ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಸೇಡು; ಸರ್ಕಾರಿ ಕಚೇರಿಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ ಗುಮಾಸ್ತ
Secret Camera Found: ಸರ್ಕಾರಿ ಕಚೇರಿಯೊಂದರ ಶೌಚಾಲಯದಲ್ಲಿ ಕ್ಯಾಮರಾ ಅಳವಡಿಸಿದ ಸಂಬಂಧ ತನಿಖೆ ನಡೆಸಿದ ಪೊಲೀಸರು ಗುಮಾಸ್ತನನ್ನು ಬಂಧಿಸಿದ್ದಾರೆ. ಒಡಿಶಾದ ಜಗತ್ಸಿಂಗ್‌ಪುರದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಸಂಜಯ್ ಅಧೇಕರ್ ಎಂದು ಗುರುತಿಸಲಾಗಿದೆ. ಮಹಿಳಾ ಸಹೋದ್ಯೋಗಿಯೊಂದಿಗೆ ಪ್ರೇಮಾಂಕುರವೇ ಘಟನೆಗೆ ಕಾರಣ ಎನ್ನಲಾಗಿದೆ.
ಮಹಿಳಾ ಶೌಚಾಲಯದಲ್ಲಿ ಪತ್ತೆಯಾದ ರಹಸ್ಯ ಕ್ಯಾಮರಾ, ಪೊಲೀಸರಿಂದ ಘಟನೆಯ ಮಾಹಿತಿ -
ಭುವನೇಶ್ವರ, ಜೂ. 1: ಸರ್ಕಾರಿ ಕಚೇರಿಯೊಂದರ ಶೌಚಾಲಯದಲ್ಲಿ (Women's Washroom) ಕ್ಯಾಮರಾ ಅಳವಡಿಸಿದ ಸಂಬಂಧ ತನಿಖೆ ನಡೆಸಿದ ಪೊಲೀಸರು ಗುಮಾಸ್ತನನ್ನು ಬಂಧಿಸಿದ್ದಾರೆ. ಒಡಿಶಾದ (Odisha) ಜಗತ್ಸಿಂಗ್‌ಪುರದಲ್ಲಿ ಈ ಘಟನೆ ನಡೆದಿದೆ. ಬಂಧಿತ ಗುಮಾಸ್ತನಿಗೆ ಮಹಿಳಾ ಸಹೋದ್ಯೋಗಿಯೊಂದಿಗೆ ಪ್ರೇಮಾಂಕುರ ಉಂಟಾಗಿತ್ತು. ಆದರೆ ಆಕೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರದೇ ಇದ್ದುದರಿಂದ ಈ ಕೃತ್ಯ ಎಸಗಿದ್ದಾನೆ.
ಆರೋಪಿಯನ್ನು ಸಂಜಯ್ ಅಧೇಕರ್ ಎಂದು ಗುರುತಿಸಲಾಗಿದೆ. ಆತನಿಗೆ ಮಹಿಳಾ ಸಿಬ್ಬಂದಿಗೆ ಪ್ರೇಮಾಂಕುರವಾಗಿದೆ. ಆದರೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದಾಗ, ಆಕೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಲು ಶೌಚಾಲಯದಲ್ಲಿ ಕ್ಯಾಮರಾ ಅಳವಡಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ವರ್ಮಾ ಹೇಳಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಾವುದೇ ದೃಶ್ಯಾವಳಿಗಳನ್ನು ರೆಕಾರ್ಡ್ ಮಾಡಲಾಗಿದೆಯೇ ಸಂಗ್ರಹಿಸಲಾಗಿದೆಯೇ ಅಥವಾ ಹಂಚಿಕೊಳ್ಳಲಾಗಿದೆಯೇ ಮತ್ತು ಅಪರಾಧದಲ್ಲಿ ಬೇರೆ ಯಾವುದೇ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 10ರ ನಂತರ ಪಟಾಕಿ ಹೊಡಿತೀರಾ? AI ನಿಮ್ಮ ಫೋಟೋ ತೆಗೆದು ಪೊಲೀಸ್ರಿಗೆ ಕಳಿಸುತ್ತೆ ಹುಶಾರ್!
ಗುಪ್ತ ಕ್ಯಾಮರಾ ಬಳಕೆಯ ಬಗ್ಗೆ ಆರೋಪಿ ಅಧೇಕರ್ ಯುಟ್ಯೂಬ್ ಮೂಲಕ ತಿಳಿದುಕೊಂಡಿದ್ದ. ನಂತರ ಆನ್‌ಲೈನ್‌ನಲ್ಲಿ ರಹಸ್ಯ ಕ್ಯಾಮರಾವನ್ನು ಖರೀದಿಸಿದ್ದ. ಇದನ್ನು ಜನವರಿಯಲ್ಲಿ ಖರೀದಿಸಿ ಮಾರ್ಚ್‌ನಲ್ಲಿ ವಾಶ್ ರೂಮ್ ಒಳಗೆ ಇಡಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದರು.
ಕ್ಯಾಮರಾ ಕೆಲವು ತಿಂಗಳ ಕಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಪ್ರತಿ ವಾರ ಕ್ಯಾಮರಾ ರೀಚಾರ್ಜ್ ಮಾಡುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಶೌಚಾಲಯಕ್ಕೆ ಹೋಗುತ್ತಿದ್ದ. ಮತ್ತೆ ಅದೇ ಸ್ಥಳದಲ್ಲಿ ಕ್ಯಾಮರಾ ಇಟ್ಟು ರೆಕಾರ್ಡ್ ಮಾಡುವುದನ್ನು ಮುಂದುವರೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ತನಿಖೆಯ ಭಾಗವಾಗಿ, ಕ್ಯಾಮರಾ ಜತೆಗೆ ಮೊಬೈಲ್ ಫೋನ್, ಪೆನ್ ಡ್ರೈವ್ ಮತ್ತು ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ರೆಕಾರ್ಡಿಂಗ್ ಮತ್ತು ಯಾವುದೇ ಹೆಚ್ಚುವರಿ ಸಾಕ್ಷ್ಯಗಳನ್ನು ಗುರುತಿಸಲು ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ ವಾರವಷ್ಟೇ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಡಿಆರ್‌ಡಿಎ) ಕಚೇರಿಯ ಮಹಿಳೆಯರ ಶೌಚಾಲಯದಲ್ಲಿ ಗುಪ್ತ ಕ್ಯಾಮರಾ ಪತ್ತೆಯಾಗಿತ್ತು. ಬಳಿಕ ಇದು ವ್ಯಾಪಕ ಕಳವಳಕ್ಕೆ ಕಾರಣವಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು.
ಉದ್ಯೋಗಿಗಳು ಮತ್ತು ಮಹಿಳಾ ಹಕ್ಕುಗಳ ವಕೀಲರು, ಘಟನೆಗೆ ಕಾರಣವದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತು ಸರ್ಕಾರಿ ಕಚೇರಿಗಳಲ್ಲಿ ಗೌಪ್ಯತೆಯನ್ನು ರಕ್ಷಿಸಲು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಸಂಬಂಧಿತ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಈ ಹಿಂದೆ ಭರವಸೆ ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಗುಮಾಸ್ತನ ಬಂಧನವಾಗಿದೆ.