Chikkaballapur News: ಜನಸೇವೆಗಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲುವುದು ಖಚಿತ: ಸಂದೀಪ್‌ರೆಡ್ಡಿ ಘೋಷಣೆ
ಯುವಪಡೆ ಸಂದೀಪ್ ಅವರ ಜತೆಗಿದೆ ಎಂದು ಎಲ್ಲರೂ ಹೇಳುತ್ತಾರೆ. ನನಗೆ ಗೊತ್ತಿಲ್ಲ ಪಡೆ ಕಟ್ಟುವುದು ಹೇಗೆ? ರಾಜಕೀಯ ಮಾಡುವುದು ಹೇಗೆ ಎಂಬುದು ಗೊತ್ತಿಲ್ಲ. ಸುಮರು 7-8 ವರ್ಷಗಳ ಹಿಂದೆ ಕಟ್ಟಿದ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಕಟ್ಟಿಕೊಂಡು ಸಣ್ಣ ಸಣ್ಣ ಕನಸುಗಳನ್ನು ಕ್ಷೇತ್ರದಲ್ಲಿ ಬಿತ್ತುತ್ತಾ ಪ್ರಾಮಾಣಿಕವಾಗಿ ಜನಸೇವೆ ಮಾಡಿಕೊಂಡು ಬಂದವನು ನಾನು. ಈ ಟ್ರಸ್ಟ್ ಬೆಳೆದು ಇಂದು ಲಕ್ಷಾಂತರ ಮಂದಿಯ ಹೃದಯ ಗೆದ್ದಿರುವುದನ್ನು ನೋಡಿದರೆ ಹೃದಯ ತುಂಬಿ ಬಂದಿದೆ
-
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ, ಸಾಮಾಜಿಕ ಅಸಮಾನತೆ ನಿವಾರಿಸಿ, ಸರ್ವರಿಗೆ ಸಮಬಾಳು ಸಮಪಾಲು ದೊರಕಿಸಿ ಕೊಡುವ ಮಹದೋದ್ಧೇಶದಿಂದ 2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಆದರೆ ರಾಜಕೀಯ ವೇ ನನ್ನ ಅಂತಿಮ ಗುರಿಯಲ್ಲ ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಘೋಷಣೆ ಮಾಡಿದರು.
ನಗರ ಹೊರವಲಯ ಕಂದವಾರ ಗ್ರಾಮದ ನಿರಾಶ್ರಿತರ ಕಾಲೋನಿಯಲ್ಲಿ ಭಗತ್‌ಸಿಂಗ್ ಚಾರಿಟೇ ಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 10 ಸಾವಿರ ಬೆಡ್‌ಶೀಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಪಡೆ ಸಂದೀಪ್ ಅವರ ಜತೆಗಿದೆ ಎಂದು ಎಲ್ಲರೂ ಹೇಳುತ್ತಾರೆ. ನನಗೆ ಗೊತ್ತಿಲ್ಲ ಪಡೆ ಕಟ್ಟುವುದು ಹೇಗೆ? ರಾಜಕೀಯ ಮಾಡುವುದು ಹೇಗೆ ಎಂಬುದು ಗೊತ್ತಿಲ್ಲ. ಸುಮರು 7-8 ವರ್ಷಗಳ ಹಿಂದೆ ಕಟ್ಟಿದ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಕಟ್ಟಿಕೊಂಡು ಸಣ್ಣ ಸಣ್ಣ ಕನಸುಗಳನ್ನು ಕ್ಷೇತ್ರದಲ್ಲಿ ಬಿತ್ತುತ್ತಾ ಪ್ರಾಮಾಣಿಕವಾಗಿ ಜನಸೇವೆ ಮಾಡಿಕೊಂಡು ಬಂದವನು ನಾನು. ಈ ಟ್ರಸ್ಟ್ ಬೆಳೆದು ಇಂದು ಲಕ್ಷಾಂತರ ಮಂದಿಯ ಹೃದಯ ಗೆದ್ದಿರುವುದನ್ನು ನೋಡಿದರೆ ಹೃದಯ ತುಂಬಿ ಬಂದಿದೆ ಎಂದರು.
ಇದನ್ನೂ ಓದಿ: Chikkaballapur News: ಗ್ರಾಮ ಸ್ವರಾಜ್ಯದ ಸಾಕಾರ ಕೇಂದ್ರವೇ ಗ್ರಾಮಪಂಚಾಯಿತಿ : ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷ
ಪ್ರೀತಿ ಶಾಶ್ವತ!!
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಜನ ನನ್ನ ಪ್ರೀತಿಸುವುದಿಲ್ಲ. ಬದಲಿಗೆ ಜಿಲ್ಲೆಯ ಯಾವುದೇ ತಾಲೂಕಿಗೆ ಹೋದರೂ ಅಲ್ಲಿ ನನ್ನ ಪ್ರೀತಿಸುವ ಮಂದಿ ಇದ್ದಾರೆ. ಇದು ನೋಡಿದರೆ ಸಾಕು ನಾನು ಸರಿಯಾದ ಹಾದಿಯಲ್ಲಿ ಇದ್ದೇನೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ನಾನೇನೂ ಅಲ್ಲ!!
ಮೊದಲಿಗೆ ನಾನು ಏನೂ ಅಲ್ಲ, ಗ್ರಾಮ ಪಂಚಾಯಿತಿ ಸದಸ್ಯನೂ ಅಲ್ಲ, ನನ್ನ ಕೈಯಲ್ಲಿ ಯಾವ ಅಧಿಕಾರವೂ ಇಲ್ಲ, ಪ್ರತಿಯೊಬ್ ವ್ಯಕ್ತಿಗೂ ಏನೋ ದೊಡ್ಡದು ಮಾಡುವಷ್ಟು ಆಗರ್ಭ ಶ್ರೀಮಂತ ನಂತೂ ಅಲ್ಲವೇ ಅಲ್ಲ.ಆದರು ಸಹ ಜನ ಬಂದು ಪ್ರೀತಿಯಿಂದ ಮಾತನಾಡಿ ನೀನು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೀಯಾ? ಅಂದಾಗ ನನಗನಿಸುತ್ತದೆ ನಾನು ಸರಿಯಾದ ದಾರಿಯಲ್ಲಿ ಇದ್ದಿನಿ ಅಂತ ಸಂತೋಷ ಆಗುತ್ತದೆ ಎಂದರು.
ಅಳಿಲು ಸೇವೆ
ನನ್ನ ಸಮಾಜ ಸೇವೆಯ ಹಾದಿಯಲ್ಲಿ ಹತ್ತಾರು ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದೇನೆ, ವೃದ್ಧರಿಗೆ ಸೂರು ಒದಗಿಸಿದ್ದೇನೆ. ಕಷ್ಟ ಎಂದು ಬಂದವರ ಕಣ್ಣೀರು ಒರೆಸಿದ್ದೇನೆ. ಅಶಕ್ತರನ್ನು ಗುರ್ತಿಸಿ ನಮ್ಮ ಕೈಲಾದ ಸಹಾಯ ಮಾಡಿದ್ದೇನೆ.ಇವುಗಳನ್ನು ಯಾವುದೋ ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡು ಮಾಡಿದ್ದಲ್ಲ. ಯಾರಾದರೂ ಕಷ್ಟದಲ್ಲಿದ್ದರೆ ಅವರ ಕಷ್ಟಕ್ಕೆ ಮಿಡಿಯುವ ಒಳ್ಳೆಯ ಮನಸ್ಸಿದೆ. ಇದು ದೇವರ ಆಶೀರ್ವಾದದಿಂದ ನನಗೆ ದಕ್ಕಿದೆ ಎಂದರು.
ಅಜಾತಶತ್ರುವಾಗಲು ಬಯಸುತ್ತೇನೆ!!
ನಾನು ಅಜಾತಶತ್ರು ವಾಜಪೇಯಿ ಅವರ ಕಟ್ಟಾ ಅನುಯಾಯಿ. ಯಾರನ್ನೂ ದ್ವೇಷಿಸುವುದಿಲ್ಲ. ಬಡವರಿಗೆ ಕಂಬಳಿ ಕೊಡುವ ಕೆಲಸ ನನ್ನಿಂದ ಮಾಡಿಸಿದ್ದು ಡಾ. ಮಧುಕರ್ ಆಗಿದ್ದಾರೆ. 2025ರಲ್ಲಿ ಪ್ರಾರಂಭವಾದ ಈ ಅಭಿಯಾನ ಇಂದು 10 ಸಾವಿರ ಕಂಬಳಿ ವಿತರಿಸುವ ಹಂತಕ್ಕೆ ಬಂದು ನಿಂತಿದೆ. ಕಂಬಳಿ ಕೇವಲ ಹೊದಿಕೆಯಲ್ಲ ಬೆಚ್ಚಗಿನ ಅಪ್ಪುಗೆಯನ್ನು ನೀಡುವ ಪ್ರೀತಿಯ ಸಂಕೇತ ಎಂದು ಭಾವಿಸಿದ್ದೇನೆ. ನಾನು ಯಾರ ಮನೆಯಲ್ಲೂ ಕಂಬಳಿಯಿಲ್ಲ ಎಂದು ಕೊಡುತ್ತಿಲ್ಲ, ಅಶಕ್ತರ ಬದುಕು ಸುಧಾರಿಸಲು ಸಾಂಕೇತಿಕವಾಗಿ ಇದನ್ನು ಕೊಡುವ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಬಸವಣ್ಣ ನವರ ತತ್ವವನ್ನು ಸಾರುವ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬುದರಲ್ಲಿ ನಂಬಿಕೆ ಯಿಟ್ಟವನು ನಾನು ಎಂದರು.
ಮಹಿಳಾ ವೈದ್ಯರ ನೇಮಕ ಮಾಡಿ?
ಮಂಚೇನಹಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಲ್ಲ. ದೇಶದ ಉದಕ್ಕಲಕ್ಕೂ ಹೀಗೆ ಇರಬಹುದು.ನನ್ನ ಕ್ಷೇತ್ರದಲ್ಲಿ ಎಷ್ಟೋ ಶಾಲೆಗಳು ಮಳೆ ಬಂದರೆ ಸುರಿಯುತ್ತಿವೆ. ಹಲವು ಬೀಳುವ ಸ್ಥಿತಿಯಲ್ಲಿವೆ. ಇಂತಹ ಕಡೆ ನಾನು ದುಡಿದ ಹಣಹಾಕಿ ಸುಧಾರಣೆ ತರಬೇಕು ಎಂದು ಆಸೆಯಿದೆ. ಎಷ್ಟೋ ಆಸ್ಪತ್ರೆಗಳಲ್ಲಿ ತಂದೆ ತಾಯಿ ಅಮ್ಮ ಅಕ್ಕಂದಿರನ್ನು ಮಕ್ಕಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ಹಣ ಹೊಮದಿಸಲಾಗದೆ ಅಂಗಲಾಚುತ್ತಿರುತ್ತಾರೆ. ಇದು ಸುಧಾರಣೆ ಆಗಬೇಕು. ಈ ಪರಿಸ್ಥಿತಿ ಭಾರತ ದೇಶದಲ್ಲಿದೆ ಎಂದು ಕೇಳಿ ಕರುಳು ಚುರುಕ್ ಅನ್ನುತ್ತದೆ ಎಂದು ಭಾವುಕವಾದರು.
ಸ್ಪೂರ್ತಿಯಾಗಿದೆ!!
ರಾಜಕೀಯದಲ್ಲಿ ಹೋಗಿ ಇವೆಲ್ಲಾ ಸುಧಾರಣೆ ತಂದೇ ತರುತ್ತೇವೆ, ಒಬ್ಬನೇ ವ್ಯಕ್ತಿಯಿಂದ ಇವೆಲ್ಲಾ ಸಾಧ್ಯ ಎಂದು ನಂಬಿದವನು ನಾನಲ್ಲ.ಇದಕ್ಕೆ ಸಮುದಾಯದ ಸಹಕಾರ ಬೇಕೇಬೇಕು. ಭಗತ್ ಸಿಂಗ್ ಟ್ರಸ್ಟ್ ಮೂಲಕ 8 ವರ್ಷಗಳಿಂದ ಜನರಿಗೆ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಫೇಸ್‌ಬುಕ್‌ಗೆ ಹಾಕುತ್ತಾನೆ ಎಂದು ಜನ ಆಡಿಕೊಳ್ಳುತ್ತಾರೆ.ಹೀಗೆ ವಿಚಾರಗಳನ್ನು ಪ್ರಚಾರ ಮಾಡಿದ್ದ ರಿಂದಲೇ ತಾಂಡ್ರ ಮರದಹಳ್ಳಿ ಗ್ರಾಮದಲ್ಲಿ ಸಾಮಾನ್ಯ ರೈತ ಸಹೋದರನೊಬ್ಬ ಗಂಡು ದಿಕ್ಕಿಲ್ಲದ ಮಹಿಳೆಗೆ ಮನೆ ಕಟ್ಟಿಕೊಟ್ಟಿದ್ದಾನೆ. ಇಂತಹ ಒಳ್ಳೆಯ ಕೆಲಸಗಳಿಗೆ ನನ್ನ ವಿಡಿಯೋ ಸ್ಪೂರ್ತಿ ಆಗಿದೆ, ಲೈಕ್ ವೀವ್ಸ್ ಮುಖ್ಯವಲ್ಲ ಎಂದರು.
ಯಲಹಂಕ ಮೀರಿದ ಮಾದರಿ!!
ನನಗೊಂದು ವೇಳೆ ರಾಜಕೀಯ ಅಧಿಕಾರ ಸ್ಥಾನ ಮಾನ ಸಿಕ್ಕಿದ್ದೇ ಆದಲ್ಲಿ ಯಲಹಂಕ ಕ್ಷೇತ್ರದಲ್ಲಿ ಶಾಸಕ ವಿಶ್ವನಾಥ್ ಅವರು ಏನು ಹೇಗೆ ಅಭಿವೃದ್ದಿ ಮಾಡಿದ್ದಾರೋ ಅದನ್ನು ಮೀರಿಸಿ ಇನ್ನೊಂದೆ ಜ್ಜೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಆಸೆ ಎನ್ನುತ್ತಾ ರಾಜಕೀಯ ಗುರುಗಳ ಎದುರು ಮನದಿಂಗಿತ ತೆರೆದಿಟ್ಟರು.
ಹೋರಾಟದ ಎಚ್ಚರಿಕೆ!!
ಮಂಚೇನಹಳ್ಳಿ ತಾಲೂಕಿನಲ್ಲಿ 60 ಸಾವಿರ ಜನಸಂಖ್ಯೆಯಿದೆ. ಆದರೂ ತಾಲೂಕು ಆಸ್ಪತ್ರೆಯಲ್ಲಿ ಒಬ್ಬರೇ ಒಬ್ಬ ಮಹಿಳಾ ವೈದ್ಯರಿಲ್ಲ.ಈ ಕೊರತೆಯನ್ನು ಕೂಡಲೇ ನಿವಾರಿಸಬೇಕು. ಏಕೆಂದರೆ ಜಿಲ್ಲಾಡಳಿತ ಮಹಿಳೆಯರಿಗೆ ಮಾಡುತ್ತಿರುವ ಮೋಸ ಎಂದೇ ಭಾವಿಸುತ್ತೇನೆ. ದಯವಿಟ್ಟು ಕಳಕಳಿಯ ಮನವಿ ಮಾಡುತ್ತೇವೆ. ಆಗಲಿಲ್ಲ ಎಂದರೆ ಅದರ ಪರಿಣಾಮ ಬೇರೆ ರೀತಿ ಇರಲಿದೆ. ಸಂದೀಪ್‌ರೆಡ್ಡಿ ಯಾರನ್ನೂ ಧ್ವೇಷಿಸುವುದಿಲ್ಲ, ನನಗೆ ಯಾರಾದರೂ ಆದರ್ಶ ಇದ್ದರೆ ವಾಜಪೇಯಿ. ನಾನು ಅಜಾತಶತ್ರುವಾಗಿ ಉಳಿಯಲು ಬಯಸುತ್ತೇನೆ. ನನ್ನ ಜನರಿಗೆ ಏನಾದರೂ ತೊಂದರೆ ಆದರೆ , ಅವರ ಹಕ್ಕುಗಳನ್ನು ಕಿತ್ತುಕೊಂಡು ಅವರು ಕಟ್ಟಿರುವ ತೆರಿಗೆಯಲ್ಲಿ ಮಜಾ ಮಾಡುತ್ತಿದ್ದರೆ ಮಾತ್ರ ಸಿಡಿದೇಳುವ ಕೆಲಸ ಮಾಡುತ್ತೇನೆ. ಈಗಾಗಲೇ ಎರಡು ಬಾರಿ ನೀವು ನಮ್ಮ ಹೋರಾಟವನ್ನು ನೋಡಿದ್ದೀರಿ. ನೀವು ಯಾವುದೇ ಪಕ್ಷವಾಗಿರಿ? ನಿಮ್ಮ ಉದ್ದೇಶಗಳು ಏನೇ ಆಗಿರಲಿ, ನಿಮ್ಮ ಜತೆ ಭುಜಕ್ಕೆ ಭುಜಕೊಟ್ಟು ಕೆಲಸ ಮಾಡುತ್ತೇನೆ. ಚಿಕ್ಕಬಳ್ಳಾಪುರದ ಅಭಿವೃದ್ದಿ ನಿಮ್ಮ ಉದ್ದೇಶವಾಗಿರಲಿ ಎಂದು ಆಗ್ರಹಿಸಿದರು.
ಹಣದ ಹೊಳೆ ಹರಿಯಲಿದೆ
ಭವಿಷ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಹಣದ ಹೊಳೆ ಹರಿಯಲಿದೆ. ಬೆಂಗಳೂರು ಯಲಹಂಕ ಬೆಳೆಯುವುದು ಸಾಧ್ಯವಿಲ್ಲ. ಇನ್ನೇನಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕವೇ ಅಭಿವೃದ್ದಿಗೆ ಮುನ್ನುಡಿ ಬರೆಯಬೇಕು. ನಾವು ನೀವೆಲ್ಲಾ ಸೇರಿ ಚಿಕ್ಕಬಳ್ಳಾಪುರವನ್ನು ಸರಿಯಾದ ದಿಕ್ಕಿನಲ್ಲಿ ಕಟ್ಟುವ ಕೆಲಸ ಮಾಡೋಣ ಎಂದರು.
ಯಲಹಂಕ ಶಾಸಕ ವಿಶ್ವನಾಥ್, ಕಿರಿಯ ಸಹೋದರ ಅಲೋಕ್ ವಿಶ್ವನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಡಾ.ಹೆಚ್.ಎಸ್.ಮಧುಕರ್, ರಿಯಾಝ್, ಯಲಹಂಕ ವೆಂಕಟೇಶ್, ಮಂಜುನಾಥ್, ಈಶ್ವರ್,ಎಸ್ಸಿ ಮೋರ್ಚಾ ಅಧ್ಯಕ್ಷ ಮುರಳಿ, ಚಿತ್ರ ಸಾಹಿತಿ ವರದರಾಜ್, ಎಸಿ.ಮುನಿಕೃಷ್ಣ, ಎಸ್.ಟಿ.ಡಿ ಮೂರ್ತಿ, ಕೊಂಡೇನಹಳ್ಳಿ ಮುರಳಿ, ಹೊಸ ಹುಡ್ಯ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷೆ ಮಲ್ಲಿಕಾ, ಪವನ್ ಕುಮಾರ್, ಮಂಜುನಾಥ್, ಡಾ.ಶಶಿಕುಮಾರ್, ಕರವೇ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ ಮತ್ತಿತರರು ಇದ್ದರು.