ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ 14 ದಿನ ನ್ಯಾಯಾಂಗ ಬಂಧನ; ಆಶ್ರಯ ಕೊಟ್ಟ ಉದ್ಯಮಿಗೆ ರಿಲೀಫ್
ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಜೀವ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಕೈ ಮುಖಂಡ ತಲೆಮರೆಸಿಕೊಂಡಿದ್ದ. ಆರೋಪಿ ಪತ್ತೆಗಾಗಿ ಮೂರು ತಂಡ ರಚಿಸಲಾಗಿತ್ತು. ಜಿಪಿಎಸ್, ಫಾಸ್ಟ್ ಟ್ಯಾಗ್ ಆಧರಿಸಿ ಆರೋಪಿಗಳನ್ನು ಕೇರಳ ಗಡಿಯಲ್ಲಿ ಪೊಲೀಸರು ಬಂಧಿಸಿದ್ದರು.
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಉದ್ಯಮಿ ಮೈಕಲ್ ರೇಗೋ -
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಪ್ರಕರಣದಲ್ಲಿ ಬಂಧನವಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ (Rajeev Gowda) 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹಾಗೂ ಆತನಿಗೆ ಆಶ್ರಯ ನೀಡಿದ್ದ ಉದ್ಯಮಿ ಮೈಕಲ್ ರೇಗೋ ಎಂಬವರನ್ನು ಕೇರಳದ ಗಡಿಯಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದರು. ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಗಳನ್ನು ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಇಂದು ಹಾಜರು ಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ರಾಜೀವ್ ಗೌಡನನ್ನು ಫೆಬ್ರವರಿ 9ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಇನ್ನು ಕೈ ಮುಖಂಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಮೈಕಲ್‌ಗೆ ಕೋರ್ಟ್‌ನಿಂದ ಜಾಮೀನು ಮಂಜೂರಾಗಿದೆ.
ಜಿಪಿಎಸ್, ಫಾಸ್ಟ್ ಟ್ಯಾಗ್ ಆಧರಿಸಿ ಆರೋಪಿಗಳ ಬಂಧಿಸಿದ್ದ ಪೊಲೀಸರು
ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕೇರಳ ಗಡಿಯಲ್ಲಿ ಸೋಮವಾರ ಸಿಕ್ಕಿಬಿದ್ದಿದ್ದ. ಜತೆಗೆ ಆತನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿಯನ್ನೂ ಪೊಲೀಸರು ಬಂಧಿಸಲಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರದ ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.
ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಆರೋಪದಲ್ಲಿ ಜ.14 ರಂದು ಎಫ್ಐಆರ್ ದಾಖಲಾಗಿತ್ತು. ನಂತರ ಆರೋಪಿ ರಾಜೀವ್ ಗೌಡ ಎಸ್ಕೇಪ್ ಆಗಿದ್ದರು. ಬೆಂಗಳೂರು ಬಿಟ್ಟು, ಬೇರೆ ಕಡೆ ಹೋಗಿದ್ದಾರೆ ಎಂಬ ಮಾಹಿತಿ ಇತ್ತು. ಈ ಬಗ್ಗೆ ಟ್ರೇಸ್ ಮಾಡಿದಾಗ ಆರೋಪಿ ಕೇರಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಜತೆ ಇನ್ನೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜಿಪಿಎಸ್, ಫಾಸ್ಟ್ ಟ್ಯಾಗ್ ಆಧಾರದ ಮೇಲೆ ಆರೋಪಿಗಳನ್ನು ಶಿಡ್ಲಘಟ್ಟ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಅವರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿ ಚಿಕ್ಕಮಗಳೂರಿನಿಂದ ಕೇರಳ ಕಡೆ ಹೋಗಿದ್ದರು. ರಾಜೀವ್ ಗೌಡ ಹಾಗೂ ಅವರ ಬ್ಯುಸಿನೆಸ್ ಪಾರ್ಟ್ನರ್, ಫರ್ನಿಚರ್ ಉದ್ಯಮಿ ಮೈಕೆಲ್ ರೆಗೋ ಮಾರುತಿ ಬ್ರೀಜಾ ಕಾರಿನಲ್ಲಿ ಇಬ್ಬರು ಸಿಕ್ಕಿದ್ದಾರೆ. ಶಿಡ್ಲಘಟ್ಟ ಠಾಣೆ, ಸೈಬರ್ ಠಾಣೆ, ಚಿಂತಾಮಣಿ ಠಾಣೆ ಇನ್ಸ್‌ಪೆಕ್ಟರ್ ತಂಡ ಸೇರಿ ಮೂರು ತಂಡಗಳು ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿರಾಯ ಅರೆಸ್ಟ್
ಜ.16ಕ್ಕೆ ರಾಜೀವ್ ಗೌಡ ಮಂಗಳೂರಿಗೆ ಭೇಟಿ ನೀಡಿದ್ದರು. ನಂತರ ನಾಲ್ಕು ದಿನಗಳು ಅಲ್ಲಿಯೇ ತಂಗಿದ್ದರು. ಮಂಗಳೂರಿನಲ್ಲಿ ಕಾರು ಯಾಕೆ ಪಾರ್ಕಿಂಗ್ ಮಾಡಿದ್ದರು ಹಾಗೂ ಆಡಿಯೋ ವಿಚಾರ, ಮೊಬೈಲ್ ಬಗ್ಗೆ ತನಿಖೆ ಮಾಡಲಾಗುತ್ತಿದೆ. ತನಿಖೆಗೆ ರಾಜೀವ್ ಗೌಡ ಸ್ಪಂದಿಸುತ್ತಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.