MLA S R Srinivas: ಕನ್ನಡ ಪರ ದನಿಯಾಗಿ ದುಡಿಯೋಣ: ಶಾಸಕ ಎಸ್.ಆರ್.ಶ್ರೀನಿವಾಸ್
ನಾಡು ನುಡಿ ಸಂಸ್ಕೃತಿ ಶಾಸ್ತ್ರೀಯ ಸ್ಥಾನಮಾನ ಪಡೆದಿದೆ. ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣ ಮಾಡಲಾಯಿತು. ಸಾವಿರಾರು ವರ್ಷಗಳ ಇತಿಹಾಸದ ಕನ್ನಡ ಅಸ್ಮಿತೆ ಉಳಿಸಿಕೊಳ್ಳುವುದೇ ನಮ್ಮ ಜವಾಬ್ದಾರಿಯಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಭಾಷೆ ಸಾಹಿತ್ಯ ಸಂಸ್ಕೃತಿ ಪರಂಪರೆ ಉಳಿಸಲು ಇಂದಿನ ಪೀಳಿಗೆಗೆ ಸವಾಲಾಗಿದೆ.
-
ಗುಬ್ಬಿ: ಎಲ್ಲಾ ಭಾಷಿಕರು ನಮ್ಮ ರಾಜ್ಯದ ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸ ಮಾಡಲು ಬಂದಿರುವುದು ಕಾಣುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಮಾತೃ ಭಾಷೆ ಉಳಿಸಿ ಬೆಳೆಸಲು ಕನ್ನಡ ಪರ ದನಿಯಾಗಿ ದುಡಿಯೋಣ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S R Srinivas) ಕರೆ ನೀಡಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆ ಅನ್ಯ ಭಾಷೆಗಳ ಮಧ್ಯೆ ಉಳಿಸಬೇಕು. ಅತಂತ್ರ ಸ್ಥಿತಿಯಲ್ಲಿ ನಾವು ಇದ್ದೇವೆ. ಬೆಂಗಳೂರು ನಗರದಲ್ಲಿ ಎಲ್ಲಾ ಭಾಷೆಗಳು ಇದ್ದು ನಮ್ಮ ಕನ್ನಡ ಹುಡುಕುವ ಸ್ಥಿತಿ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಡು ನುಡಿ ಸಂಸ್ಕೃತಿ ಶಾಸ್ತ್ರೀಯ ಸ್ಥಾನಮಾನ ಪಡೆದಿದೆ. ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣ ಮಾಡಲಾಯಿತು. ಸಾವಿರಾರು ವರ್ಷಗಳ ಇತಿಹಾಸದ ಕನ್ನಡ ಅಸ್ಮಿತೆ ಉಳಿಸಿಕೊಳ್ಳು ವುದೇ ನಮ್ಮ ಜವಾಬ್ದಾರಿಯಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಭಾಷೆ ಸಾಹಿತ್ಯ ಸಂಸ್ಕೃತಿ ಪರಂಪರೆ ಉಳಿಸಲು ಇಂದಿನ ಪೀಳಿಗೆಗೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಭಾಷೆ ನಾಡು, ಜಲ, ಗಡಿಗಾಗಿ ಹೋರಾಟ ನಿರಂತರ ಮಾಡಬೇಕಿದೆ ಎಂದರು.
ಇದನ್ನೂ ಓದಿ: MLA S R Srinivas: ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ: ಶಾಸಕ ಎಸ್.ಆರ್. ಶ್ರೀನಿವಾಸ್
ತಹಶೀಲ್ದಾರ್ ಆರತಿ.ಬಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ ನಮ್ಮ ಮೈಮನಸ್ಸು ತುಂಬಬೇಕು. ಕನ್ನಡದಲ್ಲಿನ ಪ್ರಾಂತೀಯ ಭಾಷೆಗಳನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣ, ಕರ್ನಾಟಕ ನಾಮಕರಣ ಮಾಡಿ ರಾಜ್ಯ ಸ್ಥಾಪನೆ ಮಾಡಲಾಯಿತು.
ಈ 71ನೇ ರಾಜ್ಯೋತ್ಸವ ಯುವ ಪೀಳಿಗೆಗೆ ತಿಳಿಯಬೇಕಿದೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರ ಸ್ಮರಣೆ ಅಗತ್ಯವಿದೆ. ನಮ್ಮ ಸಾಹಿತ್ಯ ಸಂಸ್ಕೃತಿ ಬೆಳೆಸಿದ ಕವಿಗಳು, ಸಾಹಿತಿಗಳ ಸ್ಮರಣೆ ಕೂಡಾ ನಮ್ಮೆಲ್ಲರ ಕರ್ತವ್ಯ. ಕರ್ನಾಟಕ ರಾಜ್ಯ ದೇಶದ ದೊಡ್ಡ ರಾಜ್ಯದಲ್ಲಿ ಒಂದಾಗಿ ಬೆಳೆದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ತನ್ನದೇ ವಿಶಿಷ್ಟ ಕೊಡುಗೆ ನೀಡಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಪ್ರಾಂಶುಪಾಲ ಪ್ರೊ.ಓ.ನಾಗರಾಜಯ್ಯ ಮಾತನಾಡಿ, ಕನ್ನಡನಾಡು ರಕ್ಷಣೆ ನಮ್ಮೆಲ್ಲರ ಕರ್ತವ್ಯ. 1956 ನವಂಬರ್ 1 ಮರೆಯಲಾಗದ ದಿನ. ಭಾಷಾವಾರು ಪ್ರಾಂತ್ಯವನ್ನು ಒಗ್ಗೂಡಿಸಿದ ದಿನ. ಏಕೀಕರಣ ಕರ್ನಾಟಕ ಹೊಸ ರಾಜ್ಯ ಉದಯ ಆಲೂರು ವೆಂಕಟರಾಯರು ಸ್ಮರಿಸಬೇಕು. ಏಕೀಕೃತ ರಾಜ್ಯಕ್ಕೆ 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ್ದು ನಾವು ಮರೆಯಬಾರದು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲಾ ಯುವಕವಿಗಳಿಗೆ ಸಂಘದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ವೇದಿಕೆಯಲ್ಲಿ ತಾಪಂ ಇಓ ರಂಗನಾಥ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸವಿತಾ, ಪಪಂ ಮಾಜಿ ಸದಸ್ಯರಾದ ಮಹಮದ್ ಸಾದಿಕ್, ಮಂಗಳಮ್ಮ, ಮುಖ್ಯಾಧಿಕಾರಿ ಮಂಜುಳಾದೇವಿ, ಪಂಚಾಯತ್ ರಾಜ್ ಇಲಾಖೆ ಎಇಇ ನಾಗೇಂದ್ರಪ್ಪ, ಸಿಪಿಐ ರಾಘವೇಂದ್ರ, ಪ್ರಭಾರ ಬಿಇಓ ಮಧುಸೂದನ್, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಗುಬ್ಬಿ ಹಿತ ರಕ್ಷಣಾ ಸಮಿತಿಯ ಯಲ್ಲಪ್ಪ, ಸಲೀಂಪಾಷ ಇತರರು ಇದ್ದರು.