MGR: ಸಹೋದರ ಪ್ರಣಾಮ್ ಚಿತ್ರದ ಮೂಲಕ ನಿರ್ಮಾಪಕನ ಪಟ್ಟ ಅಲಂಕರಿಸಿದ ಪ್ರಜ್ವಲ್; ತಂದೆ ದೇವರಾಜ್ ಖುಷಿಗೆ ಪಾರವೇ ಇಲ್ಲ!
MGR Kannada Movie: ನಟ ಪ್ರಜ್ವಲ್ ದೇವರಾಜ್ ಅವರು ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಸಹೋದರ ಪ್ರಣಾಮ್ ದೇವರಾಜ್ ಅವರ ಹುಟ್ಟುಹಬ್ಬದಂದು 'ಎಂಜಿಆರ್' ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದು, ಈ ಸಿನಿಮಾವನ್ನು ಪ್ರಜ್ವಲ್ ದೇವರಾಜ್ ನಿರ್ಮಾಣ ಮಾಡುತ್ತಿದ್ದಾರೆ.
-
ʻಡೈನಾಮಿಕ್ ಹೀರೋʼ ದೇವರಾಜ್ ಮನೆಯಲ್ಲಿ ಈಗ ಸಂಭ್ರಮದ ಕ್ಷಣ. ಯಾಕೆಂದರೆ, ದೇವರಾಜ್ ಅವರ ಹಿರಿಮಗ ಪ್ರಜ್ವಲ್ ನಿರ್ಮಾಪಕನಾದರೆ, ಮತ್ತೋರ್ವ ಮಗ ಪ್ರಣಾಮ್ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಹೌದು, ಡೈನಾಮಿಕ್
ವೆಂಚರ್ಸ್ ಮತ್ತು ಪುರಾತನ ಫಿಲಂ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಪ್ರಜ್ವಲ್ ದೇವರಾಜ್ ಈ ಚಿತ್ರದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ. ಪ್ರಣಾಮ್ ದೇವರಾಜ್ ಇದರ ಹೀರೋ.
ʻಎಂಜಿಆರ್ʼ ಸಿನಿಮಾಗೆ ಪ್ರಜ್ವಲ್ ನಿರ್ಮಾಪಕ
ಈ ಹೊಸ ಸಿನಿಮಾಕ್ಕೆ ʻಎಂಜಿಆರ್ʼ ಎಂಬ ವಿಶೇಷ ಶೀರ್ಷಿಕೆ ಇಡಲಾಗಿದೆ. ಪ್ರಣಾಮ್ ದೇವರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದ ಹಿರಿಯ ನಟ ದೇವರಾಜ್ ಅವರು ಮಗನ ಚಿತ್ರಕ್ಕೆ ಶುಭ ಹಾರೈಸುತ್ತ, "ಇದೊಂದು ಸಂತಸದ ಕ್ಷಣ. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳಾದ ಮೇಲೆ ನಿರ್ಮಾಪಕನಾದೆ. ಈಗ ನನ್ನ ಮಗ ಪ್ರಜ್ವಲ್ 10-12 ವರ್ಷಗಳಿಗೇ ನಿರ್ಮಾಪಕನಾಗಿದ್ದಾನೆ" ಎಂದು ಖುಷಿ ವ್ಯಕ್ತಪಡಿಸಿದ್ದಾರೆ ದೇವರಾಜ್.
Karavali Movie: ಪ್ರಜ್ವಲ್ ದೇವರಾಜ್ ಅಭಿನಯದ 'ಕರಾವಳಿ' ಸದ್ಯದಲ್ಲೇ ತೆರೆಗೆ
ಪ್ರಣಾಮ್ ಲುಕ್ ನೋಡಿ ನನಗೇ ಆಶ್ಚರ್ಯವಾಯ್ತು
"ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಇದರಲ್ಲೇ ಏನಾದರೂ ಮಾಡಬೇಕೆಂಬ ತುಡಿತವಿರುತ್ತದೆ. ಪುರಾತನ ಫಿಲಂಸ್ ಮಗನ ಜತೆ ಎರಡನೇ ಸಿನಿಮಾ ಮಾಡ್ತಿದಾರೆ. ಈ ಪೋಸ್ಟರ್‌ನಲ್ಲಿ ಪ್ರಣಾಮ್ ಲುಕ್ ನೋಡಿ ನನಗೇ ಆಶ್ಚರ್ಯವಾಯ್ತು. ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಚರಣರಾಜ್ ನನಗೆ ಇಷ್ಟವಾದ ಮ್ಯೂಸಿಕ್ ಡೈರೆಕ್ಟರ್. ಅವರ ಹಾಡುಗಳು ನಮ್ಮ ಸೊಗಡನ್ನು ಬಿಟ್ಟು ಹೋಗುವುದಿಲ್ಲ. ಸನ್ ಆಫ್ ಮುತ್ತಣ್ಣ ಚಿತ್ರದಲ್ಲಿ ಛಾಯಾಗ್ರಾಹಕ ಕೃಷ್ಣ ಚೆನ್ನಾಗಿ ಕೆಲಸ ಮಾಡಿದ್ದರು. ಇಲ್ಲಿಯೂ ಅವರು ಉತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ. ಹೀಗೆ ನಮ್ಮನ್ನು ಅರ್ಥ ಮಾಡಿಕೊಂಡವರ ಜತೆ ಕೆಲಸ ಮಾಡುವುದಕ್ಕೆ ಖುಷಿ ಆಗುತ್ತದೆ" ಎಂದು ದೇವರಾಜ್ ಹೇಳಿದರು.
ಪ್ರಜ್ವಲ್ ದೇವರಾಜ್ ಏನಂದ್ರು?
"ಇಡೀ ಸಿನಿಮಾ ಪ್ರಣಾಮ್ ಇರುತ್ತಾನೆ. ನಾವು ಹಿಂದೆ ನಿಂತು ಸಪೋರ್ಟ್ ಮಾಡುತ್ತೇವೆ. 2005ರಲ್ಲಿ ನಡೆಯುವಂತಹ ಕಥೆ ಇರುವ ಸಿನಿಮಾ ಇದು. ಮಾರ್ಚ್ ಅಂತ್ಯ ಅಥವಾ ಯುಗಾದಿ ವೇಳೆಗೆ ಮುಹೂರ್ತ ಮಾಡುತ್ತಿದ್ದೇವೆ. ನಮ್ಮ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳಿಗೂ ಅವಕಾಶ ನೀಡುತ್ತೇವೆ" ಎನ್ನುತ್ತಾರೆ ಪ್ರಜ್ವಲ್ ದೇವರಾಜ್.
"ನನ್ನ ಸಿನಿಮಾಗೆ ನಮ್ಮಣ್ಣನೇ ನಿರ್ಮಾಪಕ ಆಗಿರುವುದಕ್ಕೆ ಖುಷಿ ಇದೆ. ಎಂಜಿಆರ್ ಚಿತ್ರದಿಂದ ನನ್ನ ಹೊಸ ಅಧ್ಯಾಯ ಶುರುವಾಗ್ತಿದೆ. ಆತ ಅಳಿಸುತ್ತಾನೆ, ನಗಿಸುತ್ತಾನೆ, ಫೈಟ್ ಮಾಡ್ತಾನೆ. ನನ್ನ ಅಪೀಯರೆನ್ಸ್ ಬಾಡಿ ಲಾಂಗ್ವೇಜ್ ಬೇರೆ ಥರ ಇರುತ್ತೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ" ಎನ್ನುತ್ತಾರೆ ಪ್ರಣಾಮ್.
ಎಂಜಿಆರ್‌ಗೆ ಶ್ರೀಕಾಂತ್ ನಿರ್ದೇಶನ
ʻಎಂಜಿಆರ್ʼ ಸಿನಿಮಾಗೆ ಶ್ರೀಕಾಂತ್ ಹುಣಸೂರು ನಿರ್ದೇಶನ ಮಾಡುತ್ತಿದ್ದಾರೆ. "ಸನ್ ಆಫ್ ಮುತ್ತಣ್ಣ ನಂತರ ಪ್ರಣಾಮ್ ಜತೆ ಇದು ನನಗೆ ಎರಡನೇ ಚಿತ್ರ. ಎಂಜಿಆರ್ ಅಂದ್ರೆ ಏನಂತ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಪ್ರಣಾಮ್ ಅವರನ್ನು ಬೇರೆ ಥರ ತೋರಿಸಬೇಕೆಂದು ಟ್ರೈ ಮಾಡಿದ್ದೇವೆ. ಟೈಟಲ್ ಸಮಸ್ಯೆ ಆಗಬಹುದು. ಆದರೆ ಕಾನ್ಸೆಪ್ಟ್ ಒಳ್ಳೆಯ ರೀತಿಯಲ್ಲೇ ಇರುತ್ತದೆ" ಎನ್ನುತ್ತಾರೆ ಶ್ರೀಕಾಂತ್ ಹುಣಸೂರು.