹಂ’ ಎಂದುಕೊಂಡೆ. ಲೇಖನಮಾಲೆ ಮುಂದುವರಿಯಿತು. ಇದು ಪಾಂಡಿತ್ಯ ಪೂರ್ಣ ಕೃತಿಯಲ್ಲ. ಅಂಥ ಒಂದು ಕೃತಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ. ಡಾ.ಶಂಕರ ಕೆದಿಲಾಯರು ಕನ್ನಡದಲ್ಲಿ ಸೇರಿಕೊಂಡಿರುವ ಅರಬ್ಬಿ-ಪಾರಸಿಕ ಪದಗಳನ್ನು ವ್ಯವಸ್ಥಿತವಾಗಿ (ಇಂಗ್ಲಿಷಿನಲ್ಲಿ) ವಿವೇಚಿಸಿದ್ದಾರೆ. ಇದು ನಿರುಕ್ತ ಶಾಸ್ತ್ರೀಯ ಚರ್ಚೆಯೂ ಅಲ್ಲ. ಆ ರಂಗದಲ್ಲಿ ಆದ ಕೆಲಸವನ್ನು ಸಾಹಿತ್ಯ ಪರಿಷತ್ತಿನ ಬೃಹತ್ ಕನ್ನಡ ನಿಘಂಟು ಪ್ರತಿಬಿಂಬಿಸುತ್ತಿದೆ.

ನಾನು ಇಲ್ಲಿ ಶಬ್ದಗಳನ್ನು ಬೇರೆ ದೃಷ್ಟಿಯಿಂದ ನೋಡಿದ್ದೇನೆ. ನಾನು ಶಬ್ದಮೂಲವನ್ನು ಶೋಧಿಸುವುದರಿಂದ ತೃಪ್ತನಾಗಿಲ್ಲ. ಅವು ಬೇರೆ ಯಾವ ಯಾವ ಐತಿಹಾಸಿಕ, ನರವಂಶ ಚರಿತ್ರದ, ಅರ್ಥವ್ಯವಸ್ಥೆಯ, ಸಂಸ್ಕೃತಿ ಸಂಪ್ರದಾಯಗಳ, ಜನಾಂಗ ವಲಸೆಯ ಬಗ್ಗೆ ಗುಟ್ಟು ಹೇಳುತ್ತವೆ ಎಂದು ವಿಚಾರಿಸಿದ್ದೇನೆ.

ಮನುಷ್ಯನ ವಿಚಾರ ರೀತಿಯಲ್ಲಿರುವ ಸಾಮ್ಯ ವೈಷಮ್ಯಗಳನ್ನು ಬೇರೆ ಭಾರತೀಯ ವಿದೇಶೀ ಭಾಷೆಗಳ ಪದಗಳ ವಿಕಾಸದೊಡನೆ ಹೋಲಿಸಿದ್ದೇನೆ ಎನ್ನುತ್ತಾರೆ ಆಚಾರ್ಯರು. ಆದರೆ ಅವರು ಹೇಳದೇ ಇರುವುದು ಹೆಚ್ಚಿದೆ. ಒಂದು ಪದದ ಅರ್ಥವನ್ನು ಹುಡುಕಲು ಅವರು ಪಟ್ಟ ಹರಸಾಹಸದ ಬಗ್ಗೆ ಬರೆಯಬೇಕಿತ್ತು...