ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ನಗು ನಗುತ’ ಕಿರುಚಿತ್ರದಲ್ಲಿ ನಟಿಸಿದ ವಿಜಯ್ ರಾಘವೇಂದ್ರ; ಆಟೋ ಚಾಲಕರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ ತಂಡ

ಆಟೋ ಚಾಲಕರ ಆರೋಗ್ಯದ ಕುರಿತ ಕಾಳಜಿಯೊಂದಿಗೆ ನಟ ವಿಜಯ್ ರಾಘವೇಂದ್ರ ನಟಿಸಿರುವ ‘ನಗು ನಗುತ’ ಕಿರುಚಿತ್ರ ಲೋಕಾರ್ಪಣೆಗೊಂಡಿದೆ. ಶಿವು ಜಮಖಂಡಿ ನಿರ್ದೇಶನದ ಈ ಕಿರುಚಿತ್ರದಲ್ಲಿ ಆಟೋ ಚಾಲಕರ ಜೀವನ ಶೈಲಿ ಹಾಗೂ ಹೃದಯಾಘಾತದ ಸಂಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ.

ಆಟೋ ಚಾಲಕರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ‘ನಗು ನಗುತ’ ಕಿರುಚಿತ್ರ

-

Avinash GR
Avinash GR Sep 30, 2026 5:06 PM

ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸದಾ ಬ್ಯುಸಿಯಾಗಿರುವ ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಇದೀಗ ಸಾಮಾಜಿಕ ಕಳಕಳಿಯುಳ್ಳ ವಿಶೇಷ ಕಿರುಚಿತ್ರವೊಂದರಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಶ್ವ ಹೃದಯ ದಿನದ ಅಂಗವಾಗಿ ಬಿಡುಗಡೆಯಾಗಿರುವ ‘ನಗು ನಗುತ’ ಎಂಬ ಈ ಕಿರುಚಿತ್ರದಲ್ಲಿ ಅವರು ಆಟೋ ಚಾಲಕನ ಪಾತ್ರದಲ್ಲಿ ನಟಿಸಿದ್ದು, ಆಟೋ ಚಾಲಕರ ಆರೋಗ್ಯ ಹಾಗೂ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವ ಮಹತ್ವದ ಸಂದೇಶವನ್ನು ಸಾರಿದ್ದಾರೆ. ನೂರಾರು ಆಟೋ ಚಾಲಕರ ಸಮ್ಮುಖದಲ್ಲಿ ಈ ಕಿರುಚಿತ್ರವನ್ನು ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಲಾಯಿತು.

ಆಟೋ ಚಾಲಕನ ಪಾತ್ರದಲ್ಲಿ ರಾಘು

ಪ್ರತಿನಿತ್ಯ ಬೀದಿಗಿಳಿದು ವಾಹನ ಚಲಾಯಿಸುವ ಆಟೋ ಚಾಲಕರು ಎದುರಿಸುವ ಸಂಕಷ್ಟಗಳು, ಕುಟುಂಬ ನಿರ್ವಹಣೆಯ ಒತ್ತಡ, ಸರಿಯಾದ ಸಮಯಕ್ಕೆ ಊಟ ಮತ್ತು ನಿದ್ದೆ ಮಾಡದೆ ದುಡಿಯುವ ಅನಿವಾರ್ಯತೆ ಹಾಗೂ ಈ ಎಲ್ಲದರ ನಡುವೆ ತಮ್ಮ ಆರೋಗ್ಯವನ್ನು ಕಡೆಗಣಿಸಿ ಜೀವವನ್ನೇ ಕಳೆದುಕೊಳ್ಳುವ ವಾಸ್ತವವನ್ನು ‘ನಗು ನಗುತ’ ಕಿರುಚಿತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ವಿಜಯ್ ರಾಘವೇಂದ್ರ ಅವರ ಪತ್ನಿಯ ಪಾತ್ರದಲ್ಲಿ ನಟಿ ವರ್ಷಿತಾ ರಾಮ್ ನಟಿಸಿದ್ದು, ಇಬ್ಬರ ನಟನೆ ಕಿರುಚಿತ್ರದ ತೂಕವನ್ನು ಹೆಚ್ಚಿಸಿದೆ. ನಿರ್ದೇಶಕ ಶಿವು ಜಮಖಂಡಿ ಅವರು ಈ ಕಿರುಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ನಾಸಿರ್ ಖತೀಬ್ ಮತ್ತು ಮೊಹಮ್ಮದ್ ಸಲಾವುದ್ದೀನ್ ಜಂಟಿಯಾಗಿ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ನಾಸಿರ್ ಖತೀಬ್ ಅವರೇ ಕಥೆಯನ್ನೂ ಒದಗಿಸಿದ್ದಾರೆ.

ಹೃದಯಾಘಾತ ಎಂಬುದು ನೆಗಡಿ, ಶೀತದಷ್ಟೇ ಕಾಮನ್‌ ಆಗಿದೆ

ಕಿರುಚಿತ್ರ ಬಿಡುಗಡೆ ಮಾಡಿ ಮಾತನಾಡಿದ ನಟ ವಿಜಯ್ ರಾಘವೇಂದ್ರ, "ಈ ಕಿರುಚಿತ್ರಕ್ಕೆ ಆಟೋ ಚಾಲಕ ಬಾಂಧವರು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಚಾಲಕರು ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆ ಹೆಚ್ಚು ಗಮನ ಹರಿಸಲಿ ಎನ್ನುವುದೇ ಈ ಪ್ರಾಜೆಕ್ಟ್‌ನ ಮುಖ್ಯ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎಂಬುದು ಸಾಮಾನ್ಯ ನೆಗಡಿ, ಶೀತದಷ್ಟೇ ವ್ಯಾಪಕವಾಗಿ ಹೆಚ್ಚಾಗುತ್ತಿದೆ; ಆದರೆ ಅದರ ಪರಿಣಾಮ ಮಾತ್ರ ಅತ್ಯಂತ ತೀವ್ರ ಹಾಗೂ ಕರುಣಾಜನಕವಾಗಿರುತ್ತದೆ. ಅದಕ್ಕೆ ಹಲವು ಕಾರಣಗಳಿರಬಹುದು, ಆದರೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರಬೇಕು" ಎಂದು ಆಟೋ ಚಾಲಕರಿಗೆ ಕಿವಿಮಾತು ಹೇಳಿದರು.

ನಾಯಕಿ ವರ್ಷಿತಾ ರಾಮ್ ಮಾತನಾಡಿ, "ಇದು ಕಿರುಚಿತ್ರವಾದರೂ ನನಗೊಂದು ಪೂರ್ಣ ಪ್ರಮಾಣದ ಸಿನಿಮಾ ಮಾಡಿದಷ್ಟೇ ತೃಪ್ತಿ ಮತ್ತು ಖುಷಿ ತಂದಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಮಹತ್ವದ ಪಾತ್ರವನ್ನು ನೀಡಿದ ಇಡೀ ತಂಡಕ್ಕೆ ಧನ್ಯವಾದಗಳು" ಎಂದರು. ನಿರ್ದೇಶಕ ಶಿವು ಜಮಖಂಡಿ ಅವರು ಮಾತನಾಡುತ್ತಾ, "ಕಥೆ ಬಹಳ ಅರ್ಥಪೂರ್ಣವಾಗಿದ್ದರಿಂದಲೇ ನಿರ್ದೇಶನ ಮಾಡಲು ಒಪ್ಪಿಕೊಂಡೆ. ಉತ್ತಮ ಉದ್ದೇಶದ ಜೊತೆಗೆ ನೋಡುಗರ ಮುಖದಲ್ಲಿ ನಗು ಮೂಡಿಸುವುದೇ ಈ ಚಿತ್ರದ ಪ್ರಮುಖ ಆಶಯ" ಎಂದು ತಿಳಿಸಿದರು.

ರೈತರ ಸಮಸ್ಯೆಗೆ ಧ್ವನಿ ಆಗಲಿದ್ದಾರೆ ಶಿವರಾಜ್‌ಕುಮಾರ್: ವಿಜಯ್‌ ರಾಘವೇಂದ್ರ ನಟನೆಯ 'ಮಹಾನ್' ಚಿತ್ರಕ್ಕೆ 'ಕರುನಾಡ ಚಕ್ರವರ್ತಿ' ಎಂಟ್ರಿ

ಇನ್ನು ನಿರ್ಮಾಪಕರು ಮಾತನಾಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಾಜೆಕ್ಟ್ ಮಾಡಬೇಕೆಂಬ ಕನಸಿಗೆ ವಿಜಯ್ ರಾಘವೇಂದ್ರ ಅವರು ಕೈಜೋಡಿಸಿದ್ದು ದೊಡ್ಡ ಶಕ್ತಿ ತುಂಬಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಾಣಿಜ್ಯ ಸಿನಿಮಾಗಳ ಜೊತೆಗೆ ಸಮಾಜಮುಖಿ ಕಿರುಚಿತ್ರದಲ್ಲಿ ತೊಡಗಿಸಿಕೊಂಡಿರುವ ವಿಜಯ್ ರಾಘವೇಂದ್ರ ಅವರ ಈ ನಡೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.