ಪಂಚಭೂತಗಳಲ್ಲಿ ಅಜಿತ್ ಪವಾರ್ ಲೀನ; ಕಣ್ಣೀರು ಹಾಕುತ್ತಲೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮಗ
Ajit Pawar: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಬುಧವಾರ ಸಂಜೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನಕ್ಕೆ ತರಲಾಗಿತ್ತು. ಈ ವೇಳೆ ದುಃಖಭರಿತ ವಾತಾವರಣ ಆವರಿಸಿದ್ದು, ಎನ್‌ಸಿಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಕಣ್ಣೀರಿನೊಂದಿಗೆ ದಿವಂಗತ ನಾಯಕನಿಗೆ ನಮನ ಸಲ್ಲಿಸಿದರು. “ಅಜಿತ್ ದಾದಾ ಅಮರ್ ರಹೇ”, “ಅಜಿತ್ ದಾದಾ ಪರತ್ ಯಾ” ಎಂಬ ಘೋಷಣೆಗಳು ಪ್ರತಿಧ್ವನಿಸಿದವು.
ಅಜಿತ್ ಪವಾರ್ ಅಂತ್ಯಕ್ರಿಯೆ -
ಮುಂಬೈ, ಜ. 29: ಮಹಾರಾಷ್ಟ್ರ ರಾಜಕೀಯದ ಪ್ರಭಾವಿ ನಾಯಕ, ಜನಪ್ರಿಯ “ದಾದಾ” ಎಂದೇ ಪರಿಚಿತವಾಗಿದ್ದ ಅಜಿತ್ ಪವಾರ್(Ajit Pawar) ಬುಧವಾರ (ಜನವರಿ 28) ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ(Flight Crush) ನಿಧನರಾಗಿದ್ದಾರೆ. ಈ ದುರ್ಘಟನೆ ಇಡೀ ಮಹಾರಾಷ್ಟ್ರವನ್ನು ಶೋಕಸಾಗರಕ್ಕೆ ತಳ್ಳಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಬುಧವಾರ ಸಂಜೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನಕ್ಕೆ ತರಲಾಗಿತ್ತು. ಈ ವೇಳೆ ದುಃಖಭರಿತ ವಾತಾವರಣ ಆವರಿಸಿದ್ದು, ಎನ್‌ಸಿಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಕಣ್ಣೀರಿನೊಂದಿಗೆ ದಿವಂಗತ ನಾಯಕನಿಗೆ ನಮನ ಸಲ್ಲಿಸಿದರು. “ಅಜಿತ್ ದಾದಾ ಅಮರ್ ರಹೇ”, “ಅಜಿತ್ ದಾದಾ ಪರತ್ ಯಾ” ಎಂಬ ಘೋಷಣೆಗಳು ಪ್ರತಿಧ್ವನಿಸಿದವು.
ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಅವರ ನಿವಾಸದ ಸಮೀಪದ ವಿದ್ಯಾ ಪ್ರತಿಷ್ಠಾನ ಆವರಣಕ್ಕೆ ತರುವಾಗ ಸಾವಿರಾರು ಅಭಿಮಾನಿಗಳು ಸೇರಿದ್ದರು. ಈ ದೃಶ್ಯಗಳು ನೋಡುಗರ ಮನಕಲಕುವಂತಿದ್ದವು.
ಬುಧವಾರ ರಾತ್ರಿ ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಬಾರಾಮತಿಯ ಪುಣ್ಯಶ್ಲೋಕ ಅಹಲ್ಯಾದೇವಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಗುರುವಾರ ಬೆಳಗ್ಗೆ ಅಲ್ಲಿಂದ ಸ್ವಗ್ರಾಮ ಕಾಟೇವಾಡಿಗೆ ಕೊಂಡೊಯ್ಯಲಾಗಿದ್ದು, ನಂತರ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನಕ್ಕೆ ತಂದು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಪವಾರ್ ಅವರ ಅಂತ್ಯಕ್ರಿಯೆ ಗುರುವಾರ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನೆರವೇರಿತು. ಅವರ ಪುತ್ರರಾದ ಪಾರ್ಥ್ ಪವಾರ್ ಮತ್ತು ಜಯ್ ಪವಾರ್ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಕಣ್ಣೀರುಡುತ್ತಲೇ ಪ್ರೀತಿಯ ತಂದೆಯನ್ನು ಕಣ್ತುಂಬಿಕೊಂಡು ಬೀಳ್ಕೊಡುವ ದೃಶ್ಯ ಕಲ್ಲು ಹೃದಯದವರನ್ನು ಕರಗಿಸುವಂತಿತ್ತು.
ಅಜಿತ್ ಪವಾರ್ ರಾಜಕೀಯ ಬೆನ್ನೆಲುಬು ಈಕೆ; ಪತ್ನಿ ಸುನೇತ್ರಾ ಪವಾರ್ ಬಗ್ಗೆ ನಿಮಗೆಷ್ಟು ಗೊತ್ತು?
ಅಂತ್ಯಕ್ರಿಯೆಯ ವೇಳೆ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುನೀತಾ ಪವಾರ್, ಕುಟುಂಬದ ಸದಸ್ಯರು, ಸಹೋದರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು ಹಾಜರಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಅಂತ್ಯಕ್ರಿಯೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಅನೇಕ ಗಣ್ಯ ನಾಯಕರು ಭಾಗವಹಿಸಿದ್ದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗೆ ಅಂತಿಮ ವಿದಾಯ ನೀಡಲಾಯಿತು.
ಇನ್ನು ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪವಾರ್ ಪಾತ್ರರಾಗಿದ್ದರು. ಕಾಂಗ್ರೆಸ್–ಎನ್‌ಸಿಪಿ, ಶಿವಸೇನೆ–ಬಿಜೆಪಿ ಸೇರಿದಂತೆ ವಿಭಿನ್ನ ರಾಜಕೀಯ ಮೈತ್ರಿಕೂಟಗಳ ಸರ್ಕಾರಗಳಲ್ಲಿ ಅವರು ಈ ಮಹತ್ವದ ಹುದ್ದೆಯನ್ನು ಹಲವು ಬಾರಿ ವಹಿಸಿಕೊಂಡಿದ್ದರು.
ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಸೇರಿದಂತೆ ಬೇರೆಬೇರೆ ಕಾಲಘಟ್ಟಗಳಲ್ಲಿ ವಿವಿಧ ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಅಪರೂಪದ ಅನುಭವವೂ ಅಜಿತ್ ಪವಾರ್ ಅವರಿಗೆ ಇತ್ತು.