ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಲೈಫ್‌ ಟುಡೇʼ ಸಿನಿಮಾದ ಟ್ರೇಲರ್‌ ರಿಲೀಸ್;‌ ಲೇಖಾ ಚಂದ್ರ ನಟನೆಗೆ ರಾಷ್ಟ್ರ ಪ್ರಶಸ್ತಿ ಬರಬೇಕು ಎಂದ ತಬಲಾ ನಾಣಿ

ಇಂದಿನ ಯುವ ಪೀಳಿಗೆಯ ಪ್ರೀತಿ ಹಾಗೂ ಸಂಬಂಧಗಳ ಏಳುಬೀಳುಗಳ ಕಥಾಹಂದರ ಹೊಂದಿರುವ, ಕಾಂತ ಕನ್ನಲ್ಲಿ ನಿರ್ದೇಶನದ ‘ಲೈಫ್ ಟುಡೇ’ ಚಿತ್ರದ ಟ್ರೇಲರ್ ಅಧಿಕೃತವಾಗಿ ಅನಾವರಣಗೊಂಡಿದೆ. ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವು ಆಗಸ್ಟ್ 6 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಲೇಖಾ ಚಂದ್ರ - ಕಿರಣ್‌ ನಟನೆಯ ʻಲೈಫ್ ಟುಡೇʼ ಸಿನಿಮಾ ಟ್ರೇಲರ್ ರಿಲೀಸ್‌

-

Avinash GR
Avinash GR Jul 17, 2026 12:50 PM

ನಟ ಕಿರಣ್ ಆದಿತ್ಯ ಮತ್ತು ಲೇಖಾ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಕಾಂತ ಕನ್ನಲ್ಲಿ ನಿರ್ದೇಶನದ ಬಹುನಿರೀಕ್ಷಿತ 'ಲೈಫ್ ಟುಡೇ' ಚಿತ್ರದ ಅಧಿಕೃತ ಟ್ರೇಲರ್ ಹಾಗೂ ಬಿಡುಗಡೆ ದಿನಾಂಕ ಇತ್ತೀಚೆಗೆ ಅದ್ಧೂರಿಯಾಗಿ ಅನಾವರಣಗೊಂಡಿದೆ. ಮೇಘನಾ ಪ್ರದೀಪ್ ಅವರು ತಮ್ಮ ಚೊಚ್ಚಲ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೇ ಸಿನಿರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.

ಭರವಸೆ ಮೂಡಿಸಿದ ಟ್ರೇಲರ್

ಇಂದಿನ ಪೀಳಿಗೆಯ ಯುವಮನಸ್ಸುಗಳ ಪ್ರೀತಿ, ಸಂಬಂಧಗಳ ನೀತಿ-ನಿಷ್ಠೆ ಹಾಗೂ ಅವರ ನಡುವಿನ ಕದನ-ಕಲಹಗಳ ಹೂರಣವನ್ನು ಹೊತ್ತು ತಂದಿರುವ 'ಲೈಫ್ ಟುಡೇ' ಚಿತ್ರದ ಟ್ರೇಲರ್ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದೆ. ಚಿತ್ರದಲ್ಲಿ ನಟ ಕಿರಣ್ ಆದಿತ್ಯ ಹಾಗೂ ನಟಿ ಲೇಖಾ ಚಂದ್ರ ಅವರ ಕೆಮಿಸ್ಟ್ರಿ ಪ್ರಮುಖ ಹೈಲೈಟ್ ಆಗಿ ಮೂಡಿಬಂದಿದೆ. ಮೇಲ್ನೋಟಕ್ಕೆ ಇದೊಂದು ಕ್ಯೂಟ್ ಲವ್ ಸ್ಟೋರಿಯಂತೆ ಕಂಡರೂ, ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್‌ಗಳು ಇರಲಿವೆ ಎಂಬ ಮುನ್ಸೂಚನೆ ಟ್ರೇಲರ್‌ನಲ್ಲಿ ಸಿಕ್ಕಿದೆ. ಉಳಿದಂತೆ, ಚಿತ್ರತಂಡದಲ್ಲಿ ತಬಲಾ ನಾಣಿ, ಕಾಕ್ರೋಚ್ ಸುಧಿ, ಜಗ್ಗಪ್ಪ, ಯುಕ್ತ, ರತರ್ವ್ ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ದಂಡೇ ಇದೆ.

Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

'ದಿಯಾ' ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಹಾಗೂ 'ವಾಮನ' ಚಿತ್ರದ ನಿರ್ಮಾಪಕ ಚೇತನ್ ಗೌಡ ಅವರು ಜಂಟಿಯಾಗಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, "ಈ ಸಿನಿಮಾ ಗೆಲ್ಲುವ ಕಂಟೆಂಟ್ ಹೊಂದಿದೆ" ಎಂದು ಇಡೀ ತಂಡಕ್ಕೆ ಶುಭ ಹಾರೈಸಿದರು.

ಚಿತ್ರತಂಡದವರು ಹೇಳದ್ದೇನು?

ನಾಯಕ ಕಿರಣ್ ಆದಿತ್ಯ, "ಇದು ಈ ಜನರೇಷನ್‌ನ ಕಥೆಯಾಗಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ" ಎಂದರು. ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, "ಇಂದಿನ ಹದಿಹರೆಯದ ಯುವ ಪೀಳಿಗೆಯ ಬದುಕಿಗೆ ತೀರಾ ಹತ್ತಿರವಿರುವ ವಿಚಾರಗಳನ್ನು ಸಿನಿಮ್ಯಾಟಿಕ್ ಆಗಿ ಮತ್ತು ಪ್ರೇಕ್ಷಕರ ಮನಮುಟ್ಟುವಂತೆ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ" ಎಂದು ವಿವರಿಸಿದರು. ಚಿತ್ರದ ಪ್ರಮುಖ ಪಾತ್ರಧಾರಿ ಕಾಕ್ರೋಚ್ ಸುಧಿ ಅವರು ಇಡೀ ತಂಡದ ಶ್ರಮಕ್ಕೆ ಯಶಸ್ಸು ಸಿಗಲಿದೆ ಎಂಬ ಭರವಸೆಯ ಮಾತುಗಳನ್ನಾಡಿದರು.

ತಂದೆಯನ್ನು ನೆನೆದು ಕಣ್ಣೀರಾದ ನಟಿ ಲೇಖಾ

ಈ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ ತಬಲಾ ನಾಣಿ ಅವರು ಲೇಖಾ ಚಂದ್ರ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. "ಈ ಚಿತ್ರದ ಕೇಂದ್ರ ಬಿಂದುವೇ ಲೇಖಾ ಚಂದ್ರ. ಚಿತ್ರದಲ್ಲಿ ಅವರ ಅಭಿನಯ ಅದ್ಭುತವಾಗಿ ಮೂಡಿಬಂದಿದ್ದು, ಅದಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕು" ಎಂದು ಪ್ರಶಂಸಿಸಿದರು. ಇದೇ ವೇಳೆ ಮಾತನಾಡಿದ ನಟಿ ಲೇಖಾ ಚಂದ್ರ, ಈ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದನ್ನು ನೆನೆದು ವೇದಿಕೆಯಲ್ಲೇ ಭಾವುಕರಾಗಿ ಕಣ್ಣೀರು ಹಾಕಿದರು.

ಟ್ರೇಲರ್ ಬಿಡುಗಡೆಯೊಂದಿಗೆ ಚಿತ್ರದ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, 'ಲೈಫ್ ಟುಡೇ' ಸಿನಿಮಾವು ಆಗಸ್ಟ್ 6ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.