ಇತಿಹಾಸ ಬರೆದ ಚೀನಾ: ಮಾನವಸಹಿತ ಯಶಸ್ವಿ ಹಾರಾಟ ನಡೆಸಿದ ಎಲೆಕ್ಟ್ರಿಕ್ ವಿಮಾನ CE-25A; ವಿಡಿಯೊ ವೈರಲ್
Electric Aircraft: ಚೀನಾದ ಕಮರ್ಷಿಯಲ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಆಫ್ ಚೀನಾ ಸಂಸ್ಥೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 'CE-25A' ಎಲೆಕ್ಟ್ರಿಕ್ ವಿಮಾನವು ತನ್ನ ಮೊದಲ ಮಾನವಸಹಿತ ಪ್ರಾಯೋಗಿಕ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಚೀನಾದ ಎಲೆಕ್ಟ್ರಿಕ್ ವಿಮಾನ CE-25A -
ಬೀಜಿಂಗ್, ನ. 15: ಪರಿಸರ ಸ್ನೇಹಿ ಮತ್ತು ಆಧುನಿಕ ವಾಯಯಾನ ತಂತ್ರಜ್ಞಾನದತ್ತ ದಾಪುಗಾಲು ಹಾಕುತ್ತಿರುವ ಚೀನಾ, ತನ್ನದೇ ನಿರ್ಮಾಣದ ಎಲೆಕ್ಟ್ರಿಕ್ ವಿಮಾನ ಸಿಇ-25ಎ (CE-25A)ಯ ಚೊಚ್ಚಲ ಮಾನವಸಹಿತ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಪೈಲಟ್ ಸಹಿತ ಆಗಸಕ್ಕೆ ಚಿಮ್ಮಿದ ಈ ಎಲೆಕ್ಟ್ರಿಕ್ ವಿಮಾನವು ನಿಗದಿತ ಪರೀಕ್ಷೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಈ ಐತಿಹಾಸಿಕ ಹಾರಾಟದ ವಿಡಿಯೊ ಸದ್ಯ ವೈರಲ್ ಆಗುತ್ತಿದ್ದು, ಭಾರಿ ಕುತೂಹಲ ಮೂಡಿಸಿದೆ.
ಸಾಂಪ್ರದಾಯಿಕ ಇಂಧನ ಆಧಾರಿತ ವಿಮಾನಗಳಿಗೆ ಪರ್ಯಾಯವಾಗಿ, ಕಡಿಮೆ ವೆಚ್ಚದ ಮತ್ತು ಶೂನ್ಯ ಮಾಲಿನ್ಯದ ಎಲೆಕ್ಟ್ರಿಕ್ ವಿಮಾನಗಳನ್ನು ಅಭಿವೃದ್ಧಿಪಡಿಸಲು ಜಾಗತಿಕ ಮಟ್ಟದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಚೀನಾದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ CE-25A ವಿಮಾನವು ತನ್ನ ಮೊದಲ ಮಾನವಸಹಿತ ಹಾರಾಟದಲ್ಲೇ ಉತ್ತಮ ಕಾರ್ಯಕ್ಷಮತೆ ತೋರುವ ಮೂಲಕ ವಾಣಿಜ್ಯ ಬಳಕೆಯತ್ತ ಮೊದಲ ಹೆಜ್ಜೆ ಇಟ್ಟಿದೆ.
ಎಲೆಕ್ಟ್ರಿಕ್ ವಿಮಾನದ ಯಶಸ್ವಿ ಹಾರಾಟ:
According to Chinese state broadcaster CCTV, the CE-25A electric aircraft completed its first crewed flight in Binzhou. The aircraft was developed by state-owned manufacturer COMAC. https://t.co/5JsAFifQLw
— Open Source Intel (@Osint613) November 14, 2026
CE-25A ಎಲೆಕ್ಟ್ರಿಕ್ ವಿಮಾನದ ವಿಶೇಷತೆಗಳೇನು?
ವೈರಲ್ ಆಗಿರುವ ವಿಡಿಯೊದಲ್ಲಿ, CE-25A ವಿಮಾನವು ಅತ್ಯಂತ ಕಡಿಮೆ ಶಬ್ದದೊಂದಿಗೆ ಸುಗಮವಾಗಿ ಟೇಕ್-ಆಫ್ ಆಗಿ ಆಕಾಶದಲ್ಲಿ ಹಾರಾಟ ನಡೆಸಿದೆ. ಸಂಪೂರ್ಣವಾಗಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುವ ಈ ವಿಮಾನವನ್ನು ಮುಖ್ಯವಾಗಿ ಪೈಲಟ್ ತರಬೇತಿ, ಅಲ್ಪ ದೂರದ ಪ್ರಯಾಣ, ವೈಮಾನಿಕ ಸಮೀಕ್ಷೆ ಹಾಗೂ ಪ್ರವಾಸೋದ್ಯಮದ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಮತ್ತೊಮ್ಮೆ ಕಳ್ಳಾಟ ಆಡಿದ ಚೀನಾ; ಢಾಕಾದ ಕೊಳಗೇರಿ ತೋರಿಸಿ ಭಾರತದ್ದು ಎಂದ ವ್ಲಾಗರ್ಸ್
ಹಲವು ತಿಂಗಳ ಮಾನವರಹಿತ ಪರೀಕ್ಷೆಗಳ ನಂತರ ಈ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ. CE-25A ವಿಮಾನವು ಕಳೆದ ಫೆ. 2ರಂದು ಮೊದಲ ಬಾರಿಗೆ ಸ್ವಯಂಚಾಲಿತವಾಗಿ ಹಾರಾಟ ನಡೆಸಿತ್ತು. ವಿಮಾನದಲ್ಲಿ ಮನುಷ್ಯರನ್ನು ಕರೆದೊಯ್ಯಲು ಅನುಮತಿ ಪಡೆಯುವ ಮುನ್ನ ಇದು 19 ಸ್ವಯಂಚಾಲಿತ ಪ್ರಾಯೋಗಿಕ ಹಾರಾಟಗಳನ್ನು ಪೂರ್ಣಗೊಳಿಸಿತ್ತು. COMAC, ಪ್ರಮುಖ ಬ್ಯಾಟರಿ ತಯಾರಕ ಸಂಸ್ಥೆ CATL, ಶಾಂಘೈ ಜಿಯಾವೊ ಟೊಂಗ್ ವಿಶ್ವವಿದ್ಯಾಲಯ ಮತ್ತು ಇತರ ಪಾಲುದಾರ ಸಂಸ್ಥೆಗಳ ಸಹಯೋಗದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಯಶಸ್ವಿ ಪರೀಕ್ಷಾರ್ಥ ಹಾರಾಟದ ನಂತರ ಮುಂದಿನ ಹಂತದಲ್ಲಿ ವಿಮಾನದ ಸುರಕ್ಷತಾ ಪ್ರಮಾಣಪತ್ರ ಮತ್ತು ಬೃಹತ್ ಪ್ರಮಾಣದ ಉತ್ಪಾದನೆಗೆ ಚೀನಾ ಸಿದ್ಧತೆ ನಡೆಸಿದೆ. ವಾಯುಯಾನ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಬೆಳವಣಿಗೆಯು ಮಹತ್ವದ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ.