ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆ್ಯಸಿಡ್ ದಾಳಿ ಆರೋಪಿಗಳ ಆಸ್ತಿ ಮಾರಿ ಸಂತ್ರಸ್ತರಿಗೆ ಪರಿಹಾರ ನೀಡಬಾರದೆ? ಸುಪ್ರೀಂ ಕೋರ್ಟ್ ಪ್ರಶ್ನೆ

ಸುಪ್ರೀಂ ಕೋರ್ಟ್ ಮಂಗಳವಾರ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಆರೋಪಿಯ ಎಲ್ಲ ಆಸ್ತಿಗಳನ್ನು ಹರಾಜು ಮಾಡಿ, ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದೆ. ಜತೆಗೆ ಸಂತ್ರಸ್ತರಿಗೆ ಜೀವನ ನಡೆಸಲು ಹೆಚ್ಚಿನ ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಒತ್ತಿ ಹೇಳಿದೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರಗಳು ಆ್ಯಸಿಡ್ ದಾಳಿ ಪರಿಹಾರ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಆ್ಯಸಿಡ್ ದಾಳಿ ಪೀಡಿತರಿಗೆ ಹೆಚ್ಚುವರಿ ಪರಿಹಾರ ಅಗತ್ಯ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ -

Profile
Sushmitha Jain Jan 27, 2026 9:37 PM

ನವದೆಹಲಿ, ಜ. 27: ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಆರೋಪಿಗಳ ಎಲ್ಲ ಆಸ್ತಿಗಳನ್ನು ಹರಾಜು ಹಾಕಿ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲವೇ ಎಂದು ಮಂಗಳವಾರ ಸುಪ್ರೀಂ ಕೋರ್ಟ್ (Supreme Court) ಪ್ರಶ್ನಿಸಿದ್ದು, ಸಂತ್ರಸ್ತರಿಗೆ ಜೀವನ ನಡೆಸಲು ಹೆಚ್ಚಿನ ಆರ್ಥಿಕ ಪರಿಹಾರದ ಅಗತ್ಯವಿದೆ ಎಂದು ಒತ್ತಿ ಹೇಳಿದೆ. ಆ್ಯಸಿಡ್ ದಾಳಿ ಪ್ರಕರಣದಲ್ಲಿ ರಾಜ್ಯ ಸರ್ಕಾರಗಳು ಪರಿಹಾರ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಸದ್ಯ ನೀಡುತ್ತಿರುವ 3 ಲಕ್ಷ ರುಪಾಯಿ ಪರಿಹಾರವು ಅಗತ್ಯ ಚಿಕಿತ್ಸೆ ಮತ್ತು ಜೀವನ ನಡೆಸಲು ಸಾಲದು ಎಂದು ಅಭಿಪ್ರಾಯಪಟ್ಟಿದೆ.

“ಈ ರೀತಿಯ ಘೋರ ಅಪರಾಧಗಳನ್ನು ತಡೆಯಲು ಅತೀ ಕಠಿಣ ಶಿಕ್ಷೆ ಅಗತ್ಯ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (Surya Kant) ಹೇಳಿದ್ದಾರೆ. 2009ರ ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ತೆ ಹಾಗೂ ‘ಬ್ರೇವ್ ಸೋಲ್ಸ್ ಫೌಂಡೇಶನ್’ ಎಂಬ ಎನ್‌ಜಿಒ ಸ್ಥಾಪಕಿ ಶಾಹೀನ್ ಮಲಿಕ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮಂಗಳವಾರ ನಡೆಸಿತು.

“ನಾನು 16 ವರ್ಷಗಳಿಂದ ಈ ಪ್ರಕರಣಕ್ಕಾಗಿ ಹೋರಾಡುತ್ತಿದ್ದೇನೆ. ದುರದೃಷ್ಟವಶಾತ್‌, ಈಗಾಗಲೇ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ನನ್ನ ಮೇಲೆ ದಾಳಿ ನಡೆದಾಗ ನಾನು 26 ವರ್ಷದವಳಾಗಿದ್ದೆ, ಈಗ ನನಗೆ 42 ವರ್ಷ. ಈ ಹೋರಾಟದಲ್ಲಿ ನನ್ನ ಜೀವನದ ಅಮೂಲ್ಯ ವರ್ಷಗಳನ್ನು ಕಳೆದುಕೊಂಡಿದ್ದೇನೆ. ಆದರೂ ನಾನು ಯಾವ ಹಂತದಲ್ಲಿದ್ದೇನೆ ಎಂಬುದೇ ಸ್ಪಷ್ಟವಾಗಿಲ್ಲ” ಎಂದು ಶಾಹೀನ್ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಗಮನಾರ್ಹ ಸಂಗತಿಯೆಂದರೆ ಈ ಹಿಂದೆಯೇ ಏಳು ವರ್ಷಗಳಿಂದ ಬಾಕಿ ಇರುವ ಈ ಪ್ರಕರಣದ ವಿಚಾರಣೆಯನ್ನು ಶೀಘ್ರ ಕೈಗೊಳ್ಳುವಂತೆ ಕೆಳ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದೀಗ ಸಂತ್ರಸ್ತೆಗೆ ಹೈಕೋರ್ಟ್‌ನಲ್ಲಿ ಹೋರಾಡಲು ಅತ್ಯುತ್ತಮ ವಕೀಲರ ನೆರವು ದೊರಕುವಂತೆ ಸುಪ್ರೀಂ ಕೋರ್ಟ್ ಖಚಿತಪಡಿಸಲಿದೆ ಎಂದು ನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ.

ಶ್ರೀನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ; CRPF ಯೋಧ ಸೇರಿ ನಾಲ್ವರು ಬಲಿ

ಈ ಹಿಂದೆ, ಶಾಹೀನ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಉತ್ತರ ಕೇಳಿದ್ದ ನ್ಯಾಯಾಲಯ, ಆ್ಯಸಿಡ್ ಬಲವಂತವಾಗಿ ಕುಡಿಸಲ್ಪಟ್ಟ ಸಂತ್ರಸ್ತರು ವಿಶೇಷ ಚೇತನದ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಂಶವನ್ನು ಪ್ರಸ್ತಾಪಿಸಿತ್ತು. ಅರ್ಜಿಯಲ್ಲಿ ತಿಳಿಸಿರುವಂತೆ, 2016ರ ಅಂಗವಿಕಲರ ಹಕ್ಕುಗಳ ಕಾಯ್ದೆ, ಆ್ಯಸಿಡ್‌ ಅನ್ನು ಬಲವಂತವಾಗಿ ಕುಡಿಸಲ್ಪಟ್ಟ ಸಂತ್ರಸ್ತರನ್ನು ವಿಶೇಷ ಚೇತನರೆಂದು ಪರಿಗಣಿಸುವುದಿಲ್ಲ. ಕೇವಲ ಆ್ಯಸಿಡ್ ಎರಚಲಾದವರಿಗೆ ಮಾತ್ರ ವಿಶೇಷ ಚೇತನ ಸ್ಥಾನಮಾನ ನೀಡಲಾಗುತ್ತದೆ ಎಂದು ಕಾನೂನು ಹೇಳುತ್ತದೆ.

ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆ್ಯಸಿಡ್ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆಯೇ, ಎಷ್ಟು ಪ್ರಕರಣಗಳು ದಾಖಲಾಗಿವೆ, ಎಷ್ಟು ಬಾಕಿ ಉಳಿದಿವೆ ಎಂಬ ವಿವರಗಳನ್ನು ನೀಡುವಂತೆ ಸೂಚಿಸಿದೆ. ಜತೆಗೆ ಸಂತ್ರಸ್ತರ ವಿದ್ಯಾರ್ಹತೆ, ವೈವಾಹಿಕ ಸ್ಥಿತಿ ಮತ್ತು ಉದ್ಯೋಗ ವಿವರಗಳನ್ನೂ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಇಷ್ಟೇ ಅಲ್ಲದೇ, ವರದಕ್ಷಿಣೆ ಸಾವುಗಳಿಗೆ ಸಂಬಂಧಿಸಿದ ಕಾನೂನುಗಳಂತೆ ಆ್ಯಸಿಡ್ ದಾಳಿ ಪ್ರಕರಣಗಳಿಗೂ ಕಾನೂನನ್ನು ಪರಿಚಯಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

2013ರ ಜುಲೈಯಲ್ಲಿ ಮಹಿಳೆಯರ ಮೇಲಿನ ಆ್ಯಸಿಡ್ ದಾಳಿಗಳನ್ನು ತಡೆಯಲು ಆ್ಯಸಿಡ್ ಮಾರಾಟವನ್ನು ನಿಯಂತ್ರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಮಾನ್ಯ ಗುರುತಿನ ಚೀಟಿ ನೀಡಿದವರಿಗೆ ಮಾತ್ರ ಆ್ಯಸಿಡ್ ಮಾರಾಟ ಮಾಡುವಂತೆ ಹೇಳಿತ್ತು. ಆ್ಯಸಿಡ್ ಏಕೆ ಬೇಕು ಎಂಬುದನ್ನು ಖರೀದಿದಾರರು ಸ್ಪಷ್ಟಪಡಿಸಬೇಕು ಮತ್ತು ಎಲ್ಲ ಮಾರಾಟಗಳ ವಿವರವನ್ನು ಪೊಲೀಸರಿಗೆ ವರದಿ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆ್ಯಸಿಡ್ ಮಾರಾಟ ಮಾಡಬಾರದು ಎಂಬುದನ್ನೂ ಕಡ್ಡಾಯಗೊಳಿಸಲಾಗಿದೆ.