ಜೆನ್ ಝೀ ಪ್ರತಿಭಟನೆ ವೇಳೆ ನೇಪಾಳ ಜೈಲಿನಿಂದ ಪರಾರಿಯಾಗಿದ್ದ ಕ್ರಿಮಿನಲ್ ಗುಜರಾತ್‌ನಲ್ಲಿ ಅರೆಸ್ಟ್
ನೇಪಾಳದಲ್ಲಿ ನಡೆದ ಜೆನ್ ಝೀ ಪ್ರತಿಭಟನೆಗಳ ಗೊಂದಲದ ಮಧ್ಯೆ ಜೈಲಿನಿಂದ ಪರಾರಿಯಾಗಿದ್ದ ಡ್ರಗ್ಸ್ ಸಾಗಣೆದಾರನನ್ನು ಭಾರತೀಯ ಭದ್ರತಾ ಸಂಸ್ಥೆಗಳು ಗುಜರಾತ್‌ನಲ್ಲಿ ಬಂಧಿಸಿವೆ. ಆರೋಪಿಯ ವಿರುದ್ಧ ಮಾದಕ ದ್ರವ್ಯ ಸಾಗಣೆ ಪ್ರಕರಣಗಳು ಇದ್ದು, ತನಿಖೆ ಮುಂದುವರಿದಿದೆ.
ಸಾಂದರ್ಭಿಕ ಚಿತ್ರ -
ಗಾಂಧಿನಗರ, ಜ. 27: ಕಳೆದ ವರ್ಷ ನೇಪಾಳದಲ್ಲಿ ನಡೆದ ಹಿಂಸಾತ್ಮಕ ಜೆನ್ ಝೀ (Gen Z) ಪ್ರತಿಭಟನೆ ವೇಳೆ ಜೈಲಿನಿಂದ ಪರಾರಿಯಾಗಿದ್ದ ಮಾದಕ ವಸ್ತು ಸಾಗಾಟ ಪ್ರಕರಣದ ಆರೋಪಿಯನ್ನು ಮಂಗಳವಾರ ಗುಜರಾತ್‌ನ ಅಹಮದಾಬಾದ್ (Ahmedabad)ನಲ್ಲಿ ಬಂಧಿಸಲಾಗಿದೆ. ಭಾರತೀಯ ಮೂಲದ ಧರ್ಮೇಶ್ ಚುನಾರಾ (Dharmesh Chunara) ಬಂಧಿತ ಆರೋಪಿ. ಈತ ಅಹಮದಾಬಾದ್‌ನ ಕಾಗಡಾಪೀಠ್‌ನಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ಅಡಗಿಕೊಂಡಿದ್ದಾಗ ಸಿಕ್ಕಿ ಬಿದ್ದಿದ್ದಾನೆ.
ಥೈಲ್ಯಾಂಡ್‌ನ ಬ್ಯಾಂಕಾಕ್‌ನಿಂದ ಸುಮಾರು 13 ಕೋಟಿ ರು. ಮೌಲ್ಯದ 13 ಕಿಲೋ ಗ್ರಾಂ ಹೈಬ್ರಿಡ್ ಗಾಂಜಾವನ್ನು ಸಾಗಿಸಲು ಯತ್ನಿಸುತ್ತಿದ್ದ ವೇಳೆ ಕಳೆದ ವರ್ಷ ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಧರ್ಮೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಜೆನ್ ಝೀಗಳ ಪ್ರತಿಭಟನೆ ವೇಳೆ ಸ್ಥಳೀಯ ಯುವಕರು ಜೈಲಿನ ಮೇಲೆ ದಾಳಿ ನಡೆಸಿದಾಗ, ಧರ್ಮೇಶ್ ಜೈಲಿನಿಂದ ತಪ್ಪಿಸಿಕೊಳ್ಳಲು ಅಹಮದಾಬಾದ್‌ಗೆ ಬಂದಿದ್ದ.
ಸೋಶಿಯಲ್ ಮಿಡಿಯಾ ಪ್ಲಾಟ್‌ಫಾರ್ಮ್ ನಿಷೇಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ಆರಂಭವಾದ ಈ ಪ್ರತಿಭಟನೆ ನಂತರ ಭ್ರಷ್ಟಾಚಾರದ ವಿರುದ್ಧದ ದೊಡ್ಡ ಆಂದೋಲನವಾಗಿ ಮಾರ್ಪಟ್ಟು, ಆಗಿನ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ಸಹ ನೀಡಿದ್ದರು. ಈ ಗಲಭೆಯಲ್ಲಿ 75ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಗಲಭೆಗಳ ನಂತರ, ನೇಪಾಳ ಅಧಿಕಾರಿಗಳು ತಮ್ಮ ಜೈಲುಗಳಿಂದ ಪರಾರಿಯಾದ ಹಲವು ಭಾರತೀಯ ನಾಗರಿಕರ ವಿವರಗಳನ್ನು ಭಾರತದೊಂದಿಗೆ ಹಂಚಿಕೊಂಡಿದ್ದರು.
ಆರೋಪಿ ಸಿಕ್ಕಿಬಿದ್ದು ಹೇಗೆ?
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಹಾಗೂ ತಿಂಗಳಾನುಗಟ್ಟಲೆ ನಡೆಸಿದ ಶೋಧ ಕಾರ್ಯಾಚರಣೆ ಬಳಿಕ, ಅಹಮದಾಬಾದ್ ಕ್ರೈಂ ಬ್ರಾಂಚ್ ತಂಡವು ಧರ್ಮೇಶ್‌ನನ್ನು ಕಾಗಡಾಪಿಠ್ ಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸಿದೆ.
ಭಾರಿ ಹಿಮಪಾತದಿಂದ ಹಿಮಾಚಲ ಪ್ರದೇಶದಲ್ಲಿ 1,200ಕ್ಕೂ ಹೆಚ್ಚು ರಸ್ತೆ ಬಂದ್
ಧರ್ಮೇಶ್ ಈ ಹಿಂದೆ ನೇಪಾಳ ಮೂಲಕ ಭಾರತಕ್ಕೆ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಅಹಮದಾಬಾದ್‌ನಲ್ಲಿಯೂ ಇದೇ ರೀತಿಯ ಚಟುವಟಿಕೆಗೆ ಆತ ಮುಂದಾಗಿದ್ದಾನೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಲ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಧರ್ಮೇಶ್ ಮಾದಕ ವಸ್ತು ವ್ಯಸನಕ್ಕೆ ಒಳಗಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಬ್ರಾಂಚ್ ಜಂಟಿ ಆಯುಕ್ತ ಶರದ್ ಸಿಂಗಲ್ ಧರ್ಮೇಶ್ ಬಂಧನವನ್ನು ದೃಢಪಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಸೂರತ್ ಮೂಲದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಧರ್ಮೇಶ್‌ನನ್ನು ಇದೀಗ ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ಬಳಿಕ ಅವನನ್ನು ನೇಪಾಳಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.