ನೈಸ್ ರಸ್ತೆ ವಿವಾದ: 3 ದಶಕ, 3 ನ್ಯಾಯಾಲಯ-ಯಾರ ವೈಫಲ್ಯ? 3 ದಶಕಗಳಲ್ಲಿ ಏನೆಲ್ಲ ಆಯ್ತು? ಇಲ್ಲಿದೆ ವಿವರ
NICE Road: ಸದ್ಯ ನೈಸ್ ರಸ್ತೆ ದೇಶಾದ್ಯಂತ ಚರ್ಚೆಯಲ್ಲಿದೆ. ರಾಜಕೀಯ, ಭೂಸ್ವಾಧೀನ, ಟೋಲ್ ಹಾಗೂ ನ್ಯಾಯಾಂಗ ಹೋರಾಟಗಳ ಕೇಂದ್ರಬಿಂದು ಎನಿಸಿಕೊಂಡಿದೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೈಸ್ ರಸ್ತೆಯಲ್ಲಿ ಟೋಲ್ ಪಾವತಿಸದಂತೆ ವಾಹನ ಸವಾರರಿಗೆ ಕರೆ ನೀಡಿರುವುದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಟೋಲ್ ರದ್ದತಿಗೆ ಒತ್ತಾಯಿಸಿರುವುದು ಹಾಗೂ ನಿಖಿಲ್ ಕುಮಾರಸ್ವಾಮಿ ‘ನಥಿಂಗ್ ನೈಸ್’ ಅಭಿಯಾನ ಆರಂಭಿಸಿರುವುದು ವಿವಾದಕ್ಕೆ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ಹಾಗಾದರೆ ಏನಿದು ವಿವಾದ? ಇಲ್ಲಿದೆ ವಿವರ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಸೆ. 30: ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ನೈಸ್ ರಸ್ತೆ (NICE Road) ಮೂರು ದಶಕಗಳಿಂದ ಮಾತ್ರ ಸಂಚಾರದ ಮಾರ್ಗವಾಗಿರದೆ, ರಾಜಕೀಯ, ಭೂಸ್ವಾಧೀನ, ಟೋಲ್ ಹಾಗೂ ನ್ಯಾಯಾಂಗ ಹೋರಾಟಗಳ ಕೇಂದ್ರಬಿಂದುವಾಗಿದೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ನೈಸ್ ರಸ್ತೆಯಲ್ಲಿ ಟೋಲ್ ಪಾವತಿಸದಂತೆ ವಾಹನ ಸವಾರರಿಗೆ ಕರೆ ನೀಡಿರುವುದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಟೋಲ್ ರದ್ದತಿಗೆ ಒತ್ತಾಯಿಸಿರುವುದು ಹಾಗೂ ನಿಖಿಲ್ ಕುಮಾರಸ್ವಾಮಿ ‘ನಥಿಂಗ್ ನೈಸ್’ ಅಭಿಯಾನ ಆರಂಭಿಸಿರುವುದು ವಿವಾದಕ್ಕೆ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ಇದರ ಬೆನ್ನಲ್ಲೇ, 2026ರ ಜುಲೈ 29ರಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ ತೀರ್ಪಿನಲ್ಲಿ ನೈಸ್ ಯೋಜನೆಯನ್ನು ರಾಜ್ಯದ ‘ಅತಿದೊಡ್ಡ ಹಗರಣಗಳಲ್ಲೊಂದು’ ಎಂದು ಉಲ್ಲೇಖಿಸಿರುವುದು ಚರ್ಚೆಗೆ ಕಾರಣವಾಗಿದೆ.
ಆದರೆ ನೈಸ್ ಯೋಜನೆಯ ಇತಿಹಾಸವನ್ನು ಕೇವಲ ಇತ್ತೀಚಿನ ಹೇಳಿಕೆಗಳು ಮತ್ತು ಆರೋಪಗಳ ಆಧಾರದ ಮೇಲೆ ನೋಡುವ ಬದಲು, ಕಳೆದ ಮೂರು ದಶಕಗಳಲ್ಲಿ ಹೊರಬಂದಿರುವ ಸರ್ಕಾರಿ ಆದೇಶಗಳು, ಕರ್ನಾಟಕ ಗೆಜೆಟ್ ಅಧಿಸೂಚನೆಗಳು, ನ್ಯಾಯಾಲಯದ ತೀರ್ಪುಗಳು, ಟೋಲ್ ಒಪ್ಪಂದ ಹಾಗೂ ಸರ್ಕಾರಿ ಸಮಿತಿ ಸಭೆಗಳ ದಾಖಲೆಗಳನ್ನು ಪರಿಶೀಲಿಸಿದರೆ ಚಿತ್ರಣ ಇನ್ನಷ್ಟು ಸಂಕೀರ್ಣವಾಗುತ್ತದೆ.
ನೈಸ್ ರಸ್ತೆ ಎಂದರೇನು?
1990ರ ದಶಕದ ಆರಂಭದಲ್ಲಿ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ತೀವ್ರಗೊಂಡಿತ್ತು. ನಾಲ್ಕು ಗಂಟೆ ಬೇಕಾಗುತ್ತಿದ್ದ ಪ್ರಯಾಣಕ್ಕೆ ಪರ್ಯಾಯ ಮಾರ್ಗವಾಗಿ ಹೊಸ ಸಂಪರ್ಕ ವ್ಯವಸ್ಥೆ ನಿರ್ಮಿಸುವ ಯೋಜನೆ ರೂಪುಗೊಂಡಿತು. ಸರ್ಕಾರಕ್ಕೆ ಯೋಜನೆಗೆ ಅಗತ್ಯವಿದ್ದ ದೊಡ್ಡ ಮೊತ್ತದ ಹಣವನ್ನು ತಕ್ಷಣ ಹೂಡಿಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, 1995ರಲ್ಲಿ ಖಾಸಗಿ ಒಕ್ಕೂಟದ ಮೂಲಕ Build-Own-Operate-Transfer (BOOT) ಮಾದರಿ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಯೋಜನೆಯ ಪ್ರಕಾರ ಖಾಸಗಿ ಸಂಸ್ಥೆ ಹಣ ಸಂಗ್ರಹಿಸಿ ರಸ್ತೆ ನಿರ್ಮಿಸಬೇಕು, ಟೋಲ್ ಸಂಗ್ರಹದ ಮೂಲಕ ಹೂಡಿಕೆ ವಾಪಸ್ ಪಡೆಯಬೇಕು, ಅಂತಿಮವಾಗಿ ಯೋಜನೆ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂಬುದು ಉದ್ದೇಶವಾಗಿತ್ತು.
ಒಟ್ಟು ಯೋಜನೆಯಲ್ಲಿ 111 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇ, ಬೆಂಗಳೂರಿನ ದಕ್ಷಿಣ ಭಾಗವನ್ನು ಸುತ್ತುವ 41 ಕಿ.ಮೀ. ಪೆರಿಫೆರಲ್ ರಸ್ತೆ, ಸಂಪರ್ಕ ರಸ್ತೆ ಹಾಗೂ ಐದು ಹೊಸ ಟೌನ್‌ಶಿಪ್‌ಗಳು ಸೇರಿದ್ದವು. ನಂತರ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಯೋಜನೆಯ ಅನುಷ್ಠಾನ ಸಂಸ್ಥೆಯಾಯಿತು. ಆದರೆ ಪೂರ್ಣ ಯೋಜನೆ ಬದಲಿಗೆ 41 ಕಿ.ಮೀ. ಪೆರಿಫೆರಲ್ ರಸ್ತೆ, ಸಂಪರ್ಕ ರಸ್ತೆಯ ಒಂದು ಭಾಗ ಮತ್ತು ಎಕ್ಸ್‌ಪ್ರೆಸ್‌ವೇಯ ಅಲ್ಪಭಾಗ ಮಾತ್ರ ನಿರ್ಮಾಣವಾಯಿತು. ಇಂದು ಜನಸಾಮಾನ್ಯರು ‘ನೈಸ್ ರಸ್ತೆ’ ಎಂದು ಕರೆಯುವುದು ಮುಖ್ಯವಾಗಿ ಇದೇ ನಿರ್ಮಾಣಗೊಂಡ ಭಾಗವನ್ನು. 111 ಕಿ.ಮೀ. ಎಕ್ಸ್‌ಪ್ರೆಸ್‌ವೇಯ ಬಹುಪಾಲು ಹಾಗೂ ಐದು ಟೌನ್‌ಶಿಪ್‌ಗಳು ನಿರ್ಮಾಣವಾಗದೆ ಉಳಿದಿವೆ.
ನೈಸ್ ರಸ್ತೆಯಲ್ಲಿನ ಟೋಲ್ ಮುಚ್ಚಿಸಿ: ಸಿಎಂ ಡಿಕೆಶಿಗೆ ಪತ್ರ ಬರೆದ ಕುಮಾರಸ್ವಾಮಿ
ಒಪ್ಪಿಗೆ ನೀಡಿದ್ದು ಯಾರು?
ನೈಸ್ ಯೋಜನೆಯ ಮೂಲ ದಾಖಲೆ 1995ರ ಫೆಬ್ರವರಿ 20ರಂದು ಸಹಿ ಮಾಡಲಾದ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್ (MoU). ಅಂದು ರಾಜ್ಯದ ಸಿಎಂ ಆಗಿದ್ದ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ನಂತರ ಸಚಿವ ಸಂಪುಟದ ಸಮಿತಿ ಯೋಜನೆ ಪರಿಶೀಲಿಸಿ ಟೌನ್‌ಶಿಪ್‌ಗಳ ಸಂಖ್ಯೆಯನ್ನು ಏಳರಿಂದ ಐದಕ್ಕೆ ಇಳಿಸಿತು. 1995ರ ನವೆಂಬರ್‌ನಲ್ಲಿ ಸರ್ಕಾರ ಯೋಜನೆಗೆ ಔಪಚಾರಿಕ ಅನುಮೋದನೆ ನೀಡಿತು. ಯೋಜನೆಯ ಪ್ರಮುಖ ಒಪ್ಪಂದವಾದ ಫ್ರೇಮ್‌ವರ್ಕ್ ಅಗ್ರಿಮೆಂಟ್ 1997ರ ಏ.3ಕ್ಕೆ ಸಹಿ ಮಾಡಲಾಯಿತು. ಹೀಗಾಗಿ, ಇಂದು ಯೋಜನೆ ವಿರುದ್ಧ ಕೇಳಿಬರುತ್ತಿರುವ ಹಲವು ಪ್ರಶ್ನೆಗಳ ನಡುವೆ, ಅದರ ಮೂಲ ಅನುಮೋದನೆಗಳು ಮತ್ತು ಒಪ್ಪಂದಗಳಿಗೆ ಅಂದಿನ ಸರ್ಕಾರವೇ ಸಹಿ ಹಾಕಿದ್ದ ವಿಚಾರವೂ ದಾಖಲೆಗಳಲ್ಲಿ ಸ್ಪಷ್ಟವಾಗಿದೆ.
ನ್ಯಾಯಾಲಯಗಳ ಉತ್ತರವೇನು?
ಯೋಜನೆ ಆರಂಭವಾದ ಕೆಲವೇ ವರ್ಷಗಳಲ್ಲಿ, ಇದು ಮೂಲತಃ ಮೂಲಸೌಕರ್ಯ ಯೋಜನೆಯಲ್ಲ; ಭೂಮಿಯ ವಹಿವಾಟು ನಡೆಸುವ ಉದ್ದೇಶದ ಯೋಜನೆ ಎಂಬ ಆರೋಪಗಳು ಕೇಳಿಬಂದವು. ಈ ಆರೋಪಗಳು ನ್ಯಾಯಾಲಯಗಳಲ್ಲಿ ಪರಿಶೀಲನೆಗೆ ಒಳಪಟ್ಟಿವೆ. 1998ರಲ್ಲಿ ಕರ್ನಾಟಕ ಹೈಕೋರ್ಟ್ ಎಚ್.ಟಿ. ಸೋಮಶೇಖರ್ ರೆಡ್ಡಿ v/s ಕರ್ನಾಟಕ ರಾಜ್ಯದ ಪ್ರಕರಣದಲ್ಲಿ ಫ್ರೇಮ್‌ವರ್ಕ್ ಒಪ್ಪಂದವನ್ನು ಎತ್ತಿಹಿಡಿದು, ಸಿಬಿಐ ತನಿಖೆಗೆ ಆದೇಶಿಸಲು ನಿರಾಕರಿಸಿತು.
2005ರಲ್ಲಿ ಹೈಕೋರ್ಟ್ ಮತ್ತಷ್ಟು ಕಠಿಣ ನಿಲುವು ವ್ಯಕ್ತಪಡಿಸಿತು. ವಂಚನೆ ಆರೋಪವು ‘ನಂತರದಲ್ಲಿ ಮಾಡಲಾದ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿದಿದ್ದರೂ ಸುಳ್ಳಾಗಿದ್ದ ಆರೋಪ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಯೋಜನೆಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡಿತು. ಈ ವೇಳೆ ಯೋಜನೆಗೆ ಸಂಬಂಧಿಸಿದ ನ್ಯಾಯಾಲಯದ ಅಫಿಡವಿಟ್‌ಗಳಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿತು.
ನಿಲುವು ಎತ್ತಿಹಿಡಿದ ಸುಪ್ರೀಂ
State of Karnataka v. All India Manufacturers Organisation ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಸರ್ಕಾರ ವಂಚನೆಗೆ ಒಳಗಾಗಿ ಒಪ್ಪಂದ ಮಾಡಿಕೊಂಡಿದೆ ಎಂಬ ವಾದವನ್ನು ತೀವ್ರವಾಗಿ ತಿರಸ್ಕರಿಸಿತು. ಕಂಪನಿಯಿಂದ ವಂಚನೆ ಅಥವಾ ತಪ್ಪು ನಿರೂಪಣೆ ನಡೆದಿಲ್ಲ ಎಂದು ಹೇಳಿತು. ರಾಜಕೀಯ ಕಾರಣಗಳಿಂದ ಸರ್ಕಾರದ ಕಡೆಯಿಂದ ದುರುದ್ದೇಶವಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿತು. ಸರ್ಕಾರದ ವಾದಗಳನ್ನು ‘ಆಧಾರರಹಿತ’ ಎಂದು ಪರಿಗಣಿಸಿ 5 ಲಕ್ಷ ರೂ. ದಂಡ ವಿಧಿಸಿತು.
ಆರೋಪ ಎಲ್ಲಿಂದ ಬಂತು?
2006ರ ಸುಪ್ರೀಂಕೋರ್ಟ್ ತೀರ್ಪು ಈ ಆರೋಪದ ಹಿನ್ನೆಲೆಯನ್ನೂ ದಾಖಲಿಸಿದೆ. 2004ರಲ್ಲಿ ನೈಸ್ ಯೋಜನೆಯ ವಿರುದ್ಧ ದೇವೇಗೌಡರು, ಇದೊಂದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಖವಾಡವಾಗಿದೆ ಎಂದು ಆರೋಪಿಸಿದ್ದರು. ಆನಂತರ ಕೆಲವೇ ದಿನಗಳಲ್ಲಿ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ರೇವಣ್ಣ ಅವರು ಭೂಸ್ವಾಧೀನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಆರೋಪದ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದರು.
ಈ ಬೆಳವಣಿಗೆಯನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲಿಸಿತ್ತು. ಯೋಜನೆ ಆರಂಭವಾಗಿ ಏಳು ವರ್ಷದ ಬಳಿಕ, ಸರ್ಕಾರದಲ್ಲಿ ನಾಯಕತ್ವ ಬದಲಾದ ನಂತರ ಈ ಆರೋಪ ಮತ್ತೆ ಮುನ್ನೆಲೆಗೆ ಬಂದಿರುವುದನ್ನು ಕೋರ್ಟ್ ಪ್ರಶ್ನಿಸಿತ್ತು. ಯೋಜನೆ ಪರಿಶೀಲಿಸಲು ರಚಿಸಲಾದ ಸಮಿತಿಯ ಅಧ್ಯಕ್ಷರಾಗಿದ್ದವರು ಹಿಂದೆಯೇ ಇದೇ ಯೋಜನೆಗೆ ಸಂಬಂಧಿಸಿದ ನಿರ್ಧಾರದಲ್ಲಿ ಭಾಗಿಯಾಗಿದ್ದ ಅಧಿಕಾರಿಯಾಗಿದ್ದರು ಎಂಬುದನ್ನೂ ನ್ಯಾಯಾಲಯ ಗಮನಿಸಿತ್ತು. ಅಂತಿಮವಾಗಿ, 2006ರ ತೀರ್ಪಿನಲ್ಲಿ ನೈಸ್ ವಿರುದ್ಧದ ವಂಚನೆ ಆರೋಪಕ್ಕೆ ಆಧಾರವಿಲ್ಲ ಎಂಬ ನಿಲುವನ್ನು ಸುಪ್ರೀಂಕೋರ್ಟ್ ದಾಖಲಿಸಿತು.
2011ರ ಮಾನಹಾನಿ ಪ್ರಕರಣ
2011ರಲ್ಲಿ ಎಚ್.ಡಿ. ದೇವೇಗೌಡ ಟಿವಿ ಸಂದರ್ಶನವೊಂದರಲ್ಲಿ ಈ ರೀತಿಯ ಆರೋಪಗಳನ್ನು ಪುನರುಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ನೈಸ್ ಮಾನಹಾನಿ ಮೊಕದ್ದಮೆ ಹೂಡಿತು. 2021ರಲ್ಲಿ ಬೆಂಗಳೂರಿನ ಸಿವಿಲ್ ನ್ಯಾಯಾಲಯ ನೈಸ್ ಪರವಾಗಿ ₹2 ಕೋಟಿ ಪರಿಹಾರ ನೀಡಲು ಆದೇಶಿಸಿ, ಇಂತಹ ಹೇಳಿಕೆಗಳನ್ನು ಪುನರಾವರ್ತಿಸದಂತೆ ದೇವೇಗೌಡರಿಗೆ ಶಾಶ್ವತ ನಿರ್ಬಂಧ ವಿಧಿಸಿತು. ಈ ಆದೇಶದ ವಿರುದ್ಧ ದೇವೇಗೌಡರು ಮೇಲ್ಮನವಿ ಸಲ್ಲಿಸಿದರು. 2022ರ ಫೆಬ್ರವರಿಯಲ್ಲಿ ಅವರು ‘ಪ್ರತಿವಾದಿ ಸಂಸ್ಥೆಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುವುದಿಲ್ಲ’ ಎಂದು ಪ್ರಮಾಣಪತ್ರದಲ್ಲಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿವಿಲ್ ನ್ಯಾಯಾಲಯದ ಆದೇಶದ ಜಾರಿಗೆ ತಡೆ ನೀಡಿತು. ಈ ಮೇಲ್ಮನವಿ ಇನ್ನೂ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ನೈಸ್ ಟೋಲ್ ಕಾನೂನುಬಾಹಿರವೆ?
ಪ್ರಸ್ತುತ ನಡೆಯುತ್ತಿರುವ ಟೋಲ್ ಬಹಿಷ್ಕಾರದ ಪ್ರಮುಖ ಕಾರಣಗಳಲ್ಲಿ ಇದೂ ಒಂದು. ನೈಸ್ ರಸ್ತೆಯ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದ Toll Concession Agreement 2000ರ ಸೆ.4ರಂದು ನೈಸ್ ಮತ್ತು ಕರ್ನಾಟಕ ರಾಜ್ಯಪಾಲರ ನಡುವೆ ಸಹಿಯಾಗಿತ್ತು. 1998ರ ಮೂಲ ಟೋಲ್ ದರಗಳನ್ನು ಆಧಾರವಾಗಿ ನಿಗದಿಪಡಿಸಿ, ವರ್ಷಕ್ಕೆ ಗರಿಷ್ಠ ಶೇ.10 ಟೋಲ್ ಹೆಚ್ಚಳಕ್ಕೆ ಒಪ್ಪಂದ ಅವಕಾಶ ನೀಡಿತ್ತು. ನಂತರದ ಟೋಲ್ ಹೆಚ್ಚಳಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ಕರ್ನಾಟಕ ಗೆಜೆಟ್ ಅಧಿಸೂಚನೆಗಳ ರೂಪದಲ್ಲಿ ಪ್ರಕಟಿಸಲಾಗಿದೆ.
ದಾಖಲೆಗಳ ಪ್ರಕಾರ 2008, 2010 ಮತ್ತು 2011ರಲ್ಲಿ ಪ್ರಕಟಿಸಲಾದ ದರಗಳನ್ನು 1998ರ ಮೂಲ ದರದಿಂದ ಶೇ.10ರ ವಾರ್ಷಿಕ ಹೆಚ್ಚಳದ ಸೂತ್ರದೊಂದಿಗೆ ಹೋಲಿಸಿದಾಗ, ಅವು ಒಪ್ಪಂದದ ಮಿತಿಯೊಳಗೇ ಇವೆ. 2009ರಲ್ಲಿ ಟೋಲ್ ಅಧಿಸೂಚನೆ ರದ್ದುಪಡಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ನೈಸ್ ಸಂಸ್ಥೆ ಒಪ್ಪಂದದ ಷರತ್ತುಗಳಂತೆ ರಸ್ತೆ ನಿರ್ಮಿಸಿದ್ದು, ಟೋಲ್ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಹೈಕೋರ್ಟ್ ಅರ್ಜಿ ವಜಾಗೊಳಿಸಿತು. ಅದರ ವಿರುದ್ಧದ ಮೇಲ್ಮನವಿಯನ್ನೂ 2011ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತು.
ಹೆಚ್ಚುವರಿ ಭೂಮಿ ಆರೋಪ
ನೈಸ್ ಸುಮಾರು 13,000 ಎಕರೆ ಹೆಚ್ಚುವರಿ ಭೂಮಿ ಹೊಂದಿದೆ ಎಂಬ ಆರೋಪವೂ ಇತ್ತೀಚಿನ ಚರ್ಚೆಯ ಪ್ರಮುಖ ಅಂಶವಾಗಿದೆ. ಆದರೆ 2009ರ ನ.19ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರಿ ಸಭೆಯ ದಾಖಲೆಗಳು ಬೇರೆಯ ಚಿತ್ರಣ ನೀಡುತ್ತವೆ. ಇಡೀ ಯೋಜನೆಗೆ 20,000 ಎಕರೆ ಭೂಮಿ ಅಗತ್ಯವೆಂದು ಅಂದಾಜಿಸಲಾಗಿದ್ದರೂ, ಆ ವೇಳೆಗೆ ನೈಸ್‌ಗೆ ಕೇವಲ 7,124 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿತ್ತು. ಇನ್ನೂ 13,609 ಎಕರೆ ಭೂಮಿ ಹಸ್ತಾಂತರ ಆಗಿರಲಿಲ್ಲ ಎಂದು ಅಧಿಕಾರಿಗಳು ದಾಖಲಿಸಿದ್ದರು.
ನೈಸ್ ಸಂಸ್ಥೆ ಹೇಳಿಕೆ ಅಂದಾಯ
2010ರ ಸರ್ಕಾರದ ಅಫಿಡವಿಟ್‌ನಲ್ಲಿ ಪೆರಿಫೆರಲ್ ರಸ್ತೆಗೆ ಸಂಬಂಧಿಸಿದಂತೆ 554 ಎಕರೆ ಹೆಚ್ಚುವರಿ ಭೂಮಿ ನೀಡಲಾಗಿದೆ ಎಂಬ ಉಲ್ಲೇಖ ಇದೆ. ಎರಡು ಪ್ರತ್ಯೇಕ ಅಂಶಗಳು ದಾಖಲೆಗಳಲ್ಲಿ ಕಂಡುಬಂದಿದ್ದು, ಒಂದು ಭಾಗದಲ್ಲಿ 554 ಎಕರೆ ಹೆಚ್ಚುವರಿ ಭೂಮಿ ನೀಡಿರುವ ಆರೋಪ, ಮತ್ತೊಂದೆಡೆ ಯೋಜನೆಗೆ ಸಂಬಂಧಿಸಿದಂತೆ ಸಾವಿರಾರು ಎಕರೆ ಭೂಮಿ ಸರ್ಕಾರದಿಂದ ಹಸ್ತಾಂತರವಾಗದೇ ಉಳಿದಿರುವ ದಾಖಲೆ.
ಪರಿಹಾರ ನೀಡಲಾಗಿಲ್ಲವೇ?
ರೈತರ ಭೂಮಿಗೆ ಪರಿಹಾರ ನೀಡಲಾಗಿಲ್ಲ ಎಂಬ ಆರೋಪವೂ ಪ್ರಮುಖವಾಗಿದೆ. ಭೂಸ್ವಾಧೀನ ಕಾನೂನಿನ ಪ್ರಕಾರ ಭೂಸ್ವಾಧೀನ, ಪರಿಹಾರ ನಿಗದಿ ಮತ್ತು ಪಾವತಿಯ ಜವಾಬ್ದಾರಿ ಸರ್ಕಾರ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೇಲಿದೆ. ನೈಸ್ ಸಂಸ್ಥೆಯ ಜವಾಬ್ದಾರಿ, ಪರಿಹಾರಕ್ಕಾಗಿ ಹಣ ಒದಗಿಸುವುದು. KIADB ದಾಖಲೆಗಳ ಪ್ರಕಾರ, ನೈಸ್ ಸಂಸ್ಥೆ 2003ರ ಜನವರಿಯಿಂದ 2025ರ ಮೇ ವರೆಗೆ 16 ಹಂತಗಳಲ್ಲಿ ಒಟ್ಟು 359.99 ಕೋಟಿ, ಅಂದರೆ ಸುಮಾರು 360 ಕೋಟಿ ರೂ., ರೈತರ ಪರಿಹಾರಕ್ಕಾಗಿ ಜಮಾ ಮಾಡಿದೆ. ಇದರರ್ಥ ರೈತರಿಗೆ ಪರಿಹಾರ ಸಂಪೂರ್ಣ ತಲುಪಿದೆ ಎಂದಲ್ಲ. ಹಣವನ್ನು KIADB ಮೂಲಕ ಅರ್ಹರಿಗೆ ವಿತರಿಸುವ ಪ್ರಕ್ರಿಯೆ ಪ್ರತ್ಯೇಕ ವಿಚಾರ.
ಉಚಿತ ನಿವೇಶನಗಳ ವಿಚಾರ
2003ರಲ್ಲಿ ಉಪ ಆಯುಕ್ತರ ನೇತೃತ್ವದ ಸಮಿತಿಯು ಭೂಸ್ವಾಧೀನಕ್ಕೆ ಒಪ್ಪಿದ ರೈತರಿಗೆ, ಭೂಮಿಯ ಬೆಲೆಯ ಜೊತೆಗೆ ಪ್ರೋತ್ಸಾಹಕವಾಗಿ ಅಭಿವೃದ್ಧಿಪಡಿಸಿದ ನಿವೇಶನ ನೀಡುವ ಪ್ರಸ್ತಾವವನ್ನು ಒಪ್ಪಿಕೊಂಡಿತ್ತು. ನೈಸ್ ಕೂಡ ಇದಕ್ಕೆ ಒಪ್ಪಿಗೆ ನೀಡಿತ್ತು. ಇದನ್ನೇ ಆಧಾರವಾಗಿ ಇಟ್ಟುಕೊಂಡು ಸಾವಿರಾರು ಕುಟುಂಬಗಳು ಇನ್ನೂ ನಿವೇಶನಕ್ಕಾಗಿ ಕಾಯುತ್ತಿವೆ ಎಂಬ ವಾದವನ್ನು ಕುಮಾರಸ್ವಾಮಿ ಮುಂದಿಟ್ಟಿದ್ದಾರೆ.
ಆದರೆ ಈ ವಿಚಾರದಲ್ಲಿ ದಾಖಲೆಗಳು ಇನ್ನೂ ಸಂಪೂರ್ಣ ಚಿತ್ರಣ ನೀಡುವುದಿಲ್ಲ. 2023ರ ಮಾರ್ಚ್‌ನ ಸರ್ಕಾರಿ ಪತ್ರ ವ್ಯವಹಾರದಲ್ಲಿ ನೈಸ್ ಸಂಸ್ಥೆ ಕೆಂಗೇರಿ ಸಮೀಪದ ರಸ್ತೆ ಇಂಟರ್‌ಚೇಂಜ್ ಬಳಿ 480 ಪ್ರೋತ್ಸಾಹಕ ನಿವೇಶನ ನಿರ್ಮಿಸಲು ಅನುಮತಿ ಕೋರಿರುವುದು ಕಂಡುಬರುತ್ತದೆ. ಆದರೆ ಸರ್ಕಾರದ ಯೋಜನಾ ಪ್ರಾಧಿಕಾರ ಆ ಪ್ರಸ್ತಾವವನ್ನು ತಿರಸ್ಕರಿಸಿತು.
2020ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ರಸ್ತೆ ಇಂಟರ್‌ಚೇಂಜ್ ಪ್ರದೇಶದಲ್ಲಿ ವಸತಿ ಅಭಿವೃದ್ಧಿಗೆ ಅವಕಾಶವಿಲ್ಲ. ಯೋಜನೆಗೆ ನಿಗದಿಪಡಿಸಿರುವ ಐದು ಟೌನ್‌ಶಿಪ್ ಗಳಲ್ಲಿ ಇಂತಹ ಅಭಿವೃದ್ಧಿ ಕೈಗೊಳ್ಳಬೇಕು ಎಂಬುದು ಸರ್ಕಾರದ ವಾದವಾಗಿತ್ತು. ಸರ್ಕಾರದ ಪತ್ರದಲ್ಲಿ ಈ ನಿವೇಶನ ಯೋಜನೆ 2001ರ ಪರಿಹಾರ ಪ್ಯಾಕೇಜ್‌ನ ಕಡ್ಡಾಯ ಭಾಗವಲ್ಲ, ಯೋಜನಾ ಸಂಸ್ಥೆ ನೀಡಿದ ‘ex-gratia offer’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ನಿವೇಶನಗಳ ವಿಚಾರದಲ್ಲಿ ಕಂಪನಿ ಹಣ ನೀಡಲು ನಿರಾಕರಿಸಿದೆ ಎಂಬ ಸರಳ ವಿವರಣೆಗಿಂತ, ಅವುಗಳನ್ನು ಎಲ್ಲಿ ನಿರ್ಮಿಸಬೇಕು ಎಂಬ ವಿಚಾರದಲ್ಲಿ ಸರ್ಕಾರ ಮತ್ತು ನೈಸ್ ನಡುವೆ ವಿವಾದವಿದೆ ಎಂದು ದಾಖಲೆಗಳಿಂದ ಕಂಡುಬರುತ್ತದೆ.
ಎಕ್ಸ್‌ಪ್ರೆಸ್‌ವೇ ಏಕೆ ಮುಗಿಯಲಿಲ್ಲ?
111 ಕಿ.ಮೀ. ಎಕ್ಸ್‌ಪ್ರೆಸ್‌ವೇಯಲ್ಲಿ ಸುಮಾರು 5 ಕಿ.ಮೀ. ಮಾತ್ರ ನಿರ್ಮಾಣವಾಗಿದೆ ಎಂಬುದು 2026ರ ತೀರ್ಪಿನಲ್ಲೂ ಉಲ್ಲೇಖವಾಗಿದೆ. ಈ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆ ಮುಖ್ಯ. ಸರ್ಕಾರಿ ಸಮಿತಿ ದಾಖಲೆಗಳನ್ನು ಗಮನಿಸಿದರೆ, ಯೋಜನೆಗೆ ಅಗತ್ಯವಿದ್ದ ಭೂಸ್ವಾಧೀನ ಹಲವು ಹಂತಗಳಲ್ಲಿ ಸ್ಥಗಿತಗೊಂಡಿತ್ತು. 2004ರಲ್ಲಿ ರೇವಣ್ಣ ಅವರ ಸೂಚನೆ ನಂತರ ಭೂಸ್ವಾಧೀನ ಸ್ಥಗಿತಗೊಂಡಿತ್ತು. 2009ರ ವೇಳೆಗೂ ಭೂಸ್ವಾಧೀನ ಪೂರ್ಣಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸರ್ಕಾರವನ್ನು ತನ್ನದೇ ಯೋಜನೆಯನ್ನು ಜಾರಿಗೆ ತರದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆಗೆ ಒಳಪಡಿಸಿತ್ತು.
2010ರಲ್ಲಿ ರಸ್ತೆ ಮಾರ್ಗದ ವಿನ್ಯಾಸ ಬದಲಾಗಿದ್ದರಿಂದ ಭೂಮಿಯನ್ನು ಮರು ಮಾಪನ ಮಾಡುವ ಪ್ರಕ್ರಿಯೆಯೂ ನಡೆದಿತ್ತು. ಬಿಡದಿ ಸಮೀಪ ಟೌನ್‌ಶಿಪ್‌ಗಾಗಿ 1,916 ಎಕರೆ ಭೂಮಿಯ ಬೆಲೆ ನಿಗದಿ ಮಾಡುವ ಸಭೆಯೂ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ 2010ರ ಏಪ್ರಿಲ್‌ನಲ್ಲಿ ಸ್ಥಗಿತಗೊಂಡಿತ್ತು. ಅದೇ ವೇಳೆ, ಯೋಜನೆಯ ಭಾಗವಾಗಿದ್ದ ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಬೇಕಾಗಿದ್ದ ಪೆರಿಫೆರಲ್ ರಸ್ತೆಯ ಮತ್ತೊಂದು ಭಾಗವೂ ದೀರ್ಘಕಾಲದಿಂದ ನಿರ್ಮಾಣವಾಗದೆ ಉಳಿದಿದೆ. ಹೀಗಾಗಿ ದಾಖಲೆಗಳ ಆಧಾರದಲ್ಲಿ, 111 ಕಿ.ಮೀ. ಎಕ್ಸ್‌ಪ್ರೆಸ್‌ವೇ ಮುಗಿಯದಿರುವುದು ಕೇವಲ ಖಾಸಗಿ ಸಂಸ್ಥೆಯ ಕಾರ್ಯಕ್ಷಮತೆ ಪ್ರಶ್ನೆಯಲ್ಲ, ಅಗತ್ಯ ಭೂಮಿ ಹಸ್ತಾಂತರ ಆಗದಿರುವುದು ಪ್ರಮುಖ ಕಾರಣವಾಗಿ ಕಾಣಿಸುತ್ತದೆ.
ಹೈಕೋರ್ಟ್ ತೀರ್ಪು ಏನು?
ಇತ್ತೀಚಿನ ವಿವಾದದ ಕೇಂದ್ರಬಿಂದು ಆಗಿರುವ 2026ರ ಜು.29ರ ಹೈಕೋರ್ಟ್ ತೀರ್ಪನ್ನು ಅದರ ಸಂಪೂರ್ಣ ಹಿನ್ನೆಲೆಯೊಂದಿಗೆ ನೋಡುವುದು ಅಗತ್ಯ. ಈ ಪ್ರಕರಣ 1998ರಿಂದ 2009ರವರೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ್ದರೂ, ಕೆಲವು ಭೂಮಾಲೀಕರಿಗೆ ಪರಿಹಾರ ನೀಡದಿರುವ ಪ್ರಕರಣಕ್ಕೆ ಸಂಬಂಧಿಸಿತ್ತು. ಕೆಲವು ಪ್ರಕರಣಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಯಾವುದೇ ಪರಿಹಾರ ನೀಡದೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿತ್ತು.
ಇಂತಹ ಅನಿರ್ದಿಷ್ಟ ವಿಳಂಬವನ್ನು ನ್ಯಾಯಾಲಯ ಅಸಾಂವಿಧಾನಿಕ ಎಂದು ಪರಿಗಣಿಸಿತು. ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗಳು ಲ್ಯಾಪ್ಸ್ ಆಗಬೇಕು ಎಂದು ತೀರ್ಪು ನೀಡಿತು. ಈ ನಿರ್ದಿಷ್ಟ ಭೂಮಿಯ ಸ್ವಾಧೀನವನ್ನು ನೈಸ್‌ಗೆ ವಾಸ್ತವವಾಗಿ ಹಸ್ತಾಂತರಿಸಲಾಗಿಲ್ಲ ಎಂದು ಸರ್ಕಾರದ ಪರ ವಕೀಲರೂ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಇದೇ ತೀರ್ಪಿನಲ್ಲಿ ಪೀಠವು ಯೋಜನೆ ಬಗ್ಗೆ ಅತ್ಯಂತ ಕಠಿಣವಾದ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ನೈಸ್ ಯೋಜನೆ ರಾಜ್ಯದ ‘ಅತಿದೊಡ್ಡ ಹಗರಣಗಳಲ್ಲೊಂದು’ ಎಂದು ಉಲ್ಲೇಖಿಸಿತು. ಭೂ ಮಾರಾಟ, ಅನುಮೋದಿತವಲ್ಲದ ಟೋಲ್ ಹೆಚ್ಚಳಕ್ಕೆ ಸಂಬಂಧಿಸಿದ ಆರೋಪಗಳನ್ನೂ ಮಾಡಿತು.
ಈ ಅಭಿಪ್ರಾಯಗಳು ಗಂಭೀರವಾಗಿವೆ. ಆದರೆ ಇದೇ ಯೋಜನೆಗೆ ಸಂಬಂಧಿಸಿದಂತೆ 2006, 2009 ಮತ್ತು 2011ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳೊಂದಿಗೆ ಅವು ಕೆಲವು ಅಂಶಗಳಲ್ಲಿ ಭಿನ್ನವಾಗಿ ಕಾಣುತ್ತವೆ. ಹೀಗಾಗಿ ಜುಲೈ 2026ರ ತೀರ್ಪಿನ ವ್ಯಾಪಕ ಅಭಿಪ್ರಾಯಗಳು ಮುಂದಿನ ಮೇಲ್ಮನವಿಯಲ್ಲಿ ಹೇಗೆ ಪರಿಗಣಿಸಲ್ಪಡುತ್ತವೆ ಎಂಬುದು ಕಾದು ನೋಡಬೇಕಾದ ವಿಷಯವಾಗಿದೆ.
2ಜಿ, ಕಲ್ಲಿದ್ದಲು ಹಗರಣಗಳನ್ನೂ ಮೀರಿಸಿದ ನೈಸ್ ಅಕ್ರಮ; ಡಿಕೆಶಿ-ಖೇಣಿ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಎಚ್‌ಡಿಕೆ
ಮುಂದೆ ಏನಾಗಲಿದೆ?
ಮುಂದಿನ ಹಂತದಲ್ಲಿ ಮುಖ್ಯವಾಗಿ ಎರಡು ವಿಚಾರಗಳು ಗಮನ ಸೆಳೆಯಲಿವೆ. ಒಂದು- 2026ರ ಜುಲೈ ಹೈಕೋರ್ಟ್ ತೀರ್ಪಿನ ವ್ಯಾಪಕ ಅಭಿಪ್ರಾಯಗಳ ವಿರುದ್ಧ ನೈಸ್ ಸಲ್ಲಿಸಬಹುದಾದ ಮೇಲ್ಮನವಿ ಮತ್ತು ಅದರ ಫಲಿತಾಂಶ.
ಎರಡು- ಸರ್ಕಾರ ಸೂಚಿಸಿರುವ ಐದು ಟೌನ್‌ಶಿಪ್‌ಗಳ ವ್ಯಾಪ್ತಿಯಲ್ಲಿಯೇ ಪ್ರೋತ್ಸಾಹಕ ನಿವೇಶನಗಳನ್ನು ನಿರ್ಮಿಸುವ ಮೂಲಕ ನೈಸ್ ಸಂಸ್ಥೆ ದೀರ್ಘಕಾಲದಿಂದ ಬಾಕಿ ಉಳಿದಿರುವ ನಿವೇಶನಗಳ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತದೆಯೇ ಎಂಬುದು.
ಮೂರು ದಶಕಗಳ ದಾಖಲೆಗಳನ್ನು ಒಟ್ಟಾಗಿ ನೋಡಿದಾಗ, ನೈಸ್ ವಿವಾದದಲ್ಲಿ ಒಂದೇ ಒಂದು ಆರೋಪ ಅಥವಾ ಒಂದೇ ಒಂದು ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡುವುದಕ್ಕಿಂತ, ಸರ್ಕಾರ, ಭೂಸ್ವಾಧೀನ ಸಂಸ್ಥೆ, ಯೋಜನಾ ಸಂಸ್ಥೆ ಮತ್ತು ನ್ಯಾಯಾಂಗದ ವಿವಿಧ ಹಂತಗಳಲ್ಲಿ ನಡೆದ ನಿರ್ಧಾರಗಳು ಹಾಗೂ ವಿಳಂಬಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಅಗತ್ಯ ಸ್ಪಷ್ಟವಾಗುತ್ತದೆ. ನೈಸ್ ಯೋಜನೆಯ ಭವಿಷ್ಯವನ್ನು ನಿರ್ಧರಿಸುವಲ್ಲಿ ರಾಜಕೀಯ ಆರೋಪಗಳಿಗಿಂತ, ಒಪ್ಪಂದಗಳು, ಸರ್ಕಾರಿ ದಾಖಲೆಗಳು ಮತ್ತು ನ್ಯಾಯಾಲಯದ ಅಂತಿಮ ತೀರ್ಪುಗಳೇ ನಿರ್ಣಾಯಕವಾಗಲಿವೆ.