45 ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದ ಭಾರತದ ಖ್ಯಾತ ಪ್ರೊಡಕ್ಷನ್ ಸಂಸ್ಥೆಗಳು; ಶಿವಣ್ಣ- ಉಪ್ಪಿ ಚಿತ್ರಕ್ಕೆ ವಿದೇಶದಲ್ಲಿ ಹೇಗಿದೆ ರೆಸ್ಪಾನ್ಸ್?
45 Movie Update: ಅರ್ಜುನ್ ಜನ್ಯ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ '45' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳು ದಾಖಲೆ ಮೊತ್ತಕ್ಕೆ ಜೀ ನೆಟ್‌ವರ್ಕ್ (Zee Network) ಪಾಲಾಗಿವೆ. ಕೆನಡಾದಲ್ಲಿ ಎರಡು ದಿನ ಮೊದಲೇ ಅಂದರೆ ಡಿಸೆಂಬರ್ 23 ರಂದೇ ಶೋಗಳು ಆರಂಭವಾಗಲಿದ್ದು, ಈಗಾಗಲೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.
-
ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ʻ45ʼ ಚಿತ್ರದ ಟ್ರೇಲರ್ ಈಗಾಗಲೇ ಭಾರಿ ಸದ್ದು ಮಾಡಿದೆ. ಡಿಸೆಂಬರ್ 25ರಂದು ಈ ಚಿತ್ರವು ತೆರೆಕಾಣಲಿದ್ದು, ಅದಕ್ಕೂ ಮುನ್ನ ಭಾರಿ ತಯಾರಿಗಳು ಆರಂಭವಾಗಿವೆ. ಮುಖ್ಯವಾಗಿ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪರಭಾಷೆಯಲ್ಲಿ ಇದರ ಬಿಡುಗಡೆಯ ಹಕ್ಕುಗಳನ್ನು ದೊಡ್ಡ ದೊಡ್ಡ ಸಂಸ್ಥೆಗಳೇ ಪಡೆದುಕೊಂಡಿವೆ. ಜೊತೆಗೆ ಸ್ಯಾಟಲೈಟ್ ಮತ್ತು ಒಟಿಟಿ (OTT) ಹಕ್ಕುಗಳು ಕೂಡ ಮಾರಾಟವಾಗಿವೆ. ಆ ಕುರಿತ ಮಾಹಿತಿ ಇಲ್ಲಿದೆ.
ಸದ್ಯ ಕನ್ನಡ ಸಿನಿಮಾಗಳಿಗೆ ಒಟಿಟಿ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತ ಬೇಡಿಕೆ ಇಲ್ಲ. ಇಂತಹ ಸಮಯದಲ್ಲಿ '45' ಚಿತ್ರವು ಚಿತ್ರಮಂದಿರಕ್ಕೆ ಬರುವ ಮುನ್ನವೇ ಅದರ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿದೆ. ಹೌದು, ಬಿಡುಗಡೆಗೆ ಮುನ್ನ 45 ಸಿನಿಮಾದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಮಾರಾಟವಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ನಂತರ '45' ಸಿನಿಮಾವು 'ಜೀ5' (Zee5) ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಜೊತೆಗೆ ಇದರ ಸ್ಯಾಟಲೈಟ್ ಪ್ರಸಾರದ ಹಕ್ಕುಗಳನ್ನು ಕೂಡ 'ಜೀ ನೆಟ್‌ವರ್ಕ್' ಖರೀದಿ ಮಾಡಿದೆ.
'45' ಸಿನಿಮಾವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಈ ಚಿತ್ರಕ್ಕಾಗಿ ದೇಶದ ವಿವಿಧ ಪ್ರಮುಖ ವಿತರಣಾ ಸಂಸ್ಥೆಗಳು ಕೈಜೋಡಿಸಿವೆ. ಉತ್ತರ ಭಾರತದಲ್ಲಿ ಜೀ ಸ್ಟುಡಿಯೋಸ್ ಚಿತ್ರವನ್ನು ಬಿಡುಗಡೆ ಮಾಡಿದರೆ, ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ. ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 45 ಹಕ್ಕುಗಳನ್ನು ಪಡೆದುಕೊಂಡರೆ, ತಮಿಳಿನಲ್ಲಿ ಎಜಿಎಸ್ ಸಂಸ್ಥೆ ಹಾಗೂ ಮಲಯಾಳಂನಲ್ಲಿ ನಟ ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ತನ್ನ ವರ್ಪೂರ್ವ ಬ್ಯಾನರ್ ಮೂಲಕ ಈ ಚಿತ್ರವನ್ನು ವಿತರಿಸಲಿವೆ.
ಕೆನಡಾದಲ್ಲಿ ಶುರುವಾಯ್ತು 45 ಹವಾ
45 ಸಿನಿಮಾವು ಡಿಸೆಂಬರ್ 25ರಂದು ಭಾರತದಲ್ಲಿ ತೆರೆಕಂಡರೆ, ಕೆನಡಾದಲ್ಲಿ ಎರಡು ದಿನ ಮೊದಲೇ, ಅಂದರೆ ಡಿಸೆಂಬರ್ 23ರಂದೇ ತೆರೆಗೆ ಬರಲಿದೆ. ಹೌದು, ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರನ್ನು ಕೆನಡಾದ ಸಿನಿಪ್ರಿಯರು ಎರಡು ದಿನ ಮೊದಲೇ ಕಣ್ತುಂಬಿಕೊಳ್ಳಬಹುದಾಗಿದೆ. ಡಿಸೆಂಬರ್ 23ರಂದು ನಡೆಯಲಿರುವ ಶೋಗಳ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಕೆನಡಾದಲ್ಲಿ ಕನ್ನಡಿಗರು ಈ ಚಿತ್ರವನ್ನು ಬೇಗನೇ ಕಣ್ತುಂಬಿಕೊಳ್ಳಲು ಅತ್ಯುತ್ಸಾಹಕರಾಗಿದ್ದಾರೆ.