ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೋಕ್ಸೋ ಆರೋಪಿ ಜಾನಿ ಮಾಸ್ಟರ್ ಜೊತೆ ಕೈಜೋಡಿಸಿದ ಅನಿರುದ್ಧ್ ರವಿಚಂದರ್: ‘ಅರವಿಂದ್’ ಹಾಡಿನ ವಿರುದ್ಧ ನೆಟ್ಟಿಗರು ಕೆಂಡಾಮಂಡಲ!

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಸ್ವಂತ ಆಡಿಯೋ ಲೇಬಲ್ ಬಿಡುಗಡೆ ಮಾಡಿರುವ ಮೊದಲ ಸ್ವತಂತ್ರ ಪಾಪ್ ಹಾಡು ‘ಅರವಿಂದ್’ ತೀವ್ರ ವಿವಾದಕ್ಕೆ ಈಡಾಗಿದೆ. ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿರುವುದು ಸಾರ್ವಜನಿಕರ ಕೆಂಡಾಮಂಡಲ ಆಕ್ರೋಶಕ್ಕೆ ಕಾರಣವಾಗಿದೆ.

ಅನಿರುದ್ಧ್ ಹೊಸ ಹಾಡಿಗೆ ಕೆಲಸ ಮಾಡಿದ ಪೋಕ್ಸೋ ಆರೋಪಿ ಜಾನಿ; ನೆಟ್ಟಿಗರು ಗರಂ!

-

Avinash GR
Avinash GR Jun 15, 2026 6:08 PM

ಸಂಗೀತ ನಿರ್ದೇಶಕ ಹಾಗೂ ಗಾಯಕ ಅನಿರುದ್ಧ್ ರವಿಚಂದರ್ ಅವರು ಭಾನುವಾರ (ಜೂನ್‌ 14) ಬಿಡುಗಡೆ ಮಾಡಿರುವ ‘ಅರವಿಂದ್’ ಎಂಬ ಹೊಸ ಆಲ್ಬಂ ಸಾಂಗ್ ಈಗ ತೀವ್ರ ವಿವಾದಕ್ಕೆ ಈಡಾಗಿದೆ. ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಬಂಧನಕ್ಕೊಳಗಾಗಿ, ಸದ್ಯ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರೊಂದಿಗೆ ಅನಿರುದ್ಧ್ ಕೈಜೋಡಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಾಂಗ್‌ ರಿಲೀಸ್

ಈ ಹೊಸ ಹಾಡಿನ ಕ್ರೆಡಿಟ್ಸ್‌ನಲ್ಲಿ ಜಾನಿ ಮಾಸ್ಟರ್ ಹೆಸರು ಕಂಡ ಬೆನ್ನಲ್ಲೇ, ಅಭಿಮಾನಿಗಳು ಅನಿರುದ್ಧ್ ಅವರ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಖಂಡಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸ್ವಂತ ಆಡಿಯೋ ಲೇಬಲ್ ಆದ ‘ಅಲ್ಬುಕರ್ಕಿ ರೆಕಾರ್ಡ್ಸ್’ ಮತ್ತು ‘ಯುನಿವರ್ಸಲ್ ಮ್ಯೂಸಿಕ್ ಇಂಡಿಯಾ’ ಸಹಯೋಗದಲ್ಲಿ ಬಿಡುಗಡೆಯಾಗಿರುವ ಮೊದಲ ಸ್ವತಂತ್ರ ಪಾಪ್ ಹಾಡು ಇದಾಗಿದೆ.

ಸನ್‌ ರೈಸರ್ಸ್‌ ಹೈದರಾಬಾದ್ ಓನರ್ ಜೊತೆ ‌ಮ್ಯೂಸಿಕ್ ಡೈರೆಕ್ಟರ್‌ ಅನಿರುದ್ಧ್ ರವಿಚಂದರ್‌ ಕಲ್ಯಾಣ; ಮದುವೆ ಗಾಸಿಪ್‌ಗೆ ಸಿಕ್ಕೇ ಬಿಡ್ತಾ ಉತ್ತರ?

2023ರ ಸೂಪರ್ ಹಿಟ್ ‘ಜೈಲರ್’ ಚಿತ್ರದ ‘ಹುಕುಂ’ ಹಾಡಿಗೆ ಸಾಹಿತ್ಯ ಬರೆದಿದ್ದ ಸೂಪರ್ ಸುಬು ಅವರೇ ಈ ಹಾಡಿಗೂ ಸಾಹಿತ್ಯ ರಚಿಸಿದ್ದಾರೆ. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.

"ಅಸಹ್ಯಕರ ಮತ್ತು ನಾಚಿಕೆಗೇಡಿನ ಸಂಗತಿ"

ಗಂಭೀರ ಲೈಂಗಿಕ ಆರೋಪ ಎದುರಿಸುತ್ತಿರುವ ಜಾನಿ ಮಾಸ್ಟರ್ ಅವರಂತಹ ವ್ಯಕ್ತಿಗಳಿಗೆ ಚಿತ್ರರಂಗದಲ್ಲಿ ಯಾವುದೇ ವೃತ್ತಿಪರ ಹಿನ್ನಡೆ ಉಂಟಾಗದೆ, ಸಲೀಸಾಗಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಸಿಗುತ್ತಿರುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು ಟ್ವೀಟ್ ಮಾಡಿ, "ರೀಲ್ಸ್‌ಗಾಗಿ ಮಾಡಿರುವ ಸಾಧಾರಣ ಹಾಡಿದು. ಆದರೆ ಇಂತಹ ಬಾಲ ಲೈಂಗಿಕ ಅಪರಾಧದ (Pedophilia) ಆರೋಪ ಹೊತ್ತಿರುವ ಜಾನಿ ಮಾಸ್ಟರ್‌ಗೆ ನೀವು ಮನ್ನಣೆ ನೀಡಿ ಬೆಂಬಲಿಸಿರುವುದು ಅಸಹ್ಯಕರ ಮತ್ತು ನಾಚಿಕೆಗೇಡಿನ ಸಂಗತಿ" ಎಂದು ಅನಿರುದ್ಧ್ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.‌

Anirudh Ravichander: ಬೆಂಗಳೂರಿನಲ್ಲಿ ನಡೆದ ಅನಿರುದ್ಧ್ ಸಂಗೀತ ಸಂಜೆಗೆ ಭರ್ಜರಿ ರೆಸ್ಪಾನ್ಸ್

ಮತ್ತೊಬ್ಬ ಬಳಕೆದಾರರು, "ಪೋಕ್ಸೋ ಆರೋಪಿ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿರುವ ಹಾಡನ್ನು ನಾನು ಎಂದಿಗೂ ಕೇಳುವುದಿಲ್ಲ. ಅನಿರುದ್ಧ್ ಅವರಿಂದ ಇದು ಅತ್ಯಂತ ಕೆಟ್ಟ ನಿರ್ಧಾರ" ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಪೆದ್ದಿ’ ಚಿತ್ರದ ವಿಚಾರದಲ್ಲೂ ಸದ್ದು ಮಾಡಿದ್ದ ವಿವಾದ

ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ ಇತ್ತೀಚಿನ ‘ಪೆದ್ದಿ’ ಚಿತ್ರದಲ್ಲೂ ಜಾನಿ ಮಾಸ್ಟರ್ ಅವರಿಗೆ ಅವಕಾಶ ನೀಡಲಾಗಿತ್ತು. ಚಿತ್ರದ ಸೂಪರ್ ಹಿಟ್ ‘ಚಿಕಿರಿ ಚಿಕಿರಿ’ ಮತ್ತು ‘ರೈ ರೈ ರಾ ರಾ’ ಹಾಡುಗಳಿಗೆ ಜಾನಿ ಮಾಸ್ಟರ್ ಅವರೇ ನೃತ್ಯ ನಿರ್ದೇಶನ ಮಾಡಿದ್ದರು. ಆಗಲೂ ಸಹ ನೆಟ್ಟಿಗರಿಂದ ಇಂತಹದೇ ತೀವ್ರ ವಿರೋಧ ವ್ಯಕ್ತವಾಗಿತ್ತು.

ಅಸಲಿಗೆ ಏನಿದು ಜಾನಿ ಮಾಸ್ಟರ್ ಪ್ರಕರಣ?

ತಮ್ಮ ಬಳಿ ಸಹಾಯಕ ನೃತ್ಯ ನಿರ್ದೇಶಕಿಯಾಗಿದ್ದ ಯುವತಿಯೊಬ್ಬರಿಗೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ಕಾರಣ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅವರನ್ನು ಪೊಲೀಸರು ಬಂಧಿಸಿ ಹೈದರಾಬಾದ್‌ಗೆ ಕರೆತಂದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.

ಜಾನಿ ಮಾಸ್ಟರ್‌ ಕುರಿತ ಟ್ವೀಟ್‌



ಇತ್ತೀಚೆಗಷ್ಟೇ ತೆಲಂಗಾಣ ಹೈಕೋರ್ಟ್, ಸಂತ್ರಸ್ತೆಯ ವೈಯಕ್ತಿಕ ಅಥವಾ ವೃತ್ತಿಪರ ಜೀವನಕ್ಕೆ ಯಾವುದೇ ತೊಂದರೆ ನೀಡಬಾರದು ಎಂಬ ಕಠಿಣ ನಿಯಮದಡಿ ಜಾನಿ ಮಾಸ್ಟರ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ವಿವಾದದ ಕಾರಣದಿಂದಾಗಿಯೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ‘ತಿರುಚಿತ್ರಂಬಲಂ’ ಚಿತ್ರಕ್ಕಾಗಿ ಜಾನಿ ಮಾಸ್ಟರ್‌ಗೆ ಘೋಷಿಸಲಾಗಿದ್ದ ‘ಅತ್ಯುತ್ತಮ ನೃತ್ಯ ನಿರ್ದೇಶಕ’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅಮಾನತುಗೊಳಿಸಿತ್ತು.