ವಸತಿ ರಹಿತರಿಗೆ ಗುಡ್ ನ್ಯೂಸ್:ಅರ್ಹ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆಯಲ್ಲಿ ಚಾಲನೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ ದಿದ್ದಲ್ಲಿ, ಪಕ್ಕದ ಗ್ರಾಮಗಳಲ್ಲಿ ಜಮೀನು ಗುರುತಿಸಿ ಲೇಔಟ್ ನಿರ್ಮಿಸುವ ಮೂಲಕ ವಸತಿ ರಹಿತರಿಗೆ ನ್ಯಾಯ ಒದಗಿಸುವ ಭರವಸೆ ಯನ್ನು ನೀಡಿದರು. ಗ್ರಾಮ ಪಂಚಾಯತಿಯ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸರ್ವೇ ನಡೆಸಿದ ನಂತರವೇ ಅಂತಿಮ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು
-
ಪಾರದರ್ಶಕ ಫಲಾನುಭವಿಗಳ ಆಯ್ಕೆಗೆ ಒತ್ತು: ಸುಳ್ಳು ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತ: ಡಾ.ಮಹೇಶ್ ಎಚ್ಚರಿಕೆ
ಚಿಂತಾಮಣಿ: ತಾಲೂಕಿನ ಕಾಗತಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.ಈ ಸಭೆಯಲ್ಲಿ ಗ್ರಾಮ ಪಂಚಾಯತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ್ ಕುಮಾರ್ ಭಾಗವಹಿಸಿ, ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಮಹೇಶ್ ಕುಮಾರ್ ಅವರು ರಾಜ್ಯ ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅರ್ಹ ವಸತಿ ರಹಿತರಿಗೆ ಮತ್ತು ಭೂ ರಹಿತರಿಗೆ ಮನೆಗಳನ್ನು ಒದಗಿಸಲು ಬದ್ಧವಾಗಿದೆ.ಈ ಪ್ರಕ್ರಿಯೆಯಲ್ಲಿ ಗ್ರಾಮ ಸಭೆಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.
ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಮುಂದೆ ಫಲಾನುಭವಿಗಳ ಪಟ್ಟಿಯನ್ನು ಓದಲಾಗುತ್ತದೆ.ಒಂದು ವೇಳೆ ಪಟ್ಟಿಯಲ್ಲಿರುವವರ ಹೆಸರಿನಲ್ಲಿ ಈಗಾಗಲೇ ಜಮೀನು ಅಥವಾ ಮನೆ ಇರುವುದು ಕಂಡು ಬಂದಲ್ಲಿ, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಬಹುದು.ಅಂತಹ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Chikkaballapur News: ಶೇ.100ರಷ್ಟು ಲಸಿಕಾಕರಣ ಸಾಧಿಸಿ ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಜಿ.ಪ್ರಭು
ಹೆಚ್ಚುವರಿಯಾಗಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ ದಿದ್ದಲ್ಲಿ, ಪಕ್ಕದ ಗ್ರಾಮಗಳಲ್ಲಿ ಜಮೀನು ಗುರುತಿಸಿ ಲೇಔಟ್ ನಿರ್ಮಿಸುವ ಮೂಲಕ ವಸತಿ ರಹಿತರಿಗೆ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.ಗ್ರಾಮ ಪಂಚಾಯತಿಯ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸರ್ವೇ ನಡೆಸಿದ ನಂತರವೇ ಅಂತಿಮ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನೋದ ಎಸ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶನ ರಹಿತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಪ್ರಕ್ರಿಯೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ವಸತಿ ಮತ್ತು ನಿವೇಶನಕ್ಕಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಡಂಗುರ ಸಾರುವ ಮೂಲಕ ಹಾಗೂ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಇದರ ಫಲವಾಗಿ ಕೇವಲ ಒಂದು ವಾರದಲ್ಲಿ 200ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜಿ ಸಲ್ಲಿಸಿದ ತಕ್ಷಣವೇ ಮನೆ ಮಂಜೂರಾಗುವುದಿಲ್ಲ. ಸರ್ಕಾರದ ನಿಯಮದಂತೆ ಅರ್ಹ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
ಅರ್ಜಿದಾರರು ಅಥವಾ ಅವರ ಕುಟುಂಬದವರ ಹೆಸರಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿ ಸ್ವಂತ ಮನೆ ಅಥವಾ ನಿವೇಶನ ಇರಬಾರದು.
ಕುಟುಂಬದ ವಾರ್ಷಿಕ ಆದಾಯ 120000 ರೂ.ಒಳಗಿರಬೇಕು. ಮಹಿಳೆಯರಿಗೆ ಯೋಜನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಪುರುಷರಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಮತ್ತು ವಿಧುರರಿಗೆ ಮಾತ್ರ. ವಿಶೇಷ ಸಂದರ್ಭಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾಜಿ ಸೈನಿಕರಿಗೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಲ್ ಕಲೆಕ್ಟರ್ ಸುರೇಶ್, ಕಾರ್ಯದರ್ಶಿ ಮಧುಕರ ಬಿ, ಚಿಂತಾಮಣಿ ನಗರ ಆರೋಗ್ಯ ಅಧಿಕಾರಿ ಶ್ರೀನಿವಾಸ ರೆಡ್ಡಿ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿ ದ್ದರು.