ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ತುಮಕೂರಿನಲ್ಲಿ ರೈತ ಸಂಘದಿಂದ ಪ್ರತಿಭಟನೆ
Tumkur News: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತುಮಕೂರು ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಮತ್ತು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ನೇತೃತ್ವದಲ್ಲಿ ನಗರದ ಬಿಎಸ್‌ಜೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
-
ತುಮಕೂರು, ಸೆ.28: ಭೀಕರ ಬರಗಾಲದ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಮತ್ತು ಕೃಷಿಕರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತುಮಕೂರು ನಗರದಲ್ಲಿ (Tumkur News) ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಮತ್ತು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ನೇತೃತ್ವದಲ್ಲಿ ನಗರದ ಬಿಎಸ್‌ಜೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಸರ್ಕಾರಗಳು ರೈತರ ರಕ್ಷಣೆಗೆ ಬಂದಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆಯೇ ಹೊರತು ರೈತರ ಹಿತಾಸಕ್ತಿ ಅವರಿಗೆ ಬೇಕಾಗಿಲ್ಲ. ವ್ಯವಸ್ಥೆಯ ಬದಲಾವಣೆಗಾಗಿ ಪರ್ಯಾಯ ರಾಜಕೀಯ ಪಕ್ಷದ ಅವಶ್ಯಕತೆಯಿದೆ ಎಂದರು.
ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಕೃಷಿಗೆ ಪ್ರಥಮ ಆದ್ಯತೆ ನೀಡಿ ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಬೇಕು. ಹಳೆಯ ಕಂಬ, ವೈರ್ ಮತ್ತು ಸುಟ್ಟ ಪರಿವರ್ತಕಗಳನ್ನು 48 ಗಂಟೆಯೊಳಗೆ ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಬರ ಪರಿಹಾರ ಮತ್ತು ಹಾಲಿನ ದರ ಹೆಚ್ಚಳ: ರೈತರಿಗೆ ನೀಡುವ 2,500 ರೂ. ಬರ ಪರಿಹಾರ ಕೇವಲ ಅಪಮಾನವಿದ್ದಂತೆ, ಇದನ್ನು ವೈಜ್ಞಾನಿಕವಾಗಿ ಹೆಚ್ಚಿಸಬೇಕು. ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ 60 ರೂ.ಗೆ ಏರಿಕೆ ಮಾಡಬೇಕು ಮತ್ತು ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಬೇಕು.
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧ: ಜಿಲ್ಲೆಯ ಸುಮಾರು 6 ತಾಲೂಕುಗಳಿಗೆ ಶಾಶ್ವತ ಅಪಾಯ ತಂದೊಡ್ಡುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಕೈಬಿಡಬೇಕು. ಹೇಮಾವತಿ ನದಿಯ ಮಳೆಗಾಲದ ಹೆಚ್ಚುವರಿ ನೀರನ್ನು ಬಯಲು ಸೀಮೆಯ ಕೆರೆಗಳಿಗೆ ಹರಿಸಲು ಹೊಸ ಯೋಜನೆ ರೂಪಿಸಬೇಕು.
ಬ್ಯಾಂಕ್ ಹರಾಜು ಪ್ರಕ್ರಿಯೆ ಖಂಡನೆ:
ತುರುವೇಕೆರೆ ತಾಲ್ಲೂಕಿನ ತಾಳೇಕೆರೆ ಗ್ರಾಮದ ರೈತರೊಬ್ಬರ 4 ಕೋಟಿ ರೂ. ಬೆಲೆಬಾಳುವ 4.13 ಎಕರೆ ಜಮೀನನ್ನು ಸಾಲದ ಮರುಪಾವತಿಗಾಗಿ ಕೇವಲ 34.80 ಲಕ್ಷ ರೂ.ಗಳಿಗೆ ಆನ್‌ಲೈನ್ ಹರಾಜು ಮಾಡಿ ಮೋಸ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಜಮೀನು ವಾಪಸ್ ಕೊಡಿಸಬೇಕು ಮತ್ತು ಆನ್‌ಲೈನ್ ಹರಾಜು ಪದ್ಧತಿ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು: ಶ್ರದ್ಧಾ ಅಮಿತ್
ನಂತರ ರೈತ ಮುಖಂಡರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಫ್.ಸಿ. ಶಂಕರಪ್ಪ, ರವೀಶ್, ಚಿಕ್ಕಬೋರೇಗೌಡ, ಕೆ.ಎನ್. ವೆಂಕಟೇಗೌಡ, ಶಿವಕುಮಾರ್, ಶ್ರೀನಿವಾಸ್, ಭಾಗ್ಯಮ್ಮ, ಮಹಮ್ಮದ್ ಶಬ್ಬೀರ್ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಮತ್ತು ನೂರಾರು ರೈತರು ಭಾಗವಹಿಸಿದ್ದರು.