Shashidhara Halady Column: ಈ ಹಣ್ಣನ್ನು ನಿಮ್ಮ ಮಕ್ಕಳಿಗೆ ಪರಿಚಯಿಸಿದ್ದೀರಾ ?
ನಮ್ಮೂರಲ್ಲಿ ಅದನ್ನು ಕರೆಯುವುದು ‘ಹಣೆ ಕಣ್ಣು’. ಅದರ ರುಚಿಯ ಅನನ್ಯತೆಯನ್ನು ಗುರುತಿಸಿ, ಅದನ್ನು ‘ಹಣ್ಣು’ ಎಂದು ಕರೆದೆ. ಹೋಲಿಕೆಗೆ ಹೇಳುವುದಾದರೆ, ಎಳನೀರನ್ನು ಕತ್ತರಿಸಿ, ನೀರು ಕುಡಿದ ನಂತರ ಸಿಗುವ ರುಚಿಕರ ಬಿಳಿ ಕಾಯಿಯ ಭಾಗಕ್ಕೆ, ಹಣೆ ಕಣ್ಣನ್ನು ಹೋಲಿಸಬಹುದು. ನಮ್ಮ ದೇಶಕ್ಕೆ ತಾಳೆಮರಗಳು ಹೊಸದಲ್ಲ

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಾಂಕಣ
ಶಶಿಧರ ಹಾಲಾಡಿ
ಬೆಂಗಳೂರಿನ ಬೀದಿಗಳಲ್ಲಿ ಈಚಿನ ವಾರಗಳಲ್ಲಿ ಒಂದು ಅಪರೂಪ ಎನ್ನಬಹುದಾದ ಸಸ್ಯ ಮೂಲ ದ ತಿನಿಸು ಕಾಣಸಿಗುತ್ತದೆ. ನೋಡಲು ಮಿದುವಾಗಿದ್ದರೂ ಅದು ಹಣ್ಣಲ್ಲ, ಸಿಹಿ ಸಿಹಿ ನೀರನ್ನು ಹೊಂದಿದ್ದರೂ ಅದು ಎಳನೀರಲ್ಲ. ಬೆಂಗಳೂರಿನ ಸುತ್ತಮುತ್ತ ಅದನ್ನು ‘ತಾಟಿ ನಿಂಗು’ ಎಂದೇ ಗುರುತಿಸುತ್ತಾರೆ.
ನಮ್ಮೂರಲ್ಲಿ ಅದನ್ನು ಕರೆಯುವುದು ‘ಹಣೆ ಕಣ್ಣು’. ಅದರ ರುಚಿಯ ಅನನ್ಯತೆಯನ್ನು ಗುರುತಿಸಿ, ಅದನ್ನು ‘ಹಣ್ಣು’ ಎಂದು ಕರೆದೆ. ಹೋಲಿಕೆಗೆ ಹೇಳುವುದಾದರೆ, ಎಳನೀರನ್ನು ಕತ್ತರಿಸಿ, ನೀರು ಕುಡಿದ ನಂತರ ಸಿಗುವ ರುಚಿಕರ ಬಿಳಿ ಕಾಯಿಯ ಭಾಗಕ್ಕೆ, ಹಣೆ ಕಣ್ಣನ್ನು ಹೋಲಿಸಬಹುದು. ನಮ್ಮ ದೇಶಕ್ಕೆ ತಾಳೆಮರಗಳು ಹೊಸದಲ್ಲ; ಬಹು ಹಿಂದಿನಿಂದಲೂ ನಾನಾ ಪ್ರದೇಶದಲ್ಲಿ ವ್ಯಾಪಕ ವಾಗಿ ಬೆಳೆಯುವ ಮರಗಳಿವೆ. ಬೃಹದಾಕಾರ, ನೇರವಾಗಿ ಅರವತ್ತರಿಂದ ಎಂಬತ್ತು ಅಡಿ ಎತ್ತರ ಬೆಳೆಯುವ ಕಪ್ಪನೆಯ ಕಾಂಡ, ತುದಿಯಲ್ಲಿ ಭಾರಿ ಗಾತ್ರದ ಹಸಿರು ಎಲೆ.
ತಾಳೆ ಮರವು ಬಹೂಪಯೋಗಿ. ಈಚಿನ ದಿನಗಳಲ್ಲಿ ಅಂಗಡಿಗಳಲ್ಲಿ ದೊರಕುವ ತಾಳೆ ಎಣ್ಣೆಗೂ ಈ ಮರಕ್ಕೂ ಸಂಬಂಧವಿಲ್ಲ; ಎಣ್ಣೆ ತೆಗೆಯುವುದು ಬೇರೆಯದೇ ಪ್ರಭೇದದ ತಾಳೆ ಗಿಡದಿಂದ. ನಮ್ಮೂರಿ ನಲ್ಲಿ ಪುರಾತನ ಕಾಲದಿಂದಲೂ ಇದ್ದ ತಾಳೆಮರದ ಕುರಿತು ಸ್ವಲ್ಪ ನೋಡೋಣ. ನಮ್ಮ ಹಳ್ಳಿ ಯಲ್ಲಿ ಮತ್ತು ಕರಾವಳಿಯಲ್ಲಿ ತಾಳೆಮರಕ್ಕೆ ‘ಹಣೆ ಮರ’ (ಪಣೆ) ಎಂದು ಕರೆಯುವ ರೂಢಿ.
ಬಾಲ್ಯದಲ್ಲಿ ಈ ಹಣೆ ಮರವು ಹಲವು ಕಾರಣಗಳಿಗಾಗಿ ನಮಗೆಲ್ಲಾ ಹೆಚ್ಚು ಪರಿಚಿತ. ‘ಹಣೆ ಕಣ್ಣು’ ಎಂಬ ರುಚಿಕರ ಹಣ್ಣುಗಳನ್ನು ನೀಡುವ ಹಣೆ ಮರಗಳು ಬಹುದೂರದಿಂದಲೇ ಕಾಣಿಸುವಂಥ ನಿಲುವಿನವುಗಳು. ನಮ್ಮೂರಿನಲ್ಲಿ ಮಾತ್ರವಲ್ಲ, ನಮ್ಮ ರಾಜ್ಯದಾದ್ಯಂತ ಹಲವು ಪ್ರದೇಶಗಳಲ್ಲಿ ಹಣೆ ಮರಗಳ ಸಾಲುಗಳೇ ಬೆಳೆದಿರುತ್ತಿದ್ದವು. ಭಾರಿ ಎತ್ತರ ಬೆಳೆಯುವ ಆ ಮರದ ದೊಡ್ಡ ಗಾತ್ರದ ಗರಿಗಳು ಬೇಸಗೆಯಲ್ಲಿ ಗಾಳಿ ಬೀಸಿದಾಗ ಮಾಡುವ ‘ಬರಬರ’ ಸದ್ದು ಮಕ್ಕಳಿಗೆ ಭಯ ಹುಟ್ಟಿಸು ವಂಥದ್ದು.
ನಮ್ಮೂರಿನಲ್ಲಿ ಅಲ್ಲಲ್ಲಿ ಹಲವು ತಾಳೆಮರಗಳಿದ್ದವು; ಗದ್ದೆ ಬದುಗಳಲ್ಲಿ, ತೋಡಿನ ಪಕ್ಕದಲ್ಲಿ, ಹಾಡಿ ಗುಡ್ಡಗಳಲ್ಲೂ ಇವು ಬೃಹದಾಕಾರವಾಗಿ ಬೆಳೆದು ನಿಂತು, ಬಹುದೂರದ ತನಕ ಕಾಣಿಸು ತ್ತಿದ್ದವು. ಹಣೆ ಮರದಲ್ಲಿ ಭೂತಗಳು ಕುಳಿತಿರುತ್ತವೆ ಎಂಬ ಮೂಢನಂಬಿಕೆಯೂ ನಮ್ಮೂರಿನಲ್ಲಿದೆ. ಮಳೆಗಾಲದಲ್ಲಿ ಒಮ್ಮೊಮ್ಮೆ ಹಣೆಮರಗಳಿಗೆ ಸಿಡಿಲು ಬಡಿಯುವುದುಂಟು; ಆಗ ಎಲೆಗಳೆಲ್ಲಾ ಸುಟ್ಟುಹೋಗಿ, ಕೆಲವು ಬಾರಿ ಬೆಂಕಿ ಹಿಡಿದು ಕರಕಲಾಗಿ, ಕೇವಲ ಕಾಂಡ ಮಾತ್ರ ಉಳಿಯುತ್ತಿತ್ತು.
ಆ ಕಾಂಡಗಳು ಮುಂದಿನ ಹಲವು ವರುಷಗಳ ತನಕ ಏಕಾಂಗಿ ದೆವ್ವಗಳಂತೆ ಬಯಲಿನ ಮಧ್ಯದಲ್ಲೆ ತಲೆ ಎತ್ತಿ ನಿಂತಿರುತ್ತಿದ್ದವು! ಹಳ್ಳಿಯಲ್ಲಿದ್ದ ನಮ್ಮ ಮನೆಯ ಹಿಂಭಾಗದಲ್ಲೇ ಎರಡು ಬೃಹದಾ ಕಾರದ ಹಣೆಮರಗಳಿದ್ದವು. ಅವುಗಳ ಎತ್ತರ, ದಪ್ಪನೆಯ ಕಪ್ಪನೆಯ ಆ ಕಾಂಡ, ತುದಿಯಲ್ಲಿ ಚೂಪಾಗಿ ಅರಳಿಕೊಂಡಿರುವ ದೊಡ್ಡ ದೊಡ್ಡ ಎಲೆಗಳು ಎಲ್ಲವೂ ಮಕ್ಕಳಲ್ಲಿ ದಿಗಿಲು ಹುಟ್ಟಿಸು ವಂಥವೇ ಸರಿ.
ಜತೆಗೆ ‘ರಾತ್ರಿ ಹೊತ್ತು ಬೆಳದಿಂಗಳಿದ್ದರೆ, ಹಣೆ ಮರದ ತುದಿಯಲ್ಲಿ ಒಂದು ಭೂತ ಹಕ್ಕಿ ಬಂದು ಕುಳಿತುಕೊಂಡು, ಕೂಗುತ್ತಿರುತ್ತೆ’ ಎಂದು ನಮ್ಮ ಅಮ್ಮಮ್ಮ ಆಗಾಗ ಹೇಳುತ್ತಿದ್ದು, ಹಣೆಮರಗಳ ಕುರಿತು ಒಂದು ನಿಗೂಢ ಪ್ರಭಾವಳಿಯೇ ನಿರ್ಮಾಣವಾಗಿತ್ತು. ನಮ್ಮ ಮನೆ ಸುತ್ತಲೂ ಹರಡಿದ್ದ ಆರೆಂಟು ತೆಂಗಿನ ಮರ, ಎರಡು ತೇಗದ ಮರ, ದಟ್ಟವಾಗಿ ಎಲೆ ಬಿಟ್ಟುಕೊಂಡಿದ್ದ ಹಲಸಿನ ಮರ, ಅಲ್ಲಲ್ಲಿ ಬೆಳೆದಿದ್ದ ಕೆಲವು ಅಡಕೆ ಮರಗಳು ಇವೆಲ್ಲಕ್ಕಿಂತಲೂ 20-30 ಅಡಿ ಎತ್ತರವಿದ್ದ, ಭವ್ಯ ನಿಲುವಿನ ಆ 2 ಹಣೆಮರಗಳು, ಮಕ್ಕಳಲ್ಲಿ ಭಯ-ಭಕ್ತಿ-ಗೌರವ ಮೂಡಿಸಿದ್ದರೆ ಅದರಲ್ಲಿ ಅಚ್ಚರಿ ಯೇನಿದೆ!
ಆ 2 ಬೃಹತ್ ಹಣೆಮರಗಳು ಪ್ರತಿವರ್ಷ ಶಿಸ್ತಾಗಿ ನೂರಾರು ತಾಳೆ ಹಣ್ಣುಗಳನ್ನು ಬಿಡುತ್ತಿದ್ದರೂ, ಆ ಮರಗಳ ಎತ್ತರಕ್ಕೆ ಹೆದರಿ, ಯಾರೂ ಅವುಗಳನ್ನೇರುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ನಾನು ಮೊದಲ ಬಾರಿ ‘ಹಣೆ ಕಣ್ಣ’ನ್ನು ತಿಂದದ್ದು 4ನೇ ತರಗತಿಯಲ್ಲಿದ್ದಾಗ. ನಮ್ಮೂರಲ್ಲೇ ಅಲ್ಲಲ್ಲಿ ಬೆಳೆದ, ಕಡಿಮೆ ಎತ್ತರದ ಬೇರೆ ಹಣೆ ಮರಗಳಿಂದ ಕಿತ್ತು ತಂದ ಹಣ್ಣುಗಳನ್ನು ಕೆತ್ತಿ ಕೊಡುತ್ತಿದ್ದರು.
ಸಂತೆಗಳಲ್ಲಿ, ಜಾತ್ರೆಗಳಲ್ಲಿ ಹಣೆಕಣ್ಣು ಮಾರುತ್ತಿದ್ದರು. ದಟ್ಟ ಕಪ್ಪುಮಿಶ್ರಿತ, ತೆಂಗಿನಕಾಯಿ ಗಾತ್ರದ ಆ ಕಾಯಿಗಳ ಕವಚವನ್ನು ಕೆತ್ತಿದರೆ, ಒಳಗೆ 3 ‘ಕಣ್ಣು’ಗಳು. ನಸು ಬೆಳ್ಳಿಯ ಬಣ್ಣ, ಅರೆ ಪಾರದರ್ಶಕ, ಮಿದುವಾದ ದುಂಡಗಿನ ಹಣ್ಣುಗಳು, ಒಳಗೆ ಸಿಹಿ ಸಿಹಿ ನೀರು ಜಿನುಗುವ ಪರಿ ವಿಶಿಷ್ಟ. ಬೇಸಗೆಯಲ್ಲಿ ಹೆಚ್ಚಾಗಿ ಸಿಗುವ ಈ ಹಣ್ಣುಗಳನ್ನು ತಿಂದರೆ, ಬಾಯಾರಿಕೆ ಮಾಯ; ಜತೆಗೆ ಸಾಕಷ್ಟು ಲವಣಾಂಶಳು ದಕ್ಕಿ, ದೇಹಕ್ಕೆ ಶಕ್ತಿ.
ಎಳೆಯ ಹಣೆ ಕಣ್ಣುಗಳನ್ನು ತಿನ್ನುವುದೆಂದರೆ, ನಮ್ಮ ತಲೆಮಾರಿನ ಮಕ್ಕಳಿಗೆ ತುಂಬಾ ಇಷ್ಟ. ಹಣ್ಣುಗಳು ತುಸು ಬಲಿತರೆ, ಗಟ್ಟಿಯಾಗುತ್ತಾ ಹೋಗುತ್ತದೆ, ರುಚಿಯೂ ಕಡಿಮೆ. ಅಂದಿನ ದಿನ ಗಳಲ್ಲಿ ನಮಗೆಲ್ಲಾ ಅಷ್ಟೊಂದು ಇಷ್ಟವಾಗಿದ್ದ ಹಣೆ ಕಣ್ಣುಗಳು, ಇಂದಿನ ಮಕ್ಕಳಿಗೂ ಅಷ್ಟೇ ಇಷ್ಟವೇ ಎಂಬ ಪ್ರಶ್ನೆಗೆ ಉತ್ತರ ನಕಾರ ಎನ್ನಬಹುದು. ಇಂದು ನಾನಾ ರೀತಿಯ ಹಣ್ಣುಗಳು, ತಿನಿಸು ಗಳು, ಐಸ್‌ಕ್ರೀಂಗಳು, ತರಹೇವಾರಿ ರಖಂಗಳು ಮಕ್ಕಳ ಬಾಯಿರುಚಿಗೆ ಒಗ್ಗಿರುವುದರಿಂದ, ಹಣೆ ಕಣ್ಣಿನಂಥ ಸರಳ ತಿನಿಸನ್ನು ಹೆಚ್ಚಿನ ಮಕ್ಕಳು ಇಷ್ಟಪಡದೇ ಇರಬಹುದು!
ನಮ್ಮ ಹಳ್ಳಿ ಮನೆಯ ಹಿಂದೆ ಇದ್ದ ಆ 2 ಭಾರಿ ಎತ್ತರದ ಹಣೆ ಮರಗಳ ಹಿಂದೆ ಕಥೆಗಳು, ವಿದ್ಯ ಮಾನಗಳಿದ್ದವು! ಆ ಮರಗಳ ಉದ್ದಕ್ಕೂ ಅರ್ಧ ಅಡಿ ಅಗಲದ ಹತ್ತಾರು ಮೆಟ್ಟಿಲುಗಳನ್ನು ಕೆತ್ತಿದ ಗುರುತುಗಳಿದ್ದವು. 80 ಅಡಿ ಎತ್ತರವಿದ್ದ ಆ ಕಾಂಡದ ಮೇಲೆ, ಸುಮಾರು 40 ಅಡಿ ಎತ್ತರದ ತನಕ, ಯಾರೋ ಕತ್ತಿಯಿಂದ ಮೆಟ್ಟಿಲುಗಳನ್ನು ಕೆತ್ತಿದ್ದು ದೂರದಿಂದಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಹಲವು ವರ್ಷ ಹಳೆಯದಾದ ಆ ಗುರುತುಗಳು ತುಸು ಮಾಸಿದ್ದರೂ, ನುರಿತ ಮರ ಹತ್ತುವವರು ಅದನ್ನು ಆಧರಿಸಿ ಮರವನ್ನು ಏರಬಹುದಿತ್ತು. ಆದರೆ ಆ ಗುರುತುಗಳು 40 ಅಡಿಗಳಿಗಿಂತ ಮೇಲ್ಭಾಗ ದಲ್ಲಿ ಇರಲಿಲ್ಲ. ಆ ನಂತರ, ಯಾವುದೇ ಗಚ್ಚಿನ ಗುರುತಿಲ್ಲದೇ ಆ ಕಪ್ಪನೆಯ, ದಪ್ಪನೆಯ ಕಾಂಡ ಗಳು ಮೇಲಕ್ಕೇರಿ ಹೋಗಿದ್ದವು.
ಮರ ಹತ್ತಲು ಅನುಕೂಲವಾಗುವಂತೆ ಆ ಗುರುತುಗಳನ್ನು ಯಾರು, ಏಕೆ ಮತ್ತು ಯಾವಾಗ ಮಾಡಿ ದ್ದರು? ಇಂಥ ಪ್ರಶ್ನೆಗಳಿಗೆ ನಮ್ಮ ಅಮ್ಮಮ್ಮನ ಬಳಿ ಉತ್ತರ ಸಿದ್ಧವಿತ್ತು. ‘ಅಷ್ಟೂ ಗೊತ್ತಾಗುವು ದಿಲ್ಲವೆ? ಹಣೆ ಮರದಿಂದ ಕಳ್ಳು (ಶೇಂದಿ) ತೆಗೆಯುವವರು ಮಾಡಿದ ಗುರುತು ಅದು. ಪ್ರತಿದಿನ ಬೆಳಗ್ಗೆ ಮರ ಏರಿ, ಪ್ರತಿ ಮರದಿಂದ 2 ಲೋಟ ಕಳ್ಳನ್ನು ಸಂಗ್ರಹಿಸುತ್ತಿದ್ದರು’.‘ಯಾರು?’ ‘ಕಳ್ಳು ಸಂಗ್ರಹಿಸುವ ಮನೆಗಳೇ ನಮ್ಮೂರಿನಲ್ಲಿದ್ದವು. ಈಗ ಇಲ್ಲ ಅಷ್ಟೆ. ಆ ಕಳ್ಳನ್ನು ನಮ್ಮ ಹಳ್ಳಿಯ ಕೆಲವರು ಕುಡಿಯುತ್ತಿದ್ದರು’. ‘ಈಗ ಯಾಕೆ ಅದನ್ನು ಸಂಗ್ರಹಿಸುವುದಿಲ್ಲ? 40 ಅಡಿಗಳಿಗಿಂತ ಮೇಲ್ಭಾಗದ ಮರದ ಕಾಂಡದ ಮೇಲೆ ಯಾವುದೇ ಗುರುತುಗಳಿಲ್ಲವಲ್ಲ?’ ‘ಹೌದು, ಆ ಮೇಲೆ ಕಳ್ಳು ತೆಗೆಯುವುದನ್ನು ನಿಲ್ಲಿಸಿದರು’ ‘ಯಾಕೆ?’ ‘ಮರ ಎತ್ತರವಾದ ನಂತರ, ಮರ ಹತ್ತಲು ಹೆದರಿಕೆ ಆಗಿರಬೇಕು’.
ಇದು ಅಮ್ಮಮ್ಮನ ಉತ್ತರ.ಆದರೆ ಆ ಕೊನೆಯ ಉತ್ತರಕ್ಕೆ ಪೂರಕವಾದ ಮಾಹಿತಿಗಳಿವೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ನಮ್ಮ ಹಾಲಾಡಿಗೂ ಸಾರಾಯಿ ಅಂಗಡಿ ಬಂತು! ನಿಧಾನವಾಗಿ ಸರಕಾರ ಪ್ರತಿದಿನ ಸರಬರಾಜು ಮಾಡುತ್ತಿದ್ದ ಸಾರಾಯಿಯನ್ನು ಕುಡಿಯತೊಡಗಿರಬೇಕು; ಸ್ಥಳೀಯವಾಗಿ ತಯಾರಾಗುತ್ತಿದ್ದ ಶೇಂದಿಯ ಮೇಲಿನ ಬೇಡಿಕೆ ಕಡಿಮೆಯಾಯಿತು. ಜತೆಗೆ, ಶೇಂದಿ ಸಂಗ್ರಹಿಸಲು ಸಹ ನಿಯಂತ್ರಣ ಹೇರಲಾಯಿತು.
ಆದ್ದರಿಂದಲೇ, ಈ 2 ಮರಗಳಿಂದ ಶೇಂದಿ ಸಂಗ್ರಹ ನಿಂತುಹೋಗಿರಬೇಕು. ಇವುಗಳ ಜತೆಗೇ, ನಮ್ಮೂರಿನಲ್ಲಿ ಕಡಿಮೆ ಎತ್ತರದ, ಕಡಿಮೆ ವಯಸ್ಸಿನ ಇನ್ನೂ ಕೆಲವು ಹಣೆ ಮರಗಳು ಇದ್ದು, ಅವುಗಳಿಂದಲೂ ಶೇಂದಿ ಸಂಗ್ರಹ ನಡೆಯುತ್ತಿರಲಿಲ್ಲ. ನಮ್ಮ ದೇಶದಲ್ಲಿ ಪ್ರಾದೇಶಿಕವಾಗಿ ಕಳ್ಳು ಅಥವಾ ಶೇಂದಿ ಸಂಗ್ರಹ, ಸೇವನೆಯ ಕಥನವೇ ಕುತೂಹಲಕಾರಿ, ಅಧ್ಯಯನಯೋಗ್ಯ. ಸಮುದ್ರಕ್ಕೆ ತಾಗಿಕೊಂಡಿರುವ ಮರವಂತೆ, ತ್ರಾಸಿ ಮೊದಲಾದ ಹಳ್ಳಿಗಳಲ್ಲಿ ಇಂದಿಗೂ ತೆಂಗಿನ ಮರಗಳಿಂದ ಶೇಂದಿ ಸಂಗ್ರಹ ನಡೆಯುತ್ತಿದೆ.
ಹಳೆಯ ಮೈಸೂರಿನ ಭಾಗದಲ್ಲಿ ತೆಂಗಿನ ಮರದಿಂದ ಸಂಗ್ರಹಿಸುವ ‘ನೀರಾ’ವನ್ನು ಆರೋಗ್ಯ ವರ್ಧಕ ಪಾನೀಯವಾಗಿ ಪರಿಚಯಿಸುವ ಪ್ರಯತ್ನ ನಿರಂತರ ಸಾಗಿದೆ. ನಮ್ಮೂರಿನ ಕಳ್ಳಿನ ವಿಚಾರಕ್ಕೆ ಬಂದರೆ, ಬೆಳಗ್ಗೆ 7 ಗಂಟೆಗೂ ಮುಂಚೆ ಅದನ್ನುಕುಡಿದರೆ ಶಕ್ತಿವರ್ಧಕ; ನಂತರ ಹುಳಿ ಬರುವುದರಿಂದ ಅಮಲು ಪದಾರ್ಥ ಎನ್ನುತ್ತಾರೆ. ನಮ್ಮೂರಿನಲ್ಲಿ ತೆಂಗು, ತಾಳೆ ಮತ್ತು ಬಗನೆ ಮರದಿಂದ ಕಳ್ಳು ಸಂಗ್ರಹಿಸುವ ಪರಿಪಾಠ ಇತ್ತು; ಈಚಿನ ವರ್ಷಗಳಲ್ಲಿ ಇದು ಬಹುಮಟ್ಟಿಗೆ ನಿಂತು ಹೋಗಿದೆ.
ತೆಂಗು, ತಾಳೆ, ಈಚಲು, ಬಗನೆ ಮೊದಲಾದ ಪಾಮ್ ಜಾತಿಯ ಮರಗಳ ತುದಿಯಲ್ಲಿ ಹೊರಬರುವ ಹೂವಿನ ಕೊನೆಯನ್ನು ಕತ್ತರಿಸಿ, ಅಲ್ಲೊಂದು ಮಡಕೆಯನ್ನು ಕಟ್ಟಿ, ಪ್ರತಿದಿನ ಬೆಳಗ್ಗೆ ಒಂದೊಂದು ಮರದಿಂದಲೂ ಒಂದೆರಡು ಲೋಟ ದ್ರವವನ್ನು ಸಂಗ್ರಹಿಸಿ, ಅದನ್ನು ಮಾರುವ ವಿಧಾನ ಬಹು ಪುರಾತನ ಕಾಲದ್ದು.
ನಮ್ಮ ಹಳ್ಳಿಗಳಲ್ಲಿ ಬೆಳೆಯುವ ತಾಳೆ ಮರಗಳು ಬಹೂಪಯೋಗಿ. ಆ ಎತ್ತರವಾದ ಮರಗಳನ್ನು ಯಾರೂ ಏರುತ್ತಿರಲಿಲ್ಲವಾದರೂ, ಕಡಿಮೆ ಎತ್ತರದ ಇನ್ನೂ ಕೆಲವು ತಾಳೆ ಮರಗಳು ನಮ್ಮ ಹಳ್ಳಿಯಲ್ಲಿ ಅಲ್ಲಲ್ಲಿ ಅವುಗಳ ಪಾಡಿಗೆ ಬೆಳೆದಿದ್ದವು. ಅವುಗಳ ಗರಿಗಳಿಂದ ಬೀಸಣಿಗೆ ಮಾಡುವ ಕಲೆಯೂ ನಮ್ಮೂರಿನಲ್ಲಿತ್ತು. ಒಪ್ಪವಾಗಿ ಕತ್ತರಿಸಿ, ದಾರದಿಂದ ಪೋಣಿಸಿ, ಎರಡೂ ಕೊನೆಯಲ್ಲಿ ಬಿದಿರಿನ ಕಡ್ಡಿಗಳನ್ನು ಸಿಕ್ಕಿಸಿ, ಮಡಚುವ ಬೀಸಣಿಗೆ ಮಾಡುವ ಪರಿ ನಿಜಕ್ಕೂ ಕಲಾತ್ಮಕ. ತಾಳೆ ಮರಗಳನ್ನು ಕತ್ತರಿಸಿ, ತೊಲೆಗಳನ್ನಾಗಿ ಉಪಯೋಗಿಸುವ ಪದ್ಧತಿಯೂ ಇತ್ತು.
ತಾಳೆ ಗರಿಗಳ ಇನ್ನೊಂದು ಉಪಯೋಗವೆಂದರೆ ಕೊಡೆ ಅಥವಾ ಛತ್ರಿ ತಯಾರಿ! 3ನೇ ತರಗತಿಗೆ ನಾನು ನಮ್ಮೂರಿನ ಶಾಲೆಗೆ ಸೇರಿಕೊಂಡಾಗ, ನಮ್ಮ ಅಮ್ಮಮ್ಮ ನನಗೆ ಕೊಡಿಸಿದ್ದು ‘ಓಲಿಕೊಡೆ’- ತಾಳೆಗರಿಗಳನ್ನು ಬೇಯಿಸಿ, ಒಣಗಿಸಿ, ಬಿದಿರಿನಿಂದ ಮಾಡಿದ ವೃತ್ತಾಕಾರದ ರೂಪಕ್ಕೆ ಸಿಕ್ಕಿಸಿ ಆ ಕೊಡೆಯನ್ನು ತಯಾರಿಸಲಾಗಿತ್ತು.
ಬಟ್ಟೆಯ ಕೊಡೆಗಿಂತ ಇದು ಬಲಶಾಲಿ ಮತ್ತು ಎಂಥದ್ದೇ ಮಳೆ ಬಂದರೂ, ಅದರೊಳಗೆ ನೀರು ಸಿಡಿ ಯುತ್ತಿರಲಿಲ್ಲ ಎಂದು ಆ ಕೊಡೆಯನ್ನು ಶಿಫಾರಸು ಮಾಡುತ್ತಿದ್ದರು ಅಮ್ಮಮ್ಮ! ಎರಡು ವರ್ಷ ‘ಓಲಿ ಕೊಡೆ’ಯನ್ನೇ ಹಿಡಿದು, ಕಾಡಿನ ನಡುವೆ ಸಾಗುವ ದಾರಿಯಲ್ಲಿ ನಡೆದು, ಶಾಲೆಗೆ ಹೋದ ಸಾಹಸ ನನ್ನದು. ಅಂಥ ತಾಳೆಗರಿಗಳ ಕೊಡೆಯನ್ನು ಈಗ ಮಠದ ಸ್ವಾಮಿಗಳು ಉಪಯೋಗಿಸು ತ್ತಾರೆ!
ನಮ್ಮ ಮನೆಯ ಹಿಂದೆ ಇದ್ದ ಆ 2 ಬೃಹತ್ ತಾಳೆಮರಗಳು ಎಂದೋ ಬಿದ್ದುಹೋಗಿದ್ದವು. ಮಾತ್ರ ವಲ್ಲ, ನಮ್ಮೂರಲ್ಲಿ ಅಲ್ಲಲ್ಲಿ ಬೆಳೆದುಕೊಂಡಿದ್ದ ತಾಳೆಮರಗಳ ಸಂಖ್ಯೆಯೂ ಕಡಿಮೆಯಾಗಿದೆ. ಇವು ಬೆಳೆಯುವುದು ಬಹಳ ನಿಧಾನ. ಈಗಿನ ದಿನಗಳಲ್ಲಿ ಕೃಷಿಕರ ಅಭಿರುಚಿ, ಸಂಪ್ರದಾಯ, ಪದ್ಧತಿಗಳು ಬದಲಾಗಿವೆ. ಬಹುಬೇಗನೆ ಬೆಳೆಯುವ ಗಿಡ, ಮರ, ಬಳ್ಳಿ, ಬೆಳೆಗಳನ್ನು ಇಂದಿನ ಕೃಷಿಕರು ಇಷ್ಟ ಪಡುತ್ತಾರೆ.
ಆದ್ದರಿಂದಲೇ ಇರಬೇಕು, ಹಣೆ ಮರ ಅಥವಾ ತಾಳೆ ಮರದಂಥ, ಬಹು ನಿಧಾನವಾಗಿ ಬೆಳೆಯುವ ಮರಗಳಿಗೆ ಇಂದಿನ ಕೃಷಿ ದಿನಚರಿಯಲ್ಲಿ ಪ್ರಾಮುಖ್ಯವಿಲ್ಲ. ನೆರೆರಾಜ್ಯಗಳಲ್ಲಿ ಇಂದಿಗೂ ಸಾಕಷ್ಟು ತಾಳೆಮರಗಳಿವೆ; ಅಲ್ಲಿ ಬೆಳೆಯುವ ಹಣೆ ಕಣ್ಣು ಅಥವಾ ತಾಟಿನಿಂಗುವನ್ನು ಕೊಯ್ದು ತಂದು ಬೆಂಗಳೂರಿನಲ್ಲಿ ಮಾರುತ್ತಾರೆ. ಇಂದಿನ ಮಕ್ಕಳಿಗೆ ತಾಳೆ ಮರದ ಹಣ್ಣುಗಳನ್ನು ತಿನ್ನಿಸುವ ಅಭ್ಯಾಸ ಮಾಡಬೇಕು; ಆ ಮೂಲಕ ನಿಸರ್ಗವು ನೀಡುವ ಒಂದು ಆರೋಗ್ಯಕರ ತಿನಿಸನ್ನು ಪರಿಚಯಿಸಿ ದಂತಾಗುತ್ತದೆ.