ನಿಜವಾದ ವಯಸ್ಸಿಗಿಂತ ಮುಖ ಮುಪ್ಪಾಗಿ ಕಾಣುತ್ತಿದೆಯೇ? ದಿನನಿತ್ಯ ನೀವು ಮಾಡುವ ಈ 5 ತಪ್ಪುಗಳೇ ಕಾರಣ
ನಿಮ್ಮ ವಯಸ್ಸಿಗಿಂತಲೂ ಮುಖ ಬೇಗನೇ ವೃದ್ಧಾಪ್ಯದಂತೆ ಕಾಣುತ್ತಿದೆಯೇ? ದಿನನಿತ್ಯ ನಮಗೇ ತಿಳಿಯದಂತೆ ಮಾಡುವ ಕೆಲವೊಂದು ಕೆಟ್ಟ ಅಭ್ಯಾಸಗಳೇ ನಿಮ್ಮ ತ್ವಚೆಯ ಕಾಂತಿ ಕೆಡಿಸಲು ಮುಖ್ಯ ಕಾರಣ. ಧೂಮಪಾನ, ಅತಿಯಾದ ಸಕ್ಕರೆ ಸೇವನೆ ಹಾಗೂ ಸನ್‌ಸ್ಕ್ರೀನ್ ಬಳಸದಿರುವುದು ಚರ್ಮದ ಕೊಲಾಜೆನ್ ಪ್ರೋಟೀನ್ ನಾಶಪಡಿಸಿ ಸುಕ್ಕು ಮೂಡುವಂತೆ ಮಾಡುತ್ತವೆ. ಜೊತೆಗೆ ಸರಿಯಾದ ನಿದ್ರೆಯ ಅಭಾವ ಮತ್ತು ಮಾನಸಿಕ ಒತ್ತಡವು ಚರ್ಮವನ್ನು ತೀರಾ ದುರ್ಬಲಗೊಳಿಸಿ, ಯೌವನದ ಕಳೆಯನ್ನು ಕಸಿದುಕೊಳ್ಳುತ್ತವೆ.
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇತ್ತೀಚಿನ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಮಾಲಿನ್ಯದಿಂದಾಗಿ ಅನೇಕರಲ್ಲಿ ವಯಸ್ಸಾಗುವ ಮುನ್ನವೇ ಮುಖದ ಮೇಲೆ ಸುಕ್ಕುಗಳು ಮೂಡುವುದು, ತ್ವಚೆ ಕಾಂತಿ ಕಳೆದುಕೊಳ್ಳುವುದು ಮತ್ತು ವಯಸ್ಸಾದಂತೆ ಕಾಣುವುದು ಸಾಮಾನ್ಯವಾಗಿದೆ. ಅಪೌಷ್ಟಿಕತೆ ಹಾಗೂ ದಿನನಿತ್ಯದ ಕೆಲವೊಂದು ತಪ್ಪು ಅಭ್ಯಾಸಗಳು ನಮ್ಮ ಚರ್ಮದ ಆರೋಗ್ಯವನ್ನು ಕ್ಷೀಣಿಸುವಂತೆ ಮಾಡುತ್ತವೆ. ನಿಮ್ಮ ತ್ವಚೆಯನ್ನು ಬೇಗನೇ ವೃದ್ಧಾಪ್ಯಕ್ಕೆ ತಳ್ಳುವ ಆ 5 ಕೆಟ್ಟ ಅಭ್ಯಾಸಗಳು ಯಾವುವು ಮತ್ತು ಅವುಗಳಿಂದ ಪಾರಾಗುವುದು ಹೇಗೆ ಎಂಬ ವಿವರ ಇಲ್ಲಿದೆ.
ಸನ್‌ಸ್ಕ್ರೀನ್ ಬಳಸದೇ ಇರುವುದು
ಸೂರ್ಯನಿಂದ ಬರುವ ಅಪಾಯಕಾರಿ ಯುವಿ ಕಿರಣಗಳು ಚರ್ಮದ ವಯಸ್ಸಾಗುವಿಕೆಗೆ ಶೇ. 80 ರಷ್ಟು ಕಾರಣವಾಗುತ್ತವೆ. ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಚರ್ಮದಲ್ಲಿರುವ ಕೊಲಾಜೆನ್ ಎಂಬ ಪ್ರೋಟೀನ್ ನಾಶವಾಗಿ, ಬೇಗನೇ ಸುಕ್ಕುಗಳು ಮೂಡುತ್ತವೆ. ಮೋಡ ಕವಿದ ವಾತಾವರಣವಿದ್ದರೂ ಅಥವಾ ಮನೆಯೊಳಗಿದ್ದರೂ ದಿನನಿತ್ಯ ಕನಿಷ್ಠ 'SPF 30' ಇರುವ ಸನ್‌ಸ್ಕ್ರೀನ್ ಬಳಸುವುದರಿಂದ ತ್ವಚೆಯನ್ನು ಉತ್ತಮವಾಗಿಡಬಹುದು.
ಧೂಮಪಾನ ಹಾಗೂ ಮದ್ಯಪಾನ
ಸಿಗರೇಟ್ ಹೊಗೆಯಲ್ಲಿರುವ ವಿಷಕಾರಿ ಅಂಶಗಳು ಚರ್ಮಕ್ಕೆ ರಕ್ತಸಂಚಾರವನ್ನು ಕಡಿಮೆ ಮಾಡುತ್ತವೆ. ಇದರಿಂದ ಚರ್ಮಕ್ಕೆ ಅಗತ್ಯವಿರುವ ಆಮ್ಲಜನಕ ಹಾಗೂ ಪೋಷಕಾಂಶಗಳು ಸಿಗದೆ ಮುಖ ಕಳೆಗುಂದುತ್ತದೆ. ಮದ್ಯಪಾನವು ದೇಹದಲ್ಲಿನ ನೀರಿನಾಂಶವನ್ನು ಇಂಗಿಸಿ ಚರ್ಮ ಒಣಗುವಂತೆ ಮಾಡುತ್ತದೆ. ಹೀಗಾಗಿ ಧೂಮಪಾನವನ್ನು ಸಂಪೂರ್ಣವಾಗಿ ತೊರೆಯುವುದು ಹಾಗೂ ಮದ್ಯಪಾನವನ್ನು ನಿಯಂತ್ರಿಸುವುದು ತ್ವಚೆಯ ಯೌವನವನ್ನು ಕಾಪಾಡುತ್ತದೆ.
ಅಧಿಕ ಸಿಹಿ ಹಾಗೂ ಸಕ್ಕರೆ ಸೇವನೆ
ಅತಿಯಾಗಿ ಸಿಹಿ ಪದಾರ್ಥಗಳು, ತಂಪಾದ ಪಾನೀಯಗಳು ಹಾಗೂ ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ 'ಗ್ಲೈಕೇಶನ್' ಎಂಬ ಪ್ರಕ್ರಿಯೆ ನಡೆಯುತ್ತದೆ. ಇದು ಚರ್ಮವನ್ನು ಬಿಗಿಯಾಗಿಡಲು ನೆರವಾಗುವ ಕೊಲಾಜೆನ್ ಮತ್ತು ಎಲಾಸ್ಟಿನ್ ನಾರುಗಳನ್ನು ಹಾನಿಗೊಳಿಸಿ, ತ್ವಚೆ ಸಡಿಲಗೊಳ್ಳುವಂತೆ ಮಾಡುತ್ತದೆ. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ, ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಹೆಚ್ಚಾಗಿ ಸೇವಿಸುವುದರಿಂದ ಮುಖದಲ್ಲಿ ಕಾಂತಿ ಮೂಡುತ್ತದೆ.
ಸರಿಯಾದ ನಿದ್ರೆಯ ಮಾಡದಿರುವುದು
ರಾತ್ರಿ ಸರಿಯಾಗಿ ನಿದ್ರೆ ಮಾಡದಿರುವುದು ಚರ್ಮದ ಮೇಲೆ ತಕ್ಷಣವೇ ಪರಿಣಾಮ ಬೀರುತ್ತದೆ. ನಾವು ನಿದ್ರಿಸುತ್ತಿರುವಾಗ ದೇಹವು ಚರ್ಮದ ಜೀವಕೋಶಗಳನ್ನ ಪುನರುಜ್ಜೀವನಗೊಳಿಸುತ್ತದೆ . ಸರಿಯಾಗಿ ನಿದ್ರೆ ಮಾಡದಿದ್ದರೆ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಮೂಡಿ, ಮುಖ ಆಯಾಸಗೊಂಡಂತೆ ಕಾಣುತ್ತದೆ. ಇದನ್ನ ತಪ್ಪಿಸಲು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡುವುದು ಅತ್ಯಗತ್ಯ.
ಮಾನಸಿಕ ಒತ್ತಡ ಹಾಗೂ ಕಡಿಮೆ ನೀರು ಕುಡಿಯುವುದು
ನಿರಂತರ ಮಾನಸಿಕ ಒತ್ತಡದಿಂದ ದೇಹದಲ್ಲಿ 'ಕಾರ್ಟಿಸೋಲ್' ಎಂಬ ಹಾರ್ಮೋನ್ ಸ್ರವಿಸುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹಾಳುಮಾಡುತ್ತದೆ. ಜೊತೆಗೆ ದಿನಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದಿದ್ದರೆ ಚರ್ಮವು ಡ್ರೈ ಆಗಿ, ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದರಿಂದ ಮತ್ತು ಯೋಗ, ಧ್ಯಾನದ ಮೂಲಕ ಒತ್ತಡವನ್ನು ನಿರ್ವಹಣೆ ಮಾಡಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಚರ್ಮದ ಆರೋಗ್ಯದಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಬೀಜಗಳ ಆರೋಗ್ಯ ಲಾಭ ಒಂದೆರಡಲ್ಲ!
ತ್ವಚೆಯ ಸೌಂದರ್ಯ ಮತ್ತು ಯೌವನವನ್ನು ಕಾಪಾಡಿಕೊಳ್ಳುವುದು ಯಾವುದೇ ದುಬಾರಿ ಕ್ರೀಮ್‌ಗಳಿಂದ ಮಾತ್ರ ಸಾಧ್ಯವಿಲ್ಲ, ಅದು ನಮ್ಮ ದಿನನಿತ್ಯದ ಉತ್ತಮ ಜೀವನಶೈಲಿಯನ್ನೇ ಅವಲಂಬಿಸಿದೆ. ಸೂಕ್ತ ಚರ್ಮದ ರಕ್ಷಣೆ ಮತ್ತು ಪೌಷ್ಟಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ಸದಾ ಆರೋಗ್ಯಕರ ಹಾಗೂ ಪ್ರಕಾಶಮಾನವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.