Laalo – Krishna Sada Sahaayate: ಬಜೆಟ್ 50 ಲಕ್ಷ ರೂ., ಕಲೆಕ್ಷನ್ 79 ಕೋಟಿ ರೂ.! ಈ ವರ್ಷ ಇಂಡಿಯನ್ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಸಿನಿಮಾವಿದು!
Most Profitable Indian Film 2025: ಗುಜರಾತಿ ಸಿನಿಮಾ ʼಲಾಲೂ: ಕೃಷ್ಣ ಸದಾ ಸಹಾಯತೆ' (Laalo – Krishna Sada Sahaayate) ಭಾರತದ ಅತ್ಯಂತ ಹೆಚ್ಚು ಲಾಭದಾಯಕ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವು ಹಾಕಿದ ಬಂಡವಾಳಕ್ಕಿಂತ 160 ಪಟ್ಟು ಲಾಭ ತಂದುಕೊಟ್ಟಿದೆ.
-
2025ರಲ್ಲಿ ಭಾರತದಲ್ಲಿ ದೊಡ್ಡ ಗೆಲುವು ಪಡೆದ ಸಿನಿಮಾಗಳ್ಯಾವುವು ಎಂದರೆ, ಕಾಂತಾರ ಚಾಪ್ಟರ್ 1, ಛಾವಾ, ಸೈಯಾರ ಮುಂತಾದ ಸಿನಿಮಾಗಳ ಹೆಸರುಗಳನ್ನೇ ನಾವು ಹೇಳುತ್ತೇವೆ. ಆದರೆ ಇಲ್ಲೊಂದು ಸಿನಿಮಾ ಸದ್ದಿಲ್ಲದೇ ದೊಡ್ಡ ಗೆಲುವು ಕಂಡಿದೆ. ಲಾಭದ ಪ್ರಮಾಣ ನೋಡಿದರೆ, ಕಾಂತಾರ, ಛಾವಾಗಿಂತ ಈ ಸಿನಿಮಾವೇ ದೊಡ್ಡದು! ಅಷ್ಟಕ್ಕೂ ಯಾವುದು ಆ ಸಿನಿಮಾ? ʻಲಾಲೂ – ಕೃಷ್ಣ ಸದಾ ಸಹಾಯತೆʼ!
ಯಾವುದಪ್ಪ ಈ ಸಿನಿಮಾ? ಇದರ ಹೆಸರನ್ನೇ ನಾವು ಕೇಳಿಲ್ಲವಲ್ಲ ಎಂದುಕೊಳ್ಳುಬಹುದು. ಇದು ಗುಜರಾತಿ ಸಿನಿಮಾ. ಅಕ್ಟೋಬರ್ 10ರಂದು ತೆರೆಕಂಡಿದ್ದ ಈ ಸಿನಿಮಾವು ಈವರೆಗೂ ಗಳಿಸಿರುವುದು ಬರೋಬ್ಬರಿ 79 ಕೋಟಿ ರೂ.! ಅರೇ, ಕಾಂತಾರ ಚಾಪ್ಟರ್ 1 ಸಿನಿಮಾವು 900 ಕೋಟಿ ರೂ. ವರೆಗೂ ಗಳಿಕೆ ಮಾಡಿದೆ. ಅದ್ಹೇಗೆ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾ ಗೆಲುವು ದೊಡ್ಡದಾಗುತ್ತದೆ ಎನ್ನುತ್ತೀರಾ? ಅದಕ್ಕೂ ಉತ್ತರ ಇಲ್ಲಿದೆ. ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾಕ್ಕೆ ಖರ್ಚಾಗಿರುವುದು ಬರೀ 50 ಲಕ್ಷ ರೂ.ಗಳು ಮಾತ್ರ. ಕಾಂತಾರ 1 ಚಿತ್ರದ ಬಜೆಟ್ 100 ಕೋಟಿ ಮೇಲಿದೆ!
ಹಲವು ಪಟ್ಟು ಲಾಭ
ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾವು ಹಾಕಿದ ಬಂಡವಾಳಕ್ಕೆ 150 ಪಟ್ಟು ಲಾಭವನ್ನು ತಂದುಕೊಟ್ಟಿದೆ. ಆದರೆ ಕಾಂತಾರ 1 ಸಿನಿಮಾವು ಹಾಕಿದ ಬಂಡವಾಳಕ್ಕೆ 7-8 ಪಟ್ಟು ಹಣವನ್ನು ಹಿಂಗಿರುಗಿಸಿದೆ. ಛಾವಾ 9 ಪಟ್ಟು ಲಾಭ ತಂದುಕೊಟ್ಟರೆ, ಸೈಯಾರ ಚಿತ್ರವು 13 ಪಟ್ಟು ಲಾಭ ಕಂಡಿದೆ. ಹಾಗಾಗಿ, 160 ಪಟ್ಟು ಲಾಭ ತಂದುಕೊಂಡ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾವನ್ನು 2025ರ most profitable indian film ಎಂದು ಕರೆಯಲಾಗುತ್ತಿದೆ. ಸದ್ಯ ಭಾರತದಲ್ಲೇ ಈ ಸಿನಿಮಾವು 79 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ವಿದೇಶದಲ್ಲಿನ ಗಳಿಕೆಯನ್ನು ಸೇರಿಸಿದರೆ, ಕಲೆಕ್ಷನ್ ಪ್ರಮಾಣ ಇನ್ನೂ ಜಾಸ್ತಿ ಆಗಲಿದೆ. ಇನ್ನು, ಅತಿ ಹೆಚ್ಚು ಗಳಿಕೆ ಮಾಡಿದ ಗುಜರಾತಿ ಚಿತ್ರ ಎಂಬ ವಿಶೇಷಣಕ್ಕೂ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾ ಪಾತ್ರವಾಗಿದೆ. ಮೊದಲ ವಾರ ಬರೀ 33 ಲಕ್ಷ ರೂ. ಗಳಿಸಿದ್ದ ಈ ಸಿನಿಮಾವೀಗ 49 ದಿನಗಳಿಗೆ 79.10 ಕೋಟಿ ರೂ. ಬಾಚಿಕೊಂಡಿದೆ.
Diljit Dosanjh: ಕಾಂತಾರ ಖ್ಯಾತಿಯ ಗಾಯಕನಿಗೆ ಮತ್ತೆ ಜೀವ ಬೆದರಿಕೆ; ಮತ್ತೆ ಮತ್ತೆ ಯಾಕ್ ಹೀಗಾಗ್ತಿದೆ?
ಈ ಚಿತ್ರದ ಕಥೆ ಏನು?
ಫಾರ್ಮ್‌ಹೌಸ್‌ನಲ್ಲಿ ಸಿಕ್ಕಿಬಿದ್ದ ರಿಕ್ಷಾ ಚಾಲಕನೊಬ್ಬನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇದೊಂದು ಡಿವೋಷನಲ್ ಕಥಾಹಂದರವುಳ್ಳ ಸಿನಿಮಾವಾಗಿದ್ದು, ಶ್ರೀಕೃಷ್ಣನು ಹೇಗೆ ಆ ಚಾಲಕನಿಗೆ ಸಹಾಯ ಮಾಡುತ್ತಾನೆ ಎಂಬುದನ್ನು ಫ್ಯಾಂಟಸಿಯಾಗಿ ತೋರಿಸಲಾಗಿದೆ. ವಿಶೇಷವೆಂದರೆ, ಈ ಸಿನಿಮಾ ತೆರೆಕಂಡು 50 ದಿನಗಳಾಗಿದ್ದು, ಸದ್ಯ ಬೆಂಗಳೂರಿನಲ್ಲಿ 5 ಶೋಗಳು ಸಿಕ್ಕಿವೆ.
ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾದ ಕುರಿತ ಪೋಸ್ಟ್
ಯಾರೆಲ್ಲಾ ನಟಿಸಿದ್ದಾರೆ?
ರೀವಾ ರಾಚ್, ಶ್ರುಹಾದ್ ಗೋಸ್ವಾಮಿ ಕರಣ್ ಜೋಶಿ, ಮಿಶ್ಟಿ ಕಡೇಚಾ, ಅಂಶು ಜೋಶಿ ಕಿನ್ನಾಳ್ ನಾಯಕ್, ಪಾರುಲ್ ರಾಜ್ಯಗುರು, ಜಯದೀಪ್ ತಿಮಾನಿಯಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದು, ಅಂಕಿತ್ ಸಖಿಯಾ ಅವರು ನಿರ್ದೇಶನ ಮಾಡಿದ್ದಾರೆ. ಮಾನಸಿ ಪರೇಖ್, ಪಾರ್ಥಿವ್ ಗೋಹಿಲ್, ಅಜಯ್ ಬಲವಂತ ಪದರಿಯಾ ಅವರು ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಆರಂಭದಲ್ಲಿ ಈ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ಇರಲಿಲ್ಲ. ದಿನ ಕಳೆದಂತೆ ಜನರನ್ನು ಸೆಳೆಯಲು ಆರಂಭಿಸಿತು.