ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Himachal Pradesh Snowfall: ಭಾರಿ ಹಿಮಪಾತದಿಂದ ಹಿಮಾಚಲ ಪ್ರದೇಶದಲ್ಲಿ 1,200ಕ್ಕೂ ಹೆಚ್ಚು ರಸ್ತೆ ಬಂದ್

ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ ಮತ್ತು ಮಳೆಯಿಂದ 1,250ಕ್ಕೂ ಹೆಚ್ಚು ರಸ್ತೆ ಬಂದ್ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಈ ಮಧ್ಯೆಯೂ ಹಿಮಾವೃತ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಹಿಮಾಚಲ ಪ್ರದೇಶದಲ್ಲಿ 1,200ಕ್ಕೂ ಹೆಚ್ಚು ರಸ್ತೆ ಬಂದ್

ಹಿಮಾಚಲ ಪ್ರದೇಶದಲ್ಲಿ ಹಿಮಪಾತ -

Profile
Sushmitha Jain Jan 27, 2026 8:22 PM

ಶಿಮ್ಲಾ, ಜ. 27: ಹಿಮಾಚಲ ಪ್ರದೇಶ (Himachal Pradesh)ದಲ್ಲಿ ಭಾರಿ ಹಿಮಪಾತ ಹಾಗೂ ಮಳೆಯ ಪರಿಣಾಮವಾಗಿ 1,250ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆಯೂ ಹಿಮದಿಂದ ಆವೃತವಾದ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ನಿರಂತರವಾಗಿ ಆಗಮಿಸುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್ (Vikramaditya Singh) ಮಾತನಾಡಿ, ʼʼಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಸ್ನೋ ಬ್ಲೋಯರ್‌ಗಳು ಮತ್ತು ಜೆಸಿಬಿ ಯಂತ್ರಗಳ ಮೂಲಕ ಹಿಮ ತೆರವು ಮಾಡಲಾಗುತ್ತಿದ್ದು, ರಸ್ತೆಗಳನ್ನು ಮತ್ತೆ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಮುಕ್ತವಾಗಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆʼʼ ಎಂದರು. “ಹಲವೆಡೆ ಪ್ರವಾಸಿಗರು ಸಿಲುಕಿದ್ದಾರೆ. ಗರಿಷ್ಠ ಅನುಕೂಲತೆ ಒದಗಿಸಲು ನಾವು ಎಸ್‌ಪಿ, ಡಿಸಿ ಸೇರಿದಂತೆ ಜಿಲ್ಲಾಡಳಿತಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಇಂತಹ ಹವಾಮಾನದಲ್ಲಿ ಕೆಲವು ತೊಂದರೆಗಳು ಸಹಜ. ಆದರೆ ಸಾಧ್ಯವಾದಷ್ಟು ಬೇಗ ರಸ್ತೆಗಳನ್ನು ತೆರೆಯಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ತಿಳಿಸಿದರು.

ಹಿಮಪಾತದ ಬಗ್ಗೆ ಸಚಿವ ವಿಕ್ರಮಾದಿತ್ಯ ಸಿಂಗ್ ಅವರಿಂದ ಮಾಹಿತಿ:



“ರಾಜ್ಯದ ಜನರು ಬಹುಕಾಲದಿಂದ ಮಳೆ ಮತ್ತು ಹಿಮಪಾತಕ್ಕೆ ಕಾದಿದ್ದು, ಇದೀಗ ಉತ್ತಮ ಪ್ರಮಾಣದಲ್ಲಿ ಆಗಿದೆ. ಇದಕ್ಕಾಗಿ ಎಲ್ಲ ದೇವರಿಗೆ ಹಾಗೂ ರಾಜ್ಯದ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ಮುಂದಿನ ಬೆಳೆ ಬೆಳೆಯಲು ತುಂಬಾ ಅನುಕೂಲಕರವಾಗಲಿದೆ" ಎಂದು ಸಚಿವರು ಹೇಳಿದರು. ಇದರಿಂದಾಗುವ ದೀರ್ಘಾವಧಿಯ ಲಾಭದ ಬಗ್ಗೆ ಮಾತನಾಡಿದ ಸಚಿವರು, ಹಿಮಪಾತ ಮಣ್ಣಿನ ತೇವಾಂಶ ಕಾಪಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಶಿಮ್ಲಾದಲ್ಲಿ ಹಿಮಪಾತದ ದೃಶ್ಯ:



ಪ್ರವಾಸೋದ್ಯಮ ರಾಜ್ಯದ ಆದಾಯದ ಪ್ರಮುಖ ಮೂಲ ಎಂದ ಸಚಿವರು, “ಪ್ರವಾಸಿಗರು ಬರುತ್ತಿರುವುದು ಉತ್ತಮ. ಇದು ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತದೆ. ಹಿಮಾಚಲವು ದೇವಭೂಮಿ. ‘ಅತಿಥಿ ದೇವೋ ಭವ’ ತತ್ತ್ವವನ್ನು ನಂಬಿದ್ದೇವೆ. ಆದರೆ ಪ್ರವಾಸಿಗರು ಜವಾಬ್ದಾರಿಯುತವಾಗಿ ಪ್ರಯಾಣಿಸಬೇಕು ಮತ್ತು ರಾಜ್ಯದ ಸಂಸ್ಕೃತಿ, ಪರಂಪರೆ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು” ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಭಾರಿ ಹಿಮಪಾತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ: ಕಡು ಚಳಿಗೆ ದೇಶವೇ ತತ್ತರ

ರಸ್ತೆ ಬಂದ್, ಸಂಚಾರ ದಟ್ಟಣೆ ಮತ್ತು ಹವಾಮಾನದ ಎಚ್ಚರಿಕೆಗಳ ನಡುವೆಯೂ ಪ್ರವಾಸಿಗರು ಹಿಮಪಾತವನ್ನು ಆನಂದಿಸುತ್ತಿದ್ದಾರೆ. ದೆಹಲಿಯಿಂದ ಬಂದ ಪ್ರವಾಸಿ ಡಾನಿಯಲ್ ಎಎನ್‌ಐ ಸುದ್ದಿಸಂಸ್ಥೆ ಮಾತನಾಡಿ, “ನಾವು ದೆಹಲಿಯಿಂದ ಪ್ರವಾಸಕ್ಕೆ ಬಂದಿದ್ದೇವೆ. ಸಂಚಾರ ಮತ್ತು ಹಿಮದ ಕಾರಣ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹವಾಮಾನ ಇಲಾಖೆ ಎರಡು ದಿನಗಳ ಎಚ್ಚರಿಕೆ ನೀಡಿರುವುದರಿಂದ ಉಳಿಯಬೇಕೋ ಅಥವಾ ಹಿಂದಿರುಗಬೇಕೋ ಎಂಬ ಗೊಂದಲದಲ್ಲಿದ್ದೇವೆ. ಸಂಚಾರದಿಂದ ತೊಂದರೆ ಇದ್ದರೂ, ಹಿಮವನ್ನು ನಾವು ಆನಂದಿಸುತ್ತಿದ್ದೇವೆ. ನಾವು ಚೆನ್ನಾಗಿ ಸಮಯ ಕಳೆಯುತ್ತಿದ್ದೇವೆ” ಎಂದು ವಿವರಿಸಿದ್ದಾರೆ.

ಮುಂದಿನ ದಿನಗಳಲ್ಲಿಯೂ ಹವಾಮಾನ ಪ್ರತಿಕೂಲವಾಗುವ ಸಾಧ್ಯತೆ ಇರುವುದರಿಂದ, ಸ್ಥಳೀಯರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು, ಸಲಹೆಗಳನ್ನು ಪಾಲಿಸಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.