ಮದ್ಯಪ್ರಿಯರಿಂದ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂತು ಭಾರೀ ಆದಾಯ; ಅಬಕಾರಿ ಇಲಾಖೆಗೆ ಭರ್ಜರಿ ಲಾಭ
ಆಲ್ಕೋಹಾಲ್ ಇನ್ ಬೆವರೇಜ್ (ಎಐಬಿ) ನೀತಿಯ ಪರಿಣಾಮ ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮೊದಲ ಆರು ತಿಂಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಿಯರ್ ಮಾರಾಟದ ಪ್ರಮಾಣ ಶೇ.41.32ರಷ್ಟು ಹೆಚ್ಚಾಗಿದೆ. ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆ ರೂ.3,377.88 ಕೋಟಿ ಆದಾಯ ಸಂಗ್ರಹಿಸಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಆಲ್ಕೋಹಾಲ್ ಇನ್ ಬೆವರೇಜ್ (ಎಐಬಿ) ನೀತಿಯ ಪರಿಣಾಮ ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮೊದಲ ಆರು ತಿಂಗಳಲ್ಲಿ ಕಳೆದ ವರ್ಷದ ಇದೇ (excise department) ಅವಧಿಗೆ ಹೋಲಿಸಿದರೆ ಬಿಯರ್ ಮಾರಾಟದ ಪ್ರಮಾಣ ಶೇ.41.32ರಷ್ಟು ಹೆಚ್ಚಾಗಿದೆ. ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆ ರೂ.3,377.88 ಕೋಟಿ ಆದಾಯ ಸಂಗ್ರಹಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ.2,836.64 ಕೋಟಿ ಆದಾಯ ಬಂದಿತ್ತು. ಅಂದರೆ ಈ ಬಾರಿ ರೂ.541.24 ಕೋಟಿ ಹೆಚ್ಚುವರಿ ಆದಾಯ ದಾಖಲಾಗಿದೆ.
ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ರೂ.19,570.23 ಕೋಟಿ ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ರೂ.22,191.63 ಕೋಟಿ ಸಂಗ್ರಹವಾಗಿದೆ. ಆ ಮೂಲಕ ಒಟ್ಟು ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಶೇಕಡಾ 13.39 ರಷ್ಟು ಏರಿಕೆ ಕಂಡುಬಂದಿದೆ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ. ಬಿಯರ್ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಅರ್ಧವಾರ್ಷಿಕ ಅವಧಿಯಲ್ಲಿ ಒಟ್ಟು 275.96 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 41.32 ರಷ್ಟು ಹೆಚ್ಚಳವಾಗಿದೆ. ಕೇವಲ ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 3,377.88 ಕೋಟಿ ರೂ ಸಂಗ್ರಹವಾಗಿದೆ. ಬಿಯರ್‌ಗೆ ಹೋಲಿಸಿದರೆ ಭಾರತೀಯ ನಿರ್ಮಿತ ಮದ್ಯದಿಂದ ಬಂದ ಆದಾಯದ ಹೆಚ್ಚಳ ಕಡಿಮೆಯಾಗಿದೆ. ಆದರೆ ರೂ.90ರಿಂದ ಆರಂಭವಾಗಿ 180 ಮಿಲಿಗೆ ರೂ.165ರವರೆಗೆ ಬೆಲೆ ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳಿಂದ ಆದಾಯದಲ್ಲಿ ಹೆಚ್ಚಳವಾಗಿದೆ.
ಮೇ 11ರಂದು ಜಾರಿಗೆ ಬಂದ ಎಐಬಿ ನೀತಿಯಡಿ ಶೇ.5ರಷ್ಟು ಆಲ್ಕೋಹಾಲ್ ಅಂಶ ಹೊಂದಿರುವ ಲಾಗರ್ ಬಿಯರ್‌ಗಳು ಹಾಗೂ ಸ್ಕಾಚ್ ವಿಸ್ಕಿ ಸೇರಿದಂತೆ ಕೆಲವು ಪ್ರೀಮಿಯಂ ಭಾರತೀಯ ನಿರ್ಮಿತ ಮದ್ಯಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಇದರ ಬಳಿಕ ಬಿಯರ್ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.