Keshav Prasad B Column: ಅತಿ ದೊಡ್ಡ ಸಾಲಗಾರ ಅಮೆರಿಕ ಶ್ರೀಮಂತ ರಾಷ್ಟ್ರ ಯಾಕೆ ?
ಪ್ರಪಂಚದ ಅತಿ ದೊಡ್ಡ ಸಾಲಗಾರ ಅಮೆರಿಕ. ಹೀಗಿದ್ದರೂ ಅದು ಅತ್ಯಂತ ಶ್ರೀಮಂತ ದೇಶವೂ ಆಗಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುತ್ತೀರಾ? ಒಂದಷ್ಟು ವಿವರಗಳನ್ನು ನೋಡೋಣ. ಹಲವಾರು ಕಾರಣ ಗಳಿಂದಾಗಿ ಅಮೆರಿಕ ತನ್ನ ಜಿಡಿಪಿಗಿಂತ ಹೆಚ್ಚು ಸಾಲವನ್ನು ಹೊಂದಿದ್ದರೂ, ಜಗತ್ತಿನ ನಂಬರ್ 1 ಶ್ರೀಮಂತ ರಾಷ್ಟ್ರವಾಗಿದೆ


ಮನಿ ಮೈಂಡೆಡ್
ಸಾಲ ಮಾಡಿಯಾದರೂ ತುಪ್ಪ ತಿನ್ನೋದು! ಈ ಗಾದೆ ಮಾತನ್ನು ನಾವೆಲ್ಲ ಆಗಾಗ್ಗೆ ಕೇಳುತ್ತೇವೆ. ಅಳತೆ ಮೀರಿ ಸಾಲ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎಂಬ ಬುದ್ಧಿವಾದವನ್ನು ಇದು ಕೊಡುತ್ತದೆ. ಆದರೆ ಅಮೆರಿಕದ ವೈಭವವನ್ನು ಕಂಡಾಗ ಈ ಗಾದೆ ಮಾತು ಸುಳ್ಳಾ ಎನ್ನಿಸಬಹುದು. ಹಾಗಾದರೆ ಅಮೆರಿಕ ತನ್ನ ಕಂಠಮಟ್ಟ, ಅಂದರೆ ಜಿಡಿಪಿಗಿಂತಲೂ ಅಧಿಕ ಸಾಲವನ್ನು ಹೊಂದಿದ್ದರೂ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರ ಏಕೆ? ಕಳೆದ 2013ರಿಂದೀಚೆಗೆ ಅಮೆರಿಕದ ಸಾಲವು ಅದರ ಜಿಡಿಪಿಯ ಶೇ.100ಕ್ಕೂ ಹೆಚ್ಚಿದೆ. ಅಲ್ಲಿನ ಬಜೆಟ್ ಸಮಿತಿಯ ಪ್ರಕಾರ 2035ರ ವೇಳೆಗೆ ಅಮೆರಿಕದ ಸಾಲದ ಪ್ರಮಾಣ ಜಿಡಿಪಿಯ ಶೇ.118ರ ಮಟ್ಟದಲ್ಲಿ ಇರಬಹುದು. 2024ರಲ್ಲಿ ಜಿಡಿಪಿ ಮೌಲ್ಯ 29 ಲಕ್ಷ ಕೋಟಿ ಡಾಲರ್ ಆಗಿದ್ದರೆ, ಸಾಲದ ಪ್ರಮಾಣ 34 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಇದು ಜಗತ್ತಿನ ಸಾಲದಲ್ಲಿ ಶೇ.36 ಆಗುತ್ತದೆ.
ಹೀಗಾಗಿ ಪ್ರಪಂಚದ ಅತಿ ದೊಡ್ಡ ಸಾಲಗಾರ ಅಮೆರಿಕ. ಹೀಗಿದ್ದರೂ ಅದು ಅತ್ಯಂತ ಶ್ರೀಮಂತ ದೇಶವೂ ಆಗಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುತ್ತೀರಾ? ಒಂದಷ್ಟು ವಿವರಗಳನ್ನು ನೋಡೋಣ. ಹಲವಾರು ಕಾರಣಗಳಿಂದಾಗಿ ಅಮೆರಿಕ ತನ್ನ ಜಿಡಿಪಿಗಿಂತ ಹೆಚ್ಚು ಸಾಲವನ್ನು ಹೊಂದಿದ್ದರೂ, ಜಗತ್ತಿನ ನಂಬರ್ 1 ಶ್ರೀಮಂತ ರಾಷ್ಟ್ರವಾಗಿದೆ. ಅವುಗಳಲ್ಲಿ 3 ಮುಖ್ಯ ಕಾರಣ ಗಳನ್ನು ಪಟ್ಟಿ ಮಾಡುವುದಿದ್ದರೆ, ಮೊದಲನೆಯದಾಗಿ ಅದರ ಅತಿ ದೊಡ್ಡ ಗಾತ್ರದ ಜಿಡಿಪಿ. (ಒಟ್ಟು ದೇಶೀಯ ಉತ್ಪನ್ನ).
ಇದನ್ನೂ ಓದಿ: Keshav Prasad B Column: ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ?
2024ರಲ್ಲಿ 29 ಲಕ್ಷ ಕೋಟಿ ಡಾಲರ್ ಮೌಲ್ಯದ ಜಿಡಿಪಿಯನ್ನು ಅಮೆರಿಕ ಹೊಂದಿದ್ದು, ಇದು ಪ್ರಪಂಚದ ಅತ್ಯಧಿಕ. ಕಳೆದ ವರ್ಷ ಶೇ.2.8ರ ಉತ್ತಮ ಪ್ರಗತಿಯನ್ನೂ ದಾಖಲಿಸಿತ್ತು. ಅಷ್ಟು ದೊಡ್ಡ ಮೌಲ್ಯದ ಜಿಡಿಪಿಗೆ 2.8 ಪರ್ಸೆಂಟ್ ವಾರ್ಷಿಕ ಬೆಳವಣಿಗೆ ಎಂದರೆ ಉತ್ತಮವೇ ಆಗಿದೆ. ಇಕಾನಮಿಯಾಗಿ ಎರಡನೇ ಸ್ಥಾನದಲ್ಲಿರುವ ಚೀನಾ 19 ಲಕ್ಷ ಕೋಟಿ ಡಾಲರ್ ಗಾತ್ರದ್ದಾಗಿದ್ದು, ಅಮೆರಿಕಕ್ಕೆ ಹೋಲಿಸಿದರೆ ಸದ್ಯಕ್ಕೆ 10 ಲಕ್ಷ ಕೋಟಿ ಡಾಲರ್‌ಗಳ ಅಂತರವಿದೆ.
ಎರಡನೆಯದಾಗಿ, ಅಮೆರಿಕದ ಸದೃಢ ಹಣಕಾಸು ವ್ಯವಸ್ಥೆಯು ಸಂಶೋಧನೆ, ಹೂಡಿಕೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮೂರನೆಯದಾಗಿ ಡಾಲರ್ ಅಂತಾರಾಷ್ಟ್ರೀಯ ಕರೆನ್ಸಿ ಯಾಗಿದ್ದು ಜನಪ್ರಿಯವಾಗಿದೆ. ಬಹುತೇಕ ವಿದೇಶಿ ಹಣಕಾಸು ವರ್ಗಾವಣೆಗಳು ಡಾಲರ್ ಮೂಲಕ ನಡೆಯುತ್ತವೆ.
ಹೀಗಾಗಿ ಅಮೆರಿಕಕ್ಕೆ ಅಗ್ಗದ ದರದಲ್ಲಿ ಸಾಲವನ್ನು ಪಡೆಯಲು ಅನುಕೂಲವಾಗುತ್ತದೆ. ಇನ್ನು, ಅಮೆರಿಕವು ಹೇರಳ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ವಿಶಾಲ ಭೂಪ್ರದೇಶ, ಫಲವತ್ತಾದ ಭೂಮಿ, ಕಚ್ಚಾ ತೈಲ, ಅನಿಲ, ನಾನಾ ಖನಿಜಗಳ ಸಂಪತ್ತನ್ನು ಒಳಗೊಂಡಿದೆ. ಅಮೆರಿಕ ಮನಸ್ಸು ಮಾಡಿದರೆ ವಿಶ್ವದ ಅತಿ ಹೆಚ್ಚು ತೈಲ ಉತ್ಪಾದಿಸುವ ದೇಶವಾಗಬಲ್ಲದು.

ಉದಾಹರಣೆಗೆ 2018 ಮತ್ತು 2023ರ ನಡುವೆ ಕೊಲ್ಲಿ ರಾಷ್ಟ್ರಗಳನ್ನೂ ಮೀರಿಸಿ, ಜಗತ್ತಿನ ಅತಿ ದೊಡ್ಡ ತೈಲೋತ್ಪಾದಕ ದೇಶವೆನ್ನಿಸಿತ್ತು. ಈ ಅವಧಿಯಲ್ಲಿ ಅಮೆರಿಕ ಅತ್ಯಧಿಕ ತೈಲವನ್ನು ಉತ್ಪಾದಿಸಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರಗಳು ತಮ್ಮ ಉನ್ನತ ಮಟ್ಟದಿಂದ ಇಳಿದಿದ್ದವು.
ಹಾಗಾದರೆ, ಅಮೆರಿಕ ಈಗ ಚೀನಾ ವಿರುದ್ಧ ಭಾರಿ ವಾಣಿಜ್ಯ ಸಮರವನ್ನೇ ನಡೆಸುತ್ತಿರುವುದೇಕೆ? ಅಧ್ಯಕ್ಷ ಟ್ರಂಪ್ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಘೋಷಣೆಯನ್ನು ಬಳಸಿರುವುದೇಕೆ? ಚೀನಾ ವಿರುದ್ಧ ಬರೋಬ್ಬರಿ 125 ಪರ್ಸೆಂಟ್ ಆಮದು ಸುಂಕವನ್ನು ಜಡಿದಿರುವುದೇಕೆ? ಯಾವ ದೇಶವೂ ನಿರಂತರವಾಗಿ ಸಾಲವನ್ನು ಹೆಚ್ಚಿಸಿಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಸಾಲವು ಮಿತಿ ಮೀರಿದರೆ ಆರ್ಥಿಕ ಬಿಕ್ಕಟ್ಟು ಒಂದಿಂದು ದಿನ ಬಿಸಿ ಮುಟ್ಟಿಸುವುದು ನಿಶ್ಚಿತ. ಪ್ರತಿ ವರ್ಷ ಅಮೆರಿಕದ ವಿತ್ತೀಯ ಕೊರತೆ ಹೆಚ್ಚುತ್ತಿರುವುದರಿಂದ ಹೆಚ್ಚೆಚ್ಚು ಸಾಲವನ್ನೂ ಮಾಡಬೇಕಾದ ಸ್ಥಿತಿ ಬಂದಿದೆ.
ಆದ್ದರಿಂದ ವಿತ್ತೀಯ ಕೊರತೆಗೆ ಕಾರಣವಾಗಿರುವ ವ್ಯಾಪಾರ ಕೊರತೆಯನ್ನು ನಿಯಂತ್ರಿಸಲು ಟ್ರಂಪ್ ಮುಂದಾಗಿದ್ದಾರೆ. ಅದರ ಭಾಗವಾಗಿ ಚೀನಾ ವಿರುದ್ಧ ಸುಂಕ ಸಮರ ಸಾರಿದ್ದಾರೆ. ಆದರೆ ಚೀನಾ ಕೂಡ ಸುಲಭವಾಗಿ ತಲೆಬಾಗುವಂಥ ದೇಶವಲ್ಲ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಶ್ರೀಮಂತಿಕೆಯಲ್ಲಿ ಅಮೆರಿಕವನ್ನು ಚೀನಾ ಹಿಂದಿಕ್ಕಲಿದೆಯೇ? ಆದ್ದರಿಂದಲೇ ಟ್ರಂಪ್ ಅವರ ಟಾರಿಫ್ ವಾರ್‌ನಲ್ಲಿ ಚೀನಾ ಏಕೈಕ ಅತಿ ದೊಡ್ಡ ಟಾರ್ಗೆಟ್ ಆಗಿದೆಯೇ? ಎಂಬ ಪ್ರಶ್ನೆ ಉಂಟಾಗಿದೆ. ಏಕೆಂದರೆ ರೆಸಿಪ್ರೋ ಕಲ್ ಟಾರಿಫ್ ಗೆ (ಪ್ರತಿ ಸುಂಕ) ಮಿಕ್ಕೆಲ್ಲ ರಾಷ್ಟ್ರಗಳಿಗೆ 90 ದಿನಗಳ ವಿರಾಮ ವನ್ನು ನೀಡಿದ್ದರೂ, ಚೀನಾಕ್ಕೆ ಮಾತ್ರ ಕೊಟ್ಟಿಲ್ಲ. ಬದಲಿಗೆ ಸುಂಕವನ್ನು ಶೇ.104ರಿಂದ 125ಕ್ಕೆ ಏರಿಸಿದೆ.
ಚೀನಾ ವರ್ಷದಿಂದ ವರ್ಷಕ್ಕೆ ಬಲಾಢ್ಯವಾಗುತ್ತಿದೆ, ಅಮೆರಿಕಕ್ಕೆ ನೇರ ಪೈಪೋಟಿಯನ್ನು ನೀಡುತ್ತಿದೆ. ಜಿಡಿಪಿ ಲೆಕ್ಕದಲ್ಲಿ ಚೀನಾ 2ನೇ ಸ್ಥಾನದಲ್ಲಿರಬಹುದು. ಆದರೆ ಖರೀದಿಸುವ ಸಾಮರ್ಥ್ಯ ವನ್ನು ಅಳೆಯುವ ಪರ್ಚೇಸಿಂಗ್ ಪವರ್ ಪಾರಿಟಿ (Purchasing power parity) ಲೆಕ್ಕದಲ್ಲಿ ಚೀನಾ ಈಗ ಜಗತ್ತಿನ ಮೊದಲ ಸ್ಥಾನದಲ್ಲಿದೆ.
ಕೆಲ ಆರ್ಥಿಕ ತಜ್ಞರ ಪ್ರಕಾರ 2035ರ ವೇಳೆಗೆ ಚೀನಾದ ಜಿಡಿಪಿಯು ಅಮೆರಿಕವನ್ನು ಹಿಂದಿಕ್ಕಲಿದೆ. ಮೊದಲಿಗೆ ಅಮೆರಿಕದ ಸಾಲ ಏಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದನ್ನು ನೋಡೋಣ. ತನ್ನ ಆದಾಯಕ್ಕಿಂತ ಹೆಚ್ಚು ಖರ್ಚನ್ನು ಅಮೆರಿಕ ಮಾಡುತ್ತಿದೆ. ಇದರ ಪರಿಣಾಮ ಪ್ರತಿ ವರ್ಷ ಅಮೆರಿಕದ ವಿತ್ತೀಯ ಕೊರತೆ ಹೆಚ್ಚುತ್ತಿದೆ. ಈ ಕೊರತೆಯನ್ನು ಭರಿಸಲು ಸರಕಾರ ಹಚ್ಚೆಚ್ಚು ಸಾಲ ವನ್ನೂ ಮಾಡುತ್ತಿದೆ. ಟ್ರೆಶರಿ ಸೆಕ್ಯುರಿಟೀಸ್, ಬಾಂಡ್ ಅಥವಾ ಸಾಲಪತ್ರಗಳನ್ನು ಬಿಡುಗಡೆಗೊಳಿಸಿ ಸಾಲ ಪಡೆಯುತ್ತದೆ.
ಇದನ್ನು ಅಮೆರಿಕನ್ನರು ಹಾಗೂ ವಿದೇಶಿ ಹೂಡಿಕೆದಾರರು, ನಾನಾ ದೇಶಗಳು ಖರೀದಿಸುತ್ತವೆ. ದೇಶೀಯ ಹೂಡಿಕೆದಾರರಲ್ಲಿ ನಾಗರಿಕರು, ಪಿಂಚಣಿ ಫಂಡ್‌ಗಳು, ಹಣಕಾಸು ಸಂಸ್ಥೆಗಳು ಇದ್ದರೆ, ವಿದೇಶಿ ಹೂಡಿಕೆದಾರರಲ್ಲಿ ಜಪಾನ್, ಚೀನಾ, ಬ್ರಿಟನ್ ಮತ್ತಿತರ ದೇಶಗಳಿವೆ. ಜಪಾನ್ ಮತ್ತು ಚೀನಾವು ಅಮೆರಿಕದ ಈ ಬಾಂಡ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಈ ಸಾಲ ಪತ್ರ ಗಳಲ್ಲಿ ಹೂಡಿಕೆ ಮಾಡುವವರಿಗೆ ಅಮೆರಿಕವು ಬಡ್ಡಿ ನೀಡುತ್ತದೆ.
ಸರಕಾರದ ವೆಚ್ಚಗಳು, ಸಾಮಾಜಿಕ ಮತ್ತು ಮೂಲಸೌಕರ್ಯ ಯೋಜನೆಗಳು, ರಕ್ಷಣಾ ವೆಚ್ಚಗಳು ಸಾಲ ಹೆಚ್ಚಳಕ್ಕೆ ಕಾರಣವಾಗಿವೆ. ಆರ್ಥಿಕ ಹಿಂಜರಿತ (ರಿಸೆಶನ್), ಕೋವಿಡ್ ಬಿಕ್ಕಟ್ಟಿನಿಂದಲೂ ಸಾಲ ವೃದ್ಧಿಸಿದೆ. ಸಾಲಕ್ಕೆ ಬಡ್ಡಿ ನೀಡಬೇಕಿರುವುದರಿಂದ ಒಟ್ಟು ಸಾಲ ಏರುತ್ತಿದೆ.
ಉದಾಹರಣೆಗೆ 2025ರ ಅಮೆರಿಕದ ಬಜೆಟ್ ಮುನ್ನೋಟ ಗಮನಿಸಿ. ಬಜೆಟ್ ಕೊರತೆ 1.9 ಲಕ್ಷ ಕೋಟಿ ಡಾಲರ್‌ಗೆ ಏರಿದೆ. ಸಾಲದ ಪ್ರಮಾಣ ಜಿಡಿಪಿಯ ಶೇ.100ನ್ನು ಮೀರಿದೆ. ಬಜೆಟ್ ವೆಚ್ಚದ ಮೊತ್ತ 7 ಲಕ್ಷ ಕೋಟಿ ಡಾಲರ್ ಆಗಿದ್ದರೆ, ಆದಾಯ 5.2 ಲಕ್ಷ ಕೋಟಿ ಡಾಲರ್ ಆಗಿದೆ. ಇದರಿಂದಾಗಿ ಕೊರತೆ 1.9 ಲಕ್ಷ ಕೋಟಿ ಡಾಲರ್‌ಗೆ ಮುಟ್ಟಿದೆ. ಸಾಲದ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದ್ದರೆ ಅಮೆರಿಕದ ಬಾಂಡ್ ಗಳಲ್ಲಿ ಹೂಡಿಕೆ ಮಾಡಿರುವ ಚೀನಾ, ಜಪಾನ್ ಮತ್ತಿತರ ವಿದೇಶಗಳಿಗೆ ಬಡ್ಡಿಯನ್ನೂ ಕೊಡಬೇಕಾಗುತ್ತದೆ.
ಸುಂಕ ಸಮರದಿಂದ ರಿಸೆಶನ್ ಆಗಬಹುದು ಎನ್ನುವ ಭೀತಿಯೂ ಎಲ್ಲಾ ಮೂಲೆಯಲ್ಲಿದೆ. ಹಾಗಂತ ಅಮೆರಿಕಕ್ಕೆ ಸಾಲ ಹೊಸತೇನಲ್ಲ. ಹುಟ್ಟಿದಾಗಿನಿಂದ ಸಾಲವನ್ನು ಪಡೆದುಕೊಂಡೇ ಬೆಳೆದಿದೆ. ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಸಾಲ ಕೂಡ ಹುಟ್ಟಿಕೊಂಡಿತ್ತು. 1791ರ ವೇಳೆಗೆ 75 ದಶಲಕ್ಷ ಡಾಲರ್ ಇದ್ದ ಅಮೆರಿಕದ ಸಾಲ ಮುಂದಿನ 45 ವರ್ಷಗಳಲ್ಲಿ ವ್ಯಾಪಕವಾಗಿ ಹೆಚ್ಚಳವಾಗಿತ್ತು.
ಮೊದಲ ಜಾಗತಿಕ ಯುದ್ಧದ ಬಳಿಕ ಸಾಲ 22 ಶತಕೋಟಿ ಡಾಲರ್‌ಗೆ ಬೆಳೆದಿತ್ತು. ಅಫ್ಘಾನಿಸ್ತಾನ ಮತ್ತು ಇರಾಕ್ ವಿರುದ್ಧದ ಯುದ್ಧ, 2008ರ ಜಾಗತಿಕ ಆರ್ಥಿಕ ಹಿಂಜರಿತ, ಕೋವಿಡ್-19 ಬಿಕ್ಕಟ್ಟು ಸಂದರ್ಭ ಸಾಲ ಏರಿತ್ತು. ಪರಿಹಾರ ಕ್ರಮಗಳು, ತೆರಿಗೆ ಕಡಿತ, ಸರಕಾರದ ವೆಚ್ಚ ಹೆಚ್ಚಳದಿಂದ ಸಾಲ ವೂ ವೃದ್ಧಿಸಿತ್ತು. 2013ರಲ್ಲಿ ಮೊದಲ ಬಾರಿಗೆ ಅಮೆರಿಕದ ಸಾಲ ಮತ್ತು ಜಿಡಿಪಿ ಎರಡೂ ಒಂದೇ ಮಟ್ಟದಲ್ಲಿತ್ತು, 16.7 ಲಕ್ಷ ಕೋಟಿ ಡಾಲರ್‌ನಷ್ಟಿತ್ತು.
ಅಮೆರಿಕವು 70ರ ದಶಕದಲ್ಲಿ ಉತ್ಪಾದನಾ ವಲಯದಲ್ಲಿ ತಕ್ಕಮಟ್ಟಿಗೆ ಬಲಾಢ್ಯವಾಗಿತ್ತು. ಆದರೆ ಬಳಿಕ ತನ್ನ ತಂತ್ರಗಾರಿಕೆಯನ್ನು ಬದಲಿಸಿತು. ಹೆಚ್ಚಿನ ಮೌಲ್ಯವಿರುವ ಮತ್ತು ತಂತ್ರಜ್ಞಾನ ಅಧಾರಿತ ಉದ್ದಿಮೆಗಳನ್ನು ಬೆಳೆಸಿತು. ಉತ್ಪಾದನಾ ವಲಯದ ಚಟುವಟಿಕೆಗಳು ಹೊರಗುತ್ತಿಗೆ ಪಾಲಾದವು. ಅಗ್ಗದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಯಿತು.
ಚೀನಾ ಇದರ ಲಾಭವನ್ನು ಪಡೆಯಿತು. ಜಗತ್ತಿನ ಕಾರ್ಖಾನೆಯಾಗಿ ಬದಲಾದ ಚೀನಾ, ಅಮೆರಿಕ ಕ್ಕೂ ತನ್ನ ಉತ್ಪನ್ನಗಳನ್ನು ವ್ಯಾಪಕವಾಗಿ ರಫ್ತು ಮಾಡಿತು. ಆದರೆ ಈಗ ಟ್ರಂಪ್ ಅವರು ವ್ಯಾಪಾರ ಕೊರತೆಯನ್ನು ನೀಗಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಅಮೆರಿಕದಲ್ಲೂ ಉತ್ಪಾದನೆ ಯನ್ನು ಹೆಚ್ಚಿಸಬೇಕೆಂದು ವಾದಿಸುತ್ತಿzರೆ. ಇದಕ್ಕಾಗಿ ದೇಶೀಯ ಉದ್ದಿಮೆಗಳಿಗೆ ರಕ್ಷಣಾತ್ಮಕವಾಗಿ ನೆರವಾ ಗಲು ಆಮದು ಸುಂಕವನ್ನು ಹಠಾತ್ ಏರಿಸಿದ್ದಾರೆ.
ಇಲ್ಲೂ ಮುಖ್ಯವಾಗಿ ಚೀನಾ ವಿರುದ್ಧ ದೊಡ್ಡ ಪ್ರಹಾರವನ್ನೇ ಮಾಡಿದ್ದಾರೆ. ಚೀನಾ ಕೂಡ ಮಾತು ಕತೆಗೆ ಬರಬೇಕು ಎಂಬ ತಂತ್ರಗಾರಿಕೆ ಈ ನಡೆಯಲ್ಲಿದೆ. ಆದರೆ ಸದ್ಯಕ್ಕೆ ಚೀನಾ ‘ಡೋಂಟ್ ಕೇರ್’ ಎನ್ನುತ್ತಿದೆ. ಎರಡು ಮದ್ದಾನೆಗಳ ಸಂಘರ್ಷವನ್ನು ಜಗತ್ತು ಆತಂಕದಿಂದ ದಿಟ್ಟಿಸುತ್ತಿದೆ. ಷೇರು ಮಾರುಕಟ್ಟೆಗಳು ಅಲ್ಲೋಲಕಲ್ಲೋಲವಾಗಿವೆ.
ಜಾಗತೀಕರಣದ ಪ್ರಯೋಜನಗಳು ಟ್ರಂಪ್ ಅವರಿಗೆ ತಿಳಿಯದಿರುವ ಸಂಗತಿಯೇನೂ ಅಲ್ಲ, ಅವರೂ ಮೂಲತಃ ಉದ್ಯಮಿ. ಆದರೆ ಸುಂಕ ಸಮರವನ್ನು ಯಾವ ಮಟ್ಟಕ್ಕೆ ತೀವ್ರಗೊಳಿಸ ಬಹುದು ಎಂಬುದಕ್ಕೆ ಟ್ರಂಪ್- ಕ್ಸಿ ಜಿನ್‌ಪಿಂಗ್ ಸಾಕ್ಷಿಯಾಗುತ್ತಿದ್ದಾರೆ. ಕೊನೆಯದಾಗಿ ಈಗ ನಿಮಗೆ ‘ಸಾಲ ಮಾಡಿ ತುಪ್ಪ ತಿನ್ನೋದು’ ಗಾದೆಯ ಮೇಲೆ ನಂಬಿಕೆ ಮರಳಬಹುದು, ಅಲ್ಲವೇ?